ಕನ್ನಡ ಚಲನಚಿತ್ರ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಹಿನ್ನೆಲೆ ಕುಟುಂಬಸ್ಥರು ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
ಬೆಂಗಳೂರು (ಏ.14): ಇಂದು ಆತ್ಮಹತ್ಯೆಗೆ ಶರಣಾದ ಕನ್ನಡ ಚಲನಚಿತ್ರ ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagadeesh) ಅವರ ಮೃತದೇಹವನ್ನು ಮಹಾಲಕ್ಷ್ಮಿ ಲೇಔಟ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ನಾಳೆ ಬೆಳಗ್ಗೆ 9 ಗಂಟೆವರೆಗೂ ಸಾರ್ವಜನಿಕರು ಹಾಗೂ ಚಿತ್ರರಂಗದ ಮಂದಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಬಳಿಕ ಹಾಸನ ಚನ್ನರಾಯಪಟ್ಟಣ ತಾಲೂಕಿನ ಹೈವೇ ಹಿರಿಸಾವೆ ಬಳಿ ಸಾಯಿ ಬಾಬಾ ಟೆಂಪಲ್ ಪಕ್ಕದಲ್ಲಿರೋ ಸೌಂದರ್ಯ ಜಗದೀಶ್ ರ ಫಾರಂ ಹೌಸ್ ನಲ್ಲಿ ಮಧ್ಯಾಹ್ನ 1ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.
ಕನ್ನಡದ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ!
ಮರಣೋತ್ತರ ಪರೀಕ್ಷೆ ಬಳಿಕ ಮನೆಗೆ ಬಂದ ಪಾರ್ಥಿವ ಶರೀರ ಬರ್ತಿದ್ದಂತೆ ಅಪ್ಪಾ ಎಂದು ಓಡೋಡಿ ಬಂದ ಮಗ ಸ್ನೇಹಿತ್ ಕಣ್ಣೀರಾದರು. ಪಾರ್ಥಿವ ಶರೀರದ ಬಳಿ ಮಗಳು, ಪತ್ನಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಆತ್ಮಹತ್ಯೆ ಹಿನ್ನೆಲೆ ಕುಟುಂಬಸ್ಥರಿಂದ ದೂರು ದಾಖಲು:
ಸೌಂದರ್ಯ ಜಗದೀಶ್ ಆತ್ಮಹತ್ಯೆ ಹಿನ್ನೆಲೆ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಕುಟುಂಬಸ್ಥರು ದೂರು ನೀಡಿದ್ದಾರೆ. ಆರ್ಥಿಕ ಸಂಕಷ್ಟ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಮಾಹಿತಿ ನೀಡಿದ್ದು, ಸಾಲಗಳು ಹೆಚ್ಚಾಗಿತ್ತು. ಹಲವು ತಿಂಗಳಿನಿಂದ ಸಾಲ ಮರು ಪಾವತಿ ಮಾಡಲಾಗದೆ ನೊಂದಿದ್ದರು. ಕಳೆದ ಒಂದು ತಿಂಗಳ ಹಿಂದೆ ಸೌಂದರ್ಯ ಜಗದೀಶ್ ಅವರ ಅತ್ತೆ ವಯೋಸಹಜವಾಗಿ ಸಾವನ್ನಪ್ಪಿದರು. ಡ್ರೈವರ್ ಕೂಡ ಮೃತಪಟ್ಟಿದ್ದ. ಈ ಹಿನ್ನೆಲೆ ಮಾನಸಿಕವಾಗಿ ಕುಗ್ಗಿದ್ದರು.
ಮರಣೋತ್ತರ ಪರೀಕ್ಷೆ ಬಳಿಕ ನಿರ್ಮಾಪಕ ಸೌಂದರ್ಯ ಜಗದೀಶ್ ಮೃತದೇಹ ಹಸ್ತಾಂತರ
ಮಾನಸಿಕವಾಗಿ ನೊಂದಿದ್ದ ಅವರನ್ನು ವೈದ್ಯರ ಬಳಿ ಕೌಸ್ಸಿಲಿಂಗ್ ಮಾಡಿಸಲಾಗಿತ್ತು. ಡಿಪ್ರೆಷನ್ ಔಷಧಿ ತೆಗೆದುಕೊಳ್ಳುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ಒಂಟಿಯಾಗಿ ಮನೆಯಲ್ಲಿ ಇರುತಿದ್ದರು. ಇಂದು ಬೆಳಗಿಜಾವ ಮನೆಯ ಹಿಂಭಾಗದಲ್ಲಿ ಬಟ್ಟೆ ಒಣ ಹಾಕುವಾಗ ರಾಡ್ ಗೆ ನೇಣು ಬಿಗಿದು ಕೊಂಡಿದ್ದರು. ಮನೆಯವರು ಮನೆಯ ಹಿಂಭಾಗಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ
ಯುಡಿಆರ್ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಚಿತ್ರರಂಗದ ಗಣ್ಯರಾದ ನಟ ಪ್ರೇಮ್, ಉಪೇಂದ್ರ , ಜಿಮ್ ರವಿ, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.