ಸ್ವಯಂ ಲಾಕ್‌ಡೌನ್‌ ಮಾಡಿಕೊಂಡ ಚಿತ್ರರಂಗ; ಏಪ್ರಿಲ್‌, ಮೇ ತಿಂಗಳಲ್ಲಿ ಬರಬೇಕಿದ್ದ ಚಿತ್ರಗಳು ಮುಂದಕ್ಕೆ

By Kannadaprabha NewsFirst Published Apr 19, 2021, 9:40 AM IST
Highlights

ನೈಟ್‌ ಕಫäರ್‍, ಶೇ.50ರಷ್ಟುಮಾತ್ರ ಸೀಟು ಭರ್ತಿ ನಿಯಮಗಳಿಂದ ಮೊದಲೇ ಕೆಂಗಟ್ಟಿರುವ ಚಿತ್ರರಂಗಕ್ಕೆ ಕೊರೋನಾ ಎರಡನೇ ಅಲೆ ದೊಡ್ಡ ಮಟ್ಟದಲ್ಲಿ ಪೆಟ್ಟು ನೀಡುತ್ತಿದೆ. ಕೊರೋನಾ ತಡೆಯಲು ಸರ್ಕಾರ ಲಾಕ್‌ಡೌನ್‌ ಮಾಡುತ್ತದೋ ಇಲ್ಲವೋ, ಗೊತ್ತಿಲ್ಲ. ಆದರೆ, ಚಿತ್ರರಂಗ ಮಾತ್ರ ಹೆಚ್ಚು ಕಮ್ಮಿ ಲಾಕ್‌ಡೌನ್‌ ಮಾಡಿಕೊಂಡಿದೆ.

ಕಳೆದ ವಾರವಷ್ಟೆತೆರೆಗೆ ಬಂದಿದ್ದ ಚಿತ್ರವೊಂದನ್ನು ಥಿಯೇಟರ್‌ಗಳಿಂದ ವಾಪಸ್ಸು ಪಡೆಯಲಾಗಿದೆ. ಈ ವಾರ ಬಿಡುಗಡೆಯಾಗಿರುವ ಎರಡು ಚಿತ್ರಗಳಿಗೆ ಜನ ಬರುತ್ತಿಲ್ಲ. ಮತ್ತೊಂದು ಕಡೆ ಬಿಡುಗಡೆಯ ದಿನಾಂಕ ಘೋಷಣೆ ಮಾಡಿಕೊಂಡಿದ್ದ ಚಿತ್ರಗಳು ಮುಂದಕ್ಕೆ ಹೋಗುವ ಯೋಜನೆ ರೂಪಿಸಿಕೊಳ್ಳುತ್ತಿವೆ.

ಬಿಡುಗಡೆ ದಿನಾಂಕ ಮುಂದೂಡಿದ ದುನಿಯಾ ವಿಜಯ್ ಸಲಗ ತಂಡ! 

ಈ ನಡುವೆ ಸರ್ಕಾರ ಕೂಡ ಕೊರೋನಾ ಎರಡನೇ ಅಲೆಯನ್ನು ತಡೆಯಲು ಟಫ್‌ ರೂಲ್ಸ್‌ ಜಾರಿ ಮಾಡುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ. ಜಾತ್ರೆ, ಬಾರ್‌, ಪಬ್ಬು, ಹೋಟೆಲ್‌, ರೆಸ್ಟೋರೆಂಟ್‌ಗಳ, ಸೂಪರ್‌ ಮಾರ್ಕೆಂಟ್‌, ಬೀದಿ ವ್ಯಾಪಾರದ ಜತೆಗೆ ಚಿತ್ರಮಂದಿರಗಳನ್ನೂ ಸಂಪೂರ್ಣವಾಗಿ ಬಂದ್‌ ಮಾಡುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ. ಇಂಥ ಸುದ್ದಿಗಳ ಹಿನ್ನೆಲೆಯಲ್ಲಿ ಶೇ.50ರಷ್ಟುಸೀಟು ಭರ್ತಿ ಇದ್ದರೂ ಬಿಡುಗಡೆಗೆ ಮುಂದಾಗಿದ್ದ ಹೊಸಬರ ಹಾಗೂ ಕಡಿಮೆ ಬಜೆಟ್‌ನ ಚಿತ್ರಗಳೂ ಸಹ ತಮ್ಮ ಬಿಡುಗಡೆಯ ಸಂಭ್ರಮವನ್ನು ಮುಂದಕ್ಕೆ ಹಾಕಿಕೊಂಡಿವೆ. ಧನ್ಯಾ ರಾಮ್‌ಕುಮಾರ್‌ ಹಾಗೂ ಸೂರಜ್‌ ಗೌಡ ನಟನೆಯ ‘ನಿನ್ನ ಸನಿಹಕೆ’ ಚಿತ್ರ ಇದೇ ಏಪ್ರಿಲ್‌ 16ಕ್ಕೆ ಬರಬೇಕಿತ್ತು. ಇದರ ನಂತರ ಸರದಿಯಂತೆ ‘ಕ್ರಿಟಿಕಲ್‌ ಕೀರ್ತನೆಗಳು’, ‘ತ್ರಿಕೋನ’, ‘ಅರ್ಜುನ್‌ ಗೌಡ’, ‘ವೀಲ್‌ ಚೇರ್‌ ರೋಮಿಯೋ’, ‘ಪ್ರಾರಂಭ’ ಸೇರಿದಂತೆ ಸುಮಾರು 10 ರಿಂದ 15 ಚಿತ್ರಗಳು ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದ್ದರು.

ರಶ್ಮಿಕಾ ತಡಬಡಾಯಿಸ್ತಿದ್ರೆ, ತಟ್ಟನೆ ಸಾಲು ಮರದ ತಿಮ್ಮಕ್ಕನ ಮುಕ್ತವಾಗಿ ಹೊಗಳಿದ ನಟ ಇವರು..! 

ಸ್ಟಾರ್‌ ನಟರ ಚಿತ್ರಗಳು ಬರುವ ಮುನ್ನವೇ ಅಂದರೆ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಹೊಸಬರ ಹಾಗೂ ಕಡಿಮೆ ಬಜೆಟ್ಟಿನ ಸಿನಿಮಾಗಳು ತೆರೆಗೆ ಬಂದು ಹೋಗುತ್ತವೆ ಎನ್ನುವ ಲೆಕ್ಕಾಚಾರ ಇತ್ತು ಚಿತ್ರರಂಗಕ್ಕೆ. ಆದರೆ, ಯಾವಾಗ ನೈಟ್‌ ಕಫäರ್‍ ಜಾರಿ ಹಾಗೂ ಸಾರಿಗೆ ವ್ಯವಸ್ಥೆ ಬಂದ್‌ ಆಯಿತೋ ಆಗಲೇ ಈ ಎಲ್ಲ ಚಿತ್ರಗಳು ಬಿಡುಗಡೆ ದಿನಾಂಕವನ್ನು ಮುಂದೂಡಿಕೊಂಡವು. ಆದರೂ ಈ ಚಿತ್ರಗಳ ಪಟ್ಟಿಯಲ್ಲಿ ಕೆಲವು ಸಿನಿಮಾಗಳು ಥಿಯೇಟರ್‌ಗಳಿಗೆ ಬರುವ ಧೈರ್ಯ ತೋರಿದ್ದೂ ಉಂಟು. ಆದರೆ, ಯಾವಾಗ ಕೊರೋನಾ ಎರಡನೇ ಅಲೆ ಜಾಸ್ತಿ ಆಗಿ, ಸರ್ಕಾರ ಟಫ್‌ ರೂಲ್ಸ್‌ ಜಾರಿ ಮಾಡುವ ಸಾಧ್ಯತೆಗಳು ಇವೆ ಎನ್ನುವ ಸುದ್ದಿ ಕೇಳಿ ಬಂತೋ ಆಗಲೇ ಚಿತ್ರರಂಗ ಮುಂಜಾಗೃತವಾಗಿ ಸ್ವಯಂ ಲಾಕ್‌ಡೌನ್‌ ವಿಧಿಸಿಕೊಂಡಿದೆ. ಕಳೆದ ಎರಡು ವಾರಗಳಿಂದ ಬಿಡುಗಡೆಯಾಗಿದ್ದ ಮೂರು ಚಿತ್ರಗಳ ಪೈಕಿ ಒಂದು ಚಿತ್ರವನ್ನು ನಿರ್ಮಾಪಕರೇ ಚಿತ್ರಮಂದಿರದಿಂದ ವಾಪಸ್ಸು ಪಡೆದಿದ್ದಾರೆ. ಹೀಗೆ ವಾಪಸ್ಸು ಬಂದಿರುವ ಸಿನಿಮಾ ‘ಕೊಡೆ ಮುರುಗ’. ದೊಡ್ಡ ಮಟ್ಟದಲ್ಲಿ ಮರು ಬಿಡುಗಡೆ ಮಾಡುವ ಪ್ಲಾನ್‌ ಈ ಚಿತ್ರತಂಡದ್ದು.

ಒಂದು ವೇಳೆ ಸಿನಿಮಾ ಬಿಡುಗಡೆಯಾದ ಮೇಲೆ ಸೆಮಿ ಲಾಕ್‌ಡೌನ್‌ ಅಥವಾ ವೀಕೆಂಡ್‌ ಲಾಕ್‌ಡೌನ್‌ ಜಾರಿಯಾದರೆ ಚಿತ್ರಮಂದಿರಗಳಿಗೆ ಬರುತ್ತಿದ್ದ ಬೆರಳೆಣಿಕೆಯ ಜನ ಕೂಡ ಆಗ ಬರಲ್ಲ ಎನ್ನುವ ಲೆಕ್ಕಾಚಾರದಲ್ಲಿ ಸದ್ಯ ಸ್ಟಾರ್‌ ನಟರ ಚಿತ್ರಗಳಂತೆ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ತೆರೆಗೆ ಬರಬೇಕಿದ್ದ ಹೊಸಬರ ಚಿತ್ರಗಳು ಕೂಡ ಬಿಡುಗಡೆಯ ಮಾತು ಆಡುತ್ತಿಲ್ಲ. ಸಿನಿಮಾ ಬಿಡುಗಡೆ ಇಲ್ಲದೆ ಏನೇ ಕೆಲಸಗಳು ನಡೆದರೂ ಚಿತ್ರರಂಗಕ್ಕೆ ಚೈತನ್ಯ ಬರಲಾರದು. ಹೀಗಾಗಿ ಕೊರೋನಾ ಎರಡನೇ ಅಲೆಯಲ್ಲಿ ಇನ್ನೂ ಲಾಕ್‌ ಡೌನ್‌ ಆಗದೆ ಹೋದರೂ ಚಿತ್ರರಂಗ ಮಾತ್ರ ಸ್ವಯಂ ಲಾಕ್‌ಡೌನ್‌ ಹಾಕಿಕೊಂಡಿದೆ.

click me!