'ಬಿಗ್‌ ಬಾಸ್‌' ಖ್ಯಾತಿಯ ರಾಶಿಕಾ ಶೆಟ್ಟಿಯ ಹೊಸ ಅವತಾರ: ರವಿಚಂದ್ರನ್ ಜೊತೆ ‘ಪ್ಯಾರ್’ ಟೀಸರ್ ಸದ್ದು

Published : Sep 03, 2026, 05:48 PM IST
Pyaar Kannada Movie

ಸಾರಾಂಶ

‘ಪ್ಯಾರ್’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ರವಿಚಂದ್ರನ್ ಹಾಗೂ ರಾಶಿಕಾ ಶೆಟ್ಟಿ ಅಪ್ಪ-ಮಗಳಾಗಿ ಕಾಣಿಸಿಕೊಂಡಿದ್ದಾರೆ. ಎಸ್. ಸುಪ್ರೀತ್ ನಿರ್ದೇಶನದ ಈ ಸಿನಿಮಾದಲ್ಲಿ ತಂದೆಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ಮಗಳ ಭಾವನಾತ್ಮಕ ಕಥೆಯ ಜೊತೆಗೆ ಯುವ ಜೋಡಿಯ ಪ್ರೇಮಕಥೆಯೂ ಇದೆ.

ತಂದೆ-ಮಗಳ ಸಂಬಂಧಕ್ಕೆ ಎಮೋಷನಲ್ ಟಚ್ ಕೊಟ್ಟು ಹೇಳಲಾಗಿರುವ ಮತ್ತೊಂದು ಸಿನಿಮಾ ಇದೀಗ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಅದೇ ‘ಪ್ಯಾರ್’. ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಹಾಗೂ ಬಿಗ್ ಬಾಸ್ ಖ್ಯಾತಿಯ ರಾಶಿಕಾ ಶೆಟ್ಟಿ ಅಪ್ಪ-ಮಗಳಾಗಿ ಕಾಣಿಸಿಕೊಂಡಿರುವ ಈ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಟೀಸರ್ ನೋಡಿದರೆ, ಇದು ಬರೀ ಪ್ರೀತಿ-ಪ್ರೇಮದ ಕಥೆಯಲ್ಲ.. ತಂದೆಗಾಗಿ ಮಗಳು ಎಷ್ಟರ ಮಟ್ಟಿಗೆ ತ್ಯಾಗ ಮಾಡಬಹುದು ಎಂಬುದನ್ನು ಹೇಳುವ ಭಾವನಾತ್ಮಕ ಕಥೆಯೂ ಹೌದು ಎಂಬುದು ಗೊತ್ತಾಗುತ್ತದೆ.

ಎಸ್. ಸುಪ್ರೀತ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ‘ಪ್ಯಾರ್’ ಸಿನಿಮಾವನ್ನು ಎಸ್. ಎಂ. ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಎಚ್. ಎಸ್. ನಾಗಶ್ರೀ ನಿರ್ಮಿಸಿದ್ದಾರೆ. ಚಿತ್ರದಲ್ಲಿ ರಿಶ್ವಿನ್ ಮತ್ತು ರಾಶಿಕಾ ಶೆಟ್ಟಿ ನಾಯಕ-ನಾಯಕಿಯಾಗಿ ನಟಿಸಿದ್ದು, ರವಿಚಂದ್ರನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅಪ್ಪ ಅಂದರೆ ಪ್ರಾಣ.. ಮಗಳ ಕಥೆ ಇದು!

‘ಪ್ಯಾರ್’ನಲ್ಲಿ ಪ್ರೀತಿ ಮತ್ತು ಪ್ರೇಮಕಥೆಯ ಜತೆಗೆ ತಂದೆ-ಮಗಳ ನಡುವಿನ ಗಾಢವಾದ ಭಾವನಾತ್ಮಕ ಸಂಬಂಧವನ್ನು ಕೇಂದ್ರವಾಗಿಟ್ಟುಕೊಂಡು ಕಥೆ ಹೆಣೆಯಲಾಗಿದೆ. ಅಪ್ಪನಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ಹುಡುಗಿ ಅತೀವ್ ಪಾತ್ರದಲ್ಲಿ ರಾಶಿಕಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ತಂದೆಯ ಮೇಲಿನ ಪ್ರೀತಿ ಮಗಳನ್ನು ಯಾವ ಹಂತದವರೆಗೆ ಕರೆದೊಯ್ಯುತ್ತದೆ? ಅಪ್ಪನಿಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಡುವ ಪರಿಸ್ಥಿತಿ ಎದುರಾದಾಗ ಆಕೆ ತೆಗೆದುಕೊಳ್ಳುವ ನಿರ್ಧಾರವೇನು? ಎಂಬ ಕುತೂಹಲವನ್ನು ಟೀಸರ್ ಹುಟ್ಟುಹಾಕಿದೆ.

‘ರಾಶಿಕಾ ಇಡೀ ಸಿನಿಮಾವನ್ನೇ ಆವರಿಸಿಕೊಂಡಿದ್ದಾರೆ’

ನಿರ್ದೇಶಕ ಎಸ್. ಸುಪ್ರೀತ್ ಮಾತನಾಡಿ, ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ‘ಒಂದೇ ಮಾತಲಿ’ ಹಾಗೂ ‘ರಾಯಭಾರಿಯಾಗಿ’ ಎಂಬ ಎರಡು ಹಾಡುಗಳನ್ನು ಬಿಡುಗಡೆ ಮಾಡಿದ್ದೆವು. ಅವುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದೀಗ ಟೀಸರ್ ಕೂಡ ಬಿಡುಗಡೆಯಾಗಿದೆ. ನಿರ್ಮಾಪಕರು ನನ್ನ ಮೇಲಿಟ್ಟಿರುವ ನಂಬಿಕೆಯಿಂದ ಸಿನಿಮಾಗೆ ಯಾವುದೇ ಕೊರತೆಯಾಗದಂತೆ ದೊಡ್ಡ ಮಟ್ಟದಲ್ಲಿ ಖರ್ಚು ಮಾಡಿದ್ದಾರೆ.

ಪ್ರೀತಿ-ಪ್ರೇಮದ ಜತೆಗೆ ತಂದೆ-ಮಗಳ ನಡುವಿನ ಭಾವನಾತ್ಮಕ ಸಂಬಂಧವೂ ಸಿನಿಮಾದಲ್ಲಿದೆ. ಸ್ಕ್ರಿಪ್ಟ್ ಬರೆಯುವಾಗ ಅಂದುಕೊಂಡಿದ್ದನ್ನು ತೆರೆಮೇಲೆ ತರುವುದು ಸವಾಲಿನ ಕೆಲಸವಾಗಿತ್ತು. ನಾಯಕ ರಿಶ್ವಿನ್ ಅವರ ಇನ್‌ವಾಲ್ವ್‌ಮೆಂಟ್ ತುಂಬಾ ಚೆನ್ನಾಗಿದೆ. ನಾಯಕಿ ರಾಶಿಕಾ ಇಡೀ ಸಿನಿಮಾವನ್ನೇ ಆವರಿಸಿಕೊಂಡಿದ್ದಾರೆ. ಇನ್ನು ರವಿಚಂದ್ರನ್ ಅವರು ತಂದೆಯ ಪಾತ್ರಕ್ಕೆ ನಾವು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ಜೀವ ತುಂಬಿದ್ದಾರೆ. ಅವರೇ ನಮ್ಮ ಸಿನಿಮಾದ ದೊಡ್ಡ ಶಕ್ತಿ ಎಂದು ಹೇಳಿದ್ದಾರೆ.

‘ಎರಡನೇ ಸಿನಿಮಾದಲ್ಲೇ ಇಂಥ ಪಾತ್ರ ಸಿಕ್ಕಿದೆ’

ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ರಾಶಿಕಾ ಶೆಟ್ಟಿ, ‘ಪ್ಯಾರ್’ ತಮ್ಮ ವೃತ್ತಿಜೀವನದ ವಿಶೇಷ ಸಿನಿಮಾ ಎಂದು ಹೇಳಿದ್ದಾರೆ.ಟೀಸರ್ ನೋಡುವಾಗ ಮೊದಲ ದಿನದಿಂದ ನಮ್ಮ ಸಿನಿಮಾದ ಜರ್ನಿ ಕಣ್ಣ ಮುಂದೆ ಬಂತು. ಒಂದು ಸಿನಿಮಾ ಮಾಡುವುದು ಮಾತ್ರವಲ್ಲ, ಅದನ್ನು ಪ್ರೇಕ್ಷಕರಿಗೆ ತಲುಪಿಸುವುದೂ ದೊಡ್ಡ ಸವಾಲು. ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಅತೀವ್. ಅಪ್ಪ ಅಂದರೆ ಏನು ಬೇಕಾದರೂ ಮಾಡಲು ಸಿದ್ಧವಿರುವ ಹುಡುಗಿ. ‘ಮನದ ಕಡಲು’ ನಂತರ ನನ್ನ ಎರಡನೇ ಚಿತ್ರದಲ್ಲೇ ಇಂಥ ಭಾವನಾತ್ಮಕ ಪಾತ್ರ ಸಿಕ್ಕಿರುವುದು ಖುಷಿಯಾಗಿದೆ ಎಂದು ರಾಶಿಕಾ ಹೇಳಿದ್ದಾರೆ.

‘ರವಿಚಂದ್ರನ್ ಅವರಿಂದ ಸಿನಿಮಾಕ್ಕೆ ಮತ್ತಷ್ಟು ಕಳೆ’

ನಾಯಕ ರಿಶ್ವಿನ್ ಕೂಡ ಸಿನಿಮಾದ ಬಗ್ಗೆ ಮಾತನಾಡಿದ್ದು, ತಮ್ಮ ಪಾತ್ರದಲ್ಲಿ ಅಭಿನಯಕ್ಕೆ ಸಾಕಷ್ಟು ಅವಕಾಶವಿದೆ ಎಂದಿದ್ದಾರೆ. ನಮ್ಮ ಚಿತ್ರದ ಒಂದು ಹಾಡು ಈಗಾಗಲೇ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದೆ. ಇಡೀ ಚಿತ್ರತಂಡದ ನಾಲ್ಕು ವರ್ಷಗಳ ಶ್ರಮ ಈ ಟೀಸರ್‌ನಲ್ಲಿ ಕಾಣಿಸುತ್ತದೆ. ಅಭಿನಯಕ್ಕೆ ತುಂಬಾ ಅವಕಾಶವಿರುವ ಪಾತ್ರ ನನ್ನದು. ರವಿಚಂದ್ರನ್ ಅವರ ಪಾತ್ರದಿಂದ ಸಿನಿಮಾಕ್ಕೆ ವಿಶೇಷ ಕಳೆ ಬಂದಿದೆ. ತಂದೆ-ಮಗಳ ಭಾವನಾತ್ಮಕ ಸಂಬಂಧದ ಜತೆಗೆ ಯುವ ಜೋಡಿಯ ಪ್ರೇಮಕಥೆಯೂ ಚಿತ್ರದಲ್ಲಿದೆ ಎಂದು ತಿಳಿಸಿದ್ದಾರೆ.

ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆಯೇ ‘ಪ್ಯಾರ್’?

ಚಿತ್ರದ ನಿರ್ಮಾಪಕಿ ಎಚ್. ಎಸ್. ನಾಗಶ್ರೀ ಮಾತನಾಡಿ, ಸಿನಿಮಾದ ಪ್ರಚಾರಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರದ ಶೀರ್ಷಿಕೆ ರವಿಚಂದ್ರನ್ ಅವರಿಗೆ ತುಂಬಾ ಸೂಕ್ತವಾಗಿದೆ. ‘ಒಂದೇ ಮಾತಲಿ’ ಹಾಡನ್ನು ಅವರೇ ಬಿಡುಗಡೆ ಮಾಡಿಕೊಟ್ಟಿದ್ದರಿಂದ ಅದು ಎಲ್ಲೆಡೆ ತಲುಪಲು ಸಾಧ್ಯವಾಯಿತು. ರಾಶಿಕಾ ಅವರಿಂದಲೂ ಸಿನಿಮಾಗೆ ಉತ್ತಮ ಪ್ರಚಾರ ಸಿಕ್ಕಿದೆ. ಈ ಸಿನಿಮಾ ಮಾಡಲು ನಮ್ಮ ಕುಟುಂಬದವರ ಸಹಕಾರವೂ ಅಪಾರವಾಗಿದೆ. ಅಕ್ಟೋಬರ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ ಎಂದು ಹೇಳಿದ್ದಾರೆ.

ಕನ್ನಡ ಚಿತ್ರರಂಗದ ದೊಡ್ಡ ಗಾಯಕರ ಧ್ವನಿ

‘ಪ್ಯಾರ್’ ಸಿನಿಮಾದ ಹಾಡುಗಳಿಗೆ ಸೋನು ನಿಗಮ್, ಶ್ರೇಯಾ ಘೋಷಾಲ್, ಕುನಾಲ್ ಗಾಂಜಾವಾಲಾ, ವಿಜಯ ಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಪಲಕ್ ಮುಚ್ಚಲ್ ಧ್ವನಿಯಾಗಿದ್ದಾರೆ. ಅಚ್ಯುತ್ ಕುಮಾರ್, ವಿಜಯ್ ಸೂರ್ಯ, ಶಂಕರ್ ಅಶ್ವತ್ಥ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪಳನಿ ಡಿ. ಸೇನಾಪತಿ ಸಂಗೀತ ನಿರ್ದೇಶನ ಹಾಗೂ ಕೆ. ಎಸ್. ಚಂದ್ರಶೇಖರ್ ಛಾಯಾಗ್ರಹಣ ಸಿನಿಮಾಕ್ಕಿದೆ. ಕಾಶ್ಮೀರದಿಂದ ರಾಜಸ್ಥಾನ, ಅಂಡಮಾನ್‌ವರೆಗೆ ಚಿತ್ರೀಕರಣ ನಡೆಸಿರುವ ಚಿತ್ರತಂಡ, ಮಂಗಳೂರು, ಚಿಕ್ಕಮಗಳೂರು, ಮೈಸೂರು ಹಾಗೂ ಬೆಂಗಳೂರಿನ ಸುತ್ತಮುತ್ತಲೂ ಪ್ರಮುಖ ದೃಶ್ಯಗಳನ್ನು ಸೆರೆಹಿಡಿದಿದೆ.

ಒಟ್ಟಿನಲ್ಲಿ, ರವಿಚಂದ್ರನ್-ರಾಶಿಕಾ ಶೆಟ್ಟಿ ಅವರ ಅಪ್ಪ-ಮಗಳ ಬಾಂಧವ್ಯ, ಎಮೋಷನಲ್ ಕಥೆ, ಯುವ ಜೋಡಿಯ ಪ್ರೀತಿ ಮತ್ತು ದೊಡ್ಡ ಮಟ್ಟದ ಸಂಗೀತ ‘ಪ್ಯಾರ್’ ಸಿನಿಮಾದ ಪ್ರಮುಖ ಆಕರ್ಷಣೆಗಳಾಗಿವೆ. ಇದೀಗ ಟೀಸರ್ ಮೂಲಕ ಕುತೂಹಲ ಮೂಡಿಸಿರುವ ಈ ಸಿನಿಮಾ ಅಕ್ಟೋಬರ್‌ನಲ್ಲಿ ಪ್ರೇಕ್ಷಕರ ಮುಂದೆ ಬಂದಾಗ ಯಾವ ರೀತಿಯ ಪ್ರತಿಕ್ರಿಯೆ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಿತ್ಯಾ ಮೆನನ್ ಅಸಲಿ ಹೆಸರು ಇದು: ಕಿಚ್ಚನ ಹೀರೋಯಿನ್ ಹೇಳಿದ ಕುತೂಹಲಕಾರಿ ವಿಷಯವೇನು?
ಯಶ್‌ಗೆ ರಾಖಿ ಕಟ್ಟಲು ಹೋದಾಗ KGF ಸಿನಿಮಾಗೆ ಆಯ್ಕೆಯಾದ ಜನಪ್ರಿಯ ನಟಿ ಯಾರೆಂದು ಗೆಸ್ ಮಾಡ್ತೀರಾ?