Puneeth Rajkumar: ಅಪ್ಪು ಕಣ್ಣಿನಿಂದ ಇನ್ನೂ 10 ಮಂದಿಗೆ ದೃಷ್ಟಿ?

By Kannadaprabha NewsFirst Published Nov 13, 2021, 1:21 AM IST
Highlights

*ಕಣ್ಣಿನಿಂದ ಸಂಗ್ರಹಿಸಿದ ಸ್ಟೆಮ್‌ಸೆಲ್‌ನಿಂದ ಹೊಸ ಪ್ರಯೋಗ
*ಇದು ಯಶಸ್ವಿಯಾದರೆ 10 ಜನರಿಗೆ ದೃಷ್ಟಿಸಾಧ್ಯತೆ: ದಾಖಲೆ
*ನಾರಾಯಣ ನೇತ್ರಾಲಯದಿಂದ ಹೊಸ ಪ್ರಯತ್ನ
*ಈಗಾಗಲೇ 4 ಮಂದಿಗೆ ಬೆಳಕು ನೀಡಿರುವ ಪುನೀತ್‌ ಕಣ್ಣುಗಳು

ಬೆಂಗಳೂರು(ನ.13): ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ತನ್ನೆರಡು ಕಣ್ಣಿನಿಂದ ಬರೋಬ್ಬರಿ ನಾಲ್ಕು ಮಂದಿಗೆ ದೃಷ್ಟಿನೀಡಿ ಪುನೀತರಾಗುವ ಮೂಲಕ ದಾಖಲೆ ಬರೆದಿದ್ದ ದಿವಂಗತ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರ ಕಣ್ಣು ಮತ್ತೆ ಹತ್ತಕ್ಕೂ ಹೆಚ್ಚು ಮಂದಿಗೆ ಜನರಿಗೆ ದೃಷ್ಟಿನೀಡಲು ಸಜ್ಜಾಗಿವೆ. ಹೌದು, ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಒಬ್ಬ ವ್ಯಕ್ತಿಯ ಕಾರ್ನಿಯಾ (Cornia) ಹಾಗೂ ಸ್ಟೆಮ್‌ಸೆಲ್‌ (Stem Cell) ಎರಡನ್ನೂ ಬಳಕೆ ಮಾಡಿಕೊಂಡು ಅಂಧರಿಗೆ (Blind) ದೃಷ್ಟಿನೀಡಲು ನಾರಾಯಣ ನೇತ್ರಾಲಯ (Narayana Netralaya) ಪ್ರಯೋಗಗಳನ್ನು ಆರಂಭಿಸಿದೆ. ಎಲ್ಲಾ ನಿರೀಕ್ಷಿಸಿದಂತೆ ನಡೆಸಿ ಯಶಸ್ವಿಯಾದರೆ, ಮುಂದಿನ 10 ದಿನಗಳಲ್ಲಿ 10ಕ್ಕೂ ಹೆಚ್ಚು ಮಂದಿಗೆ ಪುನೀತ್‌ ಅವರ ಕಣ್ಣಿನ ಸ್ಟೆಮ್‌ಸೆಲ್‌ಗಳಿಂದ ‘ಸ್ಟೆಮ್‌ಸೆಲ್‌ ಥೆರಪಿ’ ನಡೆಸಿದರೆ ಮತ್ತೆ ದೃಷ್ಟಿಬರಲಿದೆ. ಈ ಮೂಲಕ ಪುನೀತ್‌ ಕಣ್ಣು ರಾಜ್ಯದ ಮಟ್ಟಿಗೆ ಹೊಸ ದಾಖಲೆ ಸೃಷ್ಟಿಸಲಿದೆ.

ಈ ಪ್ರಕ್ರಿಯೆ ಹೇಗೆ?:

ಪುನೀತ್‌ ಅವರ ಕಾರ್ನಿಯಾವನ್ನು ಬೇರೆಯವರಿಗೆ ಅಳವಡಿಕೆ ಮಾಡಿ ಅಷ್ಟಕ್ಕೆ ಸುಮ್ಮನಾಗದ ನಾರಾಯಣ ನೇತ್ರಾಲಯದ ವೈದ್ಯರು, ಇದೀಗ ಪುನೀತ್‌ರ ಕಣ್ಣಿನ ರಿಮ್‌ ಭಾಗದಿಂದ ಸ್ಟೆಮ್‌ ಸೆಲ್‌ಗಳನ್ನು ಸಂಗ್ರಹಿಸಿದ್ದಾರೆ. ನಾರಾಯಣ ನೇತ್ರಾಲಯದ ಪ್ರಯೋಗಾಲಯದಲ್ಲಿ (Laboratory) ಸ್ಟೆಮ್‌ಸೆಲ್‌ಗಳ ಅಭಿವೃದ್ಧಿ ಮಾಡುತ್ತಿದ್ದು, ಸ್ಟೆಮ್‌ಸೆಲ್‌ಗಳು ಮಲ್ಟಿಪಲ್‌ (Multiple) ಆಗುತ್ತಿವೆ. ಇದಕ್ಕೆ ತುಸು ಕಾಲಾವಧಿ ಬೇಕಾಗುತ್ತದೆ. ಪೂರ್ಣ ಪ್ರಮಾಣದಲ್ಲಿ ಸ್ಟೆಮ್‌ಸೆಲ್‌ಗಳು ಅಭಿವೃದ್ಧಿ ಹೊಂದಿದ ಬಳಿಕ ಸ್ಟೆಮ್‌ಸೆಲ್‌ ಸಮಸ್ಯೆಯಿಂದಾಗಿ ದೃಷ್ಟಿಕಳೆದುಕೊಂಡವರಿಗೆ ಕಸಿ ಮಾಡಬಹುದು. ಈ ಮೂಲಕ ಮತ್ತೆ 10ಕ್ಕೂ ಹೆಚ್ಚು ಮಂದಿಗೆ ಪುನೀತ್‌ ಅವರ ಕಣ್ಣಿನಿಂದ ದೃಷ್ಟಿನೀಡಬಹುದು ಎಂದು ನಾರಾಯಣ ನೇತ್ರಾಲಯದ ವೈದ್ಯರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಏನಿದು ಸ್ಟೆಮ್‌ಸೆಲ್‌ ಥೆರಪಿ?:

ರೆಟಿನಾ (ಅಕ್ಷಿಪಟಲ -Retina) ಸಂಬಂಧಿ ಸಮಸ್ಯೆಗಳು ಹಾಗೂ ವಂಶವಾಹಿ ಗುಣಗಳಿಂದ ಬರುವ ಅನುವಂಶೀಯ ಕಾಯಿಲೆಗಳನ್ನು ಗುಣಪಡಿಸಿ ಅಂಧತ್ವ ನಿವಾರಿಸಲು, ಪಟಾಕಿ ಸಿಡಿತ ಮತ್ತಿತರ ಸಮಸ್ಯೆಗಳಿಂದ ಹಾನಿಯಿಂದ ದೃಷ್ಟಿಹಾನಿಯಾಗಿದ್ದರೆ ನಿವಾರಿಸಲು ಸ್ಟೆಮ್‌ಸೆಲ್‌ ಥೆರಪಿ ಯಶಸ್ವಿಯಾಗಿದೆ.

Puneeth Namana: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸಕಲ ಸಿದ್ಧತೆ

ಸ್ಟೆಮ್‌ಸೆಲ್‌ ಸಮಸ್ಯೆಯಿಂದಾಗಿ ‘ಮ್ಯಾಕ್ಯುಲರ್‌ ಡಿಜನರೇಶನ್‌ (Macular degeneration)’, ‘ರೆಟಿನೈಟಿಸ್‌ ಪಿಗ್‌ಮೆಂಟೋಸ್‌ (Retinitis pigmentosa)’ನಂತಹ ಕಾಯಿಲೆಗಳಿಗೆ ಲಕ್ಷಾಂತರ ಮಂದಿ ಬಲಿಯಾಗಿ ಕುರುಡರಾಗುತ್ತಿದ್ದಾರೆ. ‘ರೆಟಿನಲ… ಪಿಗ್‌ಮೆಂಚ್‌ ಎಪಿಥೀಲಿಯಮ್‌’ ಸೆಲ್‌ಗಳನ್ನು ನಾಶಪಡಿಸಿ ಅಂಧತ್ವ ಉಂಟು ಮಾಡುತ್ತದೆ. ಇವುಗಳು ರೆಟಿನಾದಲ್ಲಿನ ’ಫೋಟೋ ರಿಸೆಪ್ಟಾರ್‌’ ಸೆಲ್‌ಗಳ ಕಾರ್ಯನಿರ್ವಹಣೆಯಲ್ಲಿ ತುಂಬಾ ಮಹತ್ವದ ಪಾತ್ರ ವಹಿಸುತ್ತವೆ.

ಅಂಧನಾದ ವ್ಯಕ್ತಿಯ ಜೀವನದಲ್ಲಿ ಮತ್ತೆ ಬೆಳಕು

ಈ ಫೋಟೋ ರಿಸೆಪ್ಟಾರ್‌ ಸೆಲ್‌ಗಳು ರೆಟಿನಾದ ಮೇಲೆ ಬಿದ್ದ ಬೆಳಕನ್ನು ಸಂಕೇತ ರೂಪಕ್ಕೆ ಪರಿವರ್ತಿಸಿ ಮೆದುಳಿಗೆ ಕಳಿಸುವಲ್ಲಿ ನೆರವಾಗುತ್ತವೆ. ಈ ಸಂಕೇತಗಳನ್ನು ಮೆದುಳು ಗ್ರಹಿಸಿ ಅವುಗಳನ್ನು ಅರ್ಥೈಸಿಕೊಳ್ಳುತ್ತದೆ. ಆದರೆ ‘ರೆಟಿನಲ… ಪಿಗ್‌ಮೆಂಟ್‌ ಎಪಿಥೀಲಿಯಮ್‌’ ಸೆಲ್‌ಗಳ ತೊಂದರೆಯಿಂದಾಗಿ ಫೋಟೋ ರಿಸೆಪ್ಟಾರ್‌ ಸೆಲ್‌ಗಳು ಸರಿಯಾಗಿ ಕೆಲಸ ಮಾಡದೇ ಕುರುಡತ್ವ ಉಂಟಾಗುತ್ತದೆ. ಹಾಳಾದ ‘ರೆಟಿನಲ… ಪಿಗ್‌ಮೆಂಚ್‌ ಎಪಿಥೀಲಿಯಮ್‌’ ಸೆಲ್‌ಗಳನ್ನು ಪುನರ್‌ನಿರ್ಮಾಣ ಮಾಡುವುದರಿಂದ ಈ ಕಾಯಿಲೆಯಿಂದಾಗಿ ಅಂಧನಾದ ವ್ಯಕ್ತಿಯ ಜೀವನದಲ್ಲಿ ಮತ್ತೆ ಬೆಳಕು ಮೂಡಿಸಬಹುದು. ಇದು ಒಂದು ಉದಾಹರಣೆ ಮಾತ್ರ. ಇದೇ ವಿಧಾನದಲ್ಲಿ ಪಟಾಕಿ ಸಿಡಿತ, ಅಪಘಾತ ಬೇರೆ ಕಾರಣಗಳಿಂದ ರೆಟಿನಾದ ಸೆಲ್‌ಗಳು ಹಾಳಾದರೂ ಚಿಕಿತ್ಸೆ ನೀಡಿ ಅಂಧತ್ವ ನಿವಾರಿಸಬಹುದು ಎಂದು ತಜ್ಞರು ಹೇಳಿದ್ದಾರೆ.

ಈಗಾಗಲೇ ದಾಖಲೆಯ ನಾಲ್ಕು ಮಂದಿಗೆ ದೃಷ್ಟಿನೀಡಲು ಯಶಸ್ವಿಯಾಗಿದ್ದೇವೆ

ಪುನೀತ್‌ ರಾಜ್‌ಕುಮಾರ್‌ ಅವರ ಕಣ್ಣಿನಿಂದ ಈಗಾಗಲೇ ದಾಖಲೆಯ ನಾಲ್ಕು ಮಂದಿಗೆ ದೃಷ್ಟಿನೀಡಲು ಯಶಸ್ವಿಯಾಗಿದ್ದೇವೆ. ಪುನೀತ್‌ ಅವರ ಕಣ್ಣುಗಳ ಕಾರ್ನಿಯಾ ಭಾಗವನ್ನು ನಾಲ್ಕು ಮಂದಿಗೆ ಅಳವಡಿಸಿದ್ದೆವು. ಆ ವೇಳೆ ಆರೋಗ್ಯವಂತ ಕಣ್ಣಿನ ರಿಮ್‌ನಿಂದ ಸ್ಟೆಮ್‌ಸೆಲ್‌ಗಳನ್ನು ಶೇಖರಿಸಿದ್ದೆವು. ಅವುಗಳನ್ನು ನಮ್ಮದೇ ಪ್ರಯೋಗಾಲಯದಲ್ಲಿ ಮಲ್ಟಿಪಲ್‌ ಮಾಡುತ್ತಿದ್ದೇವೆ. ಈ ಸ್ಟೆಮ್‌ಸೆಲ್‌ಗಳಿಂದ ಸ್ಟೆಮ್‌ಸೆಲ್‌ ಸಮಸ್ಯೆ ಹಾಗೂ ಸಣ್ಣಪುಟ್ಟಹಾನಿಯಿಂದ ದೃಷ್ಟಿಕಳೆದುಕೊಂಡವರಿಗೆ ದೃಷ್ಟಿನೀಡಬಹುದು. ತನ್ಮೂಲಕ ಹತ್ತಕ್ಕೂ ಹೆಚ್ಚು ಮಂದಿಗೆ ಬೆಳಕು ನೀಡಬಹುದು ಎಂದು ನಾರಾಯಣ ನೇತ್ರಾಲಯ ಮುಖ್ಯಸ್ಥರು  ಡಾ.ಭುಜಂಗ ಶೆಟ್ಟಿ ಹೇಳಿದ್ದಾರೆ.

click me!