ಸ್ನೇಹ, ಪ್ರೀತಿ, ಸ್ಫೂರ್ತಿ ತುಂಬಿ ಬದುಕುಗಳನ್ನು ಮಾಡಿದ್ದೀರಿ ಪೂರ್ತಿ! ತೀರದ ಸಂಕಟ. ಮಾಸದ ಮೌನ. ಆರದ ಗಾಯ. ನಿಮ್ಮ ನಗು ಮೊಗದ ನೆನಪುಗಳಿಂದಾಗಲಿ ಎಲ್ಲ ನೋವುಗಳು ಮಾಯ! ನೀವು ಎಲ್ಲಾ ಶಕ್ತಿಯೊಂದಿಗೆ ನಮ್ಮ ನೆನಪುಗಳಲ್ಲಿ ಬದುಕುತ್ತೀರಿ ಎಂದಿದ್ದಾರೆ ವಿಜಯ್ ರಾಘವೇಂದ್ರ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ನಿಧನರಾಗಿ ಇಂದಿಗೆ 11 ದಿನಗಳು ಕಳೆದಿದೆ. ಆದರೆ, ಅಭಿಮಾನಿಗಳ ಮನದಲ್ಲಿನ ನೋವು ಸ್ವಲ್ಪವೂ ಕಡಿಮೆ ಆಗಿಲ್ಲ. ಪ್ರತಿದಿನ ಸಮಾಧಿ ದರ್ಶನಕ್ಕೆ ಸಾವಿರಾರು ಅಭಿಮಾನಿಗಳು ಬರುತ್ತಲೇ ಇದ್ದಾರೆ. ಇಂದು ಪುನೀತ್ ಅವರ 11ನೇ ದಿನದ ಕಾರ್ಯವನ್ನು ನೆರವೇರಿಸಲಾಗಿದೆ. ಡಾ. ರಾಜ್ ಕುಟುಂಬದವರು ಪುನೀತ್ ನಿವಾಸ ಮತ್ತು ಸಮಾಧಿ ಬಳಿ ಪೂಜೆ ಸಲ್ಲಿಸಿದ್ದಾರೆ. ಈ ನಡುವೆ ಸ್ಯಾಂಡಲ್‌ವುಡ್‌ನ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ (Vijay Raghavendra), ಪುನೀತ್ ಬಗ್ಗೆ ಭಾವನಾತ್ಮಕವಾದ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ (Instagram), 'ಸ್ನೇಹ, ಪ್ರೀತಿ, ಸ್ಫೂರ್ತಿ ತುಂಬಿ ಬದುಕುಗಳನ್ನು ಮಾಡಿದ್ದೀರಿ ಪೂರ್ತಿ! ತೀರದ ಸಂಕಟ. ಮಾಸದ ಮೌನ. ಆರದ ಗಾಯ. ನಿಮ್ಮ ನಗು ಮೊಗದ ನೆನಪುಗಳಿಂದಾಗಲಿ ಎಲ್ಲ ನೋವುಗಳು ಮಾಯ! ನೀವು ಎಲ್ಲಾ ಶಕ್ತಿಯೊಂದಿಗೆ ನಮ್ಮ ನೆನಪುಗಳಲ್ಲಿ ಬದುಕುತ್ತೀರಿ. ನಮ್ಮ ಅಪ್ಪು' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಪುನೀತ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
undefined
ನಾನು ಕಂಡಿದ್ದ ಕನಸು ಕನಸಾಗಿಯೇ ಹೋಯಿತು: ನಿರ್ದೇಶಕ ಮಂಸೋರೆ
ವಿಜಯ್ ರಾಘವೇಂದ್ರ ಅವರು ನಿನ್ನೆಯಷ್ಟೇ ಕನ್ನಡದ ಖಾಸಗಿ ಚಾನೆಲ್‌ನಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದಲ್ಲಿ ಪುನೀತ್ ಅವರಿಗೆ ಗೌರವ ಸಲ್ಲಿಸಲು 'ಅಪ್ಪು ನಮನ' ಸಂಚಿಕೆಯಲ್ಲಿ ಪಾಲ್ಗೊಂಡು, ಡ್ಯಾನ್ಸಿಂಗ್‌ನಲ್ಲಿ ನನಗೆ ಮೂನ್ ವಾಕ್ ಹೇಳಿಕೊಟ್ಟವರು , ಸೈಕಲ್ ತುಳಿಯುವುದನ್ನು ಹೇಳಿಕೊಟ್ಟವರು, ನನಗೆ ಸಪೋರ್ಟ್ ಸಿಸ್ಟಮ್ ಆಗಿದ್ದವರು ಅಪ್ಪು ಎಂದು ಅವರ ಜೊತೆಗಿನ ಒಡನಾಟದ ಬಗೆಗಿನ ಎಲ್ಲ ವಿಚಾರಗಳನ್ನು ಮೆಲುಕು ಹಾಕುತ್ತಾ ವೇದಿಕೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಇನ್ನು ವಿಜಯ್ ರಾಘವೇಂದ್ರ ಇನ್‌ಸ್ಟಾಗ್ರಾಮ್ ಈ ಪೋಸ್ಟ್‌ಗೆ ನೆಟ್ಟಿಗರು ಕೂಡಾ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
* ಅಪ್ಪು ಅನ್ನೋ ಪದಕ್ಕೆ ನೂರಾರು ಅರ್ಥ ಹುಟ್ಟು ಹಾಕಿದ ಪುನೀತ್, ಒಳ್ಳೆಯದನ್ನೇ ಮಾಡಿದ್ದರು, ಸಹಾಯಕ್ಕಾಗಿ ಅಪ್ಪು, ಸ್ನೇಹಕ್ಕಾಗಿ ಅಪ್ಪು, ಪ್ರೀತಿಗಾಗಿ ಅಪ್ಪು, ವಾತ್ಸಲ್ಯಕಾಗಿ ಅಪ್ಪು, ಜೀವನದ ಮೌಲ್ಯ ಅಪ್ಪು, ಕುಟುಂಬಕ್ಕಾಗಿ ಅಪ್ಪು, ಹೀಗೇ ನೂರಾರು ಅರ್ಥ ಕೊಡುವ ಅಪ್ಪು ಪುನೀತ.
* ನಿಮ್ಮ ಜೊತೆಯಲ್ಲಿ ಅಪ್ಪುನ ನೋಡುತ್ತಾ ಇದ್ದರೆ ತುಂಬಾ ಖುಷಿ ಆಗುತ್ತೆ ಆದರೆ ಅಪ್ಪು ಇಲ್ಲ ಅಂತ ಅನಿಸಿ ಒಂದು ಕ್ಷಣ ಮನಸ್ಸಿಗೆ ದುಃಖ, ನೋವು ಎರಡು ಆಗುತ್ತೆ.
* ಈ ಆತ್ಮಕ್ಕೆ ಪರಮಾತ್ಮ ನೀವು. ನೀವು ಇಲ್ಲ ಅಂತ ನಾನು ಇವತ್ತು ನಂಬಲ್ಲ. ಇನ್ನು ಯಾವತ್ತೂ ನಂಬಲ್ಲ ನನಗೆ ನೆನಪು ಇರುವುದು ನಿಮ್ಮ ನಗು ಅಷ್ಟೇ.
* ಕಣ್ಣಿರೂ ಕೇಳುತ್ತಿಲ್ಲ ನೀವು ಇಲ್ಲ ಎಂಬ ಕಾರಣವ, ಹಠವಿಡಿದು ಹೊರಬರುತಿದೆ ಪದೇ ಪದೇ ಕಣ್ಣಹನಿಯಾಗಿ, ಹೇಗೆ ತಡೆಯಲಿ ಈ ನೋವ ಅಪ್ಪು.
* ನೀವಾಡೋ ಮಾತೆಲ್ಲ ಜೇನಿನಂತೆ ನಗುವಾಗ ಮೊಗವೊಂದು ಹೂವಿನಂತೆ. ನೀವೊಂದು ಸಕ್ಕರೆಯ ಗೊಂಬೆಯಂತೇ. ಅಪ್ಪು ಸಾರ್ ನೀವು ನಮ್ಮ ಪ್ರಾಣವಂತೆ ನಮ್ಮ ಪ್ರಾಣವಂತೇ.
* ಬಾಡಿಲ್ಲ ಬೆಟ್ಟದ ಹೂ ನಗುವುದರ ಜೊತೆಗೆ ನಗುವುದನ್ನು ಕಲಿಸಿ ಅಭಿಮಾನಿಗಳ ಹೃದಯದಲ್ಲಿ ಸದಾ ಅರಳಿ ನಗುವುದು ಈ ಬೆಟ್ಟದ ಹೂ.
* ಅಪ್ಪು ಎಂದಿಗೂ ಮರೆಯಲಾಗದ ಮಾಣಿಕ್ಯ ಆಗಿಬಿಟ್ಟರು. ಹಿಂದೆ ಹುಟ್ಟಿಲ್ಲ ಮುಂದೆ ಹುಟ್ಟಲ್ಲ ಆ ಮಟ್ಟಿಗೆ ಜನರ ಮನಸ್ಸಲ್ಲಿ ಅಚ್ಚೆಯಾಗಿ ಉಳಿದು ಹೋದರು. ಲವ್ ಯು ಫಾರ್ ಎವರ್ ಅಪ್ಪು.
ನನ್ನ ಸಿನಿಮಾಗೆ ಪುನೀತ್ ಸರ್ ಹಾಡಬೇಕಿತ್ತು: ವಿಕ್ರಮ್ ರವಿಚಂದ್ರನ್
ಈ ಮೇಲ್ಕಂಡ ಎಲ್ಲ ಕಾಮೆಂಟ್‌ಗಳು ಸೇರಿದಂತೆ ಹಲವಾರು ನೆಟ್ಟಿಗರು ಅಪ್ಪು ಇನ್ನಿಲ್ಲ ಎಂಬುವುದನ್ನು ನೆನೆದು ತಮ್ಮದೇ ರೀತಿಯಲ್ಲಿ ಭಾವನಾತ್ಮಕವಾದ ನೋವನ್ನು ಕಾಮೆಂಟಿಸಿದ್ದಾರೆ. ವಿಶೇಷವಾಗಿ ಪುನೀತ್ ರಾಜ್‌ಕುಮಾರ್ ಸಮಾಧಿ ದರ್ಶನಕ್ಕೆ ಅಭಿಮಾನಿಗಳ ದಂಡು ಹರಿದು ಬರುತ್ತಲೇ ಇದೆ. ಮಕ್ಕಳು, ಮಹಿಳೆಯರು, ವೃದ್ಧರು ಕೂಡ ಬಂದು ಪುನೀತ್‌ಗೆ ನಮನ ಸಲ್ಲಿಸುತ್ತಿದ್ದಾರೆ. ಎಲ್ಲರೂ ಶಾಂತಿಯುತವಾಗಿ ಸಮಾಧಿ ದರ್ಶನ ಪಡೆಯಲು ಪೊಲೀಸರು ಸೂಕ್ತ ಭದ್ರತೆ ಕಲ್ಪಿಸಿದ್ದಾರೆ.