ಸೂರ್ಯವಂಶ ಖ್ಯಾತಿಯ ನಟ ಲಕ್ಷ್ಮಣ್‌ ಇನ್ನಿಲ್ಲ

By Vaishnavi ChandrashekarFirst Published Jan 23, 2023, 9:46 AM IST
Highlights

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ ಲಕ್ಷ್ಮಣ್‌ ಇಹಲೋಕ ತ್ಯಜಿಸಿದ್ದಾರೆ. 

ಕನ್ನಡ ಚಿತ್ರರಂಗದಲ್ಲಿ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ನಟ ಲಕ್ಷ್ಮಣ್ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.ಇಂದು ಬೆಳಗಿನ ಜಾವ 4 ಗಂಟೆಗೆ ಅವರಿಗೆ ಹೃದಯಾಘಾತವಾಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೂಡಲಪಾಳ್ಯದಲ್ಲಿರುವ ನಿವಾಸದಲ್ಲಿ ಲಕ್ಷ್ಮಣ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಹಲವು ದಿಗ್ಗಜ ನಟರೊಂದಿಗೆ ಲಕ್ಷ್ಮಣ್ ಅಭಿನಯಿಸಿದ್ದಾರೆ. 

'ನನ್ನ ತಂದೆ ಅವರಿಗೆ 76ನೇ ವಯಸ್ಸಿಗೆ ಸ್ಟ್ರೋಕ್ ಆಗಿತ್ತು. ಅಗ ನನಗೆ ತಾಯಿ ತಂದೆ ಅಂದ್ರೆ ಏನು? ಅವರ ಸ್ಥಾನ ಎಂಥದ್ದು? ಮಕ್ಕಳಾಗಿ ನಾವು ಅವರಿಗೆ ಏನು ಮಾಡಬೇಕು? ಅನ್ನೋ ಕಲ್ಪನೆ ಇರಲಿಲ್ಲ. ಫ್ಯಾಕ್ಟರಿಗೆ ಹೋಗು... ಶೂಟಿಂಗ್‌ಗೆ ಹೋಗು... ಇದೇ ರೀತಿ ಹುಡುಗಾಟ ಮಾಡುತ್ತಿದ್ದೆ. ಕೈಗೆ ಬರುತ್ತಿದ್ದ ಸಂಬಳದಲ್ಲಿ ಒಂದಿಷ್ಟು ಅಂತ ಅವರಿಗೆ ಕೊಡುತ್ತಿದ್ದೆ. ಮನೆ ವ್ಯವಹಾರ ಮತ್ತು  ತಾಯಿಯನ್ನು ನೋಡಿಕೊಂಡು ಇದ್ದು ಬಿಡುತ್ತಿದ್ದೆ. ನನ್ನ ತಂಗಿ ನಮ್ಮ ತಂದೆಯವರ ಅಪಾರ ಸೇವೆ ಮಾಡಿದ್ದಾಳೆ. ಒಂದು ದಿನ ಅಪ್ಪ ನನ್ನನ್ನ ಕರೆದು ನನ್ನ ಕೈ ಹಿಡಿದು ಅವರ ಎದೆ ಮೇಲೆ ಇಟ್ಟು, ನನ್ನ ಸೋದರ ಮಾವನ ಮಗಳನ್ನು ಮದುವೆ ಆಗಬೇಕು ಎಂದರು. ಅಷ್ಟರಲ್ಲಿ ನಮ್ಮ ಕುಟುಂಬದಲ್ಲಿ ಅವರ ಜೊತೆ ಮದುವೆ ಆಗಬೇಕು ಎಂದು ತೀರ್ಮಾನ ಆಗಿತ್ತಂತೆ. ಆ ಕ್ಷಣ ನನಗೆ ಅಳು ಬಂತು. ಏನೂ ಚಿಂತೆ ಮಾಡಬೇಡಿ ಆ ಹುಡುಗಿನೇ ಮದುವೆ ಆಗುತ್ತೀನಿ ಎಂದು ಹೇಳಿದೆ. ತಂದೆ ಮುಖದಲ್ಲಿ ಬದಲಾವಣೆಗಳನ್ನು ನೋಡಿದೆ. ಸಂಜೆ 7 ಗಂಟೆಗೆ ಕರೆ ಮಾಡಿ ತಂದೆ ತೀರಿಕೊಂಡರು ಎಂದು ಫೋನ್ ಬಂತು.' ಎಂದು ಖಾಸಗಿ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಜೀವನದ ಬಗ್ಗೆ ಲಕ್ಷ್ಮಣ್ ಮಾತನಾಡಿದ್ದರು. 

600 ಚಿತ್ರಗಳಲ್ಲಿ ನಟಿಸಿರುವ ನಟ ಚಲಪತಿ ರಾವ್ ಹೃಧಯಾಘಾತದಿಂದ ನಿಧನ

'ನನ್ನ ಸೋದರ ಮಾವನ ಮಗಳನ್ನು ಮದುವೆ ಮಾಡಿಕೊಂಡೆ. ನನಗೆ ಮೂರು ಜನ ಮಕ್ಕಳು. ನನ್ನ ಮಗ ನೌಕಾಪಡೆಯಲ್ಲಿ ಮೇಜರ್, ಮಗಳು ತ್ರಿಬಲ್ ಗ್ರಾಜುಯೇಟ್, ನನ್ನ ಅಳಿಯ ಆರ್ಥೋಪೆಡಿಕ್ ಡಾಕ್ಟರ್, ಕೊನೆ ಮಗ ಡಿಪ್ಲೊಮಾ ಮಾಡಿದ್ದಾನೆ. ಮಕ್ಕಳಿಗೆ ನಾನು ಏನೂ ಮಾಡದಿದ್ದರೂ ನನ್ನ ಕಡೆಯಿಂದ ಒಳ್ಳೆ ವಿದ್ಯಾಭ್ಯಾಸ ಕೊಡಿಸಿರುವೆ. ಅವರಿಗೆ ಅದೇ ಆಸ್ತಿ ಅಂತ ಮಾಡಿದೆ, ಅದೇ ಆಸ್ತಿಯಿಂದ ಒಳ್ಳೆ ಉದ್ಯೋಗದಲ್ಲಿದ್ದಾರೆ. ನನ್ನ ಇಡೀ ಕುಟುಂಬ ಚೆನ್ನಾಗಿದೆ ಅಂದ್ರೆ ನನ್ನ ತಂದೆ ತಾಯಿ ಆಶೀರ್ವಾದ' ಎಂದು ಲಕ್ಷ್ಮಣ್ ಹೇಳಿದ್ದರು. 

RIP chetana raj ಈ ರೀತಿಯ ಸರ್ಜರಿ ಯಾರೂ ಮಾಡಿಸಿಕೊಳ್ಳಬೇಡಿ, ಸಾವಿಗೀಡಾದ ಚೇತನಾ ಸ್ನೇಹಿತನ ಮನವಿ!

ಲಕ್ಷ್ಮಣ್ ಮೂಲತಃ ಬೆಂಗಳೂರಿನವರಾಗಿದ್ದು. ಲಕ್ಷ್ಮಣ್ ಜೊತೆ ಹುಟ್ಟಿದ್ದವರು ಐವರು ಸಹೋದರಿಯರು ಮತ್ತು ಇಬ್ಬರು ಸಹೋದರರು. 'ನಾನು ಎಸ್‌ಎಸ್‌ಎಲ್‌ಸಿ ಮಾತ್ರ ಓದಿರುವುದು. ನಾವು ಬಡ ಕುಟುಂಬದಿಂದ ಬಂದವರು, ಅಕ್ಕಂದಿರ ಮದುವೆ ಆಗಬೇಕಿತ್ತು ಆ ಸಮಯದಲ್ಲಿ ತಂದೆ ನಿವೃತ್ತಿ ಪಡೆದರು. ಸಣ್ಣ ಕಾರ್ಖಾನೆಯಲ್ಲಿ ಕೆಲಸ ಪಡೆದುಕೊಂಡು ತಿಂಗಳಿಗೆ 15 ರೂಪಾಯಿ ಸಂಬಳ ಪಡೆದುಕೊಳ್ಳುತ್ತಿದ್ದೆ. ಆ 15 ರೂಪಾಯಿಯನ್ನು ತಾಯಿ ಕೈಗೆ ಕೊಡುತ್ತಿದ್ದೆ. ತಾಯಿ 1 ರೂಪಾಯಿ ಕೊಡುತ್ತಿದ್ದರು. ಒಂದು ವಾರ ಜೀವನ ನಡೆಸುತ್ತಿದ್ದೆ' ಎಂದಿದ್ದರು ಲಕ್ಷ್ಮಣ್. 

click me!