ಲಾಕ್‌ಡೌನ್‌ ಎಫೆಕ್ಟ್; ಅಮೆಜಾನ್‌ ಪ್ರೈಮ್‌ಗೆ ಸಿನಿಮಾ ಕೊಟ್ಟ ಪುನೀತ್‌ ರಾಜ್‌ಕುಮಾರ್!

By Suvarna News  |  First Published May 17, 2020, 9:21 AM IST

ಕೊರೋನಾ ಲಾಕ್‌ಡೌನ್‌ ಇಡೀ ಆರ್ಥಿಕ ವ್ಯವಸ್ಥೆಯ ಸ್ವರೂಪವನ್ನೇ ಬದಲಾಯಿಸುತ್ತಿರುವ ಹೊತ್ತಲ್ಲಿ, ಚಿತ್ರೋದ್ಯಮ ಕೂಡ ಅದರಿಂದ ಹೊರಗೆ ಉಳಿದಿಲ್ಲ. ಚಿತ್ರಮಂದಿರಗಳು ಮತ್ತೆ ಎಂದು ತೆರೆಯುತ್ತವೆ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರ ಸಿಗದೇ ಇರುವ ಕಾರಣ ನಿರ್ಮಾಪಕರು ಅಮೆಜಾನ್‌ ಪ್ರೈಮ್‌ ಮತ್ತಿತರ ಡಿಜಿಟಲ್‌ ಪ್ಲಾಟ್‌ಫಾಮ್‌ರ್‍ಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
 


ಈಗ ಪುನೀತ್‌ ರಾಜ್‌ಕುಮಾರ್‌ ಅವರ ಪಿಆರ್‌ಕೆ ಸಂಸ್ಥೆ ನಿರ್ಮಿಸಿರುವ ಲಾ ಮತ್ತು ಫ್ರೆಂಚ್‌ ಬಿರಿಯಾನಿ ಎಂಬ ಎರಡು ಸಿನಿಮಾಗಳನ್ನು ನೇರವಾಗಿ ಓಟಿಟಿ ಪ್ಲಾಟ್‌ಫಾಮ್‌ರ್‍ ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆ ಮಾಡುವುದಾಗಿ ಪುನೀತ್‌ ಪ್ರಕಟಿಸಿದ್ದಾರೆ. ಅಲ್ಲಿಗೆ ಕನ್ನಡ ನಿರ್ಮಾಪಕರು ಕೂಡ ಸಾಂಪ್ರದಾಯಿಕ ಚಿತ್ರಮಂದಿರಗಳ ವ್ಯವಸ್ಥೆಯಿಂದ ಹೊರಬಂದು, ಚಿತ್ರದ ಬಿಡುಗಡೆಗೆ ಆಧುನಿಕ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿರುವುದು ಖಚಿತವಾಗಿದೆ.

ಮನರಂಜನೆ ಹೋಗಿ ಮನೆರಂಜನೆ ಬಂತು;ಓಟಿಟಿಗೆ ದಾರಿಮಾಡಿಕೊಟ್ಟಲಾಕ್‌ಡೌನ್‌!

Latest Videos

undefined

ಪುನೀತ್‌ ತಮ್ಮ ಸಂಸ್ಥೆಯ ಎರಡು ಚಿತ್ರಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದ ಬೆನ್ನಿಗೇ, ಪಿವಿಆರ್‌ ಮತ್ತು ಐನಾಕ್ಸ್‌ ಮಲ್ಟಿಪ್ಲೆಕ್ಸ್‌ ಪ್ರದರ್ಶಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ‘ಐನಾಕ್ಸ್‌’ ಬಿಡುಗಡೆ ಮಾಡಿರುವ ಪತ್ರದಲ್ಲಿ, ‘ಈ ಬೆಳವಣಿಗೆಯ ಕುರಿತು ಐನಾಕ್ಸ್‌ ಸಂಸ್ಥೆಗೆ ನಿರಾಶೆ ಮತ್ತು ಬೇಸರವಾಗಿದೆ’ ಎಂದು ಹೇಳಿಕೊಂಡಿದೆ. ಪುನೀತ್‌ ಸಂಸ್ಥೆಯ ಹೆಸರನ್ನು ಪ್ರಸ್ತಾಪ ಮಾಡದೆಯೇ, ‘ಇಂದು ಒಂದು ಚಿತ್ರ ನಿರ್ಮಾಣ ಸಂಸ್ಥೆ ತಾನು ನಿರ್ಮಿಸಿದ ಸಿನಿಮಾಗಳನ್ನು ನೇರವಾಗಿ ಓಟಿಟಿ ಪ್ಲಾಟ್‌ಫಾಮ್‌ರ್‍ನಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಆ ಮೂಲಕ ಚಿತ್ರಮಂದಿರಗಳಲ್ಲಿ ತೆರೆಕಾಣುವ ಸಂಪ್ರದಾಯವನ್ನು ಮುರಿದಿದೆ. ಇದು ಜಾಗತಿಕವಾಗಿ ಜಾರಿಯಲ್ಲಿರುವ ಪ್ರದರ್ಶನ ನೀತಿಯಿಂದ ದೂರವಾಗುವ ಕ್ರಮ. ಇದು ಅಪಾಯಕಾರಿ ಮತ್ತು ಅವ್ಯವಸ್ಥೆಗೆ ಈಡು ಮಾಡಿದೆ’ ಎಂದು ಆಕ್ಷೇಪಿಸಿದೆ.

 

ವಿಶ್ವರೂಪಂ ಕಾಲದ ಸಮಸ್ಯೆ:

2013ರಲ್ಲೇ ಕಮಲಹಾಸನ್‌ ತನ್ನ ಸಂಸ್ಥೆಯ ವಿಶ್ವರೂಪಂ ಚಿತ್ರವನ್ನು ಡೈರೆಕ್ಟ್ ಟು ಹೋಮ್‌(ಡಿಟಿಎಚ್‌) ಮೂಲಕ ವಿತರಣೆ ಮಾಡಲು ಯೋಜನೆ ಹಾಕಿಕೊಂಡಿದ್ದರು. ಅದಕ್ಕೆ ಚಿತ್ರಪ್ರದರ್ಶಕರ ಹಾಗೂ ಚಿತ್ರೋದ್ಯಮದ ವಿರೋಧ ವ್ಯಕ್ತವಾಗಿತ್ತು. ಹಾಗೇನಾದರೂ ಮಾಡಿದರೆ ಕಮಲ್‌ ಚಿತ್ರಗಳನ್ನು ಬಹಿಷ್ಕರಿಸುವುದಾಗಿ ಚಿತ್ರಮಂದಿರಗಳ ಮಾಲೀಕರು ಬೆದರಿಕೆ ಹಾಕಿದ್ದರು. ಕೊನೆಗೆ ಕಮಲಹಾಸನ್‌ ಸಾಂಪ್ರದಾಯಿಕ ರೀತಿಯಲ್ಲೇ ಚಿತ್ರ ಬಿಡುಗಡೆ ಮಾಡಬೇಕಾಗಿ ಬಂತು.

ಕಳೆದ ತಿಂಗಳು ತಮಿಳು ನಟ ಸೂರ್ಯ ತನ್ನ ಸಂಸ್ಥೆಯಲ್ಲಿ ನಿರ್ಮಾಣವಾದ ಜ್ಯೋತಿಕಾ ಅಭಿನಯದ ಪೊಣ್‌ಮಗಳ್‌ ವಂದಾಳ್‌ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲು ಹೊರಟಾಗ ಅದನ್ನೂ ಪ್ರದರ್ಶಕರು ವಿರೋಧಿಸಿದ್ದರು. ಸೂರ್ಯ ಚಿತ್ರಗಳನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದರು. ಆದರೆ ನಿರ್ಮಾಪಕರ ಸಂಘ ಸೂರ್ಯ ಬೆನ್ನಿಗೆ ನಿಂತು ಬೆಂಬಲ ಘೋಷಿಸಿತ್ತು. ಅದಾದ ನಂತರ ನಿರ್ಮಾಪಕರು ಮತ್ತು ಪ್ರದರ್ಶಕರ ನಡುವೆ ಮಾತುಕತೆ ನಡೆದು ಸಮಸ್ಯೆ ರಾಜೀಸಂಧಾನದಲ್ಲಿ ಮುಕ್ತಾಯಗೊಂಡಿದೆ.

 

ಅಮಿತಾಭ್‌ ಚಿತ್ರಕ್ಕೂ ಅಡ್ಡಿ:

ಗುರುವಾರ ಅಮೆಜಾನ್‌ ಪ್ರೈಮ್‌ ಅಮಿತಾಭ್‌ ಬಚ್ಚನ್‌ ಹಾಗೂ ಆಯುಷ್ಮಾನ್‌ ಖುರಾನಾ ಅಭಿನಯದ ಗುಲಾಬೋ ಸಿತಾಬೋ ಸಿನಿಮಾವನ್ನು ಸದ್ಯದಲ್ಲೇ ವೀಕ್ಷಕರ ಮುಂದಿಡುವುದಾಗಿ ಘೋಷಿಸುತ್ತಿದ್ದಂತೆಯೇ, ಬಾಲಿವುಡ್‌ನಲ್ಲೂ ಮಲ್ಟಿಪ್ಲೆಕ್ಸ್‌ ವ್ಯವಸ್ಥೆ ಅದುರಿಬಿದ್ದಿದೆ. ಏಪ್ರಿಲ್‌ 17ಕ್ಕೆ ಈ ಸಿನಿಮಾ ಚಿತ್ರಮಂದಿರಗಳಲ್ಲೇ ತೆರೆಕಾಣಬೇಕಾಗಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ಇಗನ್ನು ಅಮೆಜಾನ್‌ ಪ್ರೈಮ್‌ಗೆ ನೀಡಲಾಗಿತ್ತು. ಇದರ ಬೆನ್ನಿಗೇ ಅಕ್ಷಯ್‌ ಕುಮಾರ್‌ ನಟನೆಯ ಲಕ್ಷ್ಮೇ ಬಾಂಬ್‌ ಮತ್ತು ಜಾನ್ವಿ ಕಪೂರ್‌ ಸಿನಿಮಾ ಗುಂಜನ್‌ ಸಕ್ಸೇನಾ ಕೂಡ ಅಮೆಜಾನ್‌ ಪ್ರೈಮ್‌ನಲ್ಲೇ ತೆರೆಕಾಣಲಿದೆ. ಇದರ ವಿರುದ್ಧ ಪ್ರದರ್ಶಕರು ಸಿಡಿದೆದ್ದಿದ್ದಾರೆ.

click me!