ಪ್ರಭು ಶ್ರೀನಿವಾಸ್ ನಿರ್ದೇಶನದ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ. ಹೆಣದ ಪಾತ್ರದಲ್ಲಿ ಗುರು ಪ್ರಸಾದ್ ಕಾಣಿಸಿಕೊಳ್ಳಲಿದ್ದಾರೆ.
ಸತ್ತ ವ್ಯಕ್ತಿಯ ದೇಹ ಇಟ್ಟುಕೊಂಡು ಕತೆ ಹೆಣೆದಿರುವ ಸಿನಿಮಾ ‘ಬಾಡಿ ಗಾಡ್’. ಇಲ್ಲಿ ಹೆಣದ ಪಾತ್ರ ಮಾಡಿರುವುದು ಮಠ ಗುರುಪ್ರಸಾದ್. ಬಾಡಿಯನ್ನು ಕಾಯುವ ಮುಗ್ಧನಾಗಿ ಕಾಣಿಸಿಕೊಂಡಿರುವುದು ಮನೋಜ್. ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಆಗಿದೆ.
ಮೋಷನ್ ಪೋಸ್ಟರ್ ಬಿಡುಗಡೆ ನೆಪದಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ಈ ಚಿತ್ರದ ನಿರ್ದೇಶಕ ಪ್ರಭು ಶ್ರೀನಿವಾಸ್. ಚಿತ್ರಕ್ಕೆ ಶೂಟಿಂಗ್ ಮುಕ್ತಾಯವಾಗಿದೆ. ‘ವಿದೇಶದಲ್ಲಿ ನೆಲೆಸಿರುವ ಮಕ್ಕಳು, ಸ್ವದೇಶದಲ್ಲಿ ಕಾಯುತ್ತಿರುವ ಹೆತ್ತವರು ನಮ್ಮ ಚಿತ್ರದ ಮುಖ್ಯ ಪಿಲ್ಲರ್‌ಗಳು. ಪ್ರಮೋಷನಲ್ ಹಾಡಿನ ಚಿತ್ರೀಕರಣ ಮಾಡಬೇಕಿದೆ. ಈ ಹಾಡನ್ನು ನಟ ಪುನೀತ್ ರಾಜ್‌ಕುಮಾರ್ ಹಾಡಲಿದ್ದಾರೆ. ಸೆಪ್ಟೆಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡುವ ಪ್ಲಾನ್ ಇದೆ’ ಎನ್ನುತ್ತಾರೆ ಪ್ರಭು ಶ್ರೀನಿವಾಸ್.
ಮಠ, ಎದ್ದೇಳು ಮಂಜುನಾಥ ಜೋಡಿಯನ್ನು ಒಂದಾಗಿಸಿದ 'ರಂಗನಾಯಕ'!‘ನಾನು ತುಂಬಾ ಇಷ್ಟಪಟ್ಟು ಆಯ್ಕೆ ಮಾಡಿಕೊಂಡ ಪಾತ್ರವಿದು. ಮೊದಲ ಬಾರಿಗೆ ಸತ್ತ ವ್ಯಕ್ತಿ ಪಾತ್ರ ಮಾಡುತ್ತಿದ್ದೇನೆ. ನನಗೆ ಇಲ್ಲಿ ನಾಯಕಿ ಕೂಡ ಇದ್ದಾರೆ. ನನ್ನ ನಾಯಕಿ ಪದ್ಮಜಾ ರಾವ್. ಪೇಮೆಂಟು, ಕ್ಯಾರೆಕ್ಟರ್ ಎರಡೂ ಚೆನ್ನಾಗಿತ್ತು’ ಎಂದು ನಕ್ಕಿದ್ದು ಮಠ ಗುರುಪ್ರಸಾದ್.
ಶಶಾಂಕ್ ನಿರ್ದೇಶನದ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದವರು ಸಕಲೇಶಪುರ ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರ ಪುತ್ರ ಮನೋಜ್. ‘ನಗಿಸುತ್ತಲೇ ಭಾವುಕತೆಯ ನೆರಳಿನಲ್ಲಿ ನಿಲ್ಲಿಸುವ ಸಿನಿಮಾ ಇದು. ಒಂದು ಒಳ್ಳೆಯ ತಂಡದ ಜತೆ ಕೆಲಸ ಮಾಡಿದ ಖುಷಿ’ ಎಂಬುದು ನಟ ಮನೋಜ್ ಮಾತು. ನಿರಂಜನ್, ಅಶ್ವಿನ್ ಹಾಸನ್ ಚಿತ್ರದ ಉಳಿದ ಮುಖ್ಯ ಪಾತ್ರಧಾರಿಗಳು.