ಹೊಸ ದಿನಚರಿಗೆ ಒಗ್ಗಿಕೊಂಡ ಸೆಲೆಬ್ರಿಟಿಗಳು;ಕೊರೋನಾ ಕಲಿಸಿದ ಪಾಠಗಳು!

By Kannadaprabha NewsFirst Published Mar 31, 2020, 9:08 AM IST
Highlights

ಅಗತ್ಯಕ್ಕಿಂತ ಹೆಚ್ಚಾಗಿಯೇ ಸಿಗುವ ಬಿಡುವಿನ ಸಮಯವನ್ನು ಅನುಭವಿಸುವುದು ತುಸು ಕಷ್ಟವೇ. ಆದರೆ, ಇಂಥ ಅನಿವಾರ್ಯತೆಯ ಹಾಲಿಡೇ ದಿನಗಳು ನಮಗೆ ಒಂದಿಷ್ಟುಪಾಠ ಕಲಿಸುತ್ತವೆ ಎನ್ನುತ್ತಿದ್ದಾರೆ ಸಿನಿಮಾ ಮಂದಿ.

ಹೆಣ್ಮಕ್ಕಳ ಕಷ್ಟಅರ್ಥವಾಯಿತು!

ರಮೇಶ್‌ ಅರವಿಂದ್‌

ಕಳೆದ ಒಂದು ವಾರದಿಂದ ಮನೆಯಲ್ಲೇ ಇದ್ದೇನೆ. ಇಷ್ಟುದಿನಗಳಲ್ಲಿ ನನಗೆ ಗೊತ್ತಾಗಿದ್ದು ಮನೆಯಲ್ಲಿರುವ ಹೆಣ್ಣು ಮಕ್ಕಳು ಮೇಲೆ ನಾವು ಎಷ್ಟುದೊಡ್ಡ ಜವಾಬ್ದಾರಿ ವಹಿಸಿದ್ದೇವೆ ಎಂಬುದು. ದಿನದ ಇಪ್ಪತ್ತು ನಾಲ್ಕು ಗಂಟೆಯೂ ಮನೆ ಕೆಲಸ ಮಾಡುವ ಅವರ ಕಷ್ಟಅರ್ಥವಾಯಿತು. ಇದರ ಜತೆಗೆ ನಮ್ಮ ಒಳಗಿನ ಪ್ರಪಂಚ ನೋಡಕ್ಕೆ ಸಾಧ್ಯವಾಗುತ್ತಿದೆ. ಅಂದರೆ ಇಷ್ಟುದಿನ ನಾವು ಹೊರಗಿನ ಪ್ರಪಂಚದಲ್ಲಿ ಓಡಾಡಿಕೊಂಡಿದ್ವಿ. ಈಗ ಮನೆ, ಹೆಂಡತಿ, ಮಕ್ಕಳು, ತಂದೆ- ತಾಯಿ ಜತೆ ಕೂತು ಮಾತನಾಡುತ್ತಿದ್ದೇವೆ. ನಾನು, ನನ್ನ ಮಗಳು, ಹೆಂಡತಿ ಒಟ್ಟಿಗೆ ಕೂತು ಊಟ ಮಾಡಿ ತುಂಬಾ ದಿನಗಳೇ ಕಳೆದು ಹೋಗಿದ್ದವು. ಎರಡು ವಾರದಿಂದ ಎಲ್ಲರೂ ಒಟ್ಟಿಗೆ ಊಟ ಮಾಡುತ್ತಿದ್ದೇವೆ. ಅದೂ ಮನೆಯಲ್ಲಿ ನಾವೇ ಮಾಡಿಕೊಂಡಿರುವ ಊಟ.

ಸೆಲೆಬ್ರಿಟಿಗಳು ಸಜೆಸ್ಟ್‌ ಮಾಡಿದ 5 ಸಿನಿಮಾಗಳು ನೋಡಲೇಬೇಕು!

ಇದೇ ಅಲ್ಲವೇ ನಮ್ಮ ಜೀವನ ಅನಿಸಿತು. ಇದೇ ಅಲ್ಲವೇ ನಮ್ಮ ಒಳಗಿನ ಪ್ರಪಂಚ. ಈ ಪ್ರಪಂಚವನ್ನು ಬಿಟ್ಟು ನಾವು ಎಲ್ಲೋ ಓಡುತ್ತಿದ್ದೇವೆ ಎನ್ನುವ ಆಲೋಚನೆ ಹುಟ್ಟು ಹಾಕಿದೆ. ಮನೆಯ ಜೀವನ, ಸಂಬಂಧಗಳ ಮಹತ್ವ, ಎಲ್ಲರೂ ಜತೆಗೆ ಇದ್ದು ಸಣ್ಣ ಸಣ್ಣ ವಿಷಯಗಳನ್ನು ಸಂಭ್ರಮಿಸುವ ಈಗ ಸಾಧ್ಯವಾಗುತ್ತಿದೆ. ಲಾಕ್‌ ಡೌನ್‌ ಮುಗಿಯುವ ಹೊತ್ತಿಗೆ ಒಂದಿಷ್ಟುಜನ ಆದರೂ ತಮ್ಮ ತಮ್ಮ ನಿಜವಾದ ಜೀವನ ಏನೂ ಅಂತ ತಿಳಿದುಕೊಳ್ಳುತ್ತಾರೆ. ಇದು ನನಗೂ ಅನ್ವಯಿಸುತ್ತದೆ.

ಪ್ರಕೃತಿಯನ್ನು ಗೌರವಿಸಲು ಕಲಿತೆ

ಸತೀಶ್‌ ನೀನಾಸಂ

ನಾವು ನಿಯತ್ತಾಗಿ ಪ್ರಕೃತಿಯನ್ನು ದುಡಿಸಿಕೊಂಡು ಗೌರವಿಸಲಿಲ್ಲ. ಅದಕ್ಕೆ ವಾಪಸ್ಸು ಮನಗೆ ಈ ರೀತಿಯ ಶಿಕ್ಷೆ ವಿಧಿಸಿದೆ. ನಾವು ಏನೇ ಸಾಧನೆ ಮಾಡಿರಬಹುದು, ಏನೇ ಕಂಡು ಹಿಡಿದಿರಬಹುದು. ಆದರೆ, ಪ್ರಕೃತಿ ಮುಂದೆ ಮಾತ್ರ ನಾವು ತೀರಾ ಸಣ್ಣವರು ಅನ್ನುವ ಸತ್ಯ ಮತ್ತೊಮ್ಮೆ ನೇರವಾಗಿ ಅರ್ಥ ಮಾಡಿಸುತ್ತಿದೆ. ನಾನು ಟೀವಿನಲ್ಲಿ ಒಂದು ದೃಶ್ಯ ನೋಡುತ್ತಿದ್ದೆ ರಸ್ತೆಯಲ್ಲಿ ಜಿಂಕೆಗಳು ಮಲಗಿದ್ದವು. ನಿತ್ಯ ನೂರಾರು ಮಂದಿ, ನೂರಾರು ವಾಹನಗಳು ಓಡಾಡುವ ನಡು ರಸ್ತೆಯಲ್ಲಿ ಪ್ರಾಣಿಗಳು ಹೀಗೆ ಮಲಗಿರುವುದನ್ನು ನೋಡಿದಾಗ ಮನುಷ್ಯ, ಯಾರ ಜಗತ್ತನ್ನು ಕಿತ್ತುಕೊಂಡಿದ್ದಾನೆ ಎಂಬುದು ಗೊತ್ತಾಯಿತು. ಹೀಗೆ ಕಿತ್ತುಕೊಂಡು ಜಗತ್ತಿನಲ್ಲಿ ನಾವು ನಿಯತ್ತಾಗಿ ಇರಲ್ಲ ಅಂದ ಮೇಲೆ ಕೊರೋನಾ ಬರುತ್ತದೆ, ಮತ್ತೊಂದು ಬರುತ್ತದೆ. ಇದು ನನಗೂ ಅರ್ಥವಾಗಿರುವ ಪ್ರಾಕ್ಟಿಕಲ್‌ ಪಾಠ.

ಹಳ್ಳಿಯ ಜೀವನ ಕಲಿಯುತ್ತಿದ್ದೇನೆ

ಶುಭಾ ಪೂಂಜಾ

ಹೆಚ್ಚು ಕಮ್ಮಿ ಮರೆತೇ ಹೋಗಿದ್ದ ಹಳ್ಳಿಯ ಜೀವನ ಮತ್ತೆ ಕಲಿಯುವಂತೆ ಮಾಡಿದೆ. ಪ್ರತಿ ದಿನ ಹಳ್ಳಿಯಲ್ಲಿ ನಮ್ಮ ಜನ ಹೇಗಿರುತ್ತಾರೆ ಎಂಬುದನ್ನು ಎರಡು ವಾರಗಳಿಂದ ನನಗೆ ಅನುಭವ ಆಗುತ್ತಿದೆ. ಯಾಕೆಂದರೆ ಶಿವರಾತ್ರಿ ಹಬ್ಬಕ್ಕೆ ಅಂತ ಬಂದೆ. ವಾಪಸ್ಸು ಹೋಗೋಣ ಎನ್ನುವ ಹೊತ್ತಿಗೆ ಜನತಾ ಲಾಕ್‌ ಡೌನ್‌ ಜಾರಿ ಆಯಿತು. ನಮ್ಮ ಹಳ್ಳಿಯಲ್ಲಿರುವ ನಮ್ಮ ಮನೆಯಲ್ಲಿ ಟೀವಿ ಇಲ್ಲ. ರೇಡಿಯೋ ಇಲ್ಲ. ಪ್ರತಿ ದಿನ ತೋಟಕ್ಕೆ ಹೋಗುತ್ತೇನೆ. ಹಳೆಯ ಬಾವಿಯಿಂದ ನೀರು ಸೇದಿ ಗಿಡಗಳಿಗೆ ಹಾಕುತ್ತೇನೆ. ಮನೆ ಕೆಲಸ ಮಾಡುತ್ತೇನೆ.

ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ನೋಡಬಹುದಾದ 10 ಸಿನಿಮಾಗಳು!

ನಿಜವಾದ ಜೀವನ ಇದೆ ನೋಡು ಎನ್ನುವಂತೆ ಮಾಡಿದೆ ಸದ್ಯದ ಸ್ಥಿತಿ. ಇದು ನಿಜಕ್ಕೂ ಚೆನ್ನಾಗಿದೆ. ಆದರೆ, ಇದು ಒತ್ತಡದಿಂದ ಸೃಷ್ಟಿಆಗಿದೆ ಅನ್ನುವುದು ಬೇಸರ. ಅಂದರೆ ಕೊರೋನಾದಂತಹ ಮಹಾ ಮಾರಿಗೆ ಹೆದರಿ ನಾವು ಈ ಜೀವನ ಪಾಠ ಕಲಿಯುವಂತೆ ಮಾಡಿದೆ. ಪ್ರಕೃತಿ ಮನುಷ್ಯನಿಗೆ ಎಲ್ಲ ಹಂತಗಳಲ್ಲೂ ಎಲ್ಲ ರೀತಿಯ ಪಾಠಗಳನ್ನು ಕಲಿಸುತ್ತದೆ ಎಂಬುದಕ್ಕೆ ಇದು ಸಾಕ್ಷಿ.

click me!