ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಲೀಲಾವತಿ ಶುಕ್ರವಾರ ನಿಧನರಾದರು. ಖಾಸಗಿ ಆಸ್ಪತ್ರೆಯಲ್ಲಿ ಅವರು ಇಹಲೋಕ ತ್ಯಜಿಸಿದ್ದಾರೆ.
ಬೆಂಗಳೂರು (ಡಿ.8): ಕನ್ನಡದ ಹಿರಿಯ ನಟಿ ಲೀಲಾವತಿ ಶುಕ್ರವಾರ ನಿಧನರಾದರು ಕನ್ನಡದಲ್ಲಿ 400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಅವರು ಕಳೆದ ಕೆಲವು ತಿಂಗಳುಗಳಿಂದ ವಯೋಸಹಜ ಕಾಯಿಲೆಯಿಂದ ಬಳುತ್ತಿದ್ದರು. ಶುಕ್ರವಾರ ಮಧ್ಯಾಹ್ನ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಅವರು ಅಸುನೀಗಿದ್ದಾರೆ. ಲೀಲಾವತಿ ಅವರ ನಿಧನಕ್ಕೆ ಕನ್ನಡ ಸಿನಿಮಾರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಲೀಲಾವತಿ ಅವರನ್ನು ಕೊನೆಯ ದಿನಗಳಲ್ಲಿ ಸಾಕಷ್ಟು ಬಾರಿ ಭೇಟಿ ಮಾಡಿದ್ದ ನಟಿ ಶೃತಿ, ಲೀಲಾವತಿ ಅವರು ನನ್ನ ಮತ್ತೊಂದು ಅಮ್ಮ. ಅವರನ್ನು ಕಳೆದುಕೊಂಡಿರುವ ಬೇಸರ ತಂದಿದೆ ಎಂದು ಹೇಳಿದ್ದಾರೆ.
ನಾನು ಲೀಲಾವತಿಯವನ್ನು ನೋಡಲು ಪದೇ ಪದೇ ಹೋಗುತ್ತಿದೆ. ಅದಕ್ಕೆ ಕಾರಣ ನೆಲಮಂಗಲದ ಸೋಲದೇವನಹಳ್ಳಿಯಲ್ಲಿರುವ ಅವರ ತೋಟ ಹಾಗೂ ನಮ್ಮ ತೋಟ ಬಹಳ ಸಮೀಪದಲ್ಲಿಯೇ ಇದೆ. ಅವರ ಮಗ ವಿನೋದ್ ರಾಜ್ ಕೂಡ ಚೆನ್ನಾಗಿ ಪರಿಚಿತರು. ವ್ಯವಸಾಯದ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಆಗಾಗ್ಗೆ ಅಲ್ಲಿಗೆ ಭೇಟಿ ನೀಡುತ್ತಿದ್ದೆ. ಅಮ್ಮ-ಮಗ ಇಬ್ಬರಿಗೂ ನನ್ನ ನೋಡಿದರೆ ಬಹಳ ಪ್ರೀತಿ. ಅಲ್ಲಿ ಅಡುಗೆ ಮಾಡಿ ನನಗೆ ಊಟ ಮಾಡಿ ಬಡಿಸುತ್ತಿದ್ದರು. ಹೆಚ್ಚಿನ ಹಬ್ಬಕ್ಕೆ ನನ್ನನ್ನು ಆಹ್ವಾನಿಸುತ್ತಿದ್ದರು. ಅವರ ಜೊತೆಗಿನ ದಿನಗಳನ್ನು ನಾನು ಈಗಲೂ ನೆನಪಿಸಿಕೊಳ್ಳುತ್ತೇನೆ. ಆ ದಿನಗಳನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಅಲ್ಲಿಗೆ ಹೋದಾಗಲೆಲ್ಲಾ ಹಿಂದಿನ ಕಾಲದ ಚಿತ್ರಗಳು ಆಗಿಲ ಕಾಲದ ಪರಿಸ್ಥಿತಿಗಳ ಬಗ್ಗೆ ನನ್ನೊಂದಿಗೆ ಮುಕ್ತವಾಗಿ ಹಂಚಿಕೊಳ್ಳುತ್ತಿದ್ದರು. ಅಂದಿನ ದಿನಗಳಲ್ಲಿ ಬಹಳ ಕಷ್ಟಪಟ್ಟು ಸಿನಿಮಾ ರಂಗದಲ್ಲಿ ಅವರು ಮೇಲೆದಿದ್ದರು. ಅದನ್ನು ನನ್ನೊಂದಿಗೆ ಹಂಚಿಕೊಂಡಿದ್ದರು. ಅವರು ನನ್ನ ಮತ್ತೊಂದು ಅಮ್ಮ. ಪ್ರತಿ ಬಾರಿಯೂ ಒಂದೇ ರೀತಿಯ ಪ್ರೀತಿ ವಿಶ್ವಾಸದಿಂದ ನನ್ನ ಮಾತನಾಡಿಸುತ್ತಿದ್ದರು ಎಂದು ನಟಿ ಶೃತಿ ಮಾತನಾಡಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಆಘಾತ, ಹಿರಿಯ ನಟಿ ಲೀಲಾವತಿ ನಿಧನ!
ಪ್ರತಿಯೊಬ್ಬ ಕಲಾವಿದರನ್ನು ಬಹಳ ಗೌರವದಿಂದ ಕಾಣುತ್ತಿದ್ದರು. ಅವರ ಜೊತೆಗೆ ಕಂಡಿದ್ದ ಪ್ರೀತಿ ಮತ್ತೆ ಸಿಗೋದಿಲ್ಲವಲ್ಲ ಎನ್ನುವ ಬೇಸರ ಈಗ ಕಾಡುತ್ತಿದೆ. ತುಂಬು ಜೀವನ, ಸಾರ್ಥಕ ಬದುಕನ್ನು ಅವರು ಕಂಡಿದ್ದಾರೆ. ವ್ಯವಸಾಯದ ಮೇಲಿನ ಪ್ರೀತಿ ಮಾತ್ರವಲ್ಲ, ಆ ಹಳ್ಳಿಯ ಸುತ್ತ ಮುತ್ತ ಅವರು ಕೊಟ್ಟಿರುವ ಪ್ರೀತಿಯನ್ನು ಎಲ್ಲರೂ ನೆನಪಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ನಟ ಅರ್ಜುನ್ ಸರ್ಜಾ ಲೀಲಾವತಿ ಮಾತನಾಡಿಸುವಾಗ ಗಳಗಳನೇ ಅತ್ತ ವಿನೋದ್‌ರಾಜ್!
ಅವರ ತೋಟಕ್ಕೆ ಹೋಗುತ್ತಿದ್ದರೆ ಅವರು ಮಾಡಿರುವ ಕೆಲಸಗಳು ಗೊತ್ತಾಗುತ್ತದೆ. ರಸ್ತೆಯಲ್ಲಿ ಹೀಗುವ ದನಕರುಗಳಿಗೆ ನೀರು ಕುಡಿಯಲು ಸಾಧ್ಯವಾಗುವಂತೆ ಮಾಡಿರುವ ವ್ಯವಸ್ಥೆ. ಹಳ್ಳಿಯ ಜನರಿಗೆ ಆರೋಗ್ಯ ಹದಗೆಟ್ಟಾಗ ಮಾಡಿರುವ ಆಸ್ಪತ್ರೆಯ ವ್ಯವಸ್ಥೆಗಳು ಎಲ್ಲವನ್ನೂ ಕಾಣಬಹುದು. ಇತ್ತೀಚೆಗಷ್ಟೇ ಪಶು ವೈದ್ಯಕೀಯ ಆಸ್ಪತ್ರೆಯನ್ನು ಆರಂಭಿಸಿದ್ದರು. ಅವರ ಸಾಮಾಜಿಕ ಕಳಕಳಿಯನ್ನು ಈಗ ನೆನಪಿಸಿಕೊಳ್ಳಬೇಕು. ಇನ್ನೊಂದಷ್ಟು ದಿನ ಅವರು ಇರಬೇಕಿತ್ತು. ಆದರೆ, ಅವರ ಕೊಡುಗೆ, ಅವರ ಸಿನಿಮಾಗಳು ಇನ್ನು ನಮ್ಮ ಪಾಲಿಗೆ ಮಾತ್ರ ಎಂದು ಶೃತಿ ಹೇಳಿದ್ದಾರೆ.
ನಾನು ಕಲಾವಿದೆಯಾಗಿ ಅವರನ್ನು ಭೇಟಿ ಮಾಡಿದ್ದಕ್ಕಿಂತ ಕೃಷಿಯ ಮೇಲಿನ ಆಸಕ್ತಿಗಾಗಿಯೇ ಅವರನ್ನು ಸಾಕಷ್‌ಟು ಬಾರಿ ಭೇಟಿ ಮಾಡಿದ್ದೆ. ಯಾವ ಹಣ್ಣು ಯಾವ ಊರಲ್ಲಿ ಸಿಗುತ್ತದೆ. ಯಾವ ಹಣ್ಣನ್ನು ಯಾವ ರಾಜ್ಯದಿಂದ ತಂದರೆ ಒಳ್ಳೆಯದು? ಈ ಎಲ್ಲಾ ಮಾಹಿತಿಗಳನ್ನು ನನಗೆ ನೀಡುತ್ತಿದ್ದರು. ಪ್ರತಿ ಮರದಲ್ಲಿ ಬರುವ ಹಣ್ಣನ್ನು ಬಹಳ ಪ್ರೀತಿಯಿಂದ ನೋಡುತ್ತಿದ್ದರು. ಮನೆಯಲ್ಲಿ ಇದ್ದ ಕೋಳಿ, ಕುರಿ ಎಲ್ಲದಕ್ಕೂ ಒಂದೊಂದು ಹೆಸರು ನೀಡುತ್ತಿದ್ದರು. ಇದು ನನಗೆ ಬಹಳ ಸ್ಫೂರ್ತಿ ತುಂಬಿದೆ ಎಂದು ಹೇಳಿದ್ದಾರೆ.