ಹೊಸ ಬೆಳಕು ಮೂಡುತಿದೇ; ಸಂಕ್ರಾಂತಿಯಿಂದ ಚುರುಕಾಗಲಿದೆ ಚಿತ್ರರಂಗ

By Kannadaprabha NewsFirst Published Dec 18, 2020, 9:15 AM IST
Highlights

ಇನ್ನೂರು ರಿಲೀಸುಗಳು, ನೂರೆಪ್ಪತ್ತು ಸೋಲುಗಳು, ಹತ್ತು ಅವರೇಜುಗಳು, ನಾಲ್ಕು ಸೂಪರ್‌ಹಿಟ್ಟುಗಳನ್ನು ಕಳೆದುಕೊಂಡ ಚಿತ್ರರಂಗ, ಕೋವಿಡ್‌ ಏಟಿಗೆ ತತ್ತರಿಸಿ ಕಂಗಾಲಾದ ವರ್ಷ ಇದು. ನಿಧಾನವಾಗಿ ಪ್ರೇಕ್ಷಕರ ಸಂಖ್ಯೆ ಕಮ್ಮಿಯಾಗಿ, ಥೇಟರುಗಳು ಮುಚ್ಚುತ್ತಿರುವ ಹೊತ್ತಿಗೆ ಕೊನೆಯ ಮೊಳೆ ಎಂಬಂತೆ ಬಂದದ್ದು ಕೋವಿಡ್‌. 

ಈ ಪ್ರಾಕೃತಿಕ ವಿಕೋಪದ ಆಳ ಅಗಲ ಗೊತ್ತಾಗದೇ ಚಿತ್ರರಂಗ ಗಪ್ಪೆಂದು ಮೂಲೆಸೇರಿತು. ಚಿತ್ರಮಂದಿರಗಳು ಬಾಗಿಲು ಹಾಕಿಕೊಂಡವು. ಪ್ರೇಕ್ಷಕರು ಓಟಿಟಿಯ ಮೊರೆ ಹೋದರು. ಓಟಿಟಿ ಫ್ಲಾಟ್‌ಫಾರಮ್ಮೇ ಮುಂದಿನ ದಿನಗಳ ಥಿಯೇಟರ್‌ ಅಂತಲೂ ಅನೇಕರು ಷರಾ ಬರೆದರು.

ಆದರೆ ಅದ್ಯಾಕೋ ಏನೋ ನಾಲ್ಕೈದು ಚಿತ್ರಗಳು ಓಟಿಟಿಯಲ್ಲಿ ಪ್ರೇಕ್ಷಕರ ಮುಂದೆ ಬಂದವು. ಅದನ್ನು ಪ್ರೇಕ್ಷಕ ಸಂಭ್ರಮಿಸಿದ್ದೂ ಆಯಿತು. ಆದರೆ ಹಣ ಹೂಡಿದವನಿಗೆ ಅದರಿಂದ ಅಂಥ ಅನುಕೂಲವೇನೂ ಆಗಲಿಲ್ಲ. ಅಲ್ಲಿಗೆ ಓಟಿಟಿ ಎಂಬುದು ಬ್ರೆಡ್‌ ಅಲ್ಲ ಬರೀ ಬಟರ್‌ ಅನ್ನುವುದು ನಿರ್ಮಾಪಕನಿಗೆ ಗೊತ್ತಾಯಿತು. ಓಟಿಟಿಗೆ ಸಿನಿಮಾ ಮಾಡುತ್ತಿದ್ದೇವೆ ಅಂತ ಓಡಾಡಿಕೊಂಡಿದ್ದವರು, ಮತ್ತೆ ಯೂ ಟರ್ನ್‌ ಹೊಡೆದು, ಥೇಟರುಗಳೇ ತಮ್ಮ ಪಾಲಿನ ಅನ್ನದಾತ ಅನ್ನುವುದನ್ನು ಅರ್ಥಮಾಡಿಕೊಂಡರು.

4 ವರ್ಷಗಳ ನಂತರ ಒಟ್ಟಿಗೆ ಕಾಣಿಸಿಕೊಂಡ ಯಶ್ -ರಾಧಿಕಾ; ಆದರೆ ಅಭಿಮಾನಿಗಳು ಮಾತ್ರ ನೋ ಖುಷ್ ...

ಈ ಮಧ್ಯೆ ಚಿತ್ರರಂಗಕ್ಕೆ ಭರವಸೆಯೆಂಬಂತೆ ಕಾಣಿಸಿದ್ದು ಆ್ಯಕ್ಟ್ 1978 ಚಿತ್ರ. ಬಿಡುಗಡೆಯಾಗಿ ಅತ್ಯುತ್ತಮ ಪ್ರತಿಕ್ರಿಯೆ ಮತ್ತು ಕಲೆಕ್ಷನ್‌ ಎರಡಕ್ಕೂ ಪಾತ್ರವಾದ ಈ ಚಿತ್ರವೇ ಚಿತ್ರರಂಗದ ಭರವಸೆಯನ್ನು ಮರಳಿ ನೆಲೆಗೊಳಿಸಿದ ಚಿತ್ರವೆಂದು ಹೇಳಬೇಕು. ಸ್ಟಾರ್‌ನಟರೂ ಸಿನಿಮಾ ರಿಲೀಸ್‌ ಮಾಡಲು ಥರಗುಟ್ಟುತ್ತಿದ್ದ ಹೊತ್ತಲ್ಲಿ, ಅದೇನಾಗುತ್ತೋ ನೋಡಿಯೇ ಬಿಡೋಣ ಅಂತ ನುಗ್ಗಿದ ಮಂಸೋರೆ ಮತ್ತು ಟೀಮ್‌ ಅಂದುಕೊಂಡದ್ದನ್ನು ಸಾಧಿಸಿ ತೋರಿಸಿತು. ಬರಗಾಲದಲ್ಲಿ ಅಧಿಕಲಾಭ ಪಡೆದು, ಇಪ್ಪತ್ತೈದು ದಿನಗಳನ್ನೂ ಪೂರೈಸಿ ವಿಜೃಂಭಿಸಿತು. ಈ ಅಪೂರ್ವ ಘಟನೆಯಿಂದ ಚಿತ್ರರಂಗದ ಹೋದ ಪ್ರಾಣ ಬಂದಂತಾಯಿತು ಅಂತಲೂ ಹೇಳಬಹುದು.

ಹಿರಿಯ ನಟ ಅನಂತ್‌ನಾಗ್‌ ಹೇಳುತ್ತಾರೆ:

ನಾವೆಲ್ಲ ಕೋವಿಡ್‌ಗೆ ವ್ಯಾಕ್ಸೀನ್‌ ಬರಲಿ ಅಂತ ಕಾಯುತ್ತಿದ್ದೇವೆ. ಅಲ್ಲಿಯ ತನಕ ಶೂಟಿಂಗ್‌ ಬೇಡ ಅಂತ ಹೇಳುತ್ತಿದ್ದೇವೆ. ಆದರೆ ಚಿತ್ರರಂಗ ನಿಜಕ್ಕೂ ಚುರುಕಾಗಿರುವಂತೆ ಕಾಣಿಸುತ್ತಿದೆ. ಈ ಅವಧಿಯಲ್ಲೇ ನನಗೆ ಹಲವಾರು ಭಾಷೆಗಳಿಂದ ಆಹ್ವಾನ ಬಂತು. ನಾನು ಹೋಗಲಿಲ್ಲವಾದರೂ, ಅಲ್ಲಿ ಸಿನಿಮಾ ಆಗುತ್ತಿರುವುದು ನಿಜ. ಕನ್ನಡದಲ್ಲೂ ಹೊಸ ಹೊಸ ಸಿನಿಮಾಗಳು ಸೆಟ್ಟೇರುತ್ತಿವೆ ಅಂತ ಕೇಳಿದೆ. ಇದೆಲ್ಲ ಒಳ್ಳೆಯ ಬೆಳವಣಿಗೆ. ಈ ದುಷ್ಕಾಲವನ್ನು ಮೆಟ್ಟಿನಿಲ್ಲುವ ಭರವಸೆಯನ್ನು ಚಿತ್ರರಂಗ ತೋರುತ್ತಿರುವುದು ನಿಜಕ್ಕೂ ಆಶಾದಾಯಕ.

ಇಂಥ ಆಶಾದಾಯಕ ಘಟನೆಗಳು ಸಾಕಷ್ಟುನಡೆದಿವೆ. ಅನೇಕರು ಹೊಸ ಚಿತ್ರಗಳಿಗೆ ಕತೆ ಸಿದ್ಧಮಾಡಿಕೊಂಡು ಕಾಯುತ್ತಿದ್ದಾರೆ. ಯೋಗರಾಜ ಭಟ್ಟರ ತಂಡ ಗಾಳಿಪಟ-2 ಚಿತ್ರದ ಶೂಟಿಂಗಿಗೆ ವಿದೇಶಕ್ಕೆ ಹಾರಲು ಸಿದ್ಧವಾಗಿದೆ. ಡಿಸೆಂಬರ್‌ ಮುಗಿಯುತ್ತಿದ್ದಂತೆ ಬಿಡುಗಡೆಯಾಗುವುದಕ್ಕೆ ಹಲವು ಸಿನಿಮಾಗಳು ಕಾಯುತ್ತಿವೆ.

ಟ್ಟಿಟರ್‌ನಲ್ಲಿ ಯಶ್‌ ಯಾವೆಲ್ಲಾ ಸ್ಟಾರ್ಸ್ ಹಿಂದಿಕಿದ್ದಾರೆ ಗೊತ್ತಾ?

ಹೊಸಬೆಳಕು ಮೂಡುತ್ತಿದೆ ಅನ್ನುವುದನ್ನು ಅಲ್ಲಗಳೆಯುವಂತಿಲ್ಲ. ಇತ್ತೀಚಿನ ದಿನಗಳಲ್ಲಿ ಹೋಟೆಲ್‌ ಉದ್ಯಮ ಸುಧಾರಿಸಿದೆ, ಮದುವೆಗಳು ಕಳೆಗಟ್ಟುತ್ತಿವೆ, ಸ್ಕೂಲುಗಳು ಆರಂಭವಾಗುವ ಸೂಚನೆಗಳಿವೆ, ಪ್ರವಾಸೋದ್ಯಮ ಚುರುಕಾಗುತ್ತಿದೆ. ಇವನ್ನೆಲ್ಲ ಗಮನಿಸಿದರೆ ಮಕರ ಸಂಕ್ರಾಂತಿಯ ನಂತರ ಚಿತ್ರರಂಗದ ಅದೃಷ್ಟಬದಲಾಗಲಿದೆ ಎನ್ನುವುದು ಸುಸ್ಪಷ್ಟ.

ಅನಂತನಾಗ್‌ ಅವರೇ ಹೇಳಿದಂತೆ ‘ಈ ಕೊರೋನಾ ಕಾಲದಲ್ಲಿ ನಿವೃತ್ತಿ ಅಂದರೇನು ಅನ್ನುವುದನ್ನು ನೋಡಿದ್ದಾಯಿತು. ಇನ್ನೂ ಪ್ರವೃತ್ತಿಗೆ ಮರಳಬೇಕಾಗಿದೆ. ಕತ್ತಲೆಯ ನಂತರ ಮೂಡುವ ಬೆಳಕಿಗೆ ಹೊಸ ಪ್ರಭೆ ಇರುತ್ತದೆ’ .ಈ ಸಂಕ್ರಾಂತಿಯ ಸೂರ್ಯ ಚಿತ್ರರಂಗದ ಪಾಲಿಗೆ ಹೊಸ ಬೆಳಕಾಗುವ ಸೂಚನೆಗಳಂತೂ ದಟ್ಟವಾಗಿವೆ.

click me!