ನಟಿ ಪೂಜಾ ಗಾಂಧಿ 'ನಾನು 2006ರಲ್ಲಿ ಮೊದಲಬಾರಿಗೆ ಕರ್ನಾಟಕಕ್ಕೆ ಬಂದೆ. ಮುಂಗಾರು ಮಳೆ ಸಿನಿಮಾ ನಾಯಕಿಯಾಗಿ ನನ್ನನ್ನು ಇಲ್ಲಿಗೆ ಯೋಗರಾಜ್ ಭಟ್ ಸರ್ ಕರೆಸಿಕೊಂಡ್ರು. ಈ ಕಾರಣಕ್ಕೆ ನಾನು ಅವರಿಗೆ ಯಾವತ್ತೂ ಚಿರಋಣಿಯಾಗಿರುತ್ತೇನೆ' ಎಂದಿದ್ದಾರೆ.
ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ ಅವರು ಮದುವೆ ಆಗಿದ್ದಾರೆ ಎಂಬುದು ಬಹಳಷ್ಟು ಜನರಿಗೆ ಗೊತ್ತಿರುವ ಸಂಗತಿ. ಮಂತ್ರ ಮಾಂಗಲ್ಯ ಸಂಪ್ರದಾಯದಂತೆ ವಿಜಯ್ ಘೋರ್ಪಡೆ ಅವರನ್ನು ಮದುವೆ ಆಗಿರುವ ನಟಿ ಪೂಜಾ ಗಾಂಧಿ, ಮದುವೆ ಬಳಿಕ ಮೊಟ್ಟಮೊದಲು ಕುವೆಂಪು ಜನ್ಮಸ್ಥಳ ಕುಪ್ಪಳ್ಳಿಗೆ ಭೇಟಿ ಕೊಟ್ಟಿದ್ದಾರೆ. ಮಂತ್ರ ಮಾಂಗಲ್ಯ ಪದ್ಧತಿಯ ಮದುವೆಯನ್ನು ಖ್ಯಾತಿ ಗೊಳಿಸಿದ್ದು ಕುವೆಂಪು ಅವರಾದ್ದರಿಂದ ಅವರ ಸ್ಮರಣಾರ್ಥ ಪೂಜಾ ಗಾಂಧಿ ದಂಪತಿಗಳು ಕುವೆಂಪು ಜನ್ಮಸ್ಥಳಕ್ಕೆ ಭೇಟಿ ಕೊಟ್ಟಿದ್ದರು.
ಕುಪ್ಪಳ್ಳಿ ಬಳಿಕ ಮುಂಗಾರು ಮಳೆ ಶೂಟಿಂಗ್ ಸ್ಥಳವಾದ ಸಕಲೇಶಪುರಕ್ಕೆ ನಟಿ ಪೂಜಾ ಗಾಂಧಿ ಭೇಟಿ ಕೊಟ್ಟಿದ್ದಾರೆ. ತಮ್ಮ ಮೊಟ್ಟಮೊದಲ ಕನ್ನಡ ಸಿನಿಮಾ 'ಮುಂಗಾರು ಮಳೆ' ಶೂಟಿಂಗ್ ನೆನಪಿಗಾಗಿ ಅಲ್ಲಿಗೆ ಭೇಟಿ ಕೊಟ್ಟಿರುವ ಪೂಜಾ, ಅಲ್ಲಿನ ತಮ್ಮ ಭೇಟಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ವಿಡಿಯೋ ಮಾಡುತ್ತ ಮಾತನಾಡಿರುವ ಪೂಜಾ ಗಾಂಧಿ, ಮುಂಗಾರು ಮಳೆ ಶೂಟಿಂಗ್, ಅಂದಿನ ಅನುಭವಗಳು, ಆ ದಿನಗಳಲ್ಲಿ ನಿರ್ದೇಶಕ ಯೋಗರಾಜ್ ಭಟ್ ಅವರೊಂದಿಗಿನ ಒಡನಾಟ, ಸಹಕಲಾವಿದರ ಮಧ್ಯೆ ಕಳೆದ ಕ್ಷಣಗಳ ಸವಿನೆನಪು ಹೀಗೆ ಎಲ್ಲ ಸಂಗತಿಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಪೂಜಾ ಗಾಂಧಿ ಹೇಳಿರುವಂತೆ 'ನಾನು 2006ರಲ್ಲಿ ಮೊದಲಬಾರಿಗೆ ಕರ್ನಾಟಕಕ್ಕೆ ಬಂದೆ. ಮುಂಗಾರು ಮಳೆ ಸಿನಿಮಾ ನಾಯಕಿಯಾಗಿ ನನ್ನನ್ನು ಇಲ್ಲಿಗೆ ಯೋಗರಾಜ್ ಭಟ್ ಸರ್ ಕರೆಸಿಕೊಂಡ್ರು. ಈ ಕಾರಣಕ್ಕೆ ನಾನು ಅವರಿಗೆ ಯಾವತ್ತೂ ಚಿರಋಣಿಯಾಗಿರುತ್ತೇನೆ. ನಿರ್ಮಾಪಕ ಇ. ಕೃಷ್ಣಪ್ಪ, ಮ್ಯಾನೇಜರ್ ಗಂಗಾಧರ್, ಸಹಕಲಾವಿದರಾದ ಪದ್ಮಜಾ ರಾವ್, ಸುಧಾ ಬೆಳವಾಡಿ, ಅನಂತ್ ನಾಗ್ ಸರ್, ಗಣೇಶ್ ಸರ್ ಎಲ್ಲ ನಾನು ಈ ವೇಳೆ ನೆನಪಿಸಿಕೊಳ್ಳುತ್ತೇನೆ. ಅಂದು ನನಗೆ ಈ ಮನೆ, ಆ ಜನರು ಎಲ್ಲರೂ ಹೊಸಬರು. ಆದರೆ, ಇಂದು ನಾವೆಲ್ಲರೂ ಚಿರಪರಿಚಿತರು.
ಜೀವನದ ಬಹುದೊಡ್ಡ ಗುಟ್ಟನ್ನು ರಟ್ಟು ಮಾಡಿದ ನಟಿ ಪ್ರಿಯಾಂಕಾ ಚೋಪ್ರಾ!
ಅಂದು ಶೂಟ್ ಮಾಡಿದ್ದ ಮನೆಯ ಎಲ್ಲ ಜಾಗಗಳು, ಸುತ್ತಮುತ್ತಲಿನ ಸ್ಥಳಗಳು ಹೀಗೆ ಎಲ್ಲವೂ ನನ್ನ ನೆನಪಿನಲ್ಲಿ ಅಚ್ಚಳಿಯದೇ ಉಳಿದಿವೆ. ಮದುವೆ ಬಳಿಕ ನಾನು ಇಲ್ಲಿಗೆ ಬರಲೇಬೇಕು ಎಂದು ನಿರ್ಧರಿಸಿದ್ದೆ, ಅದರಂತೆ ಬಂದಿದ್ದೇನೆ. ನನಗೆ ಈಗ ಈ ಸ್ಥಳಗಳನ್ನು ನೋಡಿದರೆ ಹಳೆಯ ಸವಿನೆನಪುಗಳು ಮರುಕಳಿಸಿ ಹೇಳಲಾಗದಷ್ಟು ಖುಷಿ ಕೊಡುತ್ತಿವೆ. 40 ಎಕರೆ ಕಾಫೀ ತೋಟ, ಪಕ್ಕದಲ್ಲಿಯೇ ಹರಿಯುತ್ತಿರುವ ಹೇಮಾವತಿ ನದಿ, ಎಲ್ಲವನ್ನೂ ನಾನು ಮತ್ತೆ ನೋಡಿಕೊಂಡು, ಸುತ್ತಾಡಿಕೊಂಡು ಬಂದೆ. ನಾನು ಮತ್ತೆ ಮತ್ತೆ ಯೋಗರಾಜ್ ಭಟ್ ಸರ್‌ಗೆ ಈ ಮೂಲಕ ಕೃತಜ್ಞತೆ ಹೇಳುತ್ತಿದ್ದೇನೆ' ಎಂದಿದ್ದಾರೆ ನಟಿ ಪೂಜಾ ಗಾಂಧಿ.
ಭಾರತೀಯರು ಬರುತ್ತಿದ್ದೇವೆ ಎಂದು ಜಗತ್ತಿನ ಮುಂದೆ ತಲೆಯೆತ್ತಿ ಹೇಳ್ಬೇಕು; ರಾಕಿಂಗ್ ಸ್ಟಾರ್ ಯಶ್
ವಿಜಯ್ ಘೋರ್ಪಡೆ ಅವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಟಿ ಪೂಜಾ ಗಾಂಧಿ, ಸದ್ಯ ಗಂಡನ ಜೊತೆ ತಮ್ಮಿಷ್ಟದ ಜಾಗಕ್ಕೆ ಭೇಟಿ ಕೊಡುತ್ತ ಹನಿಮೂನ್ ಟೈಮ್ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಸಕಲೇಶಪುರದ ಮುಂಗಾರು ಮಳೆ ಚಿತ್ರೀಕರಣದ ಜಾಗದಲ್ಲಿರುವ ಮನೆಯಲ್ಲಿ ಬೀಡು ಬಿಟ್ಟಿರುವ ನಟಿ, ಇನ್ಮುಂದೆ ಎಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ, ಹೊರರಾಜ್ಯದಲ್ಲಿ ಹುಟ್ಟಿದ್ದರೂ ಕರ್ನಾಟಕಕ್ಕೆ ಬಂದು, ಕನ್ನಡ ಕಲಿತು, ಇದೀಗ ಅಚ್ಚಗನ್ನಡದಲ್ಲಿ ಮಾತನಾಡುತ್ತ ಕನ್ನಡವನ್ನು, ಕನ್ನಡಿಗರನ್ನು ಪ್ರೀತಿಸುತ್ತಿರುವ ನಟಿ ಪೂಜಾ ಗಾಂಧಿಗೊಂದು ಸೆಲ್ಯೂಟ್ ಹೇಳಬೇಕಲ್ಲವೇ?