Latest Videos

ಡಾ.ರಾಜ್​ ಎಂದರೆ ಮ್ಯಾಜಿಕ್​: ಅಮೆರಿಕ ವಿವಿಯ ಪದವಿ ಪ್ರದಾನ ಸಮಾರಂಭದಲ್ಲಿ ಮೇರುನಟನ ಗುಣಗಾನ ಮಾಡಿದ ವಿದ್ಯಾರ್ಥಿನಿ

By Suchethana DFirst Published Jun 14, 2024, 11:18 AM IST
Highlights

ಕನ್ನಡ ನಾಡು ಕಂಡ ಅಪರೂಪದ ನಟ ಡಾ.ರಾಜ್​ಕುಮಾರ್​ ಕುರಿತು ಅಮೆರಿಕದ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿನಿ ಹೇಳಿದ್ದೇನು?
 

ಕನ್ನಡ ನಾಡು ಕಂಡ ಅಪ್ರತಿಮ ನಟನೆಂದರೆ ಅದು ಡಾ.ರಾಜ್​ಕುಮಾರ್​. ಸುಮಾರು ಐದು ದಶಕಗಳವರೆಗೆ ಚಿತ್ರರಂಗ ಆಳುತ್ತಾ ಬದುಕಿನುದ್ದಕ್ಕೂ ಒಂದೇ ಒಂದು ಕಪ್ಪುಚುಕ್ಕೆಯನ್ನು ಇಟ್ಟುಕೊಳ್ಳದೇ ಮರೆಯಾದ ನಟ ಇವರು. ಕನ್ನಡಕ್ಕಾಗಿಯೇ ಜೀವನ ಮೀಸಲಿಟ್ಟು, ರಾಜಕೀಯಕ್ಕೆ ಪ್ರವೇಶಿಸಲು ಆಫರ್​ ಬಂದರೂ ತಿರಸ್ಕರಿಸುತ್ತಲೇ ಕೋಟ್ಯಂತರ ಕನ್ನಡಿಗರ ಕಣ್ಮಣಿಯಾಗಿದ್ದವರು ಡಾ.ರಾಜ್​ಕುಮಾರ್​. ಓದಿದ್ದು ನಾಲ್ಕನೇ ತರಗತಿಯಾದರೂ ಅತ್ಯದ್ಭುತ ಭಾಷಾ ಪ್ರೌಢಿಮೆ, ನಿರರ್ಗಳವಾಗಿ ಸಂಸ್ಕೃತ ಉಚ್ಚರಿಸುತ್ತಿದ್ದ ರೀತಿ, ಶಾಸ್ತ್ರೀಯ ಸಂಗೀತ ಕಲಿಯದಿದ್ದರೂ ತಮ್ಮ ಕಂಠಮಾಧುರ್ಯದಿಂದ ಅವರು ಮಾಡಿದ್ದ ಮೋಡಿ... ಬಹುಶಃ ಚಿತ್ರರಂಗದಲ್ಲಿ ಅಂಥ ಕಲಾವಿದ ಮತ್ತೊಬ್ಬ ಇರಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಎತ್ತರಕ್ಕೆ ಏರಿದವರು ಅವರು.  ಅವರ ಚಿತ್ರದ ಹಾಡುಗಳು ಇಂದಿಗೂ ಎಲ್ಲರ ಬಾಯಿಯಲ್ಲಿಯೂ ನಲಿದಾಡುತ್ತದೆ, ಅವರ ಬಹುತೇಕ ಎಲ್ಲಾ ಸಿನಿಮಾಗಳ ಹಾಡುಗಳು ಎವರ್​ಗ್ರೀನ್ ಎಂದರೆ ಅದರ ತಾಕತ್ತು ಎಷ್ಟು ಎಂದು ಊಹಿಸಬಹುದು. ಭಾರತೀಯ ಚಿತ್ರರಂಗ ನೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಫೋರ್ಬ್ಸ್​ ಪತ್ರಿಕೆಯು ಪ್ರಕಟಿಸಿರುವ 25 ಅತ್ಯದ್ಭುತ ನಟನೆಗಳ ಪಟ್ಟಿಯಲ್ಲಿ ಡಾ. ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದ ನಟನೆಯೂ ಒಂದಾಗಿದೆ.

ಮನೆಭಾಷೆ ತೆಲಗು ಆದರೂ ಕನ್ನಡವನ್ನೇ ಉಸಿರಿನಲ್ಲಿ ತುಂಬಿಸಿಕೊಂಡಿದ್ದ ಡಾ.ರಾಜ್​ಕುಮಾರ್​ ಅವರ ಕೀರ್ತಿ ಸಪ್ತಸಾಗರದ ಆಚೆಯೂ ಇಂದಿಗೆ ಅಚ್ಚಳಿಯದೇ ಉಳಿದಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿದೆ ಅಮೆರಿಕದ ಈ ವಿದ್ಯಾರ್ಥಿನಿಯ ಮಾತು. ಹೌದು. ಅಮೆರಿಕದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಶ್ರೇಯಾ ಚಂದ್ರಶೇಖರ್​ ಎನ್ನುವ ವಿದ್ಯಾರ್ಥಿನಿ ಡಾ.ರಾಜ್​ಕುಮಾರ್​ ಅವರನ್ನು ಹಾಡಿ ಹೊಗಳಿದ್ದಾರೆ. ಪಾಲ್​ ಲಾರೆನ್ಸ್​ ದನ್​ಬಾರ್​ ಹೈಸ್ಕೂಲ್​ ಹಿರಿಯ ತರಗತಿ ಅಧ್ಯಕ್ಷೆಯಾಗಿರುವ ಶ್ರೇಯಾ ಚಂದ್ರಶೇಖರ್​ ಅವರು ಆಡಿದ ಮಾತುಗಳಿವು. ಇದರ ವಿಡಿಯೋ ಅನ್ನು ಅಮೆರಿಕದಲ್ಲಿನ ಕನ್ನಡತಿ ಯಮುನಾ ನಾಗರಾಜ್​ ಎನ್ನುವವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, ಅದೀಗ ವೈರಲ್​ ಆಗಿದೆ. 

ಸೀತಾರಾಮ ಸೀತಾ ವೈಷ್ಣವಿಯ ಅಮ್ಮ ವಕೀಲೆಯಾಗಿ ಒಂದು ವರ್ಷ! ಕುತೂಹಲದ ಮಾಹಿತಿ ಇಲ್ಲಿದೆ...

ನಮ್ಮ ಪ್ರೀತಿಯ ಡಾ. ರಾಜ್‌ಕುಮಾರ್‌ ಅವರ ಪರಂಪರೆ ಮತ್ತು ಮೌಲ್ಯಗಳನ್ನು ಸುಂದರವಾಗಿ ಹಿಡಿದಿಟ್ಟುಕೊಂಡ ವಿದ್ಯಾರ್ಥಿಯೊಬ್ಬರು USA ಯಲ್ಲಿ ಪದವಿ ಪ್ರದಾನ ಭಾಷಣದ ಸಂದರ್ಭದಲ್ಲಿ ಅವರಿಗೆ ನಿರರ್ಗಳವಾದ ಶ್ರದ್ಧಾಂಜಲಿ ಸಲ್ಲಿಸಿದರು ಎಂಬ ಶೀರ್ಷಿಕೆಯೊಂದಿಗೆ ಯಮುನಾ ಎನ್ನುವವರು ಈ ಭಾಷಣ ಶೇರ್​ ಮಾಡಿದ್ದಾರೆ. ಇದರಲ್ಲಿ ವಿದ್ಯಾರ್ಥಿನಿ ಶ್ರೇಯಾ ಅವರು ಭಾರತದ ಕರ್ನಾಟಕದ ಕಣ್ಮಣಿಯಾಗಿರುವವರು ಡಾ.ರಾಜ್​ ಎನ್ನುತ್ತಲೇ ಅವರ ಗುಣಗಾನ ಮಾಡಿದ್ದಾರೆ. ಅಲ್ಲಿನ ವಿದ್ಯಾರ್ಥಿಗಳು ಮತ್ತು ಬೋಧಕ ವೃಂದಕ್ಕೆ ಡಾ.ರಾಜ್​ ಅವರ ಪರಿಚಯ ಮಾಡಿಸಿದ್ದಾರೆ. ಭಾರತ ಮೂಲದ ವಿದ್ಯಾರ್ಥಿನಿಯಾಗಿರುವ ಶ್ರೇಯಾ ಅವರು ಡಾ.ರಾಜ್​ಕುಮಾರ್​ ಅವರು ಜೀವನ ಕ್ರಮದ ಕುರಿತು ಪದವಿ ಪ್ರದಾನ ಸಮಾರಂಭದಲ್ಲಿ ಹೇಳಿದ್ದಾರೆ. 

ಡಾ.ರಾಜ್​ಕುಮಾರ್​ ಅವರು ನನ್ನ ತಂದೆಯ ಫೆವರೆಟ್​ ನಟ ಮತ್ತು ಸಿಂಗರ್​ ಆಗಿದ್ದವರು. ಡಾ.ರಾಜ್​ಕುಮಾರ್​ ಎಂದರೆ ಮ್ಯಾಜಿಕ್​. ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಕನ್ನಡ ಚಿತ್ರರಂಗವನ್ನು ಆಳಿದವರು, ಇನ್ನೂರಕ್ಕೂ ಅಧಿಕ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ ಎಂದು ಶ್ರೇಯಾ ಬಣ್ಣಿಸಿದ್ದಾರೆ. ಇದೇ ವೇಳೆ, ಡಾ.ರಾಜ್​ಕುಮಾರ್​ ಅವರ ಕರ್ತವ್ಯನಿಷ್ಠೆ, ತಮ್ಮ ಕಾರ್ಯದಲ್ಲಿನ ಶ್ರದ್ಧೆಯ ಬಗ್ಗೆ ತಮ್ಮ ತಂದೆಯವರು ಸದಾ ಹೇಳುತ್ತಿದ್ದರು. ಅವರ ಈ ಶ್ರದ್ಧೆಯನ್ನು ಮೈಗೂಡಿಸಿಕೊಳ್ಳುವ ಬಗ್ಗೆಯೂ ತಂದೆಯವರು ಹೇಳುತ್ತಿದ್ದರು ಎಂದು ಶ್ರೇಯಾ ಹೇಳಿದ್ದಾರೆ. 

ಮನೋಕಾಮನೆ ಈಡೇರಬೇಕೆಂದರೆ 3,6,9ರ ಟಿಪ್ಸ್​ ಫಾಲೋ ಮಾಡಿ: ಸೀತಾರಾಮ ವೈಷ್ಣವಿ ಗೌಡ ಸಲಹೆ

click me!