ಬೆಂಗಳೂರು (ನ.09): ನಟ ಪುನೀತ್ ರಾಜ್‌ಕುಮಾರ್ (Puneeth Rajkumar) 11ನೇ ದಿನ ಪುಣ್ಯತಿಥಿ ಕಾರ್ಯ ಶಾಸೊತ್ರೕಕ್ತವಾಗಿ ನೆರವೇರಿದೆ. ಬೆಳಗ್ಗೆ ಪುನೀತ್ ರಾಜ್‌ಕುಮಾರ್ ನಿವಾಸದಲ್ಲಿ ಶಾಸೊತ್ರೕಕ್ತವಾಗಿ 11ನೇ ದಿನದ ಕಾರ್ಯಗಳನ್ನು ನೆರವೇರಿಸಿದ ರಾಜ್‌ಕುಮಾರ್ ಕುಟುಂಬ ನಂತರ ಕಂಠೀರವ ಸ್ಟುಡಿಯೋ (kanteerava Studio) ಆವರಣದಲ್ಲಿರುವ ಪುನೀತ್ ರಾಜ್‌ಕುಮಾರ್ ಸಮಾಧಿ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿತು.
ಪತ್ನಿ ಅಶ್ವಿನಿ ಮತ್ತು ಮಕ್ಕಳು ಮನೆಯಲ್ಲಿ ಪೂಜೆ ಸಲ್ಲಿಸಿ ಕಾರಿನಲ್ಲಿ ಸಮಾಧಿ ಸ್ಥಳಕ್ಕೆ ಆಗಮಿಸಿದರು. ಶಿವರಾಜ್ ಕುಮಾರ್ (Shivarajkumar), ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಕುಟುಂಬ ಕೂಡ ಕಾರಿನಲ್ಲಿ ಸಮಾಧಿ ಸ್ಥಳಕ್ಕೆ ಬಂದರೆ ಉಳಿದ ಕುಟುಂಬಸ್ಥರು ಎರಡು ಬಸ್ಸುಗಳಲ್ಲಿ (Bus) ಆಗಮಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು. ಪುನೀತ್ ಅವರಿಗೆ ಇಷ್ಟವಾದ ಆಹಾರಗಳನ್ನು ಎಡೆ ಇಟ್ಟು ಪೂಜೆ ಸಲ್ಲಿಸಲಾಯಿತು. ಸಮಾಧಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. 11ನೇ ದಿನದ ಪುಣ್ಯ ತಿಥಿ ಕಾರ್ಯಗಳನ್ನು ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್ (Vinay Rajkumar) ನೆರವೇರಿಸಿದರು. ರಾಜ್ಯದ ನಾನಾ ಕಡೆಗಳಿಂದ ಪುನೀತ್ ಅಭಿಮಾನಿಗಳು ಸಮಾಧಿ ಸ್ಥಳಕ್ಕೆ ಆಗಮಿಸಿದ್ದರು. ಪುನೀತ್ ಸಮಾಧಿ ದರ್ಶನಕ್ಕೆ ಅಭಿಮಾನಿಗಳು ಕಿಮೀ ದೂರದವರೆಗೆ ಸಾಲುಗಟ್ಟಿನಿಂತಿದ್ದರು.
ದುಃಖದಲ್ಲಿಯೂ ಪರೀಕ್ಷೆ ಬರೆದ ಮಗಳು : ಪುನೀತ್ ರಾಜ್‌ಕುಮಾರ್ (Puneeth Rajkumar) ದ್ವಿತೀಯ ಪುತ್ರಿ ವಂದಿತಾ 10ನೇ ತರಗತಿ ಓದುತ್ತಿದ್ದಾರೆ.(ICSE) ಅವರಿಗೆ ಶಾಲೆಯಲ್ಲಿ ಪುನೀತ್ ಪುಣ್ಯತಿಥಿ ದಿನದಂದೇ ಪರೀಕ್ಷೆ ನಿಗದಿಯಾಗಿತ್ತು. ಆ ಕಾರಣದಿಂದ ವಂದಿತಾ ಅವರು ಬೆಳಿಗ್ಗೆಯೇ ಪೂಜೆಯಲ್ಲಿ ಪಾಲ್ಗೊಂಡು ತಂದೆಗೆ ನಮಿಸಿ ನಂತರ ಪರೀಕ್ಷೆಗೆ ಹಾಜರಾಗಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ (Girl Child Education) ಹೆಚ್ಚಿನ ಒತ್ತನ್ನು ನೀಡುತ್ತಿದ್ದರು. ಈ ನಿಟ್ಟಿನಲ್ಲಿ ದುಃಖದಲ್ಲಿಯೂ ಮಗಳು ತಂದೆಯ ಪುಣ್ಯತಿಥಿಯಂದು ಪೂಜೆ ಸಲ್ಲಿಸಿ ಪರೀಕ್ಷೆ ತಪ್ಪಿಸದೇ ಹಾಜರಾಗಿ ಬರೆದಿದ್ದಾರೆ.
ಪುನೀತ್ ಮನೆಗೆ ಕಲಾವಿದರು, ಗಣ್ಯರ ಭೇಟಿ
ಪುನೀತ್ 11ನೇ ದಿನದ ಪುಣ್ಯತಿಥಿ ಕಾರ್ಯಕ್ರಮಕ್ಕೆ ಕುಟುಂಬಸ್ಥರು, ಕಲಾವಿದರು, ಗಣ್ಯರಿಗೆ ಮಾತ್ರ ಆಹ್ವಾನ ಇತ್ತು. ಹಲವರು ಸಮಾಧಿ ಸ್ಥಳಕ್ಕೆ ಆಗಮಿಸಿ ಗೌರವ ಸಲ್ಲಿಸಿದರು. ಬಹುತೇಕರು ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ತೆರಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ರವಿಚಂದ್ರನ್ (Ravichandran), ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್, ದುನಿಯ ವಿಜಯ್ (Duniya Vijay), ಶರಣ್, ರಕ್ಷಿತ್ ಶೆಟ್ಟಿ, ಅನೂಪ್ ಭಂಡಾರಿ, ನಿರೂಪ್ ಭಂಡಾರಿ, ಲಹರಿ ವೇಲು, ಧನಂಜಯ್, ವಸಿಷ್ಠ ಸಿಂಹ ಸೇರಿದಂತ ಅನೇಕರು ಪುಣ್ಯತಿಥಿ ಕಾರ್ಯದಲ್ಲಿ ಹಾಜರಿದ್ದರು.
ಇಂದು ಅಭಿಮಾನಿಗಳಿಗೆ ಅನ್ನದಾನ
ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಾ.ರಾಜ್‌ಕುಮಾರ್ (Dr Rajkumar) ಕುಟುಂಬದ ವತಿಯಿಂದ ಅಭಿಮಾನಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. 11ನೇ ದಿನದ ಪುಣ್ಯ ತಿಥಿ ಕಾರ್ಯಕ್ರಮಕ್ಕೆ ಗಣ್ಯರಿಗೆ ಮಾತ್ರ ಆಹ್ವಾನಿಸಲಾಗಿತ್ತು. ಹಾಗಾಗಿ ನ.9ರಂದು ಅಭಿಮಾನಿಗಳಿಗೆ ಅನ್ನದಾನ ಏರ್ಪಡಿಸಲು ಕುಟುಂಬ ನಿರ್ಧರಿಸಿತ್ತು. ಆ ಪ್ರಕಾರವೇ ಇಂದು ಅನ್ನದಾನ ನಡೆಯಲಿದೆ. ಸಹಸ್ರಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ.
ಅಭಿಮಾನಿ ಅಜ್ಜಿಯಿಂದ ಪುನೀತ್‌ಗೆ ಕಡ್ಲೆಪುರಿ ಹಾರ ಸಮರ್ಪಣೆ
ಪುನೀತ್ 11ನೇ ದಿನದ ಪುಣ್ಯತಿಥಿಗಾಗಿಯೇ ತುಮಕೂರಿನ ಗುಬ್ಬಿ ತಾಲೂಕಿನ ಕೆ.ಜಿ. ಟೆಂಪಲ್ ನಿವಾಸಿ ಸುಮಿತ್ರಾ ಬಾಯಿಯವರು ಕಡ್ಲೆಪುರಿ, ಬತಾಸಿನಿಂದ ತಯಾರಿಸಿದ ಹಾರವನ್ನು ಸಿದ್ಧಗೊಳಿಸಿ ಅರ್ಪಿಸಿದ್ದಾರೆ. ಸಮಾಧಿ ಸ್ಥಳಕ್ಕೆ ಆಗಮಿಸಿದ ಅವರು ತಾವು ಪುನೀತ್ ಅಭಿಮಾನಿ, ಅವರನ್ನು ನೋಡಿದರೆ ಅಣ್ಣಾವ್ರನ್ನು ನೋಡಿದಂತೆ ಆಗುತ್ತಿತ್ತು. ಅವರಿಗಾಗಿ ಕಳೆದ ಮೂರು ದಿನದಿಂದ ಈ ಹಾರ ಸಿದ್ಧಗೊಳಿಸಿದ್ದೇನೆ ಎಂದು ತಿಳಿಸಿದರು. ಈ ಹಿಂದೆ ಸುಮಿತ್ರಾಬಾಯಿ ಹಲವು ಬಾರಿ ಪುನೀತ್ ಅವರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ಅನೇಕ ಅಭಿಮಾನಿಗಳು ಪುನೀತ್ ಅವರಿಗೆ ವಿವಿಧ ಬಗೆಯ ತಿಂಡಿಗಳನ್ನು ಅರ್ಪಿಸಿದ್ದಾರೆ. ಜಮಖಂಡಿಯಿಂದ ಬಂದಿದ್ದ ಅಭಿಮಾನಿಯೊಬ್ಬರು ಜೋಳದ ರೊಟ್ಟಿಮಾಡಿಕೊಂಡು ಬಂದು ಪುನೀತ್‌ಗೆ ಎಡೆ ಇಟ್ಟರು.
ಸುರೇಶ್‌ರಿಂದ 1000 ಜನರಿಗೆ ಅನ್ನದಾನ
ನಿರ್ಮಾಪಕ ಸುರೇಶ್ ಅವರು ಪುನೀತ್ ರಾಜ್‌ಕುಮಾರ್ ನೆನಪಲ್ಲಿ ಬೆಂಗಳೂರಿನ ನಾಗರಭಾವಿಯಲ್ಲಿರುವ ತಮ್ಮ ಕಚೇರಿ ಸಮೀಪದಲ್ಲಿ ಸುಮಾರು ಒಂದು ಸಾವಿರ ಮಂದಿಗೆ ಅನ್ನದಾನ ಮಾಡಿದ್ದಾರೆ. ವಿನಯ್ ರಾಜ್‌ಕುಮಾರ್ ನಟನೆಯ ‘ಅಂದೊಂದಿತ್ತು ಕಾಲ’ ಸಿನಿಮಾದ ನಿರ್ಮಾಪಕರಾಗಿರುವ ಅವರು ಪುನೀತ್ ಅವರ ಅಭಿಮಾನಿಯಾಗಿದ್ದರು.
ಪುನೀತ್ ನಿವಾಸದಲ್ಲಿ ಮತ್ತು ಸಮಾಧಿ ಸ್ಥಳದಲ್ಲಿ ನಡೆದ ಪುಣ್ಯತಿಥಿ ಕಾರ್ಯದಲ್ಲಿ ಭಾಗವಹಿಸಲು ಅಭಿಮಾನಿಗಳಿಗೆ ಅವಕಾಶ ಇರಲಿಲ್ಲ. ಮಧ್ಯಾಹ್ನ 12 ಗಂಟೆಯವರೆಗೂ ಸಮಾಧಿ ಸ್ಥಳಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಕುಟುಂಬಸ್ಥರ ಜೊತೆಗೆ ಚಿತ್ರರಂಗ ಗಣ್ಯರು ಮತ್ತು ರಾಜಕೀಯ ಧುರೀಣರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪುನೀತ್ ತೀರಿಕೊಂಡು 11 ದಿನ ಕಳೆದರೂ ಅಭಿಮಾನಿಗಳು ಬರುವುದು ಇನ್ನೂ ನಿಂತಿಲ್ಲ. 11ನೇ ಪುಣ್ಯತಿಥಿ ದಿನದಂದು ಸಮಾಧಿ ದರ್ಶನಕ್ಕೆ ಬಂದ ಅಭಿಮಾನಿಗಳ ಸಂಖ್ಯೆಯೇ ಪುನೀತ್ ಮೇಲಿನ ಮುಗಿಯದ ಅಭಿಮಾನವನ್ನು ಸಾರುತ್ತಿತ್ತು.