ಸಿನಿಮೋತ್ಸವಕ್ಕೆ ಮೀಸಲಿಟ್ಟ ಹಣವನ್ನು ಕಾರ್ಮಿಕರಿಗೆ: ನಿರ್ದೇಶಕ ಮಂಸೋರೆ

By Suvarna NewsFirst Published May 20, 2021, 12:27 PM IST
Highlights

ಕೊರೋನಾ ಕಾರಣದಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಲ್ಪಟ್ಟಿದೆ. ಈ ಕಾರಣ ಅದನ್ನು ರದ್ದುಗೊಳಿಸಿ, ಮೀಸಲಿಟ್ಟ ಹಣವನ್ನು ಬಡ ಕಾರ್ಮಿಕರಿಗೆ ನೀಡಿ ಎಂದು ನಿರ್ದೇಶಕ ಮಂಸೋರೆ  ಆಗ್ರಹಿಸಿದ್ದಾರೆ. 
 

ಕಳೆದ ವರ್ಷ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದ ಚಲನಚಿತ್ರೋದ್ಯಮ ಹಾಗೂ ಕಿರುತೆರೆ ಕಾರ್ಮಿಕರಿಗೆ, ತಂತ್ರಜ್ಞರ ಸಂಕಷ್ಟಕ್ಕೆ ಸ್ಪಂದಿಸಿದ್ದ ಕರ್ನಾಟಕ ರಾಜ್ಯ ಸರ್ಕಾರ ದಿನಸಿ ಪದಾರ್ಥಗಳನ್ನು ಪಡೆಯಲು 3000 ಸಾವಿರ ಮೌಲ್ಯದ 6000 ಸಾವಿರ ರಿಲಯನ್ಸ್‌ ಕೂಪನ್‌ಗಳನ್ನು ನೀಡುವ ಮೂಲಕ ನೆರವಾಗಿತ್ತು.

ಈ ವರ್ಷವೂ ಲಾಕ್‌ಡೌನ್‌ ಆಗಿರುವ ಕಾರಣ ಸರಕಾರ ನೆರವಾಗಿ ನಿಲ್ಲಬೇಕು, ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಈ ಪತ್ರವನ್ನು ನಿರ್ದೇಶಕ ಹಂಚಿಕೊಂಡು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. 

100 ಕಾರ್ಮಿಕರಿಗೆ 5000 ಸಾವಿರ ರೂ. ಧನ ಸಹಾಯ ಮಾಡಿದ ನಟ ಮನೋರಂಜನ್ ರವಿಚಂದ್ರನ್! 

'ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳೇ ಹಾಗೂ ಸುನಿಲ್ ಪುರಾಣಿಕ್, 2021ನೇ ಸಾಲಿನ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಸಂಪೂರ್ಣವಾಗಿ ರದ್ದುಗೊಳಿಸಿ. ಅದಕ್ಕಾಗಿ ಮೀಸಲಿಟ್ಟಿರುವ ಅನುದಾವನ್ನು ದಯವಿಟ್ಟು ಕನ್ನಡ ಚಿತ್ರರಂಗದ ಸಂಘಟಿತ- ಅಸಂಘಟಿತ ಎಲ್ಲಾ ಕಾರ್ಮಿಕರಿಗೆ ನೀಡುವ ಮೂಲಕ ಅವರನ್ನು ದಯವಿಟ್ಟು ಕಾಪಾಡಿ. ಅಕಾಡೆಮಿ ಅಧ್ಯಕ್ಷರು ಈಗಾಗಲೇ ದಿವಾಳಿಯಾಗಿರುವ ಸರ್ಕಾರದ ಅನುದಾನಕ್ಕಾಗಿ ಕಾಯದೇ, ದಯವಿಟ್ಟು ಚಲನಚಿತ್ರೋತ್ಸವಕ್ಕೆ ಬಿಡುಗಡೆಯಾಗಿದ್ದ ಹಣವನ್ನು ಕಾರ್ಮಿಕರ (ಎಲ್ಲಾ ವಿಭಾಗ) ಜೀವ ಉಳಿಸಲು ತುರ್ತಾಗಿ ಬಳಸಿಕೊಳ್ಳಬೇಕಾಗಿ ವಿನಂತಿ,' ಎಂದು ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದಿದ್ದಾರೆ. 

ಮಂಸೋರೆ ಬರೆದಿರುವ ಪೋಸ್ಟ್‌ಗೆ ವೀರೇಂದ್ರ ಎಂಬುವರು 'ಇದು ಬೆಸ್ಟು.. ಅಷ್ಟು ಕೋಟಿ ರೂಪಾಯಿಗಳ ಧನ ಸಹಾಯವಾದರೆ ಬಹಳಷ್ಟು ಜನ ಸ್ವಲ್ಪ ದಿನಗಳ ಮಟ್ಟಿಗೆ ಉಸಿರಾಡ್ಕೋತಾರೆ. ಈಗಿರೋ ಸ್ಥಿತಿ ನೋಡಿದ್ರೆ ಇನ್ನೂ ಮೂರು ತಿಂಗಳಂತೂ ಶೂಟಿಂಗ್ ಶುರುವಾಗೋಲ್ಲ,' ಎಂದು ಕಾಮೆಂಟ್ ಮಾಡಿದ್ದಾರೆ. ಅನೇಕರು ಕಾಮೆಂಟ್ ಮೂಲಕ ಮಂಸೋರೆ  ಅಭಿಪ್ರಾಯಕ್ಕೆ ಸಮ್ಮತಿ ವ್ಯಕ್ತಪಡಿಸಿದ್ದಾರೆ.

 

click me!