ನಿರಂಜನ್‌ ಸುಧೀಂದ್ರ ನಟನೆಯ 'ನಮ್ಮ ಹುಡುಗರು' ಸಿನಿಮಾ ಜು.8ಕ್ಕೆ ರಿಲೀಸ್

By Govindaraj SFirst Published Jul 7, 2022, 8:33 AM IST
Highlights

ಉಪೇಂದ್ರ ಕುಟುಂಬದ ಕುಡಿ ನಿರಂಜನ್‌ ಸುಧೀಂದ್ರ ನಟನೆಯ ಮೊದಲ ಸಿನಿಮಾ ತೆರೆ ಮೇಲೆ ಮೂಡುವುದಕ್ಕೆ ಎರಡೇ ದಿನ ಬಾಕಿ. ಇವರ ನಟನೆಯ ‘ನಮ್ಮ ಹುಡುಗರು’ ಚಿತ್ರ ಜು.8ಕ್ಕೆ ಬಿಡುಗಡೆ ಆಗುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್‌ ಕೂಡ ಅದ್ದೂರಿಯಾಗಿ ಬಿಡುಗಡೆ ಆಗಿದೆ. 

ಉಪೇಂದ್ರ ಕುಟುಂಬದ ಕುಡಿ ನಿರಂಜನ್‌ ಸುಧೀಂದ್ರ ನಟನೆಯ ಮೊದಲ ಸಿನಿಮಾ ತೆರೆ ಮೇಲೆ ಮೂಡುವುದಕ್ಕೆ ಎರಡೇ ದಿನ ಬಾಕಿ. ಇವರ ನಟನೆಯ ‘ನಮ್ಮ ಹುಡುಗರು’ ಚಿತ್ರ ಜು.8ಕ್ಕೆ ಬಿಡುಗಡೆ ಆಗುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್‌ ಕೂಡ ಅದ್ದೂರಿಯಾಗಿ ಬಿಡುಗಡೆ ಆಗಿದೆ. ಮಂಡ್ಯದ ಹಿನ್ನೆಲೆಯಲ್ಲಿ ಈ ಕತೆ ಸಾಗುತ್ತದೆ. ಎಚ್‌ ಬಿ ಸಿದ್ದು ನಿರ್ದೇಶನ ಮಾಡಿದ್ದು, ವಸಿಷ್ಠ ಸಿಂಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಲ್ವರು ಸ್ನೇಹಿತರ ಮಧ್ಯೆ ಹುಟ್ಟಿಕೊಳ್ಳುವ ಒಂದು ಸುಳ್ಳು ಮುಂದೆ ಏನೆಲ್ಲ ಘಟನೆಗಳಿಗೆ ಕಾರಣವಾಗುತ್ತದೆ ಎನ್ನುವ ಕತೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ‘ಅದ್ದೂರಿಯಾಗಿ ಟ್ರೇಲರ್‌ ಬಿಡುಗಡೆ ಮಾಡಿದ್ದೇವೆ. 

ಸುದೀಪ್‌, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ ಅತಿಥಿಗಳಾಗಿ ಅಗಮಿಸಿ ಶುಭ ಕೋರಿದ್ದು, ಹೆಚ್ಚಿನ ಉತ್ಸಾಹಕ್ಕೆ ಕಾರಣವಾಗಿದೆ. ಸ್ನೇಹಿತರ ಹುಡುಗಾಟ, ಅವರ ನಡುವೆ ಹುಟ್ಟಿಕೊಳ್ಳುವ ಮಿಥ್ಯ. ಸುಳ್ಳಿನಿಂದ ಆರಂಭವಾಗಿ ಸುಳ್ಳಿನಿಂದಲೇ ಮುಗಿಯುವ ಕತೆ ಇಲ್ಲಿದೆ. ಮಂಡ್ಯದಲ್ಲಿ ಪ್ರಾರಂಭವಾಗಿ ಮಂಗಳೂರಿನಲ್ಲಿ ಮುಗಿಯುವ ಚಿತ್ರವಿದು. ಒಂದು ಪದ ಇಟ್ಟುಕೊಂಡು ಇಡೀ ಸಿನಿಮಾವನ್ನು ಹೇಗೆ ತೆಗೆದುಕೊಂಡು ಹೋಗಬಹುದು ಎಂದು ಇದರಲ್ಲಿ ಹೇಳಿದ್ದೇವೆ’ ಎಂದರು ನಿರ್ದೇಶಕ ಸಿದ್ದು.

Niranjan Sudhindra ಈಗ 'ಹಂಟರ್‌': ಶುಭ ಹರಸಿದ ಪ್ರಿಯಾಂಕ, ಉಪೇಂದ್ರ

ಅಭಿಮಾನ್‌ ರಾಯ್‌ ಸಂಗೀತ ನೀಡಿದ್ದಾರೆ. ‘ನಟನಾಗಿ ನಾನು ಒಪ್ಪಿಕೊಂಡ ಮೊದಲ ಸಿನಿಮಾ ಇದು. ರೆಗ್ಯೂಲರ್‌ ಸಿನಿಮಾ ಅಲ್ಲ. ಒಂದು ಒಳ್ಳೆಯ ಕತೆ ಇದೆ. ನಿಜ ಜೀವನಕ್ಕೂ ಈ ಸಿನಿಮಾ ಕತೆ ಕನೆಕ್ಟ್ ಆಗುತ್ತದೆ. ವಿರಾಮಕ್ಕೂ ಮೊದಲು ಬರುವ ದೃಶ್ಯವೊಂದನ್ನು ಬೆಟ್ಟದ ಮೇಲೆ ಚಿತ್ರೀಕರಣ ಮಾಡಿದ್ದು, ಅದೊಂದು ರೋಚಕ ಅನುಭವ’ ಎಂದು ನಿರಂಜನ್‌ ಸುಧೀಂದ್ರ ಹೇಳಿಕೊಂಡರು. ಅಲೋಕ್‌ ಹಾಗೂ ಪ್ರವೀಣ್‌, ಮಾರುತಿ ನಾಯಕನ ಸ್ನೇಹಿತರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಧ್ಯ ಚಿತ್ರದ ನಾಯಕಿ. ಕೆ ಕೆ ಅಶ್ರಫ್‌ ಚಿತ್ರವನ್ನು ನಿರ್ಮಿಸಿದ್ದಾರೆ.

ನಮ್‌ ಹುಡುಗ್ರು ಹಾಡಿನ ಗುಂಗು: ನಟ ನಿರಂಜನ್‌ ಸುಧೀಂದ್ರ ನಟನೆಯ ‘ನಮ್‌ ಹುಡುಗ್ರು’ ಚಿತ್ರದ ಆಡಿಯೋ ಬಿಡುಗಡೆ ಆಗಿದೆ. ಹೆಚ್‌.ಬಿ. ಸಿದ್ದು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ನಿರಂಜನ್‌ ಸುಧೀಂದ್ರ ಅವರಿಗೆ ನಾಯಕಿಯಾಗಿ ರಿಯಾ ರಣ್ವಿಕಾ ಕಾಣಿಸಿಕೊಂಡಿದ್ದಾರೆ. ‘ಇದು ನನ್ನ ಮೊದಲ ಸಿನಿಮಾ. ಈ ಸಿನಿಮಾ ಇಷ್ಟು ಚೆನ್ನಾಗಿ ಬಂದಿದೆ ಎಂದರೆ ಅದಕ್ಕೆ ಕಾರಣ ನಿರ್ಮಾಪಕ ಕೆ ಕೆ ಅಶ್ರಫ್‌, ನಮ್ಮ ಚಿತ್ರದ ನಾಯಕ ನಿರಂಜನ್‌. ನಾನು ಉಪೇಂದ್ರ ಅವರ ದೊಡ್ಡ ಅಭಿಮಾನಿ. ಅವರ ಸ್ಫೂರ್ತಿಯಿಂದಲೇ ಈ ಚಿತ್ರ ಮಾಡಿದ್ದೇನೆ. ನಮ್‌ ಹುಡುಗರು ಎಲ್ಲರಿಗೂ ಸಂಬಧಿಸಿದ ಕತೆ. ನಾವು, ನಮ್ಮವರು ಎಂದುಕೊಂಡವರ ಮಧ್ಯೆ ಏನಾದರೂ ಸಮಸ್ಯೆ, ಅನುಮಾನಗಳು ಉಂಟಾದಾಗ ಏನಾಗುತ್ತದೆ ಎಂಬುದು ಚಿತ್ರದ ಕತೆ’ ಎಂದು ಚಿತ್ರದ ಕುರಿತು ಹೇಳಿಕೊಂಡಿದ್ದು ಹೆಚ್‌ ಬಿ ಸಿದ್ದು.

ಅಭಿಮಾನ್‌ ರಾಯ್‌ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿವೆ. ಪತ್ರಕರ್ತ ವಿಜಯ್‌ ಭರಮಸಾಗರ ಒಂದು ಹಾಡು ಬರೆದಿದ್ದಾರೆ. ‘ತಾಜ್‌ಮಹಲ್‌ ಚಿತ್ರದಿಂದ ಇಲ್ಲಿಯವರೆಗೂ ಸಾಕಷ್ಟುಒಳ್ಳೆಯ ಹಾಡುಗಳನ್ನು ಕೊಟ್ಟಿದ್ದೇನೆ. ಪುನೀತ್‌ ರಾಜ್‌ಕುಮಾರ್‌ ನನ್ನ ಹಾಡುಗಳ ಅಭಿಮಾನಿ ಅಂತ ಅವರೇ ಹೇಳಿಕೊಂಡಿದ್ದಾರೆ. ಹಾಡುಗಳು ಚೆನ್ನಾಗಿ ಮಾಡಿದರೆ ಮಾತ್ರ ಸಾಲದು. ಆ ಸಿನಿಮಾ ಬಿಡುಗಡೆ ಕೂಡ ಆಗಬೇಕು. ಎಷ್ಟೋ ಬಾರಿ ಸಿನಿಮಾ ಬಿಡುಗಡೆ ಆಗದೆ ನನ್ನ ಶ್ರಮ ಮರೆಯಾಗಿದೆ. ಹಾಡುಗಳ ಜತೆಗೆ ಸಿನಿಮಾ ಕೂಡ ಗೆಲ್ಲಬೇಕು, ಬಿಡುಗಡೆ ಆಗಬೇಕು. ಅಂಥ ಚಿತ್ರಗಳಿಗೆ ಕೆಲಸ ಮಾಡಬೇಕು ಎಂದುಕೊಂಡಾಗ ನಮ್‌ ಹುಡುಗ್ರು ಸಿನಿಮಾ ಬಂತು. ತುಂಬಾ ಪ್ರೀತಿಯಿಂದ ಈ ಚಿತ್ರಕ್ಕೆ ಸಂಗೀತ ನೀಡಿದ್ದೇನೆ. ಒಂದು ಹಾಡನ್ನು ಪುನೀತ್‌ ರಾಜ್‌ಕುಮಾರ್‌ ಹಾಡಿರುವುದು ವಿಶೇಷ’ ಎಂದರು ಅಭಿಮಾನ್‌ ರಾಯ್‌.

Q Movie: ನಿರಂಜನ್‌ ಸುಧೀಂದ್ರ ನಟನೆಯ ಪ್ಯಾನ್‌ ಇಂಡಿಯಾ ಚಿತ್ರಕ್ಕೆ ನಾಗಶೇಖರ್‌ ಆಕ್ಷನ್ ಕಟ್!

ಇದು ನಿರಂಜನ್‌ ಸುಧೀಂದ್ರ ನಾಯಕನಾಗಿ ಒಪ್ಪಿಕೊಂಡ ಮೊದಲ ಸಿನಿಮಾ. ‘ನಾನು ಹೀರೋ ಆಗಿ ಕಾಣಿಸಿಕೊಂಡ ಮೊದಲ ಸಿನಿಮಾ ಇದು. ಈ ಚಿತ್ರ ಬಿಡುಗಡೆಯಾಗುವ ಮುನ್ನವೇ ಬೇರೆ ಬೇರೆ ಚಿತ್ರಗಳನ್ನು ಒಪ್ಪಿಕೊಂಡೆ. ಚಿತ್ರದ ಕತೆ ಏನು ಎಂಬುದಕ್ಕೆ ಹೆಸರಿನಲ್ಲೇ ಕತೆ ಇದೆ. ಪ್ರೀತಿ, ಪ್ರೇಮ, ಮನರಂಜನೆ, ಈಗಿನ ಜನರೇಷನ್‌ ಹುಡುಗರು ಕನಸುಗಳ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಸಿದ್ದು ಒಳ್ಳೆಯ ಕತೆಯನ್ನು ಈ ಚಿತ್ರದ ಮೂಲಕ ಹೇಳಿದ್ದಾರೆ’ ಎಂದರು ನಿರಂಜನ್‌ ಸುಧೀಂದ್ರ. ರಿಯಾ ರಣ್ವಿಕಾ, ಕೆ ಕೆ ಅಶ್ರಫ್‌ ಚಿತ್ರದ ಕುರಿತು ಹೇಳಿಕೊಂಡರು. ಪತ್ರಕರ್ತ ಯತಿರಾಜ್‌ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

click me!