ಮಾಸ್ ಹೀರೋ ಆಗಿ ತೆರೆ ಮೇಲೆ 'ಉದ್ಭವ' ವಾಗಿದ್ದಾರೆ ಪ್ರೀಮಿಯರ್ ಪದ್ಮಿನಿ ನಟ

By Suvarna NewsFirst Published Feb 7, 2020, 11:28 AM IST
Highlights

ನನಗಿದು ಚೇಂಜ್‌ ಓವರ್‌ ಸಿನಿಮಾ: ಪ್ರಮೋದ್‌ | ಮಾಸ್‌ ಹೀರೋ ಆಗಿ ತೆರೆ ಮೇಲೆ ಬರುತ್ತಿದ್ದಾರೆ ‘ಪ್ರೀಮಿಯರ್‌ ಪದ್ಮಿನಿ’ ಖ್ಯಾತಿಯ ನಟ | ಅನಂತ್‌ನಾಗ್ ಹಾಗೂ ನಿರ್ದೇಶಕ ಕೋಡ್ಲು ರಾಮಕೃಷ್ಣ ಜೋಡಿಯ ಯಶಸ್ವಿ ಚಿತ್ರ 'ಉದ್ಭವ'.

ಅನಂತನಾಗ್‌ ಹಾಗೂ ನಿರ್ದೇಶಕ ಕೋಡ್ಲು ರಾಮಕೃಷ್ಣ ಜೋಡಿಯ ಯಶಸ್ವಿ ಚಿತ್ರ ‘ಉದ್ಭವ’. ಅದು ಬಂದು ಹೋಗಿ ಇಲ್ಲಿಗೆ 30 ವರ್ಷ. ಅದೇ ಚಿತ್ರದ ಸೀಕ್ವೆಲ್‌ ಈಗ ‘ಮತ್ತೆ ಉದ್ಭವ’ದ ರೂಪದಲ್ಲಿ ಬರುತ್ತಿದೆ. ಅಲ್ಲಿ ಅನಂತನಾಗ್‌, ಇಲ್ಲಿ ಯುವ ಪ್ರತಿಭೆ ಪ್ರಮೋದ್‌.

ಹಾಗೊಂದು ಚೇಂಜ್‌ಓವರ್‌ನೊಂದಿಗೆ ಸಕ್ಸಸ್‌ಫುಲ್‌ ಚಿತ್ರದ ಸೀಕ್ವೆಲ್‌ನಲ್ಲಿ ನಾಯಕನಾಗಿ ಅಭಿನಯಿಸಿರುವ ನಟ ಪ್ರಮೋದ್‌, ಪಾತ್ರದ ಬಗ್ಗೆ ಸಿನಿಮಾದ ಬಗ್ಗೆ ಮಾತಾಡಿದ್ದಾರೆ.

'ಮತ್ತೆ ಉದ್ಭವ' ಚಿತ್ರಕ್ಕೆ ದರ್ಶನ್, ಸೀತಾರಾಮ್‌ ಸಾಥ್!

- ‘ಮತ್ತೆ ಉದ್ಭವ’ ಅಂದಾಗ ನಿಮಗೆ ನೆನಪಾಗಿದ್ದೇನು?

ಅನಂತನಾಗ್‌ ಸರ್‌ ಮತ್ತವರ ಪಾತ್ರ. ಯಾಕಂದ್ರೆ, ‘ಉದ್ಭವ’ಚಿತ್ರದಲ್ಲಿನ ಅವರ ಪಾತ್ರ ಮತ್ತು ಅಭಿನಯವೇ ವಿಶೇಷ. ನಾನು ನಟನೆಗೆ ಕಾಲಿಟ್ಟದಿನಗಳಲ್ಲಿ ಆ ಸಿನಿಮಾ ನೋಡಿದ್ದೆ. ಅಲ್ಲಿನ ಕತೆ, ನಿರ್ದೇಶನ, ಕಲಾವಿದರ ಅಭಿನಯ ಸೇರಿ ಇಡೀ ಸಿನಿಮಾವೇ ವಿಶೇಷ ಎನಿಸಿತ್ತು.

ಆ ಚಿತ್ರದ ಮುಂದುವರಿಕೆಯ ಕತೆಗೆ ನಾನು ಹೀರೋ ಆಗ್ಬಹುದು ಅಂತ ಕನಸು ಕೂಡ ಕಂಡಿರಲಿಲ್ಲ. ಆದ್ರೆ ಅದೀಗ ಸಾಧ್ಯವಾಗಿದೆ. ಚಿತ್ರದ ಕಾರ್ಯಕಾರಿ ನಿರ್ಮಾಪಕ ಗುರುಪ್ರಸಾದ್‌ ಮುದ್ರಾಡಿ ಅವರು ಫೋನ್‌ ಮಾಡಿ,‘ಮತ್ತೆ ಉದ್ಭವ’ ಹೆಸರಿನ ಚಿತ್ರಕ್ಕೆ ಹೀರೋ ಆಗ್ತೀರಾ ಅಂತ ಕೇಳಿದಾಗ, ನನಗೆ ತಕ್ಷಣ ನೆನಪಾಗಿದ್ದು ‘ಉದ್ಭವ’ ಚಿತ್ರದಲ್ಲಿನ ಅನಂತನಾಗ್‌ ಅವರ ಪಾತ್ರ ಮಾತ್ರ.

- ನೀವು ಈ ಚಿತ್ರಕ್ಕೆ ಹೀರೋ ಆಗಿದ್ದು ಹೇಗೆ?

ಅದಕ್ಕೆ ಮುಖ್ಯ ಕಾರಣ ನಿರ್ಮಾಪಕರಾದ ನಿತ್ಯಾನಂದ್‌ ಭಟ್‌ ಹಾಗೂ ಗುರುಪ್ರಸಾದ್‌ ಮುದ್ರಾಡಿ. ಅವರು ಈ ಸಿನಿಮಾದ ಸಿದ್ಧತೆಯಲ್ಲಿದ್ದಾಗ ನಾನು ಅಭಿನಯಿಸಿದ ‘ಪ್ರೀಮಿಯರ್‌ ಪದ್ಮಿನಿ’ ಚಿತ್ರ ತೆರೆ ಕಂಡಿತ್ತು. ಚಿತ್ರಕ್ಕೆ ಎಲ್ಲಾ ಕಡೆ ಒಳ್ಳೆಯ ಪ್ರತಿಕ್ರಿಯೆ ಕೂಡ ಸಿಕ್ಕಿತ್ತು. ಒಂದು ದಿನ ಗುರುಪ್ರಸಾದ್‌ ಮುದ್ರಾಡಿ ಅವರು ಆ ಸಿನಿಮಾ ನೋಡುವುದಕ್ಕೆ ಹೋಗಿದ್ರಂತೆ.

ಚಿತ್ರದಲ್ಲಿನ ನನ್ನ ಅಭಿನಯ ಅವರಿಗೆ ಇಷ್ಟವಾಗಿ ಟಾಕೀಸ್‌ನಿಂದಲೇ ಫೋನ್‌ ಮಾಡಿ ಮಾತನಾಡಿದರು. ಸಿನಿಮಾ ನೋಡಿದೆ, ಅಭಿನಯ ಚೆನ್ನಾಗಿದೆ ಅಂತ ಮೆಚ್ಚುಗೆಯ ಮಾತು ಹೇಳಿ ಪೋನ್‌ ಇಟ್ಟರು. ಅದಾಗಿ ವಾರ ಕಳೆಯುವ ಹೊತ್ತಿಗೆ ನಿರ್ದೇಶಕರಾದ ಕೋಡ್ಲು ರಾಮಕೃಷ್ಣ ಸರ್‌ ಫೋನ್‌ ಮಾಡಿದರು. ‘ಮತ್ತೆ ಉದ್ಭವ ’ಚಿತ್ರಕ್ಕೆ ನೀವೇ ಹೀರೋ. ಕತೆ ಕೇಳೋದಿಕ್ಕೆ ಬನ್ನಿ ಅಂದ್ರು.

- ಸಿನಿಮಾ ಒಪ್ಪಿಕೊಳ್ಳುವುದಕ್ಕಿದ್ದ ಮುಖ್ಯ ಕಾರಣ ಏನು ?

ಮೊದಲಿಗೆ ಕತೆ. ಆನಂತರ ಚಿತ್ರದ ನಿರ್ದೇಶಕರು, ನಿರ್ಮಾಪಕರು ಇತ್ಯಾದಿ. ಅದರ ಜತೆಗೆ ನನಗೂ ಒಂದಷ್ಟುಚೇಂಜಸ್‌ ಬೇಕಿತ್ತು. ‘ಗೀತಾ ಬ್ಯಾಂಗಲ್‌ ಸ್ಟೋರ್‌’ ಸಿನಿಮಾ ಬಂದು ಹೋದ ನಂತರದ ಒಂದಷ್ಟುಗ್ಯಾಪ್‌ನಲ್ಲಿ ‘ಪ್ರೀಮಿಯರ್‌ ಪದ್ಮಿನಿ’ ಚಿತ್ರದಲ್ಲಿ ಅಭಿನಯಿಸಿದೆ.

ಅದು ಪಕ್ಕಾ ಕ್ಲಾಸ್‌ ಸಿನಿಮಾ. ಕಾಮಿಡಿ ಜತೆಗೆಯೇ ಸೀರಿಯಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಅದು ಬಿಟ್ಟರೆ ಪಕ್ಕಾ ಮಾಸ್‌ ಲುಕ್‌ನಲ್ಲೂ ಈ ಹುಡುಗ ಅಭಿನಯಿಸಬಲ್ಲ ಎನ್ನುವುದನ್ನು ಸಾಬೀತು ಪಡಿಸಿಕೊಳ್ಳುವುದಕ್ಕೆ ಕಾಯುತ್ತಿದ್ದೆ. ಆ ಸಮಯದಲ್ಲೇ ಈ ಸಿನಿಮಾದ ಕತೆ ಕೇಳಿದೆ. ಇಲ್ಲಿ ಅದಕ್ಕೆ ಅವಕಾಶ ಇತ್ತು. ಹಾಗಾಗಿ ಒಪ್ಪಿಕೊಂಡೆ.

ಡಿ-ಬಾಸ್‌ ಮೇಲೆ ಈ ಹೀರೋಗೆ ಲವ್ವಾಯ್ತು, 'ಮತ್ತೆ ಉಧ್ಭವ' ಟ್ರೈಲರ್‌ ಹೀಗಿದೆ ನೋಡಿ!

- ಉದ್ಭವ’ ಚಿತ್ರಕ್ಕೂ ‘ಮತ್ತೆ ಉದ್ಭವ’ಕ್ಕೂ ಇರುವ ಕನೆಕ್ಷನ್‌ ಏನು?

ಉದ್ಭವ ಒಂದು ಕ್ಲಾಸ್‌ ಸಿನಿಮಾ. ರಸ್ತೆ ಅಗಲೀಕರಣ ಮತ್ತು ದೇವಸ್ಥಾನ ನಿರ್ಮಾಣದ ಸುತ್ತಲ ಕತೆ ಅದು. ನನಗೆ ಗೊತ್ತಿರುವ ಹಾಗೆ ಅದರ ಮುಂದುವರೆದ ಕತೆಯೇ ಈ ಸಿನಿಮಾ. ಇದು ಪಕ್ಕಾ ಮಾಸ್‌ ಸಿನಿಮಾ. ‘ಉದ್ಭವ’ ದಲ್ಲಿ ಅನಂತನಾಗ್‌ ಅವರಿಗೆ ಇಬ್ಬರು ಮಕ್ಕಳಿದ್ದರು. ಆ ಮಕ್ಕಳೇ ಇಲ್ಲಿ ದೊಡ್ಡವರಾಗಿದ್ದಾರೆ. ಅವರಿಬ್ಬರ ಪೈಕಿ ಒಬ್ಬಾತ ಈಗ ಅಡ್ವೊಕೇಟ್‌.

ಮತ್ತೊಬ್ಬನದು ಅನಂತನಾಗ್‌ ಪಾತ್ರದ ಮುಂದುವರಿಕೆ. ಅಲ್ಲಿ ‘ಉದ್ಭವ’ ಆಗಿದ್ದ ಗಣೇಶ್‌ ಮೂರ್ತಿಯ ಸುತ್ತ ಇಲ್ಲಿ ಏನೆಲ್ಲ ನಡೆಯುತ್ತೆ, ಯಾರೆಲ್ಲ ಬಂದು ಹೋಗುತ್ತಾರೆ ಎನ್ನುವ ಹಲವು ಸ್ವಾರಸ್ಯಕರ ಪ್ರಕರಣಗಳನ್ನು ವಿಡಂಬನಾತ್ಮಕವಾಗಿ ತೋರಿಸಲಾಗಿದೆ. ಕಾಲಕ್ಕೆ ತಕ್ಕಂತೆ ಮಾಸ್‌ ಎಲಿಮೆಂಟ್ಸ್‌ ಇಟ್ಕೊಂಡು ಸಿನಿಮಾ ಮಾಡಿದ್ದಾರೆ ನಿರ್ದೇಶಕರು. ಕ್ಲೈಮ್ಯಾಕ್ಸ್‌ ಈ ಸಿನಿಮಾದ ವಿಶೇಷ.

- ಸಿನಿಮಾ ತೆರೆ ಕಂಡರೆ ಕಾಂಟ್ರವರ್ಸಿ ಆಗುತ್ತೆ ಅಂತ ಚಿತ್ರತಂಡ ಹೇಳ್ತಿರೋದು ಯಾಕೆ?

ಕತೆಯಲ್ಲಿ ಪ್ರಚಲಿತ ರಾಜಕಾರಣದ ಹಲವು ವಿಷಯಗಳಿವೆ. ರಾಜ್ಯದ ಮೂವರು ಜನಪ್ರಿಯ ಮುಖ್ಯಮಂತ್ರಿಗಳಿಗೆ ಕತೆ ಕನೆಕ್ಟ್ ಆಗುತ್ತೆ. ಜತೆಗೆ ಮೌಢ್ಯ, ಮೂಢನಂಬಿಕೆ ಹಾಗೂ ಕಂದಾಚಾರಗಳ ಬಗ್ಗೆಯೂ ಸಿನಿಮಾ ಮಾತನಾಡುತ್ತದೆ. ಅದು ವಿವಾದಕ್ಕೆ ಸಿಲುಕಬಹುದು, ಕೆಲವರಿಂದ ವಿರೋಧ ಬರಬಹುದಾದ ಸಾಧ್ಯತೆಗಳು ಇವೆ.

ಹಾಗಾಗಿಯೇ ಚಿತ್ರದ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರು ತಮಗೆ ಜೀವ ಬೆದರಿಕೆಯ ಕರೆ ಬರಬಹುದು ಅಂತ ಹೇಳಿದ್ದಾರೆ. ಹಾಗಂತ ಅವರೇನು ಭಯಪಟ್ಟಿಲ್ಲ. ಧೈರ್ಯದಿಂದಲೇ ಅದನ್ನು ನಿಭಾಯಿಸುವುದಕ್ಕೆ ರೆಡಿ ಆಗಿದ್ದಾರೆ. ಚಿತ್ರ ತಂಡವೂ ಕೂಡ.

-ಚಿತ್ರದಲ್ಲಿನ ನಿಮ್ಮ ಪಾತ್ರ ಮತ್ತು ಅದನ್ನು ನಿಭಾಯಿಸಿದ ಬಗ್ಗೆ ಹೇಳಿ?

ಪಾತ್ರದ ಹೆಸರು ಗಣೇಶ್‌. ಕಿರಾತಕನಂಥಾ ವ್ಯಕ್ತಿತ್ವ. ಕೆಲಸ ಇಲ್ಲದಿದ್ದರೂ, ಆತ ಸೋಮಾರಿ ಅಲ್ಲ. ತಾಯಿಯೊಬ್ಬಳನ್ನು ಬಿಟ್ಟು ಉಳಿದವರೆಲ್ಲರೂ ಮುಂದೆ ಸುಳ್ಳು ಹೇಳುವ, ಯಾಮಾರಿಸುವ ಚಾಲಾಕಿ ಆತ. ‘ಉದ್ಭವ’ ದಲ್ಲಿ ಇದೇ ಪಾತ್ರಕ್ಕೆ ಅನಂತನಾಗ್‌ ಸರ್‌ ಬಣ್ಣ ಹಚ್ಚಿದ್ದರು. ಕತೆ ಕೇಳುವ ಮುನ್ನ ನನಗೂ ಭಯ ಇತ್ತು. ಅಷ್ಟುದೊಡ್ಡ ನಟ ಅಭಿನಯಿಸಿದ ಪಾತ್ರ, ಅದರಲ್ಲಿ ಅಭಿನಯಿಸುವುದು ಕಷ್ಟಅಂತಲೇ ಅಂದುಕೊಂಡಿದ್ದೆ. ಕೊನೆಗೆ ಕತೆ ಕೇಳಿ, ಸೆಟ್‌ಗೆ ಹೋದಾಗ ಚಿತ್ರತಂಡದ ಸಲಹೆ, ಸಹಕಾರದ ಮೂಲಕ ಶಕ್ತಿ ಮೀರಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆನ್ನುವ ಖುಷಿಯಿದೆ.

- ನಟಿ ಮಿಲನಾ ನಾಗರಾಜ್‌ ಜತೆಗಿನ ಅಭಿನಯದ ಅನುಭವ ಹೇಗಿತ್ತು?

ಲವ್‌ ಅಥವಾ ರೊಮಾನ್ಸ್‌ ಅಂತ ಇಲ್ಲಿ ಹೆಚ್ಚೇನು ಇಲ್ಲ. ಅವರು ಚಿತ್ರದಲ್ಲೂ ಒಬ್ಬ ನಟಿ. ಅದರ ಜತೆಗೆ ರಾಜಕಾರಣಿ. ನಟಿ ಆಗಿದ್ದವರನ್ನು ರಾಜಕಾರಣಿಯನ್ನಾಗಿ ಮಾಡಲು ನಾನು ಹೇಗೆಲ್ಲ ಸುಳ್ಳು ಹೇಳುತ್ತೇನೆ, ಏನೆಲ್ಲ ನಾಟಕ ಮಾಡುತ್ತೇನೆ ಎನ್ನುವುದು ತುಂಬಾನೆ ಅದ್ಭುತವಾಗಿದೆ. ಆ ಪಾತ್ರದಲ್ಲಿ ಅವರು ಅದ್ಭುತವಾಗಿ ನಟಿಸಿದ್ದಾರೆ. ಸಾಕಷ್ಟುಅನುಭವ ಇರುವ ನಟಿ ಅವರು. ತುಂಬಾ ಎಂಜಾಯ್‌ ಮಾಡುತ್ತಾ ಅಭಿನಯಿಸಿದ್ದೇವೆ.

- ಕನ್ನಡದ ಸಿನಿ ಪ್ರೇಕ್ಷಕರು ಈ ಸಿನಿಮಾವನ್ನು ಯಾಕೆ ನೋಡ್ಬೇಕು?

ಇದೊಂದು ನೀಟ್‌ ಸಿನಿಮಾ. ಯಾವುದೇ ಗಿಮಿಕ್‌ ಇಲ್ಲ. ಗೊಂದಲವೂ ಇಲ್ಲ. ಪ್ರೇಕ್ಷಕರನ್ನು ಸರಳವಾಗಿ ರಂಜಿಸಬೇಕು, ಸಮಾಜಕ್ಕೊಂದು ಸಂದೇಶ ರವಾನಿಸಬೇಕು ಎನ್ನುವ ಉದ್ದೇಶದೊಂದಿಗೆ ಮಾಡಿದ ಸಿನಿಮಾ. ಪ್ರಚಲಿತ ವಿದ್ಯಮಾನಗಳೇ ಕತೆಯ ವಸ್ತು. ರಾಜಕೀಯ ವಿಡಂಬನೆ ಅದ್ಭುತವಾಗಿದೆ.

ನಿರ್ಮಾಪಕ ಧೈರ್ಯವನ್ನು ಮೆಚ್ಚಲೇಬೇಕು. ವಿವಾದ ಆಗಬಹುದೆನ್ನುವ ಭಯ ಇದ್ದರೂ, ಈ ಕತೆಗೆ ಬಂಡವಾಳ ಹಾಕಿದ್ದಾರೆ. ಜತೆಗೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ರಂಜನೀಯ ಎನಿಸುವ ಎಲ್ಲಾ ಕಮರ್ಷಿಯಲ್‌ ಅಂಶಗಳು ಚಿತ್ರದಲ್ಲಿವೆ.

- ದೇಶಾದ್ರಿ ಹೊಸ್ಮನೆ 

click me!