ಇದು ನಮ್ಮೆಲ್ಲರ ಬದುಕಿನ್ನು ತೋರಿಸುವ ಕತೆ: ಗಿರೀಶ್‌ ಕಾಸರವಳ್ಳಿ

By Kannadaprabha NewsFirst Published Dec 4, 2020, 10:00 AM IST
Highlights

ತುಂಬಾ ದಿನಗಳ ನಂತರ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರು ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾದರು. ಕೇಕ್‌ ಕಟ್‌ ಮಾಡಿ ಹುಟ್ಟು ಹಬ್ಬ ಆಚರಿಸಿಕೊಳ್ಳುವ ಜತೆಗೆ ತಮ್ಮ ನಿರ್ದೇಶನದ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಸಿನಿಮಾ ಸದ್ಯದಲ್ಲೇ ಚಿತ್ರಮಂದಿರಗಳಿಗೆ ಬರುತ್ತಿರುವುದಾಗಿ ಖುಷಿಯಿಂದ ಹೇಳಿಕೊಂಡರು. ಈಗಾಗಲೇ ಒಂದಿಷ್ಟುಚಿತ್ರೋತ್ಸವಗಳಲ್ಲಿ ಪ್ರದರ್ಶನ ಆಗಿ, ಇನ್ನೂ ಎರಡು ಚಿತ್ರೋತ್ಸವಗಳಿಗೆ ಆಯ್ಕೆ ಆಗಿರುವ ಚಿತ್ರದ ಕುರಿತು ಹೇಳಿಕೊಳ್ಳುವುದಕ್ಕೆ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು.

ಎಚ್‌ ಎಂ ರಾಮಚಂದ್ರ ಛಾಯಾಗ್ರಾಹಣ, ಎಸ್‌ ಆರ್‌ ರಾಮಕೃಷ್ಣ ಸಂಗೀತ, ಶಿವಕುಮಾರ್‌ ನಿರ್ಮಾಣದ ಈ ಚಿತ್ರವನ್ನು ಗಿರೀಶ್‌ ಕಾಸರವಳ್ಳಿ ನಿರ್ದೇಶ® ಮಾಡಿದ್ದಾರೆ. ಇದು ಜಯಂತ್‌ ಕಾಯ್ಕಿಣಿ ‘ಹಾಲಿನ ಮೀಸೆ’ ಕತೆ ಆಧರಿಸಿದ ಸಿನಿಮಾ.

ಬರೀ 14 ಸಿನಿಮಾ ಮಾಡಿದೆ ಅನ್ನುವ ಕೊರಗಿದೆ: ಗಿರೀಶ್‌ ಕಾಸರವಳ್ಳಿ 

‘ಈ ಸಿನಿಮಾ ಮುಗಿಸಿ ಒಂದು ವರ್ಷ ಆಯಿತು. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರಿಮಿಯರ್‌ ಪ್ರದರ್ಶನ ಕಂಡಿತು. ಆ ನಂತರ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಕು ಎಂದುಕೊಂಡ್ವಿ. ಆದರೆ, ಕೊರೋನಾ, ಲಾಕ್‌ಡೌನ್‌ ಪರಿಣಾಮದಿಂದ ಅದು ಸಾಧ್ಯವಾಗಲಿಲ್ಲ. ಈಗ ಎರಡು ಏಷ್ಯನ್‌ ಚಿತ್ರೋತ್ಸವಗಳ ಸ್ಪರ್ಧಾ ವಿಭಾಗಗಕ್ಕೆ ಆಯ್ಕೆ ಆಗಿದೆ. ಚಿತ್ರೋತ್ಸವಗಳಲ್ಲಿ ಪ್ರದರ್ಶನ ಮಾಡುತ್ತ, ಸೂಕ್ತ ಸಮಯ ನೋಡಿಕೊಂಡು ಚಿತ್ರಮಂದಿರಗಳಿಗೆ ಬರುತ್ತೇವೆ. ಇದು ಎಲ್ಲರು ನೋಡಬೇಕಾದ ಕತೆ. ಅವರ ಕತೆಗಳಲ್ಲಿ ಪಾತ್ರಗಳು ತಣ್ಣಗೆ ಪ್ರತಿಭಟಿಸುತ್ತಿರುತ್ತವೆ. ಅದು ತಮ್ಮತನಕ್ಕಾಗಿ. ಆ ರೀತಿ ಹಾತೊರೆಯುವ ನಾಗರಾಜನ ಕತೆ ಈ ಚಿತ್ರದ್ದು. ಆತ ಊರು ಬಿಟ್ಟು ಬೆಂಗಳೂರಿಗೆ ಬಂದಿದ್ದಾನೆ. ಆದರೆ ಊರಿನ ಬಾಂದವ್ಯ ಕಾಡುತ್ತಿದೆ. ಇಲ್ಲಿ ಇರಲಾಗದೆ, ಅಲ್ಲಿಗೂ ಹೋಗಲಾಗದೆ ಸಂಕಟ ಪಡುವ ನಾಗರಾಜನ ಪಾತ್ರದಲ್ಲಿ ನಾವೆಲ್ಲ ಇದ್ದೇವೆ. ಹೀಗಾಗಿ ಇದು ಒಬ್ಬರ ಜೀವನದ ಕತೆ ಅಲ್ಲ. ಹುಟ್ಟೂರು ಬಿಟ್ಟು ಬಂದವರ ಬಹುತೇಕರ ನೋವು- ನಲಿವುಗಳು. ಅವರೆಲ್ಲರನ್ನೂ ನಾಗರಾಜ ಪ್ರತಿನಿಧಿಸುತ್ತಾನೆ’ ಎಂದರು ಕಾಸರವಳ್ಳಿ.

ಏಳು ವರ್ಷಗಳ ನಂತರ ಸಿನಿಮಾ ನಿರ್ದೇಶನಕ್ಕಿಳಿದ ಗಿರೀಶ್‌ ಕಾಸರವಳ್ಳಿ! 

ಉಡುಪಿಯ ಸುತ್ತಮುತ್ತ ನಾಗರಾಜನ ಪಾತ್ರದ ಬಾಲ್ಯದ ಕತೆ ಚಿತ್ರೀಕರಣ ಆಗಿದೆ. ಬೆಂಗಳೂರಿನಲ್ಲಿ ದೊಡ್ಡವನಾದ ನಾಗರಾಜನ ಕ್ಯಾರೆಕ್ಟರ್‌ ಶೂಟಿಂಗ್‌ ಆಗಿದೆ. ಎರಡು ರೀತಿಯ ನಾಗರಾಜ ಹೇಗೆ ತೆರೆ ಮೇಲೆ ಮೂಡಿದ್ದಾನೆ ಎಂಬುದನ್ನು ಸಿನಿಮಾ ನೋಡಿ ತಿಳಿಯಬೇಕಂತೆ. ಪವಿತ್ರ, ಮಹಾಂತೇಶ್‌, ಅರಾಧ್ಯ ಮುಂತಾವರು ಚಿತ್ರದಲ್ಲಿ ನಟಿಸಿದ್ದಾರೆ. ಮಕ್ಕಳೇ ಚಿತ್ರದ ಹೈಲೈಟ್‌. ಎಚ್‌ ಎಂ ರಾಮಚಂದ್ರ ಅವರು ಕಾಸರವಳ್ಳಿ ಜತೆಗೆ ಇದು ನಾಲ್ಕನೇ ಸಿನಿಮಾ. ‘ಕಾಸರವಳ್ಳಿ ಅವರ ಜತೆಗೆ ಸಿನಿಮಾ ನಿರ್ಮಿಸಿದ್ದು ಖುಷಿ ವಿಚಾರ. ಒಂದು ಒಳ್ಳೆಯ ಸಿನಿಮಾ ಮಾಡಿದ್ದೇನೆಂಬ ಸಂತೋಷ ಇದೆ. ಸದ್ಯದಲ್ಲೇ ಈ ಚಿತ್ರವನ್ನು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡುತ್ತೇವೆ’ ಎಂದರು ನಿರ್ಮಾಪಕ ಶಿವಕುಮಾರ್‌. ಚಿತ್ರದ ಟ್ರೇಲರ್‌ ಪ್ರದರ್ಶನ ಜತೆಗೆ ಕಾಸರವಳ್ಳಿ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

click me!