
ಕನ್ನಡ ಚಿತ್ರರಂಗದ ಹೆಮ್ಮೆಯ ಸಂಗೀತ ನಿರ್ದೇಶಕ, ಗೀತ ಸಾಹಿತಿ ಹಂಸಲೇಖ ಅವರಿಗೆ ದೇಶದ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿ ನೀಡಬೇಕು ಎಂಬ ಒತ್ತಾಯ ಇದೀಗ ಮತ್ತೊಮ್ಮೆ ಜೋರಾಗಿದೆ. ಈ ಬಾರಿ ಈ ಅಭಿಯಾನಕ್ಕೆ ಚಾಲನೆ ನೀಡಿರುವವರು ನಟ ನೆನಪಿರಲಿ ಪ್ರೇಮ್.
ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿರುವ ಪ್ರೇಮ್, ಹಂಸಲೇಖ ಅವರ ಅಪಾರ ಕೊಡುಗೆಯನ್ನು ಸ್ಮರಿಸಿ, ಅವರಿಗೆ ಸಲ್ಲಬೇಕಾದ ಗೌರವ ಇನ್ನೂ ದೊರೆಯದಿರುವುದು ಬೇಸರದ ಸಂಗತಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗ, ಸಾಹಿತ್ಯ ವಲಯ, ಅಭಿಮಾನಿಗಳು, ಮಾಧ್ಯಮಗಳು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಎಲ್ಲರೂ ಒಂದಾಗಿ ಹಂಸಲೇಖ ಅವರಿಗೆ ಪದ್ಮ ಅಥವಾ ಜ್ಞಾನಪೀಠ ಪ್ರಶಸ್ತಿ ದೊರಕಿಸುವ ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
'ನಾದಬ್ರಹ್ಮ' ಹಂಸಲೇಖ ಅವರಿಗೆ ಪದ್ಮ ಪುರಸ್ಕಾರ ಅಥವಾ ಜ್ಞಾನಪೀಠ ಪ್ರಶಸ್ತಿ ಸಲ್ಲಬೇಕು ಎಂಬ ಉದ್ದೇಶದಿಂದ ಈ ಅಭಿಯಾನ ಆರಂಭಿಸಿದ್ದೇನೆ. 300ಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಹಿತ್ಯ ಹಾಗೂ ಸಂಗೀತ ನೀಡಿರುವ ಅಪರೂಪದ ಕನ್ನಡಿಗರಿಗೆ ಈ ಗೌರವ ಸಲ್ಲುವುದು ನಮ್ಮೆಲ್ಲರ ಹೊಣೆ. ಈ ಅಭಿಯಾನಕ್ಕೆ ಎಲ್ಲರೂ ಬೆಂಬಲ ನೀಡಿ," ಎಂದು ಪ್ರೇಮ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಹಂಸಲೇಖ ಅವರು ಕಳೆದ ಐದು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನೀಡಿರುವ ಅವರು, ಅದಕ್ಕಿಂತಲೂ ಹೆಚ್ಚಿನ ಚಿತ್ರಗಳಿಗೆ ಸಾಹಿತ್ಯ ರಚಿಸಿದ್ದಾರೆ. ಸಾವಿರಾರು ಜನಪ್ರಿಯ ಹಾಡುಗಳ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿರುವ ಹಂಸಲೇಖ, 1980ರ ದಶಕದಲ್ಲಿ ಕನ್ನಡ ಸಿನಿಮಾ ಸಂಗೀತ ಮತ್ತು ಸಾಹಿತ್ಯಕ್ಕೆ ಹೊಸ ದಿಕ್ಕು ತೋರಿದ ಸೃಜನಶೀಲ ವ್ಯಕ್ತಿತ್ವ.
ಕನ್ನಡದ ಜೊತೆಗೆ ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಿಗೂ ಸಂಗೀತ ನೀಡಿರುವ ಹಂಸಲೇಖ, ಭಾರತೀಯ ಚಿತ್ರರಂಗದಲ್ಲೂ ತಮ್ಮದೇ ಆದ ಗುರುತು ಮೂಡಿಸಿದ್ದಾರೆ. ಇಂತಹ ಅಪಾರ ಸಾಧನೆ ಮಾಡಿದ ಕಲಾವಿದರಿಗೆ ರಾಷ್ಟ್ರದ ಉನ್ನತ ನಾಗರಿಕ ಗೌರವಗಳು ಸಿಗಬೇಕು ಎಂಬ ಬೇಡಿಕೆ ಇದೀಗ ಮತ್ತೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸದ್ಯ ನೆನಪಿರಲಿ ಪ್ರೇಮ್ ಆರಂಭಿಸಿರುವ ಈ ಅಭಿಯಾನಕ್ಕೆ ಚಿತ್ರರಂಗ, ಸಾಹಿತ್ಯ ವಲಯ ಹಾಗೂ ಅಭಿಮಾನಿಗಳಿಂದ ಯಾವ ರೀತಿಯ ಬೆಂಬಲ ದೊರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.