ಕನ್ನಡ ಸಿನಿರಂಗಕ್ಕೆ ದೊಡ್ಡ ತಲೆನೋವು ತಂದಿಟ್ಟ ಮೀಟೂ, ಕಾಸ್ಟಿಂಗ್ ಕೌಚ್ ಭೂತ.., ಏನಾಗ್ತಿದೆ ನೋಡಿ..!

By Shriram BhatFirst Published Sep 16, 2024, 4:05 PM IST
Highlights

ಸಂದರ್ಶನವೊಂದರಲ್ಲಿ ಮಾತನಾಡಿರುವ ಹಿರಿಯ ನಿರ್ಮಾಪಕರಾದ ಸಾರಾ ಗೋವಿಂದು ಹಾಗು ಕೆ. ಮಂಜು ಅವರುಗಳು ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾರಾ ಗೋವಿಂದು ಅವರು' 'ಕೇರಳದಲ್ಲಿ ಬಂದಿದೆ ಅನ್ನೋ ಕಾರಣಕ್ಕೆ ಅದನ್ನ ಕನ್ನಡ ಚಿತ್ರರಂಗಕ್ಕೂ ತಂದಿದಾನೆ ಆ ಚೇತನ್..

ಮಲಯಾಳಂ ಚಿತ್ರರಂಗದಲ್ಲಿ ಬಿಸಿ ಮುಟ್ಟಿಸಿರುವ ಹೇಮಾ ಕಮಿಟಿ ವರದಿ, ಟಾಲಿವುಡ್ ಚಿತ್ರರಂಗದಲ್ಲೂ ಅಲ್ಲೋಕಕಲ್ಲೋಲ ಎಬ್ಬಿಸಿದ್ದು ಗೊತ್ತೇ ಇದೆ. ಆದರೆ, ಕನ್ನಡ ಚಿತ್ರರಂಗದಲ್ಲಿ 2017ರಲ್ಲೇ ನಟ ಚೇತನ್ ಅಹಿಂಸಾ ನೇತೃತ್ವದಲ್ಲಿ 'ಫೈರ್' ಸಂಸ್ಥೆ ಹುಟ್ಟುಹಾಕಲಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ಶೋಷಣೆ ನಡೆದರೆ ಅದನ್ನು ಫೈರ್ ಸಂಸ್ಥೆಯ ಗಮನಕ್ಕೆ ತಂದು, ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿತ್ತು. ಆದರೆ, ಇಲ್ಲಯವರೆಗೆ ಸಂಸ್ಥೆ ಅಷ್ಟೇನೂ ಕ್ರಿಯಾಶೀಲ ಆಗಿರಲಿಲ್ಲ, ಅಥವಾ ಅದಕ್ಕೆ ಯಾರೂ ಕೆಲಸ ಕೊಟ್ಟಿರಲಿಲ್ಲವೇನೋ!

ಆದರೆ, ಯಾವಾಗ ಹೇಮಾ ಕಮಿಟಿ ವರದಿ ಮೂಲಕ ಪಕ್ಕದ ಮಲಯಾಳಂ ಸಿನಿಮಾ ಉದ್ಯಮದಲ್ಲಿ ಬೆಂಕಿ ಹೊತ್ತಿಕೊಂಡಿತೋ, ನೆರೆಯ ತೆಲುಗು ಚಿತ್ರರಂಗದಲ್ಲಿ ಬಿರುಗಾಳಿ ಶುರುವಾಯ್ತೋ, ಆಗ ಚೇತನ್ ಅಹಿಂಸಾ, ಕವಿತಾ ಲಂಕೇಶ್ ಸೇರಿದಂತೆ ಹಲವರು ಇಲ್ಲಿಯೂ ಒಂದು ಕಮಿಟಿ ರಚಿಸಿ, ವರದಿ ಕೊಡಬೇಕು ಎಂದು ಮಾತನಾಡಲು ಶುರು ಮಾಡಿದರು. ಅಷ್ಟೇ ಅಲ್ಲ, ಈಗಾಗಲೇ ಇರುವ 'ಫೈರ್ ಕಮಿಟಿ'ಗೆ ಬಲ ತುಂಬಬೇಕು, ಅಥವಾ ಹೊಸ ಕಮಿಟಿ ರಚಿಸಬೇಕು ಎಂದು ಚೇತನ್ ಅಹಿಂಸಾ ನೇತೃತ್ವದಲ್ಲಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿ ಮನವಿ ಮಾಡಲಾಯಿತು. 

Latest Videos

ಚೇತನ್ ಅಹಿಂಸಾ 'ಫೈರ್'ಗೆ ಉಗಿದು ಜನ್ಮ ಜಾಲಾಡಿ ಸಾರಾ ಗೋವಿಂದು ಏನ್ ಹೇಳ್ಬಿಟ್ರು ನೋಡಿ!

ಇದೀಗ, ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಅವರು ಸಹ ಈ ಬಗ್ಗೆ ಒತ್ತಾಯ ಪಡಿಸುತ್ತಿದ್ದಾರೆ ಎನ್ನಲಾಗಿದೆ. ನಟಿಯರಾದ ನೀತು ಶೆಟ್ಟಿ, ಸಂಗೀತಾ ಭಟ್ ಹಾಗು ಶ್ರುತಿ ಹರಿಹರನ್ ಸಹ ಇದಕ್ಕೆ ದನಿಗೂಡಿಸಿದ್ದಾರೆ. ಈ ಚರ್ಚೆ ಬಿಸಿ ಪಡೆದು ಕಾವೇರುತ್ತಿದ್ದಂತೆ ಇಂದು (16 ಸೆಪ್ಟೆಂಬರ್ 2024) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಸಲಾಗುತ್ತಿದೆ. ಈ ಚೇತನ್ ಅಹಿಂಸಾ ನೇತೃತ್ವದ ಫೈರ್ ಸಂಸ್ಥೆ ಬಗ್ಗೆ ಪರ-ವಿರೋಧ ವ್ಯಕ್ತವಾಗುತ್ತಿದೆ. ಜೊತೆಗೆ, ಕನ್ನಡ ಸಿನಿರಂಗಕ್ಕೆ ಅಂತಹ ಯಾವುದೇ ಸಂಸ್ಥೆಯ ಅಗತ್ಯವಿಲ್ಲ ಎಂಬ ಮಾತೂ ಸಹ ಕೇಳಿ ಬರುತ್ತಿದೆ. 

ಅಷ್ಟೇ ಅಲ್ಲ, ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಹಿರಿಯ ನಿರ್ಮಾಪಕರಾದ ಸಾರಾ ಗೋವಿಂದು ಹಾಗು ಕೆ. ಮಂಜು ಅವರುಗಳು ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾರಾ ಗೋವಿಂದು ಅವರು' 'ಕೇರಳದಲ್ಲಿ ಬಂದಿದೆ ಅನ್ನೋ ಕಾರಣಕ್ಕೆ ಅದನ್ನ ಕನ್ನಡ ಚಿತ್ರರಂಗಕ್ಕೂ ತಂದಿದಾನೆ ಆ ಚೇತನ್. ಅವ್ನಿಗೆ ಮಾಡೋದಕ್ಕೆ ಕೆಲಸ ಇಲ್ಲ, ದೊಡ್ಡ ಹೀರೋ ಆಗೋದಕ್ಕೆ ಅದನ್ನ ಹಚ್ಕೊಂಡವ್ನೆ.. ಎಲ್ಲಾ ಹಚ್ಕೊಂಡಾಯ್ತು, ಈಗ ಇದನ್ನ ಹಚ್ಕೊಂಡಿದಾನೆ. 

ನಮ್ಮ ಕನ್ನಡ ಚಿತ್ರರಂಗಕ್ಕೆ 90 ವರ್ಷ ಆಗಿದೆ. ಅಂತ ಘಟನೆಗಳು ಇಲ್ಲಿ ನಡೆಯುತ್ತಿದ್ದರೆ ಇಷ್ಟು ವರ್ಷ ಚಿತ್ರರಂಗ ಹೀಗೆ ನಡಿತಾ ಇರ್ಲಿಲ್ಲ.. 
ಎನೋ ಬಂದ್ಬಿಟ್ವವ್ನೇ, ಏನೋ ಕಿತ್ತಾಕೋ ಥರ ಮಾತಾಡ್ತಾ ಅವ್ನೆ.. ಅದನ್ನ ಸಮಯ ಬಂದಾಗ ನಾವೂ ಮಾತಾಡ್ತೀವಿ.. ಯಾವುದೋ ಹಣಕಾಸಿನ ವ್ಯವಹಾರಕ್ಕೋ ಅಥವಾ ಇನ್ನೇನಕ್ಕೋ ಹೀರೋಯಿನ್‌ ಯಾರೋ ಒಬ್ರು, ಹಂಗೆ ಮಾಡಿದಾರೆ ಹಿಂಗೆ ಹೇಳಿದಾರೆ ಅಂದ್ರೆ ಗತಿ ಏನು? ಇದೆಲ್ಲಾ ಕನ್ನಡ ಚಿತ್ರರಂಗಕ್ಕೆ ಬೇಕಾ?
 
ಕನ್ನಡ ಚಿತ್ರರಂಗವನ್ನು ಬಹಳಷ್ಟು ಮಹಾನ್ ಪರುಷರು ಆಳಿ ಹೋಗಿದಾರೆ. ಡಾ ರಾಜ್‌ಕುಮಾರ್, ವಿಷ್ಣುವರ್ಧನ್, ಅನಂತ್‌ ನಾಗ್, ಶಂಕರ್‌ ನಾಗ್, ಅಂಬರೀಷ್ ಹೀಗೆ ಎಂತೆಂಥವರು ಆಳಿ ಹೋಗಿದಾರೆ. ಹೀಗೆಲ್ಲಾ ಇದ್ದಿದ್ರೆ ಚಿತ್ರರಂಗ ಇಷ್ಟು ಬೆಳೆತಾ ಇತ್ತಾ? ಇತ್ತೀಚೆಗೆ ಒಬ್ರು ನಟಿ ಬಂದು ಇದನ್ನು ದೊಡ್ಡ ಇಶ್ಯೂ ಮಾಡ್ತಿದಾರೆ. ಸಮಯ ಬಂದಾಗ ಉತ್ತರ ಕಡ್ತೀವಿ ಅದಕ್ಕೆ..' ಎಂದಿದ್ದಾರೆ. 

ಲಕ್ಷ್ಮೀ-ಮಾಲಾಶ್ರೀ ಅವ್ರೆಲ್ಲ ಯಾವುದೇ ಕಂಪ್ಲೇಂಟ್ ಮಾಡ್ತಿರ್ಲಿಲ್ಲ, ಸಿನಿಮಾ ಪ್ರೀತಿ ಅಷ್ಟಿತ್ತು: ಕೆ ಮಂಜು!

ಇನ್ನು ಕೆ ಮಂಜು ಅವರು, 'ಸಿನಿಮಾ ಅಂದಾಗ ಆ ಬಗ್ಗೆ ಪ್ರೀತಿ ಇರಬೇಕು. ಲಕ್ಷ್ಮೀ ಮೇಡಂ ಹಾಗೂ ಮಾಲಾಶ್ರೀ ಅವರೆಲ್ಲಾ ಎರಡು ಸೀರೆ ಅಡ್ಡ ಇಟ್ಟುಕೊಂಡು ಡ್ರೆಸ್ ಚೇಂಜ್ ಮಾಡಿದಾರೆ. ಗ್ರೇಟ್ ಅನ್ಬೇಕು, ಯಾಕಂದ್ರೆ ಅವ್ರು ರೂಮ್‌ಗೆ ಹೋಗಿ ಡ್ರೆಸ್ ಬದಲಾಯಿಸಿಕೊಂಡು ಬರೋದಕ್ಕೆ ಮೂರು ತಾಸು ಆಗುತ್ತೆ.. ಲಕ್ಷ್ಮೀ ಮೇಡಂ ಹಾಗೂ ಮಾಲಾಶ್ರೀ ಅವರೆಲ್ಲಾ ಹಾಗೆ ಇದ್ರು. ಅದು ಸಿನಿಮಾ, ಅದು ಅವ್ರ ಸಿನಿಮಾ ಪ್ರೀತಿ. ಕಂಪ್ಲೇಂಟ್ ಮಾಡುತ್ತಾ ಕುಳಿತಿರಲಿಲ್ಲ ಅವ್ರೆಲ್ಲಾ.

ನಾವು ಸಿನಿಮಾ ನಿರ್ಮಾಪಕರಾಗಿ ಕಲಾವಿದರಿಗೆ, ತಂತ್ರಜ್ಞರಿಗೆ ಬೇಸಿಕ್ ಫೆಸಿಲಿಟಿ ಎಲ್ಲಾನೂ ಕೊಡ್ತೀವಿ. ಹಣ, ಫುಡ್, ಟೀ-ಕಾಫೀ, ಈಗ ಕ್ಯಾರಾವ್ಯಾನ್, ಎಲ್ಲಾ ಸೌಲಭ್ಯ ಕೊಡ್ತೀವಿ. ಬೇರೆ ಏನೇ ಬೇಕಾದ್ರೆ, ಅಗತ್ಯ ಅನ್ನಿಸಿದ್ರೆ ಖಂಡಿತ ತಂದು ಕೊಡ್ತೀವಿ. ಸಿನಿಮಾ ಟೀಮ್‌ನಲ್ಲಿ ಯಾರಿಂದಲಾದ್ರೂ ಲೈಂಗಿಕ ಕಿರುಕುಳ ಅಥವಾ ಬೇರೆ ಏನಾದರೂ ಸಮಸ್ಯೆ ಆದ್ರೆ ನಮ್ಗೆ ಹೇಳಿದ್ರೆ ಅಲ್ಲೇ ಬಗೆ ಹರಿಸ್ತೀವಿ. ಅದು ಬಿಟ್ಟೆ, ಆಗ ಸುಮ್ಮನೇ ಇದ್ದು, ಹತ್ತು ವರ್ಷಗಳ ಮೇಲೆ ಕ್ಯಾಮೆರಾ ಎದುರು ಹೇಳಿದ್ರೆ ಏನ್ ಮಾಡೋದು?

 ಇನ್ನು, ಫೈರ್, ಅದೂ ಇದೂ ಕಮಿಟಿ ಮಾಡಿಕೊಂಡು ಸರ್ಕಾರಕ್ಕೆ ಕೋಟ್ಯಾಂತರ ಹಣವನ್ನು ಯಾಕೆ ನಷ್ಟ ಮಾಡಬೇಕು? ಜನರ ಟ್ಯಾಕ್ಸ್ ದುಡ್ಡು ಯಾರೋ ಕೆಲವು ನಿರುದ್ಯೋಗಿಗಳ ಪಾಲಾಗುವುದು ಯಾಕೆ? ಈಗ ಇರುವ ಪೊಲೀಸ್, ಕಾನೂನು ಹಾಗೂ ಕೋರ್ಟ್ ಮೂಲಕವೇ ಇದನ್ನೂ ಬಗೆಹರಿಸಿಕೊಳ್ಳಬಹುದಲ್ಲವೇ? ಅದಕ್ಕಾಗಿ ಅನಾವಶ್ಯಕ ಕಮಿಟಿ, ವರದಿ ಎಲ್ಲವೂ ಯಾಕೆ ಬೇಕು' ಎಂದು ತಮ್ಮ ಸಿಟ್ಟು ಹೊರಹಾಕಿದ್ದಾರೆ ಕೆ. ಮಂಜು. 

ಚೇತನ್ ಅಹಿಂಸಾ 'ಫೈರ್'ಗೆ ಉಗಿದು ಜನ್ಮ ಜಾಲಾಡಿ ಸಾರಾ ಗೋವಿಂದು ಏನ್ ಹೇಳ್ಬಿಟ್ರು ನೋಡಿ!

ಸದ್ಯ ಈ ವಿಷಯ ಚರ್ಚೆಯ ಹಂತದಲ್ಲಿದೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಹೋಗಿ ತಲುಪಿದೆ. ಇಂದಿನ ವಾಣಿಜ್ಯ ಮಂಡಳಿ ಸಭೆಯಲ್ಲಿ ಈ ಬಗ್ಗೆ ಅದೇನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ, ಮೀಟೂ, ಕಾಸ್ಟಿಂಗ್ ಕೌಚ್ ಭೂತ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನೂ ಕಾಡುವಂತೆ ಕಾಣಿಸುತ್ತಿದೆ. ಮುಂದೇನಾಗಲಿದೆ ಎಂದು ಕಾಲವೇ ಉತ್ತರಿಸಬೇಕು, ಅದಕ್ಕೆ ಕಾದು ನೋಡುವುದೊಂದೇ ದಾರಿ. 

click me!