Hamsalekha: ಮುಂದಿನ ವಾರದಿಂದ ಗುರುಗಳು ನಮ್ಮೊಂದಿಗಿರುತ್ತಾರೆ ಎಂದ ರಾಘವೇಂದ್ರ ಹುಣಸೂರು

By Suvarna NewsFirst Published Nov 28, 2021, 10:35 PM IST
Highlights

ಪೇಜಾವರ ಮಠದ  ಹಿರಿಯ ಶ್ರೀಗಳ ಬಗ್ಗೆ ಹೇಳಿಕೆ ನೀಡಿ ಭಾರೀ ಟೀಕೆಗೆ ಗುರಿಯಾದ ಗಾಯಕ ಹಂಸಲೇಖ ಅವರು ಸರಿಗಮಪ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಮುಂದಿನ ವಾರದಿಂದ ಕಾಣಿಸಿಕೊಳ್ಳಲಿದ್ದಾರೆ ಎಂದು ರಾಘವೇಂದ್ರ ಹುಣಸೂರು ಅವರು ತಿಳಿಸಿದ್ದಾರೆ.

ಪೇಜಾವರ ಮಠದ (Pejawar) ಹಿರಿಯ ಶ್ರೀಗಳ ಬಗ್ಗೆ ಹೇಳಿಕೆ ನೀಡಿ ಭಾರೀ ಟೀಕೆಗೆ ಗುರಿಯಾದ ಗಾಯಕ ಹಂಸಲೇಖ (Hamsalekha) ಅವರು ಸರಿಗಮಪ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಮುಂದಿನ ವಾರದಿಂದ ಮತ್ತೆ ಭಾಗಿಯಾಗಲಿದ್ದಾರೆ ಎಂದು ರಾಘವೇಂದ್ರ ಹುಣಸೂರು (Raghavendra Hunsur) ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಪೇಜಾವರ ಶ್ರೀಗಳ ವಿರುದ್ಧ ಟೀಕೆ ಮಾಡಿದ್ದ ಹಂಸಲೇಖ ಅವರು ಕಳೆದ ವಾರ ಸರಿಗಮಪ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರಲಿಲ್ಲ. ಅದೇ ರೀತಿ ಈ ವಾರ ಕೂಡ ಹಂಸಲೇಖ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. 

ಆದರೆ ಮುಂದಿನ ವಾರದಿಂದ ಹಂಸಲೇಖ ಅವರು ಸರಿಗಮಪ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ರಾಘವೇಂದ್ರ ಹುಣಸೂರು ಅವರು ತಮ್ಮ ಇನ್‍ಸ್ಟಾಗ್ರಾಮ್ (Instagram) ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಈ ಬಗ್ಗೆ 'ಮಹಾಗುರುಗಳು ತಮ್ಮ ಆರೋಗ್ಯ ಮತ್ತು ವೈಯಕ್ತಿಕ ಕಾರಣಗಳಿಂದ ಒಂದು ವಾರ ಹೊರಗುಳಿಯಲು ನಿರ್ಧರಿಸಿದರು. ನಾವು ಅವರ ನಿರ್ಧಾರವನ್ನು ಗೌರವಿಸಿ, ವಿರಾಮ ತೆಗೆದುಕೊಳ್ಳಲು ಒಪ್ಪಿದ್ದೇವೆ. ಮುಂದಿನ ವಾರದಿಂದ ಎಂದಿನಂತೆ ಗುರುಗಳು ನಮ್ಮೊಂದಿಗಿರುತ್ತಾರೆ' ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

Hamsalekha: ಕ್ಷಮೆ ಕೇಳಿದ್ದರೂ ಹಂಸಲೇಖ ವಿರುದ್ಧ ದಾಖಲಾಯ್ತು ದೂರು

ಇನ್ನು, ಈ ವಿಚಾರವಾಗಿ ಹಂಸಲೇಖ ಅವರು ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಬಗ್ಗೆ 'ನನ್ನ ಆರೋಗ್ಯ ಸ್ಥಿರವಾಗಿದೆ. ಸರಿಗಮಪ ನನ್ನ ಪ್ರೀತಿಯ ಭೂಮಿಕೆ ಅದು ಮನಸ್ಸು ಮನಸ್ಸುಗಳನ್ನು ನೇಯುವ ವೇದಿಕೆಯಾಗಿದೆ. ಸುಧಾರಣೆಗಳ ಸುಂದರ ಕಥೆಗಳನ್ನು ಓದಿಕೊಳ್ಳುತ್ತಿದ್ದೇನೆ. ಬೇಗ ಬಂದು ಸೇರಿಕೊಳ್ಳುತ್ತೇನೆ. MUSIC EVADES WARS ಎಂಬ ಪೋಸ್ಟ್‌ನ್ನು ಫೇಸ್‌ಬುಕ್‌ನಲ್ಲಿ (Facebook) ಹಂಚಿಕೊಂಡು ಸಂದೇಶವನ್ನು ರವಾನಿಸಿದ್ದಾರೆ. ಮುಖ್ಯವಾಗಿ ಹಂಸಲೇಖ ಅವರು ಸರಿಗಮಪ ರಿಯಾಲಿಟಿ ಶೋ ಬಿಡುತ್ತಿದ್ದಾರಾ? ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಹೊಸಬರ ಎಂಟ್ರಿಯಾಗುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಶುರುವಾಗಿ, ಕಾರ್ಯಕ್ರಮದಿಂದ ಅವರು ಹೊರ ಹೋಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.
 


ಪ್ರಕರಣ ಹಿನ್ನಲೆ: ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಹಂಸಲೇಖ ಅವರು, ಪೇಜಾವರ ಶ್ರೀಗಳು ದಲಿತರ‌ ಮನೆಗೆ ಹೋಗಿದ್ರು ಅಂತ ಕೇಳಿದ್ದೆ. ದಲಿತರ ಮನೆಗೆ ಬಂದು ಅವರು ಕುಳಿತುಕೊಳ್ಳಬಹುದು. ಆದ್ರೆ, ಅವರಿಗೆ ಕೋಳಿ ಕೊಟ್ಟರೆ ತಿನ್ನೋಕೆ ಆಗುತ್ತಾ..? ಕೋಳಿ ಬೇಡ ಕುರಿಯ ರಕ್ತವನ್ನು ಫ್ರೈ ಮಾಡಿ ಕೊಟ್ರೆ ತಿನ್ನೋಕೆ‌ ಆಗುತ್ತಾ..? ಲಿವರ್ ಕೊಟ್ರೆ ತಿನ್ನೋಕೆ ಆಗುತ್ತಾ..? ಎಂದು ಪ್ರಶ್ನಿಸಿದ್ದರು.

Remark Against Pejawara Shri : ವಿಚಾರಣೆಗೆ ಹಾಜರಾದ ಹಂಸಲೇಖ - ಪರ, ವಿರೋಧಿ ಪ್ರತಿಭಟನೆ

ಹಂಸಲೇಖ ಅವರ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಅತೀವ ಪರ-ವಿರೋಧಗಳ ಚರ್ಚೆಯ ನಂತರ ಹಂಸಲೇಖ ಅವರು ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೇಳಿದ್ದರು. ನಾನು ಒಬ್ಬ ಸಂಗೀತಗಾರ. ನಮಗ್ಯಾಕೆ ಟ್ರೋಲು? ಕಂಟ್ರೋಲ್ ಆಗಿರುವುದು ನಮ್ಮ ಕೆಲಸ. ನನಗೆ ಯಾರಿಗೂ ನೋವು ಕೊಡಲು ಇಷ್ಟವಿಲ್ಲ. ನನ್ನ ಸಂಗೀತದಂತೆ ನನ್ನ ಮಾತು, ಬದುಕು ಕೂಡ ಎಲ್ಲರಿಗೂ ಸುಖ ಕೊಡಬೇಕು. ಆದರೆ, ಎಲ್ಲಾ ಅನಿಷ್ಠಗಳನ್ನು ತೊಡೆದು ಹಾಕುವ ದಿಸೆಯಲ್ಲಿ ನನ್ನ ಪಾತ್ರ ಯಾವುದರ ಮೂಲಕ ಇದ್ದರೂ ಅದನ್ನು ಮಾಡಿಯೇ ಮಾಡುತ್ತೇನೆ ಎಂದು ಹಂಸಲೇಖ ಅವರು ವಿಡಿಯೋ ಮೂಲಕ ಹೇಳಿದ್ದರು. 

ಇತ್ತೀಚೆಗಷ್ಟೇ ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದ ಹಂಸಲೇಖ ಅವರು ನನ್ನ ಹೇಳಿಕೆಯಿಂದ ತಪ್ಪಾಗಿದೆ. ಯಾವುದೇ ಧರ್ಮ, ಸಮಾಜ ಜಾತಿಯನ್ನು ನಿಂದಿಸೋ ಉದ್ದೇಶ ನನ್ನದಲ್ಲ. ಈ ಘಟನೆಯಿಂದ ತನಗೆ ತುಂಬಾ ನೋವಾಗಿರುವುದಾಗಿ ಹೇಳಿದ್ದರು.
 

click me!