ಡಿ.15ಕ್ಕೆ ಡಾ. ಶಿವಮೊಗ್ಗ ಸುಬ್ಬಣ್ಣ ಪ್ರತಿಷ್ಠಾನದ ಉದ್ಘಾಟನೆ ಹಿನ್ನೆಲೆಯಲ್ಲಿ ಸುಬ್ಬಣ್ಣ ಅವರ ನೆನಪುಗಳನ್ನು ಹಂಚಿಕೊಂಡಿದ್ದಾರೆ ಖ್ಯಾತ ಗಾಯಕಿ ಅರ್ಚನಾ ಉಡುಪ.
ಅರ್ಚನಾ ಉಡುಪ
ಆಗಿನ್ನೂ ಹೊಸದಾಗಿ ಬೆಂಗಳೂರಿಗೆ ಕಾಲಿಟ್ಟಸಮಯ. ನನಗೆ ಎಂಟೋ ಒಂಭತ್ತೋ ವರ್ಷವಿರಬಹುದು. ಎಲ್ಲವನ್ನೂ ಆಶ್ವರ್ಯ, ಬೆರಗುಗಣ್ಣಿನಿಂದ ನೋಡಿ ಸಂಭ್ರಮಿಸುತ್ತಿದ್ದೆ. ಒಂದು ದಿನ ರವೀಂದ್ರ ಕಲಾಕ್ಷೇತ್ರದಲ್ಲೊಂದು ದೊಡ್ಡ ಕಾರ್ಯಕ್ರಮ. ನನ್ನ ತಂದೆ ಶ್ರೀನಿವಾಸ ಉಡುಪರು ಕೂಡ ಹಾಡಬೇಕಿತ್ತು. ನನ್ನನ್ನೂ ಕರೆದೊಯ್ದಿದ್ದರು. ಅಲ್ಲಿ ಒಬ್ಬರಿಗಿಂತ ಒಬ್ಬರು ಖ್ಯಾತನಾಮರು ಮೆರೆದಿದ್ದರು. ಅವರೆಲ್ಲರ ನಡುವೆ ನನಗೆ ಎದ್ದು ಕಾಣಿಸಿದ್ದು ಬೆಳ್ಳಗೆ ಫಳಫಳನೆ ಹೊಳೆಯುತ್ತಿದ್ದ ‘ಸುಬ್ಬಣ್ಣಜ್ಜ’!
ನನ್ನ ತಂದೆಯ ತಂದೆ ಹಾಗೂ ಅವರ ತಾಯಿ ಇಬ್ಬರೂ ಸೋದರ, ಸೋದರಿಯಾಗಿದ್ದರಿಂದ ನಾನು ಮೊದಲಿಂದಲೂ ಸುಬ್ಬಣ್ಣನವರಿಗೆ ಸುಬ್ಬಣ್ಣಜ್ಜ ಎಂದೇ ಕರೆಯುತ್ತಿದ್ದದ್ದು. ಕಂಡ ಕೂಡಲೇ ಓಡಿ ಹೋಗಿ ‘ನಮಸ್ತೆ ಸುಬ್ಬಣ್ಣಜ್ಜ’ ಎಂದೆ. ಅವರು ಅದ್ಯಾವ ಒತ್ತಡದಲ್ಲಿದ್ದರೋ ಏನೋ, ಕೋಪದಿಂದ, ‘ನನಗೆ ಅಜ್ಜ ಎಂದು ಕರೆಯಬೇಡ’ ಎಂದು ಜೋರು ಮಾಡಿದರು. ನಾನು ಕಕ್ಕಾಬಿಕ್ಕಿಯಾಗಿ, ‘ಇನ್ನೇನು ಕರೆಯಲಿ?’ ಎಂದೆ. ಅದಕ್ಕವರು ‘ಸುಬ್ಬಣ್ಣ ಎನ್ನು ಸಾಕು’ ಎಂದರು. ಅಷ್ಟುಹಿರಿಯರನ್ನು ಹೆಸರು ಹಿಡಿದು ಹೇಗೆ ಕರೆಯಲಿ ಎಂದು ತಿಳಿಯದೇ ನಂತರದ ದಿನಗಳಲ್ಲಿ ಎಲ್ಲೇ ಸಿಕ್ಕಿದರೂ ಬಾಯಿ ಮುಚ್ಚಿಕೊಂಡು ತೆಪ್ಪಗೆ ಪಕ್ಕಕ್ಕೆ ಸರಿದುಬಿಡುತ್ತಿದ್ದೆ. ಹೀಗೆ ಹಲವಾರು ಸಲ ನಡೆದ ಮೇಲೆ ಒಂದು ದಿನ ಮತ್ತೆ ನನ್ನನ್ನು ಕರೆದು ಗದರಿದರು. ‘ನಾನೊಬ್ಬ ಹಿರಿಯ. ಎದುರಿಗೆ ಸಿಕ್ಕರೂ ಮಾತಾಡದೇ ಹೋಗುತ್ತೀಯಾ? ನಿನಗೆ ಸೊಕ್ಕು’ ಎಂದರು. ನಾನು ಕಣ್ಣಲ್ಲಿ ನೀರು ತುಂಬಿಕೊಂಡು, ‘ಸುಬ್ಬಣ್ಣಜ್ಜ ಎಂದರೆ ಬೈಯ್ಯುತ್ತೀರಿ. ನಿಮ್ಮನ್ನು ಸುಬ್ಬಣ್ಣ ಎಂದು ಹೇಗೆ ಕರೆಯಲಿ? ನೋಡಿದವರು ನನ್ನನ್ನು ತಲೆ ಹರಟೆ ಎನ್ನುತ್ತಾರೆ’ ಎಂದೆ. ಕೂಡಲೇ ನನ್ನನ್ನು ತಬ್ಬಿಕೊಂಡು ಮುದ್ದು ಮಾಡಿ, ‘ಅಯ್ಯೋ ಪುಟ್ಟೀ, ನಿಂಗೇನು ಇಷ್ಟವೋ ಹಾಗೇ ಕರಿ’ ಎಂದರು.
ಈ ಘಟನೆ ನಡೆದ ಹಲವು ವರ್ಷಗಳ ನಂತರ ನಾನು ಅವರ ಮನೆಗೇ ಸೊಸೆಯಾಗಿ ಕಾಲಿಟ್ಟೆ. ಚಿಕ್ಕವರಾಗಿದ್ದಾಗಿನಿಂದಲೂ ಅವರಿಗೆ ನನ್ನೂರು, ಅವರ ತಾಯಿಯ ತವರು ಮನೆ ನಗರ ಎಂದರೆ ಅತಿಯಾದ ಪ್ರೀತಿ, ಅಕ್ಕರೆ, ವ್ಯಾಮೋಹ. ಹಾಗಾಗಿ ಎಲ್ಲರ ಹತ್ತಿರವೂ ನಗರದ ಕುಡಿ ಬಂದು ನನ್ನ ಮನೆ ಸೇರಿದೆ ಎಂದು ಪದೇ ಪದೇ ಹೇಳಿ ಭಾವುಕರಾಗುತ್ತಿದ್ದರು. ಗಂಡನ ಮನೆ ಸೇರಿದ ದಿನವೇ ಸುಬ್ಬಣ್ಣನವರನ್ನು ‘ಮಾವಾ’ ಎಂದು ಕರೆದು ಮತ್ತೊಮ್ಮೆ ಬೈಸಿಕೊಂಡಿದ್ದು ನೆನೆಸಿಕೊಂಡರೆ ನಗು ಬರುತ್ತದೆ. ಅವತ್ತು ಹೆದರಿಕೆಯಾಗಿತ್ತು. ‘ಮಾವ ಅಂತ ಕರೀಬೇಡ, ಡ್ಯಾಡಿ ಅಂತ ಕರಿ’ ಎಂದಿದ್ದರು. ಅವತ್ತಿನಿಂದಲೂ ನಾನು ಅವರನ್ನು ಡ್ಯಾಡೀ ಅಂತಲೇ ಕರೆದಿದ್ದು, ಅವರು ನನ್ನನ್ನು ಪುಟ್ಟಿಅಂತಲೇ ಕರೆದಿದ್ದು. ಒಂದು ಘಳಿಗೆ ಕೋಪಿಸಿಕೊಂಡು ಮರುಘಳಿಗೆಯೇ ಅವರೇ ಬಂದು ಕ್ಷಮೆ ಕೇಳುತ್ತಿದ್ದಿದ್ದು ಅವರ ಮಗುವಿನಂಥ ಮನಸ್ಸಿಗೆ ಒಂದು ನಿದರ್ಶನ. ಕೆಟ್ಟದ್ದೆಲ್ಲವನ್ನೂ ಮನಸಿನಿಂದ ತೆಗೆದು ಹಾಕುತ್ತಿದ್ದದ್ದಕ್ಕೋ ಏನೋ ಅವರು ಕೊನೆಯವರೆಗೂ ಆರೋಗ್ಯವಾಗಿದ್ದರು. ಯಾರಾದರೂ ನಿಮಗೆ ಬಿಪಿ ಇದೆಯೇ ಎಂದು ಕೇಳಿದರೆ ಜೋರಾಗಿ ನಕ್ಕು ನಾನು ಬೇರೆಯವರಿಗೆ ಬಿಪಿ ಬರಿಸುತ್ತೇನೆ ಅಷ್ಟೇ ಎನ್ನುತ್ತಿದ್ದರು. ನಾನು ಯಾವಾಗಲಾದರೂ ಅಡುಗೆ ಮಾಡಿಬಿಟ್ಟರೆ ಹೊಟ್ಟೆತುಂಬಾ ತಿಂದು, ಹತ್ತಾರು ಬಾರಿ ಹೊಗಳಿ ನನ್ನ ಕೈಗೆ ಮುತ್ತು ಕೊಡುತ್ತಿದ್ದರು.
ಯಾವತ್ತೂ ಯಾವ ಪ್ರಶಸ್ತಿಗಳ ಹಿಂದಕ್ಕೂ ಓಡದೇ, ಜನರ ಪ್ರೀತಿ, ಚಪ್ಪಾಳೆಯೇ ನನಗೆ ದೊಡ್ಡ ಪ್ರಶಸ್ತಿ ಎನ್ನುತ್ತಿದ್ದ ನನ್ನ ಮಾವನವರನ್ನು ಪ್ರಶಸ್ತಿಗಳೇ ಹುಡುಕಿಕೊಂಡು ಬರುತ್ತಿದ್ದವು. ಜನರ ಪ್ರೀತಿ- ಗೌರವವನ್ನು ಅಪಾರವಾಗಿ ಸಂಪಾದಿಸಿ ತಮ್ಮ ಹಾಡಿನಲ್ಲೂ ನಡತೆಯಲ್ಲೂ ಘನತೆಯನ್ನು ಮೆರೆದ ಸುಬ್ಬಣ್ಣನವರು ಕೊನೆಯ ಗಳಿಗೆಯಲ್ಲೂ ಸಣ್ಣ ಮಗುವಿನಂತೆ, ‘ಪುಟ್ಟೀ ಪುಟ್ಟೀ, ಯಾಕೋ ಸಂಕಟ ಆಗ್ತಾ ಇದೆ’ ಎಂದು ನನ್ನನ್ನೇ ಕರೆದು ಹೇಳುತ್ತಿದ್ದದ್ದು ಮನಸಿನಲ್ಲಿ ಹಾಗೇ ಉಳಿದಿದೆ. ಹೆಚ್ಚು ನೋವು ಅನುಭವಿಸದೇ ಸುಖವಾಗಿ ಇಹಲೋಕದ ಪ್ರಯಾಣ ಮುಗಿಸಿದ್ದನ್ನು ನೋಡಿದಾಗ ನನಗೆ ನೆನಪಾದ ಮಾತು -‘ಮನುಷ್ಯ ಹೇಗೆ ಬದುಕಿದ್ದ ಎಂಬುದನ್ನು ಆತನ ಸಾವಿನಲ್ಲಿ ನೋಡಬಹುದು’ ಎಂಬುವುದು.
*
ಈಗ ಅವರ ಮುದ್ದಿನ ಮಕ್ಕಳಾದ ಬಾಗೇಶ್ರೀ ಹಾಗೂ ಶ್ರೀರಂಗ ಅವರ ಜೊತೆಗೂಡಿ ‘ಡಾ. ಶಿವಮೊಗ್ಗ ಸುಬ್ಬಣ್ಣ ಪ್ರತಿಷ್ಠಾನ’ವನ್ನು ಹೆಮ್ಮೆಯಿಂದ ಪ್ರಾರಂಭಿಸುತ್ತಿದ್ದೇವೆ. ಇದರ ಮೂಲಕ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರತಿವರ್ಷವೂ ಕರ್ನಾಟಕದಾದ್ಯಂತ ಹಮ್ಮಿಕೊಳ್ಳುತ್ತೇವೆ. ಸಮಾಜಮುಖಿ ಕೆಲಸಗಳನ್ನು ಮಾಡುವ, ಪ್ರತಿಭೆಗಳನ್ನು ಬೆಳೆಸುವ ಉದ್ದೇಶ ಹೊಂದಿದ್ದೇವೆ. ಸಂಗೀತಕ್ಕಾಗಿಯೇ ಬದುಕಿದ ಸುಬ್ಬಣ್ಣನವರ ಹೆಸರು ಹಾಗೂ ಅವರ ಅಸಂಖ್ಯಾತ ಹಾಡುಗಳು ಮುಂಬರುವ ಪೀಳಿಗೆಯ ಗಾಯಕ ಗಾಯಕಿಯರ ಕಂಠದಲ್ಲಿ ಮಾರ್ದನಿಸಲಿ ಎಂಬುದು ನಮ್ಮಾಸೆ.
ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ, ಕನ್ನಡದಲ್ಲಿ ಟ್ವೀಟ್!
ಈ ತಿಂಗಳ 15 (ಡಿ.15)ರಂದು ಪ್ರತಿಷ್ಠಾನದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದಾರೆ. ಬೆಂಗಳೂರಿನ ಪುಟ್ಟಣ್ಣ ಚೆಟ್ಟಿಪುರಭವನದಲ್ಲಿ ಸಂಜೆ 5 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಸಚಿವ ಆರ್ ಅಶೋಕ್, ಹಿರಿಯ ಸಾಹಿತಿಗಳಾದ ಡಾ ಚಂದ್ರಶೇಖರ ಕಂಬಾರ, ಡಾ ಎಚ್ ಎಸ್ ವೆಂಕಟೇಶಮೂರ್ತಿ, ಲಹರಿ ಸಂಸ್ಥೆಯ ಮುಖ್ಯಸ್ಥ ಲಹರಿ ವೇಲು ಮುಖ್ಯ ಅತಿಥಿಗಳಾಗಿರುತ್ತಾರೆ. ನಾಡಿನ ಪ್ರಖ್ಯಾತ ಗಾಯಕರು ಸುಬ್ಬಣ್ಣ ಅವರ ಖ್ಯಾತ ಹಾಡುಗಳನ್ನು ಹಾಡುವ ಮೂಲಕ ಅವರಿಗೆ ಗೀತ ನಮನ ಸಲ್ಲಿಸಲಿದ್ದಾರೆ. ಸಂಗೀತ ಪ್ರೇಮಿಗಳೆಲ್ಲ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂಬುದು ನಮ್ಮೆಲ್ಲರ ಕೋರಿಕೆ.