ವರಾಹ ರೂಪಂ ಹಾಡಿನ ಬಳಕೆಗೆ ನೀಡಲಾಗಿದ್ದ ಮಧ್ಯಂತರ ತಡೆಯನ್ನು ತೆರವುಗೊಳಿಸಬೇಕೆಂದು ಕೋರಿ ಹೊಂಬಾಳೆ ಫಿಲ್ಮ್ಸ್ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ.
ಕಾಂತಾರ ಸಿನಿಮಾದ ವರೂಹ ರೂಪಂ....ಹಾಡಿನ ವಿವಾದ ಇನ್ನೂ ಬಗೆಹರಿದಿಲ್ಲ. ವರಾಹ ರೂಪಂ ಹಾಡಿನ ಬಳಕೆಗೆ ನೀಡಲಾಗಿದ್ದ ಮಧ್ಯಂತರ ತಡೆಯನ್ನು ತೆರವುಗೊಳಿಸಬೇಕೆಂದು ಕೋರಿ ಹೊಂಬಾಳೆ ಫಿಲ್ಮ್ಸ್ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ. ಕೇರಳ ಮೂಲದ ತೈಕ್ಕುಡಂ ಬ್ರಿಡ್ಜ್ ಎಂಬ ಬ್ಯಾಂಡ್ ಕಾಂತಾರ ನಿರ್ಮಾಪಕರ ವಿರುದ್ಧ 'ನವರಸಂ' ಹಾಡನ್ನು ಕದ್ದಿದ್ದಾರೆ ಎಂದು ಕೃತಿಚೌರ್ಯದ ಆರೋಪ ಮಾಡಿ ಕೋರ್ಟ್ ಮೆಟ್ಟಿಲೇರಿದ್ದರು. ಕೇರಳದ ಸ್ಥಳಿಯ ಕೋರ್ಟ್ ಈ ಹಾಡನ್ನು ಪ್ರಸಾರ ಮಾಡದಂತೆ ಆದೇಶ ಹೊರಡಿಸಿತ್ತು. ಬಳಿಕ ಹೊಂಬಾಳೆ ಫಿಲ್ಮ್ಸ್ ಕೇರಳ ಹೈಕೋರ್ಟ್ ಮೊರೆ ಹೋಗಿತ್ತು. ಸ್ಥಳಿಯ ನ್ಯಾಯಾಲದ ತೀರ್ಪಿನ ವಿರುದ್ಧ ಹೊಂಬಾಳೆ ಸಲ್ಲಿಸಿದ್ದ ಅರ್ಜಿಗಳನ್ನು ಸಿಎಸ್ ಡಯಾಸ್ ನೇತೃತ್ವದ ಏಕ ಪೀಠವು ವಜಾಗೊಳಿಸಿದೆ. ಅರ್ಜಿದಾರರಿಗೆ ಇತರ ಕಾನೂನು ಪರಿಹಾರಗಳನ್ನು ಅನುಸರಿಸಲು ಹೈಕೋರ್ಟ್ ಅನುಮತಿ ನೀಡಿದೆ.
‘ಅಧೀನ ನ್ಯಾಯಾಲಯಗಳು ಹೊರಡಿಸಿದ ಎಲ್ಲಾ ಆದೇಶಗಳಲ್ಲಿ ನಾವು ಮಧ್ಯ ಪ್ರವೇಶಿಸಬಾರದು. ಹಾಗೆ ಮಾಡಿದರೆ ಅಧೀನ ನ್ಯಾಯಾಲಯಗಳು ಬಲಗುಂದಿದಂತೆ ಆಗುತ್ತವೆ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ‘ಎಲ್ಲಾ ಮೇಲ್ಮನವಿಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಕೋರ್ಟ್ನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತದೆ’ ಎಂದು ಹೈಕೋರ್ಟ್ ಹೇಳಿದೆ. ಈ ಮೂಲಕ ಅರ್ಜಿಯನ್ನು ವಜಾ ಮಾಡಿದೆ. ಇದರಿಂದ ಹೊಂಬಾಳೆ ಫಿಲ್ಮ್ಸ್ಗೆ ಹಿನ್ನಡೆ ಆಗಿದೆ. ಈಗ ಹೊಂಬಾಳೆ ಫಿಲ್ಮ್ಸ್ ಈ ವಿಚಾರದಲ್ಲಿ ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ಕುತೂಹಲ ಮೂಡಿದೆ.
'ಕಾಂತಾರ' ಸಿನಿಮಾ ನಟ ನವೀನ್ ಡಿ ಪಡೀಲ್ ಆಸ್ಪತ್ರೆಗೆ ದಾಖಲು
ಕೇರಳ ಕೋರ್ಟ್ ಆದೇಶ ಹೊರಡಿಸಿ ಕೆಲವು ದಿನಗಳ ಬಳಿಕ ವರಾಹ ರೂಪಮ್ ಹಾಡನ್ನು ಎಲ್ಲಾ ಮ್ಯೂಸಿಕ್ ಆಪ್ ಮತ್ತು ಯೂಟ್ಯೂಬ್‌ನಿಂದ ಡಿಲೀಟ್ ಮಾಡಲಾಗಿದೆ. ವರಾಹ ರೂಪಂ.. ಹಾಡಿಗೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದರು. ಈ ಹಾಡನ್ನು ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ಗಳಲ್ಲಿ ರಿಲೀಸ್ ಮಾಡಲಾಗಿತ್ತು. ಈಗ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ನಿಂದ ಈ ಹಾಡನ್ನು ಡಿಲೀಟ್ ಮಾಡಲಾಗಿದೆ.
ಕರ್ನಾಟಕದಲ್ಲಿ KGF-2 ದಾಖಲೆ ಬ್ರೇಕ್ ಮಾಡಿದ 'ಕಾಂತಾರ'; 400 ಕೋಟಿ ರೂ. ದಾಟಿದ ರಿಷಬ್ ಸಿನಿಮಾ ಕಲೆಕ್ಷನ್
ಕೇರಳ ಸ್ಥಳಿಯ ಕೋರ್ಟ್ ಹೇಳಿದ್ದೇನು?
ಕೇರಳದ ಕೋಯಿಕ್ಕೋಡ್ ಕೋರ್ಟ್, ಚಿತ್ರದ ನಿರ್ಮಾಪಕ, ನಿರ್ದೇಶಕ, ಸಂಗೀತ ನಿರ್ದೇಶಕ, ಅಮೆಜಾನ್, ಯೂಟ್ಯೂಬ್, ಸ್ಫೋಟಿಫಿ, ವಿಂಕ್ ಮ್ಯೂಸಿಕ್, ಜಿಯೋ ಸಾವನ್ ಹಾಗೂ ಇತರ ಮ್ಯೂಸಿಕ್ ಆಪ್‌ಗಳ ವೇದಿಕೆಗಳಿಗೆ ವರಾಹ ರೂಪಂ ಹಾಡನ್ನು ಪ್ಲೇ ಮಾಡದಂತೆ ತಡೆಯಾಜ್ಞೆ ನೀಡಿತ್ತು. ಇದನ್ನು ಪ್ಲೇ ಮಾಡುವುದಾದರೆ ಅದಕ್ಕೆ ತೈಕುಡಂ ಬ್ರಿಡ್ಜ್‌ನ ಅನುಮತಿ ಬೇಕು ಎಂದು ಕೋರ್ಟ್ ತಿಳಿಸಿತ್ತು. ತೈಕುಡಂ ಬ್ರಿಡ್ಜ್ ಬ್ಯಾಂಡ್, ಸುಪ್ರೀಂ ಕೋರ್ಟ್ ಮ್ಯೂಸಿಕ್ ಅಟಾರ್ನಿ ಸತೀಶ್ ಮೂರ್ತಿ ಅವರಿಂದ ತಡೆಯಾಜ್ಞೆ ಅರ್ಜಿಯನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಿತ್ತು.