
ಬೆಂಗಳೂರು: ಹಾಸ್ಯ ನಟ ಕೋಮಲ್ ಕುಮಾರ್ ಹಾಗೂ ನಟಿ ಸೋನಲ್ ಮೊಂತೆರೊ ಅಭಿನಯದ ʼರಿಲ್ಯಾಕ್ಸ್ʼ ಇದೇ ನವೆಂಬರ್ 27 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಶ್ರೀನಿವಾಸ್ ಮಂಡ್ಯ ನಿರ್ದೇಶನದ ಈ ಚಿತ್ರಕ್ಕೆ ಅಂಬಟಿ ಮಧುಮೋಹನ್ ಕೃಷ್ಣ ಕಥೆ ಬರೆದು ನಿರ್ಮಾಣ ಮಾಡಿದ್ದಾರೆ.
ಚಿತ್ರದ ಕಾರ್ಯಕ್ರಮದಲ್ಲಿ ನಟ ಕೋಮಲ್ ಕುಮಾರ್ ತಮ್ಮ ಸಿನಿ ಪಯಣ, ಹಿಂದಿನ ಸಂಭಾವನೆ ಹಾಗೂ ಈ ಸಿನಿಮಾದ ಸವಾಲುಗಳ ಕುರಿತು ಮನಬಿಚ್ಚಿ ಮಾತನಾಡಿರುವ ಮಾತುಗಳು ಈಗ ಸಿನಿಪ್ರಿಯರ ಗಮನ ಸೆಳೆಯುತ್ತಿವೆ. ಮಾತು ಆರಂಭಕ್ಕೂ ಮೊದಲು, ವೇದಿಕೆ ಮೇಲಿದ್ದ ಒಬ್ಬರನ್ನು ಉದ್ದೇಶಿಸಿ ಮಾತನ್ನಾಡಿದ್ದರು. ಇವರು ನನಗೆ ನೆಂಟರು ಎಂದು ಕರೆದರು. ತುಂಬಾ ಸಂತೋಷ ಎಂದು ಮಾತು ಮುಂದುವರಿಸಿದಾಗ.. ಆಗ ಯಾವ ರೀತಿ ಕ್ಯಾಚ್ ಹಾಕುತ್ತಿದ್ದೀರಾ ಎಂಬ ಪ್ರಶ್ನೆ ಗಾಳಿಯಲ್ಲಿ ತೂರಿ ಬಂತು. ಅದಕ್ಕೆ ನಗು ಆಡುತ್ತಲೇ ಉತ್ತರಿಸಿದ ಕೋಮಲ್, ನನಗೆ ಮದುವೆ ಆಗಿದೆ. ಕ್ಯಾಚ್ ಆಗುವಂತಹ ವಯಸ್ಸು ನನಗೆ ಇಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು. ನಂತರ ನನಗೆ ಕನ್ನಡ ಸಿನಿಮಾ ನೋಡೋರೆಲ್ಲರೂ ನೆಂಟರ ರೀತಿಯಲ್ಲೇ ಕಾಣುತ್ತಾರೆ ಎಂದರು.
ಮಾತು ಮುಂದುವರಿಸಿ.. ತಮ್ಮ ವೃತ್ತಿಜೀವನದ ಆರಂಭದ ದಿನಗಳನ್ನು ಮೆಲುಕು ಹಾಕಿದ ಕೋಮಲ್.. ನಾನು ಸಿನಿಮಾ ಇಂಡಸ್ಟ್ರಿಗೆ ಬಂದ ಆರಂಭದಲ್ಲೇ, ಆ ಕಾಲದಲ್ಲೇ ದಿನಕ್ಕೆ 4 ರಿಂದ 5 ಲಕ್ಷ ರೂಪಾಯಿ ಪೇಮೆಂಟ್ ತೆಗೆದುಕೊಳ್ಳುತ್ತಿದ್ದೆ. ಆದರೆ ಒಂದು ವರ್ಷದ ನಂತರ ಸಡನ್ ಆಗಿ ಕೆಲವರು 'ಕೋಮಲ್ ಬೇಡ' ಎಂದು ದೂರವಿಟ್ಟಾಗ ಸುಮಾರು ಒಂದು ವರ್ಷ ಕಾಲ ತಮ್ಮ ಕೈಯಲ್ಲಿ ಯಾವುದೇ ಸಿನಿಮಾ ಇರಲಿಲ್ಲ ಎಂದು ಅವರು ಆ ಕಷ್ಟದ ದಿನಗಳನ್ನು ನೆನೆದಿದ್ದಾರೆ.
ಸಿನಿಮಾಗಳಿಲ್ಲದೆ ಖಾಲಿ ಇದ್ದ ಸಂದರ್ಭದಲ್ಲಿ ನಿರ್ದೇಶಕ ದಿನೇಶ್ ಬಾಬು ಅವರನ್ನು ಭೇಟಿಯಾದ ಘಟನೆ ನೆನಪಿಸಿಕೊಂಡಿದ್ದಾರೆ. ಈ ಹಿಂದೆ ದಿನೇಶ್ ಬಾಬು ಅವರ 'ಆಕಾಶಗಂಗೆ' ಸಿನಿಮಾದಲ್ಲಿ ನಟಿಸಿದ್ದೆ. ಅವರ ಬಳಿ ನಾನು ಕಡಿಮೆ ಬಜೆಟ್‌ನಲ್ಲಿ ಒಂದು ಸಿನಿಮಾ ಮಾಡೋಣ ಎಂದಿದ್ದೆ. 'ದಿ ಡಿನ್ನರ್ ಗೇಮ್' ಎಂಬ ಫ್ರೆಂಚ್ ಸಿನಿಮಾ (ಹಿಂದಿಯಲ್ಲಿ 'ಬೇಜಾ ಫ್ರೈ' ಆಗಿತ್ತು) ಕಥೆಯನ್ನು ಬದಲಾಯಿಸಿ 'ಮಿಸ್ಟರ್ ಗರಗಸ' ಮಾಡೋಣ ಎಂದೆ. ಆ ಚಿತ್ರವನ್ನು ಕೇವಲ ಎಂಟೂವರೆ ದಿನಗಳಲ್ಲಿ ಚಿತ್ರೀಕರಣ ಮಾಡಿದೆವು. ಬರೀ 38 ಲಕ್ಷ ರೂ. ಬಜೆಟ್‌ನಲ್ಲಿ ತಯಾರಾದ ಆ ಸಿನಿಮಾ ಆ ಕಾಲದಲ್ಲೇ 75 ದಿನ ಪ್ರದರ್ಶನ ಕಂಡು ದೊಡ್ಡ ಹೆಸರು ತಂದುಕೊಟ್ಟಿತು ಎಂದು ತಿಳಿಸಿದ್ದಾರೆ.
ಆ ಚಿತ್ರದಲ್ಲಿ ಅನಂತ್ ನಾಗ್, ರಮೇಶ್ ಭಟ್, ನಟಿ ಲಕ್ಷ್ಮೀ ಅವರ ಪುತ್ರಿ ಸೇರಿದಂತೆ ಹಲವು ದಿಗ್ಗಜರು ನಟಿಸಿದ್ದರೂ, ತುಂಬಾ ಮಾತನಾಡುವ ತಮ್ಮ ಪಾತ್ರ ದೊಡ್ಡ ಮಟ್ಟದಲ್ಲಿ ಫೇಮಸ್ ಆಗಿತ್ತು. ತಮಿಳಿನ ಖ್ಯಾತ ಹಾಸ್ಯನಟ ವಿವೇಕ್ ಕೂಡ ಆ ಸಿನಿಮಾದ ರಿಮೇಕ್ ಹಕ್ಕುಗಳನ್ನು ಖರೀದಿಸಿದ್ದರು ಎಂದು ಕೋಮಲ್ ಸ್ಮರಿಸಿದ್ದಾರೆ.
ಸಾಮಾನ್ಯವಾಗಿ ನಾನು ತುಂಬಾ ಕಡಿಮೆ ಮಾತನಾಡುತ್ತೇನೆ. ಪ್ರೀತಿಯಿಂದ ಹಾಗೂ ಯೋಚಿಸಿ ಮಾತನಾಡುತ್ತೇನೆ. ಕನ್ನಡ ಸಿನಿಮಾ ನೋಡುವವರೆಲ್ಲರೂ ನನ್ನ ನೆಂಟರೇ. ಆದರೆ, ಈ ಹೊಸ ಸಿನಿಮಾ ನನಗೆ ವೈಯಕ್ತಿಕವಾಗಿ ಒಂದು ದೊಡ್ಡ ಸವಾಲಾಗಿದೆ. ಇಡೀ ಸಿನಿಮಾದ ಶೇ. 85 ರಿಂದ 90ರಷ್ಟು ಭಾಗ ಕೇವಲ ಇಬ್ಬರೇ ಕಾಣಿಸಿಕೊಳ್ಳುತ್ತೇವೆ. ಅದರಲ್ಲಿ ಕಾಮಿಡಿಯನ್ನು ನಾನೊಬ್ಬನೇ ಜಾಸ್ತಿ ನಿಭಾಯಿಸಬೇಕಾಗಿದೆ ಎಂದು ಕೋಮಲ್ ಕುಮಾರ್ ರಿಲ್ಯಾಕ್ಸ್ ಬಗ್ಗೆ ಕುತೂಹಲ ಮೂಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.