ನನ್ನೊಳಗಿನ ಕನಸು ಸಾಕಾರಗೊಂಡಿತು: ರಂಜನಿ

By Kannadaprabha NewsFirst Published Oct 1, 2021, 9:28 AM IST
Highlights

- ಕಾದಂಬರಿ ಬರೆಯಬೇಕೆಂಬ ಹಸಿವು ಹೆಚ್ಚಾಗಿದೆ

‘ಕನ್ನಡತಿ’ ಧಾರವಾಹಿ ಖ್ಯಾತಿ ನಟಿಯ ‘ಕತೆ ಡಬ್ಬಿ’ ಬಿಡುಗಡೆ

‘ಕತೆ ಡಬ್ಬಿ’ ಮೂಲಕ ಪುಸ್ತಕ ಬರೆಯುವ ಕನಸು ನನಸಾಗಿದ್ದು, ಕಾಂದಬರಿಯೊಂದನ್ನು ಬರೆಯಬೇಕೆಂಬ ಹಸಿವು ಹೆಚ್ಚಾಗಿದೆ ಎಂದು ‘ಕನ್ನಡತಿ’ ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್‌ ಹೇಳಿದರು.

ಬಹುರೂಪಿ ಪ್ರಕಾಶನ ಸಂಸ್ಥೆ ನಗರದಲ್ಲಿ ಹಮ್ಮಿಕೊಂಡಿದ್ದ ನಟಿ ರಂಜನಿ ರಾಘವನ್‌ ವಿರಚಿತ ಕಥಾ ಸಂಕಲನ ‘ಕತೆ ಡಬ್ಬಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ನನ್ನ ಮೊದಲು ಪುಸ್ತಕ ‘ಕತೆ ಡಬ್ಬಿ’ ಪ್ರಕಟಗೊಂಡು ಓದುಗರ ಕೈಸೇರುವ ಮೂಲಕ ನನ್ನ ಕನಸು ನನಸಾಗಿದೆ. ಮುಂದಿನ ದಿನಗಳಲ್ಲಿ ಕಾದಂಬರಿ ಬರೆಯಬೇಕೆಂಬ ಆಸೆ ಇದೆ ಎಂದರು.

‘ಅವಧಿ’ ವೆಬ್‌ ಪತ್ರಿಕೆಯಲ್ಲಿ ಶುಕ್ರವಾರಕ್ಕೆ ಒಂದರಂತೆ ಕತೆಗಳನ್ನು ಬರೆದೆ. ಅದಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದರಿಂದ ನನ್ನ ಬರವಣಿಗೆಯ ಉತ್ಸಾಹ ಇಮ್ಮಡಿ ಆಯಿತು. ಅದರ ಪ್ರತಿಫಲವಾಗಿ ‘ಕತೆ ಡಬ್ಬಿ’ ರೂಪುಗೊಂಡಿತು. ಮುಖ್ಯವಾಗಿ ಬರವಣಿಗೆಯ ಲೋಕದ ದಿಗ್ಗಜರ ನಡುವೆ ‘ಪುಟ್ಟಗೌರಿ’ಯ (ನನ್ನ) ಕಥಾ ಸಂಕಲನಕ್ಕೆ ಸೊಗಸಾದ ಸ್ವಾಗತ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ರಂಜನಿ ರಾಘವನ್‌ ಕಥಾ ಸಂಕಲನ ‘ಕತೆ ಡಬ್ಬಿ’ ಇಂದು ಬಿಡುಗಡೆ

‘ಕತೆ ಡಬ್ಬಿ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಕನ್ನಡಪ್ರಭ ಪುರವಣಿ ಸಂಪಾದಕ ಹಾಗೂ ಲೇಖಕ ಜೋಗಿ (ಗಿರೀಶ್‌ ರಾವ್‌ ಹತ್ವಾರ್‌), ಓದುಗರಿಗೆ ಮನಮುಟ್ಟುವಂತೆ ಕತೆ ಹೇಳುವ ಶೈಲಿ ಹಾಗೂ ಇಂದಿನ ಕಾಲದ ಭಾಷೆಯನ್ನು ಹಿಡಿದಿಡುವ ನೈಜತೆ ನಟಿ ರಂಜನಿ ರಾಘವನ್‌ ಅವರಿಗಿದೆ. ವಯಸ್ಸನ್ನು ಮೀರಿದ ಆಲೋಚನೆ, ಸೊಗಸಾದ ತಂತ್ರಗಾರಿಕೆಯ ಬಳಕೆ ಅವರ ಕಥೆಗಳ ಹೆಚ್ಚುಗಾರಿಕೆಯಾಗಿದೆ.

ಬೆಚ್ಚಿ ಬೀಳಿಸಿದ ಕನ್ನಡತಿ! ಭುವಿಯ ಹೊಸ ನಡೆಗೆ ಫಿದಾ ಆದ ಪ್ರೇಕ್ಷಕರು

ಕಥಾ ಸಂಕಲನದಲ್ಲಿ ಮನುಷ್ಯನ ಪಿಪಾಸುತನ ಮತ್ತು ದಾಹವನ್ನು ಹಿಡಿದಿಟ್ಟಿದ್ದಾರೆ. ಗಾಢವಾಗಿರುವ ಕತೆಗಳನ್ನು ಕಟ್ಟಿಕೊಟ್ಟಿದ್ದಾರೆ. ಬದುಕನ್ನು ಸುಂದರಗೊಳಿಸುವ ಮತ್ತು ಕತೆಯಲ್ಲಿ ಬರುವ ಸೂಕ್ಷ್ಮಗಳನ್ನು ಬಹುವಾಗಿ ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ‘ಕನ್ನಡತಿ’ಯನ್ನು ಶ್ಲಾಘಿಸಿದರು.

ಚಿತ್ರ ನಿರ್ದೇಶಕ ಜಯತೀರ್ಥ ಮಾತನಾಡಿ, ರಂಜನಿ ರಾಘವನ್‌ ಸಂಪ್ರದಾಯದ ಹೊರೆ ಕಳಚಿ ಸತ್ಯಕ್ಕೆ ಹತ್ತಿರವಾಗುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದರು. ಚಿತ್ರೀರಕಣ ಸಂದರ್ಭದಲ್ಲಿ ಬಿಡುವು ಸಿಕ್ಕಾಗ ಕತೆಗಳನ್ನು ಹೇಳುತ್ತಿದ್ದ ರಂಜನಿ ಇದೀಗ ಕತೆಗಾರ್ತಿಯಾಗಿ ರೂಪುಗೊಂಡಿದ್ದಕ್ಕೆ ಹೆಮ್ಮೆ ಪಡುವೆ ಎಂದು ಚಿತ್ರ ನಟ ರಿಷಿ ತಿಳಿಸಿದರು. ಬಹುರೂಪಿ ಪ್ರಕಾಶನ ಸಂಸ್ಥೆಯ ಜಿ.ಎನ್‌.ಮೋಹನ್‌, ಬಹುರೂಪಿ ಬುಕ್‌ ಹಬ್‌ ನಿರ್ದೇಶಕಿ ವಿ.ಎನ್‌.ಶ್ರೀಜಾ, ಧೀರಜ್‌ ಹನುಮೇಶ್‌ ಮತ್ತಿತರರು ಪಾಲ್ಗೊಂಡಿದ್ದರು.

 

click me!