
ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯಾ ಅವರ ಮದುವೆ ವಿಚಾರ ಆಗಾಗ್ಗೆ ಚರ್ಚೆಗೆ ಬರುತ್ತಲೇ ಇರುತ್ತದೆ. ಅಭಿಮಾನಿಗಳು ಕೂಡ ‘ರಮ್ಯಾ ಯಾವಾಗ ಮದುವೆಯಾಗುತ್ತಾರೆ?’ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿರುತ್ತಾರೆ. ಇದೀಗ ಇದೇ ಪ್ರಶ್ನೆಗೆ ಸ್ವತಃ ರಮ್ಯಾ ಉತ್ತರಿಸಿದ್ದು, ಅವರ ಮಾತುಗಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.
ಕಾರ್ಯಕ್ರಮವೊಂದರಲ್ಲಿ ಪತ್ರಕರ್ತೆ ನಬಿಲಾ ಜಮಾಲ್ ಅವರು ನಟಿ ರಮ್ಯಾ ಅವರಿಗೆ ಮದುವೆ ಕುರಿತು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಮ್ಯಾ, ಮದುವೆಯನ್ನು ಜೀವನದ ಅನಿವಾರ್ಯ ಗುರಿಯಂತೆ ನೋಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ‘ಮದುವೆ ಆಗುವುದು ಅಷ್ಟು ಮುಖ್ಯವೇ? ಖಂಡಿತಾ ಇಲ್ಲ’ ಎಂದು ಹೇಳಿದ ರಮ್ಯಾ, ವ್ಯಕ್ತಿಯ ಗುರುತು ಅಥವಾ ಸಂತೋಷವನ್ನು ಮದುವೆಯೇ ನಿರ್ಧರಿಸುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ನಾನು ಯಾರೆಂಬುದು ಮದುವೆಯಿಂದ ನಿರ್ಧಾರ ಆಗುವುದಿಲ್ಲ. ಮದುವೆಯಾಗದೇ ಇದ್ದರೂ ನಾವು ಖುಷಿಯಾಗಿರಬಹುದು. ಜೀವನದಲ್ಲಿ ಖುಷಿಯಾಗಿರುವುದೇ ಎಲ್ಲಕ್ಕಿಂತ ಮುಖ್ಯ. ಒಂದೋ ಮದುವೆಯಾಗಿರಬೇಕು ಅಥವಾ ಖುಷಿಯಾಗಿರಬೇಕು ಎಂಬ ರೀತಿಯಲ್ಲಿ ಸಮಾಜ ನೋಡುವುದು ಸರಿಯಲ್ಲ. ನಿಮಗೆ ಏನು ಬೇಕು ಎಂಬುದನ್ನು ನೀವೇ ಆಯ್ಕೆ ಮಾಡಿಕೊಳ್ಳಬೇಕು’ ಎಂದು ರಮ್ಯಾ ಹೇಳಿದ್ದಾರೆ.
‘ಒಳ್ಳೆಯ ಸ್ನೇಹಿತನಾಗಿರುವ ಸಂಗಾತಿ ಸಿಕ್ಕರೆ..’
ಮದುವೆಯ ಬಗ್ಗೆ ಸಂಪೂರ್ಣವಾಗಿ ನಕಾರಾತ್ಮಕವಾಗಿ ಮಾತನಾಡದ ರಮ್ಯಾ, ಸೂಕ್ತ ಸಂಗಾತಿ ಸಿಕ್ಕರೆ ವೈವಾಹಿಕ ಜೀವನವೂ ಸುಂದರವಾಗಿರಬಹುದು ಎಂದು ಹೇಳಿದ್ದಾರೆ. ‘ಮದುವೆಯಾಗಿಯೂ ಖುಷಿಯಾಗಿ ಇರಬಹುದು. ನಿಮಗೆ ಹೊಂದಿಕೆಯಾಗುವಂತಹ ಸಂಗಾತಿ ಸಿಕ್ಕರೆ ಅದು ಚೆನ್ನಾಗಿರುತ್ತದೆ. ಅವರು ನಿಮ್ಮ ಉತ್ತಮ ಸ್ನೇಹಿತರಾಗಿದ್ದು, ಅವರೊಂದಿಗೆ ಇಡೀ ಜೀವನ ಕಳೆಯಲು ನೀವು ಬಯಸಿದರೆ ಮದುವೆ ಉತ್ತಮ ನಿರ್ಧಾರವಾಗಬಹುದು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮನುಷ್ಯರ ಬದುಕಿನಲ್ಲಿ ಬದಲಾವಣೆ ಸಹಜ. ಕಾಲ ಕಳೆದಂತೆ ನಮ್ಮ ಆಲೋಚನೆಗಳು, ಮೌಲ್ಯಗಳು ಮತ್ತು ಆದ್ಯತೆಗಳು ಬದಲಾಗುತ್ತವೆ. ಹೀಗಾಗಿ ಮದುವೆಯಲ್ಲಿ ಇಬ್ಬರ ನಡುವಿನ ಹೊಂದಾಣಿಕೆ ಮತ್ತು ಒಂದೇ ರೀತಿಯ ಮೌಲ್ಯಗಳು ಮುಖ್ಯ ಎಂದು ರಮ್ಯಾ ಹೇಳಿದ್ದಾರೆ.
ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ರಮ್ಯಾ, ಸದ್ಯಕ್ಕೆ ಮದುವೆ ಅಥವಾ ಸಂಬಂಧದ ಬಗ್ಗೆ ತಾವು ಹೆಚ್ಚು ಗಮನ ಹರಿಸುತ್ತಿಲ್ಲ ಎಂದು ಹೇಳಿದ್ದಾರೆ. ‘ನನಗೆ ಇನ್ನೂ ಆ ರೀತಿಯ ವ್ಯಕ್ತಿ ಸಿಕ್ಕಿಲ್ಲ. ನಾನು ಆ ಬಗ್ಗೆ ಗಮನ ಕೂಡ ಹರಿಸುತ್ತಿಲ್ಲ. ಕೆಲಸ ಮಾಡುವುದರಲ್ಲಿ ಬ್ಯುಸಿ ಆಗಿದ್ದೇನೆ. ರಿಲೇಷನ್‌ಶಿಪ್‌ಗೆ ಸಮಯ ಬೇಕು’ ಎಂದು ರಮ್ಯಾ ಹೇಳಿದ್ದಾರೆ.
ರಮ್ಯಾ ಅವರ ಈ ಮಾತುಗಳು ಇದೀಗ ಅಭಿಮಾನಿಗಳಲ್ಲಿ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿವೆ. ಸದ್ಯ ಮದುವೆಯ ವಿಚಾರದಲ್ಲಿ ಯಾವುದೇ ಆತುರವಿಲ್ಲ ಎಂಬುದನ್ನು ನಟಿ ಸ್ಪಷ್ಟಪಡಿಸಿದ್ದು, ಸೂಕ್ತ ವ್ಯಕ್ತಿ ಸಿಕ್ಕಾಗ ಮಾತ್ರ ಆ ಬಗ್ಗೆ ಯೋಚಿಸುವ ಮನಸ್ಥಿತಿಯಲ್ಲಿರುವಂತೆ ಕಾಣಿಸುತ್ತಿದೆ. ಇನ್ನೊಂದೆಡೆ, ರಮ್ಯಾ ಅವರು ಸಿನಿಮಾಗಳಲ್ಲಿ ಇನ್ನಷ್ಟು ಸಕ್ರಿಯವಾಗಿ ಕಾಣಿಸಿಕೊಳ್ಳಬೇಕು ಎಂಬುದು ಅವರ ಅಭಿಮಾನಿಗಳ ಬಹುಕಾಲದ ಬೇಡಿಕೆಯಾಗಿದೆ. ಮದುವೆಗಿಂತ ತಮ್ಮ ಸಂತೋಷ ಮತ್ತು ವೃತ್ತಿಜೀವನಕ್ಕೆ ಆದ್ಯತೆ ನೀಡುತ್ತಿರುವ ರಮ್ಯಾ ಅವರ ನಿಲುವಿಗೆ ಅಭಿಮಾನಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.