
ರಾಕಿಂಗ್ ಸ್ಟಾರ್ ಯಶ್ ಅವರಿಗೆ ಸಿನಿಮಾ, ಸ್ಟಾರ್‌ಡಮ್, ಬ್ಯುಸಿ ಶೆಡ್ಯೂಲ್ ಎಷ್ಟೇ ಇದ್ದರೂ ಕುಟುಂಬಕ್ಕೆ ನೀಡುವ ಪ್ರಾಮುಖ್ಯತೆ ಮಾತ್ರ ಎಂದಿಗೂ ಕಡಿಮೆಯಾಗಿಲ್ಲ. ಅದರಲ್ಲೂ ತಂಗಿ ನಂದಿನಿ ಜೊತೆಗಿನ ಅವರ ಬಾಂಧವ್ಯ ಎಷ್ಟು ವಿಶೇಷ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ರಕ್ಷಾ ಬಂಧನದ ಪ್ರಯುಕ್ತ ನಂದಿನಿ ಎಂದಿನಂತೆ ಅಣ್ಣ ಯಶ್ ಅವರನ್ನು ಭೇಟಿಯಾಗಿ ರಾಖಿ ಕಟ್ಟಿದ್ದು, ಈ ಸುಂದರ ಕ್ಷಣದ ಫೋಟೋಗಳು ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿವೆ.
ಪ್ರತಿ ವರ್ಷ ರಕ್ಷಾ ಬಂಧನದಂದು ಅಣ್ಣನಿಗೆ ರಾಖಿ ಕಟ್ಟುವುದನ್ನು ನಂದಿನಿ ಮಿಸ್ ಮಾಡುವುದಿಲ್ಲ. ಈ ಬಾರಿಯೂ ವಾಡಿಕೆಯಂತೆ ಯಶ್ ಅವರ ನಿವಾಸಕ್ಕೆ ತೆರಳಿದ ಅವರು, ಪ್ರೀತಿಯಿಂದ ಅಣ್ಣನ ಕೈಗೆ ರಾಖಿ ಕಟ್ಟಿ ಸಿಹಿ ತಿನ್ನಿಸಿದ್ದಾರೆ. ಬಳಿಕ ಯಶ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ. ಅಣ್ಣ-ತಂಗಿಯ ಈ ಆತ್ಮೀಯ ಕ್ಷಣಕ್ಕೆ ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಕೂಡ ಸಾಥ್ ನೀಡಿದ್ದಾರೆ.
ಸದ್ಯ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯ ಸಂಭ್ರಮದಲ್ಲಿದ್ದಾರೆ. ಸಿನಿಮಾ ಕುರಿತ ಚರ್ಚೆ, ಪ್ರಚಾರ ಹಾಗೂ ಅಭಿಮಾನಿಗಳ ನಿರೀಕ್ಷೆಗಳ ನಡುವೆ ಕೂಡ ಯಶ್ ತಮ್ಮ ಕುಟುಂಬದೊಂದಿಗೆ ವಿಶೇಷ ದಿನವನ್ನು ಆಚರಿಸಿಕೊಂಡಿದ್ದಾರೆ.
ಯಶ್ ಮತ್ತು ನಂದಿನಿ ಅವರ ಬಾಂಧವ್ಯ ಎಷ್ಟು ಗಟ್ಟಿಯಾಗಿದೆ ಅನ್ನೋದಕ್ಕೆ ಈ ಹಿಂದೆಯೂ ಹಲವು ಉದಾಹರಣೆಗಳಿವೆ. ಇತ್ತೀಚೆಗೆ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ತಮ್ಮ ತಂಗಿಯ ಬಗ್ಗೆ ಮಾತನಾಡಿದ್ದ ಯಶ್, ನಂದಿನಿ ತಮ್ಮ ಪಾಲಿನ ಅತ್ಯಂತ ಫೇವರಿಟ್ ವ್ಯಕ್ತಿ ಎಂದು ಹೇಳಿಕೊಂಡಿದ್ದರು. ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದವು.
ಅಷ್ಟೇ ಅಲ್ಲ, ‘ಕೆಜಿಎಫ್’ ಸರಣಿಯ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೂ ಯಶ್ ರಕ್ಷಾ ಬಂಧನವನ್ನು ತಂಗಿಯೊಂದಿಗೆ ಆಚರಿಸಿಕೊಂಡಿದ್ದರು. ಇದೀಗ ‘ಟಾಕ್ಸಿಕ್’ ಸಿನಿಮಾದ ಹೈಪ್ ನಡುವೆಯೂ ಆ ಸಂಪ್ರದಾಯ ಮುಂದುವರಿದಿದೆ. ಈ ಬಾರಿ ನಂದಿನಿ ಅಣ್ಣನ ಜೊತೆಗಿನ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಭಾವನಾತ್ಮಕ ಸಂದೇಶವನ್ನೂ ಬರೆದಿದ್ದಾರೆ.
ಕೆಲವು ಸಂಬಂಧಗಳು ಕೇವಲ ರಕ್ತಸಂಬಂಧದಿಂದ ಮಾತ್ರ ರೂಪುಗೊಳ್ಳುವುದಿಲ್ಲ. ಜೀವಮಾನದ ನೆನಪುಗಳು, ಪ್ರೀತಿ, ಪರಸ್ಪರ ತಿಳುವಳಿಕೆ ಮತ್ತು ಎಲ್ಲಾ ಸಂದರ್ಭಗಳಲ್ಲೂ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುವುದರಿಂದ ಅವು ಮತ್ತಷ್ಟು ಗಟ್ಟಿಯಾಗುತ್ತವೆ. ನಮ್ಮ ಈ ಬಾಂಧವ್ಯ ನನ್ನ ಜೀವನದ ಅತ್ಯಮೂಲ್ಯ ಸಂಬಂಧಗಳಲ್ಲಿ ಒಂದಾಗಿದೆ. ಯಾವುದೇ ಅಂತರ, ಭಿನ್ನಾಭಿಪ್ರಾಯಗಳು ಅಥವಾ ಸಂದರ್ಭಗಳು ನಮ್ಮ ನಡುವಿನ ಈ ಬಾಂಧವ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ. ನಿನ್ನನ್ನು ಅಪಾರವಾಗಿ ಪ್ರೀತಿಸುವ ಮತ್ತು ಸದಾ ನಿನಗೆ ಬೆಂಬಲವಾಗಿ ನಿಲ್ಲುವ ಸಹೋದರಿ ನಿನಗೆ ಯಾವಾಗಲೂ ಇರುತ್ತಾಳೆ. ರಕ್ಷಾ ಬಂಧನದ ಶುಭಾಶಯಗಳು ಅಣ್ಣಾ.. ಎಂದೆಂದಿಗೂ ನಿನ್ನ ಸಹೋದರಿ, ಸದಾ ನಿನ್ನೊಂದಿಗೆ ಎಂದು ನಂದಿನಿ ಬರೆದುಕೊಂಡಿದ್ದಾರೆ.
ಇನ್ನು ಯಶ್ ಮತ್ತು ನಂದಿನಿ ಅವರ ಈ ಅಪರೂಪದ ಬಾಂಧವ್ಯದ ಕ್ಷಣಗಳು ಅಭಿಮಾನಿಗಳ ಮನ ಗೆದ್ದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾ ಜಗತ್ತಿನಲ್ಲಿ ಯಶ್ ಎಷ್ಟೇ ಎತ್ತರಕ್ಕೆ ಬೆಳೆದರೂ, ಕುಟುಂಬದ ವಿಚಾರದಲ್ಲಿ ಅವರು ಇಂದಿಗೂ ಅದೇ ಪ್ರೀತಿಯ ಅಣ್ಣ ಅನ್ನೋದನ್ನು ಈ ರಕ್ಷಾ ಬಂಧನ ಮತ್ತೊಮ್ಮೆ ತೋರಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.