'ಸಿಟಿ ಲೈಟ್ಸ್' ಟ್ರೇಲರ್‌ನಲ್ಲಿ ಏನಿದೆ?: ವಿನಯ್ ಲುಕ್, ದುನಿಯಾ ವಿಜಯ್ ಬಗ್ಗೆ ಶಿವಣ್ಣ ಹೀಗಾ ಹೇಳೋದು!

Published : Sep 13, 2026, 04:00 PM IST
City Lights

ಸಾರಾಂಶ

ದುನಿಯಾ ವಿಜಯ್ ನಿರ್ದೇಶನದ ‘ಸಿಟಿ ಲೈಟ್ಸ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ವಿನಯ್ ರಾಜ್‌ಕುಮಾರ್ ಅವರ ರಗಡ್ ಲುಕ್ ಗಮನ ಸೆಳೆಯುತ್ತಿದೆ. ನಟ ಶಿವರಾಜ್‌ಕುಮಾರ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಹಾಡುಗಳ ಮೂಲಕ ಈಗಾಗಲೇ ಗಮನ ಸೆಳೆದಿದ್ದ ‘ಸಿಟಿ ಲೈಟ್ಸ್’ ಸಿನಿಮಾ ಇದೀಗ ಟ್ರೇಲರ್ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದೆ. ದುನಿಯಾ ವಿಜಯ್ ನಿರ್ದೇಶನದ ಈ ಚಿತ್ರದ ಟ್ರೇಲರ್‌ನ್ನು ನಟ ಶಿವರಾಜ್‌ಕುಮಾರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಟ್ರೇಲರ್‌ನಲ್ಲಿ ವಿನಯ್ ರಾಜ್‌ಕುಮಾರ್ ಕಾಣಿಸಿಕೊಂಡಿರುವ ರಗಡ್ ಲುಕ್, ಮಾಸ್ ಅವತಾರ ಹಾಗೂ ಮೋನಿಷಾ ವಿಜಯ್ ಕುಮಾರ್ ಅವರ ಅಭಿನಯದ ಝಲಕ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಸೆಪ್ಟೆಂಬರ್ 18ರಂದು ‘ಸಿಟಿ ಲೈಟ್ಸ್’ ಸಿನಿಮಾ ತೆರೆಗೆ ಬರಲಿದೆ. ದುನಿಯಾ ವಿಜಯ್ ಅವರ ಪುತ್ರಿ ಮೋನಿಷಾ ವಿಜಯ್ ಕುಮಾರ್ ಈ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ವಿನಯ್ ರಾಜ್‌ಕುಮಾರ್ ಅವರೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಉಮಾಶ್ರೀ ಸೇರಿದಂತೆ ಹಲವು ಕಲಾವಿದರು ಸಿನಿಮಾದ ಭಾಗವಾಗಿದ್ದಾರೆ.

ವಿನಯ್‌ಗೆ ಹೊಸ ಅವತಾರ!

‘ಸಿಟಿ ಲೈಟ್ಸ್’ ಟ್ರೇಲರ್‌ನ ಪ್ರಮುಖ ಆಕರ್ಷಣೆ ವಿನಯ್ ರಾಜ್‌ಕುಮಾರ್ ಅವರ ಪಾತ್ರ. ಈ ಹಿಂದೆ ಕಾಣಿಸಿಕೊಂಡಿದ್ದ ವಿನಯ್‌ಗಿಂತ ಈ ಸಿನಿಮಾದಲ್ಲಿ ಅವರ ಲುಕ್ ಹಾಗೂ ಪಾತ್ರ ಸಂಪೂರ್ಣ ವಿಭಿನ್ನವಾಗಿ ಕಾಣಿಸುತ್ತಿದೆ. ರಕ್ತಪಾತ, ಭೂಗತ ಜಗತ್ತು, ಲಾಂಗ್-ಮಚ್ಚುಗಳ ಝಲಕ್ ನಡುವೆ ವಿನಯ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್‌ನಲ್ಲಿ ವಿನಯ್ ಅವರ ಆ್ಯಕ್ಷನ್ ಮತ್ತು ಖಡಕ್ ಡೈಲಾಗ್ ಡೆಲಿವರಿ ಗಮನ ಸೆಳೆಯುತ್ತದೆ.

ಪಾತ್ರಕ್ಕಾಗಿ ಅವರು ತಮ್ಮನ್ನು ಸಂಪೂರ್ಣವಾಗಿ ಬದಲಿಸಿಕೊಂಡಿರುವಂತೆ ಕಾಣುತ್ತಿದ್ದು, ಈ ಸಿನಿಮಾದಲ್ಲಿ ಅವರ ಅಭಿನಯ ಹೇಗಿರಲಿದೆ ಎಂಬ ಕುತೂಹಲ ಮೂಡಿಸಿದೆ. ಅಷ್ಟೇ ಅಲ್ಲ, ಟ್ರೇಲರ್‌ನಲ್ಲಿ ಅಣ್ಣಾವ್ರ ಕುಟುಂಬದ ಹೆಸರು ಪ್ರಸ್ತಾಪವಾಗುವ ಕ್ಷಣವೂ ವಿಶೇಷ ಗಮನ ಸೆಳೆಯುತ್ತದೆ. ವಿನಯ್ ರಾಜ್‌ಕುಮಾರ್ ಹೆಸರಿನ ಜೊತೆಗೆ ‘ಸ್ಯಾಂಡಲ್‌ವುಡ್ ಮಯೂರ’ ಎಂಬ ಹೊಸ ಬಿರುದು ಕೂಡ ಕೇಳಿಬರುತ್ತಿದೆ.

ಮೊದಲ ಸಿನಿಮಾದಲ್ಲೇ ಮೋನಿಷಾ ಖಡಕ್!

ದುನಿಯಾ ವಿಜಯ್ ಅವರ ಪುತ್ರಿ ಮೋನಿಷಾ ವಿಜಯ್ ಕುಮಾರ್ ಅವರಿಗೆ ‘ಸಿಟಿ ಲೈಟ್ಸ್’ ಮೊದಲ ಸಿನಿಮಾ. ಚೊಚ್ಚಲ ಚಿತ್ರದಲ್ಲೇ ಗ್ಲಾಮರ್‌ಗಿಂತ ಪಾತ್ರಕ್ಕೆ ಆದ್ಯತೆ ನೀಡಿರುವುದು ಟ್ರೇಲರ್‌ನಲ್ಲಿ ಸ್ಪಷ್ಟವಾಗುತ್ತದೆ. ಸಾಮಾನ್ಯ ಹೆಣ್ಣುಮಗಳ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮೋನಿಷಾ, ಹಲವು ದೃಶ್ಯಗಳಲ್ಲಿ ತಮ್ಮ ಅಭಿನಯದ ಛಾಪು ಮೂಡಿಸಿದ್ದಾರೆ. ಅದರಲ್ಲೂ ಸಿಟ್ಟಿನಿಂದ ಡೈಲಾಗ್ ಹೇಳುವ ದೃಶ್ಯದಲ್ಲಿ ಅವರ ಖಡಕ್ ಅಭಿನಯ ಗಮನ ಸೆಳೆಯುತ್ತದೆ. ಮೊದಲ ಸಿನಿಮಾದಲ್ಲೇ ಇಂತಹ ಪಾತ್ರವನ್ನು ಅವರು ಹೇಗೆ ನಿಭಾಯಿಸಿದ್ದಾರೆ ಎಂಬುದಕ್ಕೆ ಟ್ರೇಲರ್ ಒಂದು ಝಲಕ್ ನೀಡಿದೆ.

ಶಿವಣ್ಣ ಮೆಚ್ಚಿದ ‘ಸಿಟಿ ಲೈಟ್ಸ್’

ಟ್ರೇಲರ್ ವೀಕ್ಷಿಸಿದ ಬಳಿಕ ಶಿವರಾಜ್‌ಕುಮಾರ್ ಅವರು ಚಿತ್ರತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭೂಗತ ಜಗತ್ತಿನ ಸಿನಿಮಾಗಳಿಗೆ ತಮ್ಮ ಹೆಸರು ಕೇಳಿಬರುವಂತೆಯೇ, ಇನ್ಮುಂದೆ ಇಂತಹ ಸಿನಿಮಾಗಳ ವಿಷಯ ಬಂದಾಗ ದುನಿಯಾ ವಿಜಯ್ ಅವರ ಹೆಸರೂ ನೆನಪಾಗಲಿದೆ ಎಂದು ಶಿವಣ್ಣ ಹೇಳಿದ್ದಾರೆ. ವಿನಯ್ ತಮ್ಮ ಸಂಬಂಧಿಕ ಎಂಬ ಕಾರಣಕ್ಕೆ ಮಾತ್ರ ತಾವು ಬೆಂಬಲಿಸುತ್ತಿಲ್ಲ, ಅವರಲ್ಲಿ ಪ್ರತಿಭೆ ಇರುವುದರಿಂದ ಬೆಂಬಲಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಈ ಸಿನಿಮಾಗಾಗಿ ನಾನು ಕಾಯುತ್ತಿದ್ದೇನೆ. ಖಂಡಿತವಾಗಿಯೂ ಈ ಚಿತ್ರ ಹಿಟ್ ಆಗುತ್ತದೆ ಎಂದು ಶಿವರಾಜ್‌ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಸಂಭಾಷಣೆ ಚೆನ್ನಾಗಿದೆ ಎಂದಿರುವ ಅವರು, ದುನಿಯಾ ವಿಜಯ್ ಅವರು ‘ಸಲಗ’, ‘ಭೀಮ’ ಸಿನಿಮಾಗಳ ಮೂಲಕ ತಾಂತ್ರಿಕವಾಗಿ ಉತ್ತಮ ಚಿತ್ರಗಳನ್ನು ನೀಡುತ್ತಾ ಬಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿರುವುದು ಖುಷಿಯ ವಿಚಾರ ಎಂದಿರುವ ಶಿವಣ್ಣ, ಇಂತಹ ಒಳ್ಳೆಯ ಸಿನಿಮಾ ಮಾಡಿದ್ದಕ್ಕಾಗಿ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.

ಮೋನಿಷಾಗೆ ಶಿವಣ್ಣ ಶುಭಹಾರೈಕೆ

ಮೋನಿಷಾ ಬಗ್ಗೆ ಮಾತನಾಡಿದ ಶಿವರಾಜ್‌ಕುಮಾರ್, ಚಿತ್ರದಲ್ಲಿ ಅವರು ಚೆನ್ನಾಗಿ ಕಾಣಿಸಿಕೊಂಡಿದ್ದು, ಉತ್ತಮವಾಗಿ ಅಭಿನಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಮುಂದಿನ ಸಿನಿಮಾ ಪಯಣಕ್ಕೆ ಶುಭ ಹಾರೈಸಿದ್ದಾರೆ. ಇನ್ನು ಗೀತಾ ಶಿವರಾಜ್‌ಕುಮಾರ್ ಕೂಡ ‘ಸಿಟಿ ಲೈಟ್ಸ್’ ಬಗ್ಗೆ ಮಾತನಾಡಿದ್ದು, ಈ ಸಿನಿಮಾ ‘ಓಂ’ ಸಿನಿಮಾದ ರೀತಿಯಲ್ಲೇ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ವಿನಯ್ ಅವರನ್ನು ಈ ಸಿನಿಮಾದಲ್ಲಿ ವಿಭಿನ್ನವಾಗಿ ತೋರಿಸಿರುವುದನ್ನೂ ಅವರು ಮೆಚ್ಚಿಕೊಂಡಿದ್ದಾರೆ.

ನನ್ನನ್ನು ನಂಬಿ ಪಾತ್ರ ಕೊಟ್ಟಿದ್ದಕ್ಕೆ ಧನ್ಯವಾದ

ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಮೋನಿಷಾ ತಮ್ಮ ತಂದೆ ದುನಿಯಾ ವಿಜಯ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ನನ್ನನ್ನು ನಂಬಿ ಇಷ್ಟು ದೊಡ್ಡ ಪಾತ್ರ ಕೊಟ್ಟಿದ್ದಕ್ಕೆ ನಮ್ಮ ತಂದೆಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ. ನಮ್ಮ ತಂದೆಗೆ ಪ್ರೀತಿ ನೀಡಿದ ರೀತಿಯಲ್ಲೇ ನನಗೂ ಪ್ರೀತಿ ನೀಡಿ ಎಂದು ಅವರು ಮನವಿ ಮಾಡಿದ್ದಾರೆ.

ವಿನಯ್ ರಾಜ್‌ಕುಮಾರ್ ಕೂಡ ಸಿನಿಮಾದ ಬಗ್ಗೆ ಮಾತನಾಡಿದ್ದು, ಹಾಡುಗಳು ಹಾಗೂ ಟ್ರೇಲರ್‌ಗೆ ಪ್ರೇಕ್ಷಕರಿಂದ ಪ್ರತಿಕ್ರಿಯೆ ಸಿಕ್ಕಿದೆ. ಇದೀಗ ಸಿನಿಮಾ ಹೇಗಿದೆ ಎಂಬುದನ್ನು ಜನರು ನೋಡಿ ಹೇಳಬೇಕು ಎಂದು ಹೇಳಿದ್ದಾರೆ. ‘ಸಿಟಿ ಲೈಟ್ಸ್’ ಸಿನಿಮಾ ಮಾಡಿದ ಬಳಿಕ ಬೆಂಗಳೂರಿನಲ್ಲಿ ಕಷ್ಟಪಟ್ಟು ಜೀವನ ನಡೆಸುತ್ತಿರುವ ಪ್ರತಿಯೊಬ್ಬರ ಮೇಲೂ ತಮ್ಮ ಗೌರವ ಮತ್ತಷ್ಟು ಹೆಚ್ಚಾಗಿದೆ ಎಂದು ವಿನಯ್ ಹೇಳಿದ್ದಾರೆ.

ಇನ್ನು ಹಾಡುಗಳ ಬಳಿಕ ಟ್ರೇಲರ್ ಮೂಲಕವೂ ಸದ್ದು ಮಾಡಿರುವ ‘ಸಿಟಿ ಲೈಟ್ಸ್’, ವಿನಯ್ ರಾಜ್‌ಕುಮಾರ್ ಅವರ ಹೊಸ ಅವತಾರ, ಮೋನಿಷಾ ಅವರ ಚೊಚ್ಚಲ ಅಭಿನಯ ಮತ್ತು ದುನಿಯಾ ವಿಜಯ್ ಅವರ ನಿರ್ದೇಶನದಿಂದ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಸೆಪ್ಟೆಂಬರ್ 18ರಂದು ಸಿನಿಮಾ ತೆರೆಗೆ ಬಂದ ಬಳಿಕ ಈ ನಿರೀಕ್ಷೆ ಎಷ್ಟರ ಮಟ್ಟಿಗೆ ನಿಜವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಾಸ್‌ ಹಾಡುಗಳು, ಜಾನಪದ ಸೊಗಡು.. ಸಿನಿಮಾ ಪ್ರಿಯರಿಗೆ ಕಿಕ್‌ ಎಂದಿದ್ಯಾಕೆ ದುನಿಯಾ ವಿಜಯ್‌!
Video Review: ತಾಂತ್ರಿಕ ಶ್ರೀಮಂತ ಕುತೂಹಲಕರ ರುದ್ರ ಭಯಾನಕ ಜಾಗದಲ್ಲಿ ವ್ಲಾಗರ್‌ಗಳು!