
ಕನ್ನಡ ಚಿತ್ರರಂಗದಲ್ಲಿ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದ ಪ್ರೇಮಕಥೆಗಳ ಪೈಕಿ ‘ಕೃಷ್ಣನ್ ಲವ್ ಸ್ಟೋರಿ’ ಕೂಡ ಒಂದು. ಈ ಸಿನಿಮಾ ತೆರೆಕಂಡು ಬರೋಬ್ಬರಿ 16 ವರ್ಷಗಳ ಬಳಿಕ ಇದೀಗ ಚಿತ್ರದ ನಿರ್ದೇಶಕ ಶಶಾಂಕ್ ಹಾಗೂ ನಟ ಕೃಷ್ಣ ಅಜಯ್ ರಾವ್ ಮತ್ತೊಮ್ಮೆ ಒಂದಾಗುತ್ತಿದ್ದಾರೆ. ಹೌದು, ಬಹು ನಿರೀಕ್ಷಿತ ‘ಕೃಷ್ಣನ್ ಲವ್ ಸ್ಟೋರಿ 2’ ಸಿನಿಮಾಗೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಇದೀಗ ಚಿತ್ರದ ನಾಯಕಿಯ ಆಯ್ಕೆಯೂ ಅಂತಿಮಗೊಂಡಿದೆ ಎನ್ನಲಾಗಿದೆ.
16 ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿರುವ ಶಶಾಂಕ್-ಅಜಯ್ ರಾವ್
2009ರಲ್ಲಿ ತೆರೆಕಂಡ ‘ಕೃಷ್ಣನ್ ಲವ್ ಸ್ಟೋರಿ’ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಶಶಾಂಕ್ ನಿರ್ದೇಶನದ ಈ ಚಿತ್ರದಲ್ಲಿ ಕೃಷ್ಣ ಅಜಯ್ ರಾವ್ ಹಾಗೂ ರಾಧಿಕಾ ಪಂಡಿತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಇದೀಗ ಬರೋಬ್ಬರಿ 16 ವರ್ಷಗಳ ಬಳಿಕ ಇದೇ ಕಾಂಬಿನೇಷನ್‌ನ ಮುಂದುವರಿದ ಕಥೆ ತೆರೆಗೆ ಬರಲು ಸಜ್ಜಾಗುತ್ತಿದೆ. ಆದರೆ ಇದು ಮೊದಲ ಸಿನಿಮಾದ ಕಥೆಯನ್ನೇ ಮುಂದುವರಿಸುವ ಸರಳ ಸೀಕ್ವೆಲ್ ಅಲ್ಲ. ಮೊದಲ ಭಾಗದ ಗೀತಾ ಪಾತ್ರದ ಅಂತ್ಯದ ನಂತರ ಕೃಷ್ಣನ ಜೀವನ ಹೇಗೆ ಸಾಗಿತು ಎಂಬುದನ್ನು ‘ಕೃಷ್ಣನ್ ಲವ್ ಸ್ಟೋರಿ 2’ನಲ್ಲಿ ಹೇಳಲಾಗುತ್ತದೆ ಎನ್ನಲಾಗಿದೆ. ಕಥೆಯ ಸಹಜ ಬೆಳವಣಿಗೆಗೆ ಈ 16 ವರ್ಷಗಳ ಅಂತರವೇ ಅಗತ್ಯವಾಗಿತ್ತು ಎಂದು ನಿರ್ದೇಶಕ ಶಶಾಂಕ್ ಈ ಹಿಂದೆ ಹೇಳಿಕೊಂಡಿದ್ದಾರೆ.
ರಾಧಿಕಾ ಪಂಡಿತ್ ಬಳಿಕ ನಾಯಕಿ ಯಾರಾಗ್ತಾರೆ?
ಸಿನಿಮಾದ ಕಥೆಯಲ್ಲಿ ಗೀತಾ ಪಾತ್ರ ಮಹತ್ವದ್ದಾಗಿದ್ದ ಕಾರಣ, ಎರಡನೇ ಭಾಗದಲ್ಲಿ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಸಹಜವಾಗಿಯೇ ಮೂಡಿತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮಾಹಿತಿಗಳ ಪ್ರಕಾರ, ನಟಿ ಪ್ರಿಯಾಂಕ ಆಚಾರ್ ‘ಕೃಷ್ಣನ್ ಲವ್ ಸ್ಟೋರಿ 2’ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಹೊಸ ತಲೆಮಾರಿನ ನಟಿಯಾಗಿ ಗುರುತಿಸಿಕೊಳ್ಳುತ್ತಿರುವ ಪ್ರಿಯಾಂಕ ಆಚಾರ್, ಈ ಸಿನಿಮಾದಲ್ಲಿ ಕೃಷ್ಣ ಅಜಯ್ ರಾವ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ರೊಮ್ಯಾಂಟಿಕ್ ಡ್ರಾಮಾ ಕಥಾಹಂದರ ಹೊಂದಿರುವ ಚಿತ್ರದಲ್ಲಿ ಅವರ ಪಾತ್ರ ಹೇಗಿರಲಿದೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯ ಬಹಿರಂಗವಾಗಿಲ್ಲ.
‘ಮಹಾನಟಿ’ ಮೂಲಕ ಬೆಳಕಿಗೆ ಬಂದ ಪ್ರಿಯಾಂಕ
ಪ್ರಿಯಾಂಕ ಆಚಾರ್ ಅವರು ರಿಯಾಲಿಟಿ ಶೋ ‘ಮಹಾನಟಿ’ ಗೆದ್ದ ಬಳಿಕ ಹೆಚ್ಚಿನ ಗಮನ ಸೆಳೆದಿದ್ದರು. ಬಳಿಕ ನಿರ್ದೇಶಕ-ನಿರ್ಮಾಪಕ ತರುಣ್ ಕಿಶೋರ್ ಸುಧೀರ್ ಅವರ ಗಮನ ಸೆಳೆದ ಅವರು, ರಾಣಾ ಜೊತೆ ನಟಿಸಿದ ‘ಎಳುಮಲೆ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು.
ಪುಣಿತ್ ರಂಗಸ್ವಾಮಿ ನಿರ್ದೇಶನದ ಈ ಕ್ರೈಂ ಥ್ರಿಲ್ಲರ್ ಗಮನಾರ್ಹ ಯಶಸ್ಸು ಕಂಡಿತ್ತು. ಸದ್ಯ ಪ್ರಿಯಾಂಕ ಆಚಾರ್ ಮತ್ತೊಂದು ಕನ್ನಡ ಸಿನಿಮಾ ‘ಸೆಲೆಬ್ರಿಟಿ’ಯಲ್ಲೂ ನಟಿಸುತ್ತಿದ್ದು, ತೆಲುಗು ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಲು ಸಜ್ಜಾಗುತ್ತಿದ್ದಾರೆ. ಇದೀಗ ‘ಕೃಷ್ಣನ್ ಲವ್ ಸ್ಟೋರಿ 2’ ಮೂಲಕ ಪ್ರಮುಖ ನಾಯಕಿಯಾಗಿ ಕಾಣಿಸಿಕೊಳ್ಳುವ ಅವಕಾಶ ಅವರಿಗೆ ಸಿಕ್ಕಿದೆ.
ನವೆಂಬರ್‌ನಲ್ಲಿ ಶೂಟಿಂಗ್ ಶುರು?
‘ಕೃಷ್ಣನ್ ಲವ್ ಸ್ಟೋರಿ 2’ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಈಗಾಗಲೇ ವೇಗ ಪಡೆದುಕೊಂಡಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್‌ನಲ್ಲಿ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಚಿತ್ರದ ಸಂಪೂರ್ಣ ತಾರಾಗಣದ ಕುರಿತು ಅಧಿಕೃತ ಘೋಷಣೆ ಹೊರಬರುವ ಸಾಧ್ಯತೆಯೂ ಇದೆ.
ಕೃಷ್ಣ ಅಜಯ್ ರಾವ್ ಜೊತೆಗೆ ಮೊದಲ ಭಾಗದಲ್ಲಿ ಕಾಣಿಸಿಕೊಂಡಿದ್ದ ಉಮಾಶ್ರೀ ಮತ್ತು ಅಚ್ಯುತ್ ಕುಮಾರ್ ಸೇರಿದಂತೆ ಕೆಲವು ಪ್ರಮುಖ ಕಲಾವಿದರು ಸೀಕ್ವೆಲ್‌ನಲ್ಲೂ ತಮ್ಮ ಪಾತ್ರಗಳನ್ನು ಮುಂದುವರಿಸುವ ನಿರೀಕ್ಷೆಯಿದೆ. ತಾಂತ್ರಿಕ ತಂಡದಲ್ಲೂ ಗಮನ ಸೆಳೆಯುವ ಹೆಸರುಗಳಿವೆ. ಸಂಗೀತ ನಿರ್ದೇಶಕರಾಗಿ ಅರ್ಜುನ್ ಜನ್ಯ ಹಾಗೂ ಛಾಯಾಗ್ರಾಹಕರಾಗಿ ಅಭಿಲಾಷ್ ಕಲಾತಿ ತಂಡಕ್ಕೆ ಸೇರಿದ್ದಾರೆ.
ಇನ್ನು 16 ವರ್ಷಗಳ ಬಳಿಕ ಶಶಾಂಕ್-ಕೃಷ್ಣ ಅಜಯ್ ರಾವ್ ಕಾಂಬಿನೇಷನ್ ಮತ್ತೆ ಒಂದಾಗುತ್ತಿರುವುದು ಒಂದೆಡೆಯಾದರೆ, ರಾಧಿಕಾ ಪಂಡಿತ್ ಅಭಿನಯಿಸಿದ್ದ ಗೀತಾ ಪಾತ್ರದ ನಂತರದ ಕಥೆಯಲ್ಲಿ ಪ್ರಿಯಾಂಕ ಆಚಾರ್ ನಾಯಕಿಯಾಗಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಮತ್ತೊಂದು ಕುತೂಹಲ. ಹೀಗಾಗಿ ‘ಕೃಷ್ಣನ್ ಲವ್ ಸ್ಟೋರಿ 2’ ಘೋಷಣೆಯ ಬೆನ್ನಲ್ಲೇ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.