ಗೆಳತಿ ಮಾಲಾಶ್ರೀ ದುಃಖದಲ್ಲಿ ಪಾಲುಗೊಳ್ಳಲಾಗದ, ಕಣ್ಣೀರು ಒರೆಸಲಾಗದ ನೋವಿನಿಂದ ಶ್ರುತಿ ಬರೆದ ಪತ್ರ!

Suvarna News   | Asianet News
Published : Apr 29, 2021, 10:07 AM ISTUpdated : Apr 29, 2021, 10:13 AM IST
ಗೆಳತಿ ಮಾಲಾಶ್ರೀ ದುಃಖದಲ್ಲಿ ಪಾಲುಗೊಳ್ಳಲಾಗದ, ಕಣ್ಣೀರು ಒರೆಸಲಾಗದ ನೋವಿನಿಂದ ಶ್ರುತಿ ಬರೆದ ಪತ್ರ!

ಸಾರಾಂಶ

ತಮ್ಮವರನ್ನು ಕಳೆದುಕೊಂಡಾಗ ಬೇಕಾಗಿರುವುದು ನಾನಿದ್ದೇನೆ ಎಂಬ ಸಹಾಯಹಸ್ತ. ಪತಿ ರಾಮು ಅವರನ್ನು ಕಳೆದುಕೊಂಡು ದುಃಖದಲ್ಲಿರುವ ನಟಿ ಮಾಲಾಶ್ರೀ ಅವರಿಗೆ ಶ್ರುತಿ ಸಾಂತ್ವನ ಹೇಳಿದ್ದಾರೆ. ಪ್ರೀತಿ, ಅಕ್ಕರೆ ತುಂಬಿದ ಪತ್ರ ಬರೆದಿದ್ದಾರೆ. ಧೈರ್ಯ ತುಂಬಿದ್ದಾರೆ. ಎಲ್ಲೆಲ್ಲೂ ನೋವಿನ ಸುದ್ದಿಯೇ ಕೇಳಿಬರುತ್ತಿರುವ ಈ ಹೊತ್ತಿನಲ್ಲಿ ಶ್ರುತಿ ನೋವಲ್ಲಿರುವ ತನ್ನ ಗೆಳತಿಗೆ ಬರೆದ ಪತ್ರ ಹೃದಯಸ್ಪರ್ಶಿಯಾಗಿದೆ. ಶ್ರುತಿ ಬರೆದ ಪತ್ರದ ಪೂರ್ಣಪಾಠ ಇಲ್ಲಿದೆ.

ಪ್ರೀತಿಯ ಗೆಳತಿ ಮಾಲಾಶ್ರೀ,

ಮೊದಲಿಗೆ ಭಾರವಾದ ಹೃದಯದಿಂದ ರಾಮು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ನಿಮ್ಮ ಅಭಿಮಾನಿಯಾಗಿ, ನಿಮ್ಮ ಸಹೋದ್ಯೋಗಿಯಾಗಿ, ಒಬ್ಬ ಗೆಳತಿಯಾಗಿ ಇಂಥ ದುಃಖದ ಪರಿಸ್ಥಿತಿಯಲ್ಲಿ ನಿಮ್ಮನ್ನು ನೋಡಲು ಸಾಧ್ಯವಾಗದೇ ಕನಿಷ್ಠ ನಿಮ್ಮ ಕಣ್ಣೀರನ್ನು ಒರೆಸಲು ಸಾಧ್ಯವಾಗದ ಈ ಕ್ರೂರ ಪರಿಸ್ಥಿತಿಗೆ ನನ್ನದೊಂದು ಧಿಕ್ಕಾರ.

ಮಾಲಾ, ನಿಮಗಾದ ನಷ್ಟವನ್ನು ಸರಿಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಮುಂಬರುವ ದಿನಗಳನ್ನು ಧೈರ್ಯವಾಗಿ ಎದುರಿಸಬೇಕಾಗಿರುವ ಅನಿವಾರ್ಯತೆ ಇದೆ. ನಿಮಗಾಗಿ, ನಿಮ್ಮ ಕೋಟ್ಯಾನುಕೋಟಿ ಅಭಿಮಾನಿಗಳಿಗಾಗಿ, ಬಹುಮುಖ್ಯವಾಗಿ ನಿಮ್ಮ ಮುದ್ದು ಮಕ್ಕಳ ಭವಿಷ್ಯಕ್ಕಾಗಿ.

ನೀವು ಹುಟ್ಟು ಹೋರಾಟಗಾರ್ತಿ. ಅದನ್ನು ನನ್ನ ಕಣ್ಣಾರೆ ನೋಡಿದ್ದೇನೆ. ಚಿತ್ರರಂಗದಲ್ಲಿ ಸೂಪರ್‌ಸ್ಟಾರ್‌ ಆಗಿ ಮಿಂಚಿದ್ದು ಕೇವಲ ಅದೃಷ್ಟದಿಂದ ಅಲ್ಲ, ನಿಮ್ಮ ಪರಿಶ್ರಮದಿಂದ. ನಂತರ ಒಬ್ಬ ಉತ್ತಮ ಗೃಹಿಣಿ ಆಗಿದ್ದು ಕೇವಲ ದೇವರ ವರದಿಂದ ಅಲ್ಲ, ತ್ಯಾಗ, ಸಹನೆ, ಪ್ರೀತಿಯಿಂದ. ಒಳ್ಳೆಯ ತಾಯಿ ಆಗಲೂ ಅಷ್ಟೇ ಶ್ರಮ, ಪ್ರಯತ್ನ ಇದ್ದೇ ಇರುತ್ತೆ... ಹೀಗೆ ಜೀವನದ ಎಲ್ಲಾ ಏರಿಳಿತದ ಸಂದರ್ಭವನ್ನು ಧೈರ್ಯವಾಗಿ ನಿಭಾಯಿಸಿಕೊಂಡು ಬಂದಿದ್ದೀರಿ.

ರಾಮು ಅವರಿಲ್ಲದ ಮುಂದಿನ ದಿನಗಳು ನಿಮಗೆ ಕಷ್ಟಕರವಾಗಿದ್ದರೂ, ಅದನ್ನು ನಿಭಾಯಿಸುತ್ತೀರಿ ಹಾಗೂ ನಿಭಾಯಿಸುವ ಶಕ್ತಿ ಆ ದೇವರು ನಿಮಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತಾ... ಆ ಕಷ್ಟದ ಹಾದಿಯಲ್ಲಿ ಎಂದಾದರೂ ಈ ಗೆಳತಿಯ ಸಹಾಯ ಬೇಕಾದಲ್ಲಿ im just one phone call away.

ಸೆಲೆಬ್ರಿಟಿಗಳ ಬದುಕಿನ ಬಗ್ಗೆ ಹಗುರವಾಗಿ ಕಾಮೆಂಟ್‌ ಮಾಡದಿರಿ: ಶ್ರುತಿ ಮನವಿ

ಸೋಷಲ್‌ ಮೀಡಿಯಾದಲ್ಲಿ ಮಾಲಾಶ್ರೀಯವರಿಗೆ ಪತ್ರ ಬರೆದಿರುವ ಶ್ರುತಿಯವರು ಪತ್ರದ ಜೊತೆಗೆ ಜನರಲ್ಲಿ ಮನವಿ ಮಾಡಿದ್ದಾರೆ. ‘ಮುಂದೊಂದು ದಿನ ಈ ಕುಟುಂಬದ ಸದಸ್ಯರು ಬದುಕನ್ನು ಕಟ್ಟಿಕೊಳ್ಳಲು ಅವರು ಮಾಡುವ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ ಹಾಗೂ ಸೆಲೆಬ್ರಿಟಿಗಳ ಬದುಕಿನ ಬಗ್ಗೆ ಸುಲಭವಾಗಿ ಮತ್ತು ಹಗುರವಾಗಿ ಕಾಮೆಂಟ್‌ ಮಾಡುವುದರ ಬದಲು, ಒಂದು ಒಳ್ಳೆಯ ಕಮಿಟ್ಮೆಂಟ್‌ ಇರಲಿ. ಏಕೆಂದರೆ ಬದುಕನ್ನು ಕಟ್ಟಿಕೊಳ್ಳುವ ಕೆಲಸ ಸುಲಭವಲ್ಲ’ ಎಂದು ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!