ಕಾಂತಾರ ಬಂದ್ಮೇಲೆ ಮೇಲು-ಕೀಳು ಇತ್ಯಾದಿಗಳ ಚರ್ಚೆ ಹೆಚ್ಚಾಗಿದೆ: ರಿಷಬ್ ಶೆಟ್ಟಿ

Published : Feb 13, 2023, 08:43 AM IST
ಕಾಂತಾರ ಬಂದ್ಮೇಲೆ ಮೇಲು-ಕೀಳು ಇತ್ಯಾದಿಗಳ ಚರ್ಚೆ ಹೆಚ್ಚಾಗಿದೆ: ರಿಷಬ್ ಶೆಟ್ಟಿ

ಸಾರಾಂಶ

ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಇತ್ತೀಚೆಗೆ ಆಯೋಜಿಸಿದ್ದ ಮೊದಲ ಮುಖಾಮುಖಿ ಸಂವಾದದಲ್ಲಿ ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿಭಾಗವಹಿಸಿ ‘ಕಾಂತಾರ’ ಸಿನಿಮಾ ಸೇರಿದಂತೆ ಹಲವು ವಿಷಯಗಳು ಹಂಚಿಕೊಂಡರು. ಅವರ ಮಾತುಗಳು ಇಲ್ಲಿವೆ.

- ಯಶಸ್ಸು ಮತ್ತು ಎಕ್ಸೈಟ್‌ಮೆಂಟ್‌ ಅನ್ನು ನಾನು ತಲೆಗೇರಿಸಿಕೊಳ್ಳುವುದಿಲ್ಲ. ಅದನ್ನು ಮನಸ್ಸಿನಲ್ಲಿಟ್ಟು ಸಂಭ್ರಮಿಸುತ್ತೇನೆ. ಜತೆಗೆ ಯಶಸ್ಸು ಎಂಬುದು ನನ್ನ ಪಾಲಿಗೆ ಕೇವಲ ಸಂಭ್ರಮವಾಗಿ ಉಳಿಯಲ್ಲ, ಅದೊಂದು ಜವಾಬ್ದಾರಿ ಎಂದುಕೊಳ್ಳುತ್ತೇನೆ.

- ಸಣ್ಣ ಚಿತ್ರಗಳಿಗೆ ಇವತ್ತು ಮಾರುಕಟ್ಟೆಅಗತ್ಯ ಇದೆ. ಆದರೆ, ಯಾವಾಗ, ಯಾವ ಹಂತದಲ್ಲಿ ಹೇಗೆ ಮಾರುಕಟ್ಟೆಮಾಡಬೇಕು ಎನ್ನುವ ತಿಳುವಳಿಕೆ, ಸ್ಪಷ್ಟತೆ ಕೂಡ ಮುಖ್ಯ. ನಾವು ‘ಕಾಂತಾರ’ ಚಿತ್ರ ಬಿಡುಗಡೆಗೆಗೂ ಮುನ್ನ ಯಾವುದೇ ರೀತಿಯ ಪ್ರಚಾರ ಮಾಡಲಿಲ್ಲ. ಸಿನಿಮಾ ಬಿಡುಗಡೆ ಆಗಿ ಜನ ಮೆಚ್ಚುಕೊಳ್ಳುತ್ತಿದ್ದಾರೆ ಎಂದಾಗ ಅದನ್ನು ದೊಡ್ಡ ಮಟ್ಟದಲ್ಲಿ ಜನರಿಗೆ ತಲುಪಿಸುವ ರೀತಿ ಕೆಲಸ ಮಾಡಿದ್ವಿ. ಒಳ್ಳೆಯ ಚಿತ್ರಗಳಿಗೆ ಇಂಥ ಪ್ರಚಾರದ ತಂತ್ರಗಳು ಬೇಕಿದೆ.

- ‘ಕಾಂತಾರ’ ಸಿನಿಮಾ ಒಳಗೊಂಡಿದ್ದ ಕಥಾ ವಸ್ತು ಕರಾವಳಿಯ ಭಾಗದ್ದಾಗಿದ್ದರೂ ಅದು ಒಂದು ನಿರ್ಧಿಷ್ಟಪ್ರದೇಶಕ್ಕೆ ಸೀಮಿತವಾಗದೆ ವಿಶಾಲ ಭಾರತಕ್ಕೆ ತಲುಪಿದ್ದರ ಹಿಂದೆ ಜನಪದ ಶಕ್ತಿ ಇದೆ. ಯಾಕೆಂದರೆ ‘ಕಾಂತಾರ’ ಚಿತ್ರದಲ್ಲಿ ಹೇಳಿದ ದೈವ, ಕಾಡು, ಜನರು, ಸಂಘರ್ಷ ಮತ್ತು ಸೌಹಾರ್ದತೆ ಜನಪದದ ಅಡಿಗಲ್ಲು. ಜನಪದವನ್ನು ಒಳಗೊಂಡಿದ್ದ ‘ಕಾಂತಾರ’ ಕೂಡ ಕರಾವಳಿಯ ಆಚೆಗೂ ಸದ್ದು ಮಾಡಿತು.

ಕಾಂತಾರ ತಂಡಕ್ಕೆ ಬಿಗ್ ರಿಲೀಫ್; ರಿಷಬ್ ಶೆಟ್ಟಿ, ಕಿರಗಂದೂರು ಬಂಧನಕ್ಕೆ ಸುಪ್ರೀಂ ಕೋರ್ಟ್ ತ

- ಜನರ ನಂಬಿಕೆ, ಆಚರಣೆ ಹಾಗೂ ವಿಚಾರಗಳಿಗೆ ಗೌರವ ಕೊಡಬೇಕು. ಜನರ ನಂಬಿಕೆಗಳು ಮೊದಲು ಗೆಲ್ಲಬೇಕು. ನನ್ನ ಪ್ರಕಾರ ನಮ್ಮ ‘ಕಾಂತಾರ’ ಸಿನಿಮಾ ಜನರ ನಂಬಿಕೆ ಮೇಲೆ ನಿಂತಿತ್ತು. ಅವರ ನಂಬಿಕೆ ಸುಳ್ಳಾಗದಂತೆ ನಾವು ಎಚ್ಚರಿಕೆ ವಹಿಸಿದ್ವಿ. ಹೀಗಾಗಿ ‘ಕಾಂತಾರ’ ಚಿತ್ರದ ಗೆಲುವು, ಜನರ ನಂಬಿಕೆಯ ಗೆಲುವು ಎಂದೇ ನಾನು ಭಾವಿಸುತ್ತೇನೆ.

- ಈ ಸಿನಿಮಾ ಬಂದ ಮೇಲೆ ದೈವದ ಮೇಲೆ ಇದ್ದ ಭಯ ಮತ್ತು ಭಕ್ತಿ ಜತೆಗೆ ಪ್ರೀತಿ ಹೆಚ್ಚಾಯಿತು. ದೈವವನ್ನು ಪ್ರೀತಿಯಿಂದ ನೋಡುವ ಮನಸ್ಸುಗಳ ಸಂಖ್ಯೆ ಹೆಚ್ಚಾಯಿತು. ಕರಾವಳಿಯ ಭಾಗದ ದೈವ ಶಕ್ತಿಗಳನ್ನು ಎಲ್ಲರು ನೋಡುವಂತಾಯಿತು.

- ನಾನು ಮಾಧ್ಯಮ ಸಂಸ್ಥೆ (ಕನ್ನಡಪ್ರಭ- ಸುವರ್ಣವಾಹಿನಿ)ಆಯೋಜಿಸಿದ್ದ ‘ಸೇವ್‌ ವೈಲ್ಡ್‌ ಲೈಫ್‌’ ಅಭಿಯಾನದ ಭಾಗವಾಗಿದ್ದೆ. ಕಾಡು, ಜನ ಮತ್ತು ವನ್ಯಜೀವಿ ಜಗತ್ತನ್ನು ತುಂಬಾ ಹತ್ತಿರದಿಂದ ನೋಡಿದೆ. ನನ್ನ ಪ್ರಕಾರ ದೈವ ಎಂದರೆ ಪ್ರಕೃತಿ. ಮನುಷ್ಯ ಪ್ರಕೃತಿಗೆ ಶರಣಾಗಬೇಕು. ಹಾಗೆ ಶರಣಾದರೆ ಸಿಗುವ ನೆಮ್ಮದಿ ಜೀವನ, ಸೌಹಾರ್ದತೆಯನ್ನು ಅನುಭವಿಸಬಹುದು.

- ‘ಕಾಂತಾರ’ ಸಿನಿಮಾ ಬಂದ ಮೇಲೆ ದೈವ ಆರಾಧನೆ, ನಂಬಿಕೆ, ಮೇಲು- ಕೀಳು ಇತ್ಯಾದಿಗಳ ಸುತ್ತ ತುಂಬಾ ಚರ್ಚೆಗಳು ಆಗುತ್ತಿವೆ ನಿಜ. ನಾನು ಅದನ್ನು ಸಮಸ್ಯೆ, ವಿವಾದ ಅಂತ ತೆಗೆದುಕೊಳ್ಳುವುದಿಲ್ಲ. ಅವರವರ ಅಭಿಪ್ರಾಯ ಮತ್ತು ಚರ್ಚೆ ಅಂತಲೇ ಭಾವಿಸುತ್ತೇನೆ. ಹಾಗೆ ನೋಡಿದರೆ ನಾನು ಹೇಳಿದ ಈ ವಿಚಾರಗಳು ಶಿವರಾಮ ಕಾಂತರು ಬರೆದ ‘ಸೋಮನ ದುಡಿ’ ಪುಸ್ತಕದಲ್ಲಿದೆ. ನಾನು ಹೊಸದಾಗಿ ಏನನ್ನೂ ಹೇಳಿಲ್ಲ. 50 ವರ್ಷಗಳ ಹಿಂದೆ ‘ಸಂಕಲ್ಪ’ ಸಿನಿಮಾ ಕೂಡ ಇಂಥದ್ದೇ ಚರ್ಚೆಗಳನ್ನು ಹುಟ್ಟು ಹಾಕಿದ್ದನ್ನು ನೆನಪಿಸಿಕೊಳ್ಳುತ್ತೇನೆ. ನನ್ನ ಪ್ರಕಾರ ‘ಕಾಂತಾರ’ ರೀಜಿನಲ್‌ ಕನ್ನಡದ ಇಂಡಿಯನ್‌ ಸಿನಿಮಾ.

- ಸಿನಿಮಾದಿಂದ ನನಗೆ ಸಿಕ್ಕ ಈ ಯಶಸ್ಸಿನಿಂದ ನಾನು ರಾಜಕೀಯಕ್ಕೆ ಹೋಗುತ್ತಿದ್ದೇನೆ ಎಂಬುದು ಸುಳ್ಳು. ಕೆಲ ಮಾಧ್ಯಮಗಳಲ್ಲಿ ನನಗೆ ಮೂರು ಕ್ಷೇತ್ರದ ಟಿಕೆಟ್‌ ಕೂಡ ಕೊಟ್ಟಿದ್ದರು. ಅದೆಲ್ಲವೂ ಊಹಾಪೋಹಗಳು. ನಾನು ಈ ಸಮಾಜದ ಭಾಗ. ನನ್ನ ನಾಲ್ಕು ಜನ ಕರೆಯುತ್ತಾರೆ. ನಾನು ಹೋಗುವ ಕಡೆ ಒಳ್ಳೆಯ ಕೆಲಸ ಆಗುತ್ತದೆ ಎಂದರೆ ನಾನು ಅಂಥ ವೇದಿಕೆ, ಕಾರ್ಯಕ್ರಮಗಳಿಗೆ ಹೋಗುತ್ತೇನೆ. ಅಷ್ಟುಮಾತ್ರಕ್ಕೆ ನನ್ನ ಯಾವುದೋ ರಾಜಕೀಯ, ಧರ್ಮದ ವೇದಿಕೆಗಳಿಗೆ ಬ್ರಾಂಡ್‌ ಮಾಡುವುದು ಬೇಡ.

ಅರಣ್ಯ, ವನ್ಯಜೀವಿ ಉಳಿದರೆ ಮಾತ್ರ ಮನುಕುಲ ಉಳಿವು: ರಿಷಬ್‌ ಶೆಟ್ಟಿ

- ಸಿನಿಮಾ ಕಲಾವಿದರು ಸಮಾಜ, ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡಬಾರದು. ಸಿನಿಮಾ ಮಾಡಿಕೊಂಡು ಇರಿ ಎನ್ನುವವರಿಗೆ ನಾನು ಹೇಳುವುದು ಇಷ್ಟೆ, ನಾವು ಒಂದು ಸಿನಿಮಾ ಮಾಡಿದರೆ ಒಂದಿಷ್ಟುಮಂದಿಗೆ ಕೆಲಸ ಸಿಗುತ್ತದೆ, ಆರ್ಥಿಕ ವಹಿವಾಟು ನಡೆಯುತ್ತದೆ. ಸರ್ಕಾರಗಳಿಗೆ ತೆರಿಗೆ ಸಲ್ಲಿಸುತ್ತೇವೆ. ಕಲಾವಿದ ಕೂಡ ತೆರಿಗೆದಾರ, ಉದ್ಯೋಗದಾತ. ಹೀಗಾಗಿ ಆತ ಮಾತನಾಡಬಾರದು ಎಂದರೆ ಹೇಗೆ? ಮಾತನಾಡುವ, ಅಭಿಪ್ರಾಯ ಹೇಳುವ, ಪ್ರಶ್ನೆ ಮಾಡುವ ಹಕ್ಕು ಮತ್ತು ಸ್ವಾತಂತ್ರ್ಯ ಕಲಾವಿದನಿಗೂ ಇದೆ ಎಂಬುದೇ ನನ್ನ ಭಾವನೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?