
ಡಾಲಿ ಧನಂಜಯ್ ನಟನೆಯ ‘ಟ್ವಿಂಟಿ ಒನ್ ಅವರ್ಸ್’ ಚಿತ್ರದ ಟ್ರೇಲರ್ ಬಿಡುಗಡೆ ಇತ್ತೀಚೆಗೆ ನಡೆಯಿತು. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಟ್ರೇಲರ್ ನೋಡಬಹುದು. ಮೇ.20ರಂದು ಕೆ ಆರ್ ಜಿ ಸ್ಟುಡಿಯೋ ಮೂಲಕ ಸಿನಿಮಾ ಬಿಡುಗಡೆ ಆಗುತ್ತಿದೆ. ಜೈಶಂಕರ್ ಪಂಡಿತ್ ನಿರ್ದೇಶನದ ಸಿನಿಮಾ ಇದಾಗಿದೆ. ‘ನಾನು ಈ ಚಿತ್ರದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದಾಗ ಯಾವ ಗ್ಯಾಪ್‌ನಲ್ಲಿ ಈ ಸಿನಿಮಾ ಮಾಡಿದೆ ಎಂದು ಗೆಳೆಯರು ಕೇಳಿದರು. ಇದು ಲಾಕ್ ಡೌನ್‌ನಲ್ಲಿ ಮಾಡಿದ ಸಿನಿಮಾ. ಮಲೆಯಾಳಿ ಹುಡುಗಿಯೊಬ್ಬಳು ಬೆಂಗಳೂರಿಗೆ ಬಂದು ಕಾಣೆಯಾಗುತ್ತಾಳೆ. ಆಕೆಯ ಹುಡುಕಾಟದ ಸುತ್ತ ನಡೆಯುವ ಕತೆ ಇದು. ನಾನು ತನಿಖಾಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಕರ್ನಾಟಕ ಹಾಗೂ ಕೇರಳದಲ್ಲಿ ನಡೆಯುವ ಕತೆಯಾಗಿರುವುದರಿಂದ ಕನ್ನಡ ಹಾಗೂ ಮಲಯಾಳಂನಲ್ಲಿ ಸಂಭಾಷಣೆ ಇರುತ್ತದೆ. ಆದರೆ ಕರ್ನಾಟಕದಲ್ಲಿ ಮಾತ್ರ ಕನ್ನಡದಲ್ಲೇ ಸಂಭಾಷಣೆ ಇರುತ್ತದೆ. ಇಲ್ಲಿ ಬಿಡುಗಡೆಯಾದ ನಂತರ ಕೇರಳದಲ್ಲಿ ತೆರೆ ಕಾಣುತ್ತದೆ’ ಎಂದರು ಡಾಲಿ ಧನಂಜಯ….
ನಿರ್ದೇಶಕ ಜೈಶಂಕರ್ ಪಂಡಿತ್ ಅವರು ಕನ್ನಡದವರೇ. ಆದರೆ, ಕೇರಳದಲ್ಲಿದ್ದಾರೆ. ಅವರು ಹಲವು ಜಾಹೀರಾತು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾ. ‘ಇದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಇಪ್ಪತ್ತೊಂದು ಗಂಟೆಗಳಲ್ಲಿ ನಡೆಯುವ ಕತೆ ಹೊಂದಿರುವ ಚಿತ್ರವಿದು. ಧನಂಜಯ… ನಿರ್ದೇಶಕರ ನಟ. ಅವರ ಜತೆ ಕೆಲಸ ಮಾಡಿದ್ದು ಸಂತೋಷ ತಂದಿದೆ. ದುರ್ಗಾ ಕೃಷ್ಣ, ಸುದೇವ್ ನಾಯರ್, ರಾಹುಲ… ಮಾಧವ್ ಚಿತ್ರದ ಮುಖ್ಯ ಪಾತ್ರಧಾರಿಗಳು’ ಇದು ನಿರ್ದೇಶಕರು ಕೊಡುವ ಮಾಹಿತಿ. ಬಾಲಕೃಷ್ಣ ಎನ್ ಎಸ್, ಅಭಿಷೇಕ್ ರುದ್ರಮೂರ್ತಿ, ಸುನೀಲ್ ಗೌಡ, ಪ್ರವೀಣ್ ಮಹದೇವ್ ಅವರು ಜತೆಗೂಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಹೆಡ್‌ಬುಷ್ ವಿವಾದ:
‘ಹೆಡ್‌ಬುಷ್ ನಮ್ಮ ತಂದೆ ಎಂ ಪಿ ಜಯರಾಜ್ ಅವರ ಜೀವನ ಆಧರಿಸಿದ ಸಿನಿಮಾ. ಆದರೂ ನಮ್ಮ ಅನುಮತಿ ತಗೊಂಡಿಲ್ಲ, ನಮ್ಮ ಅನುಮತಿ ಇಲ್ಲದೆ ಅವರಿಗೆ ಬೇಕಾದಂತೆ ಕತೆ ಮಾಡಿ, ನಮ್ಮ ತಂದೆಯನ್ನು ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ, ಒಬ್ಬ ವ್ಯಕ್ತಿಯ ನೈಜ ಕತೆ ಹೇಳುವಾಗ ಆ ವ್ಯಕ್ತಿಗೆ ಸಂಬಂಧಿಸಿದ ಕುಟುಂಬವನ್ನು ಕೇಳಬೇಕು ಎನ್ನುವ ತಿಳುವಳಿಕೆ ಇಲ್ಲವೇ?’
- ಇದು ನಟ ಹಾಗೂ ಜಯರಾಜ್‌ಪುತ್ರ ಅಜಿತ್ ಜಯರಾಜ್ ಮಾತುಗಳು. ಅಗ್ನಿ ಶ್ರೀಧರ್ ಕತೆ, ಚಿತ್ರಕಥೆ ಬರೆದು, ಶೂನ್ಯ ನಿರ್ದೇಶನ ಮಾಡುತ್ತಿರುವ, ಡಾಲಿ ಧನಂಜಯ್ ನಟಿಸುತ್ತಿರುವ ಹೆಡ್‌ಬುಷ್ ಕುರಿತು ಅವರು ಸಿಟ್ಟಾಗಿದ್ದಾರೆ. ‘ಈ ಚಿತ್ರವನ್ನು ಬಿಡುಗಡೆ ಮಾಡಬಾರದು, ಯಾವ ಕಾರಣಕ್ಕೂ ತಮ್ಮ ತಂದೆಯವರ ಜೀವನದ ಬಗ್ಗೆ ಸಿನಿಮಾ ಮಾಡಲು ಅನುಮತಿ ಕೊಡಬಾರದು’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬುಧವಾರ ದೂರು ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.