
‘ಓ ಮೈ ಗಾಡ್ ವಾಟ್ ಎ ಪರ್ಫಾರ್ಮರ್, ವಾಟ್ ಎ ಪರ್ಫಾರ್ಮರ್. ನಂಬಕ್ಕೆ ಆಗ್ತಿಲ್ಲ. ಅದ್ಭುತ ಕಲಾವಿದ ನೀವು...’- ಹೀಗೆ ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ಅವರನ್ನು ಮೆಚ್ಚಿಕೊಂಡಿದ್ದು ಅಕ್ಕಿನೇನಿ ನಾಗಾರ್ಜುನ. ಅವರ ಪುತ್ರ ಅಕ್ಕಿನೇನಿ ಅಖಿಲ್ ನಟನೆಯ ತೆಲುಗಿನ ‘ಲೆನಿನ್’ ಚಿತ್ರದ ನಟನೆ ನೋಡಿ ಅವರು ಈ ಮಾತು ಹೇಳಿದರು.
ಲೆನಿನ್ ಚಿತ್ರದ ಪ್ರೀ ಕ್ಲೈಮ್ಯಾಕ್ಸ್ ಸೀನ್ ಬರುವ ಮೊದಲು ಸೀರೆ ಕಟ್ಟಿಕೊಂಡು ಮೈ ಮೇಲೆ ದೇವರು ಬಂದಂತೆ ಎಂಟ್ರಿ ಆದಾಗ ಪ್ರಮೋದ್‌ನನ್ನು ನೋಡಿ ನನಗೇ ಮೈ ಜುಮ್ ಎನಿಸಿತು. ಈ ಸೀನ್ ನೋಡಿದ ಮೇಲೆ ನಾನು ಅಖಿಲ್‌ನನ್ನು ಕರೆದು, ನೀನು ಎಚ್ಚರಗೊಂಡಿಲ್ಲ ಅಂದ್ರೆ ಇಡೀ ಸಿನಿಮಾನ ಪ್ರಮೋದ್ ತನ್ನ ಜೇಬಿನಲ್ಲಿ ಇಟ್ಟುಕೊಂಡು ಹೋಗ್ತಾನೆ.
ಈಗ ಕ್ಲೈಮ್ಯಾಕ್ಸ್‌ನಲ್ಲಿ ಏನ್ ಮಾಡ್ತಿಯೋ ಗೊತ್ತಿಲ್ಲ, ವಸಂತ್ ಪಾತ್ರಧಾರಿ ಪ್ರಮೋದ್‌ನನ್ನು ಮೀರಿಸೋ ನಟನೆ ನೀನು ಮಾಡಿರಬೇಕು ಎಂದು ಹೇಳಿದ್ದೆ. ಆದರೆ, ಅಖಿಲ್ ಮತ್ತು ಪ್ರಮೋದ್ ಒಬ್ಬರನ್ನು ಒಬ್ಬರು ಮೀರಿಸೋ ನಟನೆ ಮಾಡಿದ್ದಾರೆ. ತೆರೆ ಮೇಲೆ ಇಬ್ಬರು ಸ್ಪರ್ಧೆಗೆ ಬಿದ್ದು ಪಾತ್ರ ಪೋಷಣೆ ಮಾಡಿದ್ದಾರೆ. ಥಾಂಕ್ಯೂ ಪ್ರಮೋದ್. ನಿಮ್ಮ ಮುಂದಿನ ಚಿತ್ರಗಳಿಗೆ ಯಶಸ್ಸು ಸಿಗಲಿ ಎಂದುಕೋರುತ್ತೇನೆ ಎಂದು ನಾಗಾರ್ಜುನ, ಪ್ರಮೋದ್ ಅಭಿನಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನು ಕನ್ನಡದ ‘ಗೀತಾ ಬ್ಯಾಂಗಲ್ ಸ್ಟೋರ್’ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪರಿಚಿತರಾದ ನಟ ಪ್ರಮೋದ್, ಇತ್ತೀಚೆಗೆ ‘ಸಲಾರ್’ ಸಿನಿಮಾದಲ್ಲಿನ ಗಮನಾರ್ಹ ಪಾತ್ರದ ಮೂಲಕ ತೆಲುಗು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಇದೀಗ ‘ಲೆನಿನ್’ ಚಿತ್ರದ ಭರ್ಜರಿ ಯಶಸ್ಸು ಅವರ ಜನಪ್ರಿಯತೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದು, ಟಾಲಿವುಡ್‌ನಲ್ಲೂ ಅವರ ಬೇಡಿಕೆ ಹೆಚ್ಚುವ ಸೂಚನೆ ನೀಡಿದೆ.
ಚಿತ್ರ ಬಿಡುಗಡೆಯಾದ ಬಳಿಕ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲೂ ‘ಲೆನಿನ್’ ಅದ್ಭುತ ಪ್ರದರ್ಶನ ಮುಂದುವರಿಸಿದೆ. ಈ ನಡುವೆಯೇ ಚಿತ್ರದ ನಿರ್ಮಾಪಕರು ಅಧಿಕೃತ ಕಲೆಕ್ಷನ್ ಪೋಸ್ಟರ್ ಬಿಡುಗಡೆ ಮಾಡಿದ್ದು, ಚಿತ್ರದ ಗಳಿಕೆ ಅಚ್ಚರಿ ಮೂಡಿಸಿದೆ. ಅಧಿಕೃತ ಮಾಹಿತಿಯ ಪ್ರಕಾರ, ‘ಲೆನಿನ್’ ಸಿನಿಮಾ ಬಿಡುಗಡೆಯಾದ ಕೇವಲ ಎರಡು ದಿನಗಳಲ್ಲಿ ವಿಶ್ವಾದ್ಯಂತ ₹37.20 ಕೋಟಿ ಗ್ರಾಸ್ ಕಲೆಕ್ಷನ್ ದಾಖಲಿಸಿದೆ. ಮೊದಲ ದಿನವೇ ₹16.70 ಕೋಟಿ ಗಳಿಸುವ ಮೂಲಕ ನಾಯಕ ನಟ ಅಖಿಲ್ ಅವರ ವೃತ್ತಿಜೀವನದ ಅತಿ ದೊಡ್ಡ ಓಪನಿಂಗ್ ದಾಖಲಿಸಿದ್ದ ಈ ಸಿನಿಮಾ, ಎರಡನೇ ದಿನವೂ ಉತ್ತಮ ವೇಗ ಕಾಯ್ದುಕೊಂಡಿದೆ.
ವಿಶೇಷವೆಂದರೆ, ಚಿತ್ರದ ಬಗ್ಗೆ ಪ್ರೇಕ್ಷಕರಿಂದ ಹರಡುತ್ತಿರುವ ಸಕಾರಾತ್ಮಕ ಮಾತುಕತೆ (ಮೌತ್ ಪಬ್ಲಿಸಿಟಿ) ಬಾಕ್ಸ್ ಆಫೀಸ್ ಮೇಲೂ ಪರಿಣಾಮ ಬೀರಿದ್ದು, ವಾರಾಂತ್ಯದಲ್ಲಿ ಇನ್ನಷ್ಟು ದಾಖಲೆಗಳನ್ನು ನಿರ್ಮಿಸುವ ಸಾಧ್ಯತೆ ಇದೆ ಎಂದು ಸಿನಿ ವಲಯ ಅಂದಾಜಿಸಿದೆ. ಇದೇ ವೇಳೆ, ‘ಲೆನಿನ್’ ಚಿತ್ರದ ಯಶಸ್ಸಿನೊಂದಿಗೆ ಪ್ರಮೋದ್ ಅವರ ಅಭಿನಯಕ್ಕೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ತೆಲುಗು ಚಿತ್ರರಂಗದಲ್ಲಿ ಅವರ ವೃತ್ತಿಜೀವನಕ್ಕೆ ಈ ಸಿನಿಮಾ ಮಹತ್ವದ ತಿರುವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.