ಪಿಬಿ ಶ್ರೀನಿವಾಸ್ ಅವರಿಗೆ ಒಮ್ಮೆಲೇ ಎಂಬಂತೆ ಹಾಡುಗಳ ಆಫರ್ ಬರೋದು ಕಡಿಮೆ ಆಗತೊಡಗಿತು. ಕಾರಣ, ಕೆಲವೊಮ್ಮೆ ಅವರ ಧ್ವನಿ, ಕೆಲವೊಮ್ಮೆ ಅವರ ವಯೋಸಹಜ ಅನಾರೋಗ್ಯ ಕಾಡಿದ್ದು ಕಾರಣವಾದರೆ, ಇನ್ನೂ ಸಾಕಷ್ಟು ಬಾರಿ ಸಂಗೀತ ನಿರ್ದೇಶಕರೇ..
ಅದೊಂದು ಕಾಲದಲ್ಲಿ ಚಿತ್ರರಂಗದಲ್ಲಿ ಪಿಬಿ ಶ್ರೀನಿವಾಸ್ (PB Sreenivas) ಅಲೆ ಇತ್ತು. ಘಂಟಸಾಲ, ಕಿಶೋರ್ ಕುಮಾರ್ ಮುಂತಾದ ಗಾಯಕರು ಚಿತ್ರಂಗವನ್ನು ಆಳುತ್ತಿದ್ದ ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಪಿಬಿ ಶ್ರೀನಿವಾಸ್ ಅವರು ತಮ್ಮದೇ ಆದ ಛಾಪು ಮೂಡಿಸಿಕೊಂಡು ಸಾಕಷ್ಟು ಚಾನ್ಸ್ ಪಡೆದುಕೊಳ್ಳುತ್ತಿದ್ದರು. ಕನ್ನಡವೂ ಸೇರಿದಂತೆ ತಮಿಳು ಹಾಗೂ ತೆಲುಗಿನಲ್ಲಿಯೂ ಪಿಬಿಎಸ್ ಗಾನ ಸುಧೆ ಸಾಗುತ್ತಿತ್ತು. ಆದರೆ, ಕಾಲ ಯಾವತ್ತೂ ಒಂದೇ ತರಹ ಇರೋದಿಲ್ಲ!
ಈ ಮಾತು ಪಿಬಿ ಶ್ರೀನಿವಾಸ್ ವಿಷಯದಲ್ಲೂ ನಿಜವಾಗಿತ್ತು. ಅದೇ ಕಾಲದಲ್ಲಿ ಯಂಗ್ ಗಾಯಕರಾಗಿ ಕಾಲಿಟ್ಟ ಎಸ್‌ಪಿ ಬಾಲಸುಬ್ರಹ್ಮಣ್ಯಂ (SP Balasubrahmanyam) ಅವರು ಏಕಕಾಲದಲ್ಲಿ ಇಡೀ ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ಬಹಳಷ್ಟು ಅವಕಾಶ ಪಡೆಯತೊಡಗಿದರು. ಕನ್ನಡದಲ್ಲಿ ಡಾ ರಾಜ್‌ಕುಮಾರ್ ಅವರಿಗೆ 1974ರವರೆಗೂ ಹಾಡುತ್ತಿದ್ದ ಪಿಬಿ ಶ್ರೀನಿವಾಸ್ ಅವರು ಬಳಿಕ ಬಹುತೇಕವಾಗಿ ಈ ಅವಕಾಶದಿಂದ ವಂಚಿತರಾದರು. ಡಾ ರಾಜ್‌ಕುಮಾರ್ ಅವರಿಗೆ ಇಷ್ಟವಿಲ್ಲದಿದ್ದರೂ ನಿರ್ಮಾಪಕರು, ನಿರ್ದೇಶಕರ ಒತ್ತಾಯದ ಮೇರೆಗೆ ತಮ್ಮ ಚಿತ್ರಗಳಿಗೆ ತಾವೇ ಹಾಡತೊಡಗಿದರು.
ಪಿಬಿ ಶ್ರೀನಿವಾಸ್ ಅವರಿಗೆ ಒಮ್ಮೆಲೇ ಎಂಬಂತೆ ಹಾಡುಗಳ ಆಫರ್ ಬರೋದು ಕಡಿಮೆ ಆಗತೊಡಗಿತು. ಕಾರಣ, ಕೆಲವೊಮ್ಮೆ ಅವರ ಧ್ವನಿ, ಕೆಲವೊಮ್ಮೆ ಅವರ ವಯೋಸಹಜ ಅನಾರೋಗ್ಯ ಕಾಡಿದ್ದು ಕಾರಣವಾದರೆ, ಇನ್ನೂ ಸಾಕಷ್ಟು ಬಾರಿ ಸಂಗೀತ ನಿರ್ದೇಶಕರೇ ಪಿಬಿ ಶ್ರೀನಿವಾಸ್ ಅವರನ್ನು ತಾತ್ಸಾರ ಮಾಡಲು ಶುರುವಿಟ್ಟುಕೊಂಡರು. ಅದರೆ, ಡಾ ರಾಜ್‌ಕುಮಾರ್ ಹಾಗೂ ಎಸ್‌ಪಿ ಬಾಲಸುಬ್ರಹ್ಮಣ್ಯಂ ಇಬ್ಬರಿಗೂ ಪಿಬಿ ಶ್ರೀನಿವಾಸ್ ಮೇಲಿನ ಗೌರವ ಕಿಂಚಿತ್ತೂ ಕಡಿಮೆ ಆಗಿರಲಿಲ್ಲ.
ಡಾ ರಾಜ್‌ಕುಮಾರ್ ಅವರಂತೂ 'ನಾನು ಪಿಬಿಎಸ್ ಹಾಡಿನ ಅವಕಾಶ ಕಿತ್ಕೊಂಡ ಹಾಗಾಯ್ತು ಎಂದು ತಮ್ಮ ಜೀವನದ ಕೊನೆಯವರೆಗೂ ಹೇಳುತ್ತಲೇ ಇದ್ದರಂತೆ. ಜೊತೆಗೆ, ಹಾಡಿಗೆ ಸಂಭಾವನೆಯನ್ನು ಈ ಕಾರಣಕ್ಕೇ ತೆಗೆದುಕೊಳ್ಳುತ್ತಿರಲಿಲ್ಲ ಎನ್ನಲಾಗಿದೆ. ಪಿಬಿಎಸ್ ಹಾಡದೇ ಹಣವನ್ನು ಮುಟ್ಟಲಾರರು ಎಂದು ತಿಳಿದ ಡಾ ರಾಜ್ ಅವರು ತಮ್ಮ ಹಾಡಿನ ಹಣವನ್ನು ಟ್ರಸ್ಟ್‌ಗೆ ಕೊಡುತ್ತಿದ್ದರು. ಎಸ್‌ಪಿಬಿ ಅವರಂತೂ ಪಿಬಿಎಸ್ ಅವರನ್ನು ತಮ್ಮ 'ಗುರುಗಳು' ಎಂಬಂತೆ ನೋಡುತ್ತಿದ್ದರು.
ಆದರೆ, ಪಿಬಿ ಶ್ರೀನಿವಾಸ್ ಅವರಿಗೆ ಬರುತ್ತಿದ್ದ ಅವಕಾಶಗಳೇ ಆಲ್‌ಮೋಸ್ಟ್ ನಿಂತೇ ಹೋಯ್ತು ಎಂಬಂತಹ ಕಾಲದಲ್ಲಿ ಸ್ವತಃ ಎಸ್‌ಪಿ ಬಾಲಸುಬ್ರಹ್ಣಣ್ಯಂ ಅವರ ಮುಂದೆಯೇ ನಡೆದ ಘಟನೆಯಿದು. ಅದೊಂದು ದಿನ ಎಸ್‌ಪಿಬಿಯವರು ಸ್ಟುಡಿಯೋ ಒಂದಕ್ಕೆ ಸಾಂಗ್ ರೆಕಾರ್ಡಿಂಗ್‌ಗೆ ಬಂದಿದ್ದರು. ಅವರ ಆಗಮನದ ಮೊದಲೇ ಅಲ್ಲಿನ ಸೋಫಾದಲ್ಲಿ ಪಿಬಿ ಶ್ರೀನಿವಾಸ್ ಅವರು ಕುಳಿತು ತಮ್ಮ ಸರದಿಗಾಗಿ ಕಾಯುತ್ತಿದ್ದರಂತೆ. ಎಸ್‌ಪಿಬಿ ಅವರು ಬಂದ ತಕ್ಷಣ ಅವರನ್ನು ಒಳಗೆ ಕರೆದು ರೆಕಾರ್ಡಿಂಗ್ ಮಾಡಲಾಯ್ತು.
ಅಂದು ಎಸ್‌ಪಿಬಿ ಅವರು ನಾಲ್ಕು ಹಾಡುಗಳ ರೆಕಾರ್ಡಿಂಗ್ ಮುಗಿಸಿ ಹೊರಬಂದಾಗ ಪಿಬಿ ಶ್ರೀನಿವಾಸ್ ಇನ್ನೂ ಕಾಯುತ್ತಲೇ ಇದ್ದರಂತೆ. ಅದನ್ನು ನೋಡಿದ ಎಸ್‌ಪಿಬಿ ಅವರು ಆ ಬಗ್ಗೆ 'ಅವರು ಯಾವ ಸಿನಿಮಾಗೆ ಹಾಡ್ತಿದಾರೆ' ಎಂದು ಕೇಳಿದಾಗ ಇಬ್ಬರೂ ಒಂದೇ ಸಿನಿಮಾಗೆ ಹಾಡುತ್ತಿರೋದು ಎಂದು ತಿಳಿದುಬಂತು. ಅದರಿಂದ ನೊಂದ ಎಸ್‌ಪಿಬಿ ಅವರು 'ನೀವ್ಯಾಕೆ ಅವರನ್ನು ಹೀಗೆ ಕಾಯಿಸಿಬಿಟ್ರಿ? ಅವರು ಮೊದಲು ಬಂದಿದ್ದಾರೆ, ಅವರಿಮದ ಹಾಡಿಸಿ ಬಳಿಕ ನನ್ನನ್ನು ಕರೆದಿದ್ದರೆ ಸಾಕಿತ್ತು ಎಂದರಂತೆ. ಆದರೆ ಆಗ ಬಂದ ಉತ್ತರ ಸ್ವತಃ ಎಸ್‌ಪಿಬಿ ಅವರಿಗೇ ಶಾಕ್ ಆಗಿತ್ತು!
ಚಿತ್ರದ ಟೀಮ್ 'ನೀವು ಸಿಗೋದೇ ಕಷ್ಟ, ಸಿಕ್ಕಾಗ ರೆಕಾರ್ಡಿಂಗ್ ಮುಗಿಸಿಬಿಡಬೇಕು. ಅವರಿಗೇನು, ಕಾಯುತ್ತಾರೆ ಬಿಡಿ. ಅವರು ನಮ್ಮ ಚಿತ್ರಕ್ಕೆ ಹಾಡಬೇಕಿರುವುದು ಒಂದೇ ಹಾಡು, ಅದನ್ನೂ ಕೂಡ ನೀವೇ ಹಾಡಿಬಿಡಿ, ಈಗಲೇ ಮುಗಿಸಿಬಿಡುತ್ತೇವೆ, ನೀವೇ ಹಾಡಿದ್ದರೆ ಚೆನ್ನಾಗಿತ್ತು' ಎಂಬ ಉತ್ತರ ಬಂತು. ಅದನ್ನು ಕೇಳಿದ ಎಸ್‌ಪಿಬಿ ಅವರು 'ಪಿಬಿಎಸ್ ಅವರು ನನ್ನ ಗುರುಗಳ ಸಮಾನ. ಅವರಿಗೆ ಹೀಗೆ ಅವಮಾನ ಮಾಡಬೇಡಿ.
ನೀವು ಅವರಿಗೆ ಕೊಡಬೇಕಾದ ಹಾಡನ್ನು ಕೂಡ ನನ್ನಿಂದಲೇ ಹಾಡಿಸಿದರೆ, ಈಗಾಗಲೇ ನಾನು ಹಾಡಿರುವ ನಾಲ್ಕೂ ಹಾಡುಗಳನ್ನು ಡಿಲೀಟ್ ಮಾಡಿಬಿಡಿ.. ನನ್ನ ಯಾವ ಹಾಡು ಕೂಡ ಈ ಚಿತ್ರದಲ್ಲಿ ಇರುವುದು ಬೇಡ' ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಪಿಬಿ ಶ್ರೀನಿವಾಸ್ ಅವರಿಗೆ ನಮಸ್ಕಾರ ಮಾಡಿ, ಅವರಿಂದಲೇ ಆ ಹಾಡು ಹಾಡಿಸಿ ಎಂದು ಹೇಳಿಯೇ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಅಲ್ಲಿಂದ ಹೋದರು ಎನ್ನಲಾಗಿದೆ. ಈ ರೀತಿ ಪಿಬಿಎಸ್ ಅವರು ತಮ್ಮ ಜೀವಿತ ಕಾಲದಲ್ಲಿ ಬಹಳಷ್ಟು ಅವಮಾನ ಅನುಭವಿಸಿದ್ದರಂತೆ!