ಶೂಟಿಂಗ್‌ ಮುಗಿಸಿ ಸೆಲ್ಫ್ ಕ್ವಾರಂಟೈನ್‌ ಆಗುವೆ: ರಚಿತಾ ರಾಮ್‌

By Kannadaprabha NewsFirst Published Jun 26, 2020, 9:02 AM IST
Highlights

ಲಾಕ್‌ಡೌನ್‌ ಸಡಿಲಿಕೆಯ ನಂತರ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರುವ ಮೊದಲ ನಟಿ ರಚಿತಾ ರಾಮ್‌. ತೆಲುಗಿನ ‘ಸೂಪರ್‌ ಮಚ್ಚಿ’ ಚಿತ್ರೀಕರಣಕ್ಕಾಗಿ ಹೈದರಾಬಾದ್‌ನಲ್ಲಿರುವ ರಚಿತಾ ರಾಮ್‌ ಸಂದರ್ಶನ. 

ಬೆಂಗಳೂರು (ಜೂ. 26): ಲಾಕ್‌ಡೌನ್‌ ಸಡಿಲಿಕೆಯ ನಂತರ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರುವ ಮೊದಲ ನಟಿ ರಚಿತಾ ರಾಮ್‌. ತೆಲುಗಿನ ‘ಸೂಪರ್‌ ಮಚ್ಚಿ’ ಚಿತ್ರೀಕರಣಕ್ಕಾಗಿ ಹೈದರಾಬಾದ್‌ನಲ್ಲಿರುವ ರಚಿತಾ ರಾಮ್‌ ಸಂದರ್ಶನ.

ಲಾಕ್‌ಡೌನ್‌ ನಂತರದ ಮೊದಲ ಶೂಟಿಂಗ್‌ ಅನುಭವ ಹೇಗಿದೆ?

ಸರ್ಕಾರ ಅನುಮತಿ ಕೊಟ್ಟಮೇಲೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಲಾಕ್‌ಡೌನ್‌ ಮುಗಿದ ಮೇಲೆ ಹೀಗೆ ಶೂಟಿಂಗ್‌ಗೆ ಹಾಜರಾಗಿರುವ ಮೊದಲ ಕನ್ನಡ ನಟಿ ನಾನೇ ಇರಬೇಕು. ಒಳ್ಳೆಯ ಅನುಭವ. ಈಗಾಗಲೇ ಐದು ದಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇನೆ. ನನಗೆ ಯಾವುದೇ ರೀತಿಯಲ್ಲೂ ಭಯ ಇಲ್ಲ. ಅದಕ್ಕೆ ಕಾರಣ ಚಿತ್ರತಂಡ ತೆಗೆದುಕೊಂಡಿರುವ ಮುನ್ನೆಚ್ಚರಿಕೆಗಳು.

ಶೂಟಿಂಗ್‌ ಸೆಟ್‌ನಲ್ಲಿ ಏನೆಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೀರಿ?

ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೂ ಶೂಟಿಂಗ್‌. ನಾವೇ ಮೇಕಪ್‌ ಹಾಕಿಕೊಳ್ಳಬೇಕು. ಕ್ಯಾಮೆರಾ ಮುಂದೆ ನಿಲ್ಲುವ ಮೊದಲು ಮೇಕಪ್‌ ಕಲಾವಿದರು ಬಂದು ಫೈನಲ್‌ ಟಚ್‌ ಮಾಡುತ್ತಾರೆ. ಸೆಟ್‌ನಲ್ಲಿ ಕೆಲಸ ಮಾಡುವ ಎಲ್ಲರು ಮುಖ ಪೂರ್ತಿ ಕ್ಲೋಸ್‌ ಮಾಡಿಕೊಳ್ಳುವ ಫೇಸ್‌ ಮಾಸ್ಕ್‌, ಕೈಗವಸು ಧರಿಸಿರುತ್ತಾರೆ. ಅರ್ಧ ಗಂಟೆಗೆ ಒಮ್ಮೆ ಕೈ ತೊಳೆಯುತ್ತೇವೆ. ಚಿತ್ರೀಕರಣ ಆರಂಭವಾಗುವ ಮುನ್ನ ಇಡೀ ಶೂಟಿಂಗ್‌ ಸೆಟ್‌ಗೆ ಸ್ಯಾನಿಟೈಸರ್‌ ಮಾಡಿಸಲಾಗುತ್ತಿದೆ. ಸೆಟ್‌ನಲ್ಲಿ ಪಿಪಿ ಕಿಟ್‌ಗಳನ್ನು ಕೊಟ್ಟಿದ್ದಾರೆ.

ಅವಕಾಶಕ್ಕೆ ಏನು ಬೇಕಾದರೂ ಮಾಡುವ ನಟಿಯರಿಗೆ ಮಾದರಿಯಾಗಲಿ ಸಾಯಿ ಪಲ್ಲವಿ!

ತೆರೆ ಹಿಂದೆ ಕೆಲಸ ಮಾಡುವವರು ಶೂಟಿಂಗ್‌ ಮುಗಿಯುವ ತನಕ ಫೇಸ್‌ ಮಾಸ್ಕ್‌ ತೆಗೆಯುವಂತಿಲ್ಲ. ಏನೇ ಹೇಳಬೇಕು ಅಂದರೂ 10 ಮೀಟರ್‌ ದೂರದಲ್ಲಿ ನಿಂತು ಹೇಳಬೇಕು, ಸೆಟ್‌ನಲ್ಲಿ ಕೇವಲ 20 ಜನ ಮಾತ್ರ ಇದ್ದೇವೆ. ಸೆಟ್‌ಗೆ ಪ್ರವೇಶ ಮಾಡುವ ಮುನ್ನ ಎಲ್ಲರಿಗೂ ಥರ್ಮಲ್‌ ಸ್ಕ್ಯಾನ್‌ ಮಾಡಲಾಗುತ್ತಿದೆ.

ಇಷ್ಟೆಲ್ಲ ಸಾಹಸ ಮಾಡಿ ಶೂಟಿಂಗ್‌ ಮಾಡುವ ಅಗತ್ಯ ಇತ್ತು ಅನಿಸುತ್ತಿದೆಯೇ?

ಖಂಡಿತ ಇತ್ತು. ಯಾಕೆಂದರೆ ಶೇ.90ಭಾಗ ಚಿತ್ರೀಕರಣ ಮುಗಿಸಲಾಗಿತ್ತು. ಇನ್ನೂ ಕೇವಲ 10 ದಿನ ಮಾತ್ರ ಚಿತ್ರೀಕರಣ ಬಾಕಿ ಇತ್ತು. ಈ ಹತ್ತು ಪರ್ಸೆಂಟ್‌ ಶೂಟಿಂಗ್‌ಗಾಗಿ ನಿರ್ಮಾಪಕರು ಮೂರು ತಿಂಗಳಿಂದ ಕಾಯುತ್ತಿದ್ದರು. ಈ ನಡುವೆ ಎರಡು ತೆಲುಗು ರಾಜ್ಯ ಸರ್ಕಾರಗಳು ಶೂಟಿಂಗ್‌ಗೆ ಅನುಮತಿ ಕೊಟ್ಟಿದ್ದರಿಂದ ನಿರ್ಮಾಪಕರು ತುಂಬಾ ಕೇಳಿಕೊಂಡರು. ನನ್ನಿಂದ ತೊಂದರೆ ಆಗಬಾರದು, ನಿರ್ಮಾಪಕರ ಕಷ್ಟಕೂಡ ನೋಡಬೇಕು. ಸಿನಿಮಾ ಮೇಲಿನ ಪ್ರೀತಿ ಹಾಗೂ ನಿರ್ಮಾಪಕರು ಭರವಸೆ ಕೊಟ್ಟು ಮನವಿ ಮಾಡಿಕೊಂಡಿದ್ದಕ್ಕೆ ಧೈರ್ಯವಾಗಿ ನಾನೂ ಸೇರಿದಂತೆ ಎಲ್ಲರು ಶೂಟಿಂಗ್‌ನಲ್ಲಿ ಭಾಗವಹಿಸಿದ್ದೇವೆ.

ಶೂಟಿಂಗ್‌ನಲ್ಲಿ ಸಾಮಾಜಿಕ ಅಂತರ ಸಾಧ್ಯವೇ?

ಸಾಧ್ಯ ಇದೆ. ಅದಕ್ಕೆ ಬೇಕಾದ ತಯಾರಿಗಳನ್ನು ಮಾಡಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಾನು ಹೇಳಬೇಕಿರೋದು ನಾವು ಏನೂ ಮಾಡದೆ ಮನೆಯಲ್ಲೇ ಬಚ್ಚಿಟ್ಟುಕೊಂಡಿದ್ದಾಗಲೂ ಕೊರೋನಾ ಬರಲ್ಲ ಅಂತ ಗ್ಯಾರಂಟಿ ಇಲ್ಲ. ಕೊರೋನಾ ಬರದೆ ಹೋದರೆ ಬೇರೆ ಏನೋ ಖಾಯಿಲೆ ಬರಲ್ಲ ಅಂತಾನೂ ಹೇಳಲಾಗದು. ರಿಸ್ಕ್‌, ಫೈಟ್‌ ಇಲ್ಲದೆ ಬದುಕಲು ಆಗಲ್ಲ. ಆದರೆ, ಬೇರೆಯವರ ಆರೋಗ್ಯ ದೃಷ್ಟಿಯಿಂದ ಸರ್ಕಾರದ ಸೂಚನೆ ಮೇರೆಗೆ ನಾವು ಒಂದಿಷ್ಟುಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅದನ್ನು ಮಾಡಿಯೇ ಶೂಟಿಂಗ್‌ ಮಾಡುತ್ತಿದ್ದೇವೆ.

ಲಾಕ್‌ಡೌನ್‌ಗೂ ಮೊದಲು ಮತ್ತು ನಂತರ ಶೂಟಿಂಗ್‌ ಏನನಿಸುತ್ತಿದೆ?

ಮೊದಲು ಶೂಟಿಂಗ್‌ ಸೆಟ್‌ ಜನರಿಂದ ತುಂಬಿತ್ತು. ಒಂದೊಂದು ಕೆಲಸಕ್ಕೂ ಪ್ರತ್ಯೇಕವಾದ ವಿಭಾಗಗಳು ಇದ್ದು, ಪ್ರತಿಯೊಂದು ವಿಭಾಗದಲ್ಲೂ ಏಳೆಂಟು ಜನ ಇರುತ್ತಿದ್ದರು. ಸೆಟ್‌ಗೆ ಬಂದಾಗ ಎಲ್ಲರು ಹತ್ತಿರ ನಿಂತು ವಿಷ್‌ ಮಾಡುವುದು, ನಗುತ್ತ ಮಾತನಾಡಿಸುವುದು ಇತ್ತು. ಈಗ ಆ ಹತ್ತಿರದ ಸಂಬಂಧ ಮತ್ತು ಸಂಭ್ರಮಗಳು ಇಲ್ಲ. ಸೆಟ್‌ಗೆ ಬಂದಾಗಲೇ ಮಾಸ್ಕ್‌ ಹಾಕಿಕೊಂಡು ಬರುತ್ತೇವೆ. ದೂರ ದೂರ ನಿಂತೇ ಮಾತನಾಡಬೇಕು. ಮೇಕಪ್‌ ನಾವೇ ಮಾಡಿಕೊಳ್ಳಬೇಕು. ತೀರಾ ಅಗತ್ಯ ಇದ್ದಾಗ ಮೇಕಪ್‌ ಆರ್ಟಿಸ್ಟ್‌ ಅಲ್ಲೇ ಇರುತ್ತಾರೆ. ಸಂಭ್ರಮ ಕಡಿಮೆ ಆಗಿದೆ. ಆದರೆ, ಕೆಲಸ ಕಡಿಮೆ ಆಗಿಲ್ಲ.

'ಸೂಪರ್‌ ಮಚ್ಚಿ' ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ?

ತುಂಬಾ ಚೆನ್ನಾಗಿದೆ. ಮೆಗಾಸ್ಟಾರ್‌ ಚಿರಂಜೀವಿ ಅವರ ಅಳಿಯ ಕಲ್ಯಾಣ್‌ ದೇವ್‌ ಈ ಚಿತ್ರದ ನಾಯಕ. ದೊಡ್ಡ ಸಿನಿಮಾ ಕುಟುಂಬದಲ್ಲಿ ಕೆಲಸ ಮಾಡುತ್ತಿರುವ ಖುಷಿ ಇದೆ ನನಗೆ. ಪುಲಿ ವಾಸು ಚಿತ್ರದ ನಿರ್ದೇಶಕರು. ನನ್ನ ಪಾತ್ರದ ಚಿತ್ರೀಕರಣ ಇನ್ನೂ 9 ದಿನ ಇದೆ. ವಿಶೇಷ ಅಂದರೆ ಸದ್ಯಕ್ಕೆ ಇಡೀ ಟಾಲಿವುಡ್‌ನಲ್ಲಿ ಚಿತ್ರೀಕರಣ ಆಗುತ್ತಿರುವುದು ಎರಡೇ ಸಿನಿಮಾ. ಇದರಲ್ಲಿ ನಮ್ಮದೂ ಒಂದು.

ಈ ಚಿತ್ರದ ಮುಗಿದ ಮೇಲೆ ಬೇರೆ ಚಿತ್ರದ ಶೂಟಿಂಗ್‌ಗೆ ಹೋಗ್ತಿರಾ?

ಇಲ್ಲ. ‘ಸೂಪರ್‌ ಮಚ್ಚಿ’ ಸಿನಿಮಾ ಶೂಟಿಂಗ್‌ ಮುಗಿಸಿದ ಬೆಂಗಳೂರಿಗೆ ಬರುತ್ತೇನೆ. ಆದರೆ, ಮನೆಗೆ ಹೋಗಲ್ಲ. ನಮ್ಮ ಮನೆಯ ಕೆಳಗೆ ಒಂದು ಚಿಕ್ಕ ರೂಮು ಇದೆ. ಅಲ್ಲಿ ನಾನೇ 14 ದಿನ ಸೆಲ್ಫ್ ಕ್ವಾರಂಟೈನ್‌ ಆಗುತ್ತೇನೆ. ಆ ನಂತರ ಮನೆಗೆ ಹೋಗುತ್ತೇನೆ.

ನಿಮಗೆ ಲಾಕ್‌ಡೌನ್‌ನ ಮೊದಲ ಅನುಭವ ಕೊಟ್ಟಿದ್ದು ಯಾವುದು?

ನಾನು ನಿತ್ಯ ಓಡಾಡುತ್ತಿದ್ದ ವಿಮಾನ ನಿಲ್ದಾಣ. ಬೆಂಗಳೂರು- ಹೈದರಾಬಾದ್‌ಗೆ ಅಂತ ಓಡಾಡುತ್ತಿದ್ದಾಗ ಸಾವಿರಾರು ಜನರಲ್ಲಿ ಏರ್‌ಪೋರ್ಟ್‌ನಲ್ಲಿ ನೋಡುತ್ತಿದ್ದೆ. ಆದರೆ, ಲಾಕ್‌ಡೌನ್‌ ಆದ ಮೊದಲ ದಿನ ಏರ್‌ಪೋರ್ಟ್‌ಗೆ ಬಂದಾಗ ಲೆಕ್ಕ ಹಾಕಿದರೂ 50 ಜನ ಕಾಣಲಿಲ್ಲ. ಜನರೇ ಇಲ್ಲದೆ ಏರ್‌ಪೋರ್ಟ್‌ ನೋಡಿಯೇ ಲಾಕ್‌ಡೌನ್‌ ತೀವ್ರತೆ ಅರ್ಥ ಮಾಡಿಕೊಂಡೆ.

ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದೀರಾ?

ಲಾಕ್‌ಡೌನ್‌ನಲ್ಲಿ ಸಾಕಷ್ಟುಕತೆಗಳನ್ನು ಕೇಳಿದೆ. ಇದರಲ್ಲಿ ಕನ್ನಡದಲ್ಲೇ ಒಟ್ಟು 7 ಕತೆಗಳು ಇಷ್ಟಆಗಿವೆ. ಸರದಿಯಂತೆ ಒಂದರ ನಂತರ ಒಂದು ಸಿನಿಮಾ ಘೋಷಣೆ ಮಾಡುತ್ತಾರೆ. ಈ ಚಿತ್ರದ ಕತೆಗಳು ನನಗೆ ತುಂಬಾ ವಿಶೇಷ ಅನಿಸಿವೆ. ಯಾಕೆಂದರೆ ನಾನು ಮಾಡದೆ ಇರುವ ಪಾತ್ರಗಳನ್ನು ರೂಪಿಸಿದ್ದಾರೆ. ನಾಲ್ಕು ಚಿತ್ರಗಳನ್ನು ಆದಷ್ಟುಬೇಗ ಘೋಷಣೆ ಮಾಡುತ್ತಾರೆ.

‘ಏಪ್ರಿಲ್‌ ಡಿಸೋಜಾ’ ಚಿತ್ರಕ್ಕೆ ಚಿರಂಜೀವಿ ಸರ್ಜಾ ಇದ್ದರು. ಈಗ ಅವರಿಲ್ಲ...

ಚಿರಂಜೀವಿ ಸರ್ಜಾ ಇಲ್ಲ ಅಂತ ಬೇರೆಯವರು ಹೇಳಿದಾಗಲೇ ಗೊತ್ತಾಗುತ್ತಿದೆ. ಈ ಸಿನಿಮಾ ಮುಹೂರ್ತ ಆಗಿತ್ತು. ಈಗ ಅವರು ಇಲ್ಲ. ಇದು ಮಹಿಳಾ ಕೇಂದ್ರಿತ ಸಿನಿಮಾ. ಚಿತ್ರವನ್ನು ಚಿರು ಅವರಿಗೆ ಅರ್ಪಣೆ ಮಾಡಲಿದ್ದೇವೆ.

- ಆರ್‌ ಕೇಶವಮೂರ್ತಿ

click me!