ಕನ್ನಡದ ಕಣ್ಮಣಿ ಅಪ್ಪು ನಿಧನರಾಗಿ ಮೂರೂವರೆ ವರ್ಷಗಳ ಬಳಿಕ ಅವರು ನೇರಪ್ರಸಾರದಲ್ಲಿ ಮಾತನಾಡಿರುವ ವಿಡಿಯೋ ಒಂದು ಪುನಃ ವೈರಲ್ ಆಗಿದೆ. ಅದರಲ್ಲಿ ಏನಿದೆ?
ಕಳೆದ ಮಾರ್ಚ್ 17ರಮದು ಕನ್ನಡದ ಕಣ್ಮಣಿ ಅಪ್ಪು ಅರ್ಥಾತ್ ಪುನೀತ್ ರಾಜ್ ಅವರ 50ನೇ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿಕೊಂಡರು. ಅರಳುವ ಮುನ್ನವೇ ಬಾಡಿದ ಈ ನಟನ ಬಗ್ಗೆ ಇನ್ನೂ ಅದೆಷ್ಟೋ ಮಂದಿ ಮರೆಯಲಾಗದ ನೆನಪಿನ ಬುತ್ತಿಗಳನ್ನು ಬಿಚ್ಚಿಡುತ್ತಲೇ ಇದ್ದಾರೆ. ಪುನೀತ್ ರಾಜ್ಕುಮಾರ್ ಅವರು ಎಲ್ಲರನ್ನೂ ಅಗಲಿ ಮೂರೂವರೆ ವರ್ಷಗಳಾದರೂ ಅವರ ನೆನಪು ಸದಾ ಹಸಿರು. ಹಲವಾರು ನಟರು ಮಾತ್ರವಲ್ಲದೇ ಗಾಯಕರು, ನಿರ್ದೇಶಕರು ಸೇರಿದಂತೆ ಸಾಮಾನ್ಯ ಜನರನ್ನೂ ಅವರು ಹುರಿದುಂಬಿಸುತ್ತಿದ್ದ ರೀತಿಯೇ ಚೆಂದ. ಇದೇ ಕಾರಣಕ್ಕೆ ಅವರು ಎಲ್ಲರನ್ನೂ ಅಗಲಿದರೂ ಅವರ ನೆನಪನ್ನು ಸಿನಿ ಕ್ಷೇತ್ರದವರು ಸೇರಿದಂತೆ ಎಲ್ಲರೂ ಮಾಡುತ್ತಲೇ ಇರುತ್ತಾರೆ. ಬದುಕಿದ್ದಾಗ ಇವರು ಮಾಡಿದ ಸಮಾಜಮುಖಿ ಕಾರ್ಯಗಳಿಗೆ ಲೆಕ್ಕವೇ ಇಲ್ಲ. ಹಲವರ ಪಾಲಿಗೆ ಬೆಳಕಾಗಿದ್ದ ಅಪ್ಪು, ಸಾವಿನಲ್ಲಿಯೂ ನಾಲ್ವರು ಅಂಧರ ಬಾಳಿಗೆ ಬೆಳಕಾಗಿ ಹೋದವರು. ಇವರ ನಿಧನದ ನಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರು ಹಲವರು. ಅಪ್ಪು ಅವರ ಹಾದಿಯನ್ನೇ ಹಿಡಿಯುತ್ತಿರುವ ಅವರ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ.
ಇದೀಗ ಪುನೀತ್ ಅವರ ಕೊನೆಯ ವಿಡಿಯೋ ಎನ್ನಲಾದ ವಿಡಿಯೋ ಒಂದು ಪುನಃ ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ನೇರಪ್ರಸಾರದಲ್ಲಿ ಬಂದು ಮಾತನಾಡಿದ ವಿಡಿಯೋ ಇದಾಗಿದೆ. ಈ ವಿಡಿಯೋದಲ್ಲಿ ಪುನೀತ್ ರಾಜ್ ಅವರು ತಮ್ಮ ಅಣ್ಣ ಶಿವರಾಜ್‍ಕುಮಾರ್ ಕುರಿತು ಮಾತನಾಡಿದ್ದಾರೆ. ಶಿವಣ್ಣ ನನ್ನ ಅಣ್ಣ. ನಮಗಿಬ್ಬರಿಗೂ 13 ವರ್ಷ ಡಿಫರೆನ್ಸ್. ಅವರು ನನ್ನನ್ನು ಅಣ್ಣ ಎನ್ನುವುದಕ್ಕಿಂತಲೂ ಹೆಚ್ಚಾಗಿ ಫ್ರೆಂಡ್ ರೀತಿಯಲ್ಲಿ ಟ್ರೀಟ್ ಮಾಡುತ್ತಾರೆ. ಅಂಥ ಅಣ್ಣನನ್ನು ಪಡೆದ ನಾನೇ ಧನ್ಯ ಎಂದಿದ್ದಾರೆ. ಎಲ್ಲರಿಗೂ ಇಂಥ ಅಣ್ಣ ಸಿಗಬೇಕು, ಅವರು ಎಲ್ಲರನ್ನೂ ನೋಡಿಕೊಳ್ಳುವ ರೀತಿಯೇ ಚೆಂದ, ಅದು ತುಂಬಾ ಖುಷಿಕೊಡುತ್ತದೆ. ಅವರ ಜೊತೆ ಕಾಲ ಕಳೆಯುವುದು ಎಂದರೆ ನನಗೆ ತುಂಬಾ ಖುಷಿ ಎಂದಿದ್ದಾರೆ. ಈ ವಿಡಿಯೋ ಅನ್ನು ಒನ್ಟೈಂ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ಶೇರ್ ಮಾಡಲಾಗಿದೆ.
ಕನ್ನಡದಲ್ಲಿಯೇ ಅಪ್ಪು ಇಂಟರ್ವ್ಯೂ ಮಾಡಿದ್ದ ರಶ್ಮಿಕಾ: ಅಪರೂಪದ ಕುತೂಹಲದ ವಿಡಿಯೋ ವೈರಲ್
ಇನ್ನು ನಟನಾಗಿ ಶಿವಣ್ಣನ ಕುರಿತು ಹೇಳುವುದಾದರೆ, ಅವರ ಎಲ್ಲಾ ಚಿತ್ರಗಳನ್ನೂ ನಾನು ನೋಡುತ್ತೇನೆ. ಅವರ ಹಲವು ಸಿನಿಮಾಗಳು ನನಗೆ ಫೆವರೆಟ್ ಆಗಿದೆ. ಓಂ, ಆನಂದ್, ರಥಸಪ್ತಮ, ಜೋಗಿ... ಹೀಗೆ ದೊಡ್ಡ ಲಿಸ್ಟೇ ಇದೆ. ಅಷ್ಟೇ ಅಲ್ಲದೇ ಶಿವಣ್ಣ ಅವರ ಡಾನ್ಸ್, ಅವರ ಎನರ್ಜಿ ನಮಗೂ ಬಲ ತುಂಬುತ್ತದೆ ಎಂದಿದ್ದಾರೆ. ಇದರ ವಿಡಿಯೋ ಅನ್ನು ಒನ್ ಟೈಮ್ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ಶೇರ್ ಮಾಡಲಾಗಿದೆ. ಹಳೆಯ ವಿಡಿಯೋ ಈಗ ಪುನಃ ವೈರಲ್ ಆಗುತ್ತಿದೆ. ಅದೇ ಇನ್ನೊಂದೆಡೆ, ಅಪ್ಪು ಹುಟ್ಟುಹಬ್ಬದಂದು ಅಪ್ಪು ಹೆಸರಿನಲ್ಲಿಯೇ ಅವರ ಜೀವನ ಚರಿತ್ರೆ ಪುಸ್ತಕ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಹೊರತರುವ ಬಗ್ಗೆ ಪತ್ನಿ ಅಶ್ವಿನಿ ಮಾತನಾಡಿದ್ದರು. ಹುಟ್ಟುಹಬ್ಬದ ದಿನ ಪುಸ್ತಕದ ಕವರ್ ಪೇಜ್ ಅನ್ನು ಕೂಡ ಅಶ್ವಿನಿ ಪುನೀತ್ ಹಾಗೂ ಅವರ ಪುತ್ರಿಯರಾದ ವಂದಿತಾ ಮತ್ತು ಧೃತಿ ಅನಾವರಣಗೊಳಿಸಿದ್ದರು. ಈ ಪುಸ್ತಕದ ಸಂಪೂರ್ಣ ಎಡಿಟಿಂಗ್ ಖುದ್ದು ಅಶ್ವಿನಿ ಅವರೇ ಮಾಡುತ್ತಿದ್ದು, ಲೇಖಕ ಪ್ರಕೃತಿ ಬನವಾಸಿ ಅವರು ಜೀವನಚರಿತ್ರೆಯನ್ನು ಬರೆದಿದ್ದಾರೆ.
ಈ ಕುರಿತು ಮಾತನಾಡಿದ್ದ ಲೇಖಕ ಪ್ರಕೃತಿ ಬನವಾಸಿ ಅವರು, ಎರಡು ವರ್ಷಗಳ ಶ್ರಮದ ಫಲವಾಗಿ ಶೀಘ್ರದಲ್ಲಿಯೇ ಇದು ಬಿಡುಗಡೆಯಾಗಲಿದೆ ಎಂದಿದ್ದರು. ಜೀವನ ಚರಿತ್ರೆಯನ್ನು 17 ಚಾಪ್ಟರ್ಗಳಲ್ಲಿ ಬರೆಯಲಾಗಿದೆ. ಆದರೆ ಅಷ್ಟು ಸಾಕಾಗಲಿಲ್ಲ. ಇದರಲ್ಲಿಯೇ ಸಾಧ್ಯವಾಷ್ಟು ಮುಗಿಸುವ ಪ್ರಯತ್ನ ಮಾಡಿದ್ದೇವೆ. ಬರೆಯುತ್ತಾ ಹೋದರೆ ಇನ್ನೂ ಎಷ್ಟೋ ಚಾಪ್ಟರ್ಗಳು ಬೇಕಾಗಿತ್ತು ಎಂದಿದ್ದರು. ಈ ಪುಸ್ತಕಕ್ಕೆ ಅಪ್ಪು ಎಂದೇ ಹೆಸರು ಇಡಲು ಕಾರಣವನ್ನೂ ತಿಳಿಸಿರುವ ಅವರು, ಪುನೀತ್ ರಾಜ್ ಅವರು ಸಿನಿಮಾಕ್ಕೆ ರೀ ಎಂಟ್ರಿ ಕೊಟ್ಟಾಗ, ಆ ಸಿನಿಮಾಗೆ ಏನು ಹೆಸರು ಇಡಬೇಕು ಎಂದು ಶಿವಣ್ಣ ಯೋಚಿಸಿದ್ದರು. ಸಾವಿರಾರು ಹೆಸರುಗಳು ಬಂದಿದ್ದವು. ಆದರೆ ಶಿವಣ್ಣ ಅವರು ಅಪ್ಪು ಎಂದು ಫೈನಲ್ ಮಾಡಿದ್ದರು. ಅದಕ್ಕಾಗಿಯೇ ಈ ಹೆಸರು ಎಂದಿದ್ದರು. ಈ ಪುಸ್ತಕಕ್ಕಾಗಿ ಅಭಿಮಾನಿಗಳು ಕಾದಿದ್ದು, ಶೀಘ್ರದಲ್ಲಿಯೇ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದೆ.
'ಅಪ್ಪು' ಜೀವನಚರಿತ್ರೆಯಲ್ಲಿದೆ ಏಳು 'F': ಕುತೂಹಲದ ವಿಷಯ ರಿವೀಲ್ ಮಾಡಿದ ಲೇಖಕ ಪ್ರಕೃತಿ ಬನವಾಸಿ