
ಸ್ಯಾಂಡಲ್‌ವುಡ್‌ನಲ್ಲಿ ಈಗ ಮತ್ತೊಂದು ಕುತೂಹಲಕಾರಿ ಸಿನಿಮಾ ಅನೌನ್ಸ್ ಆಗಿದೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ‘ಬೀರ್‌ಬಲ್ ಕೇಸ್ 2’ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದ್ದು, ಈ ಬಾರಿ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಲು ದೊಡ್ಡ ತಾರಾಬಳಗವೇ ಒಂದಾಗಿದೆ. ಎಂ.ಜಿ. ಶ್ರೀನಿವಾಸ್ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಮುಂದುವರಿಯಲಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.
‘ಬೀರ್‌ಬಲ್ ಕೇಸ್ 1: ಫೈಂಡಿಂಗ್ ವಜ್ರಮುನಿ’ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ಚಾಣಾಕ್ಷ ವಕೀಲ ಮಹೇಶ್ ದಾಸ್ ಮತ್ತೆ ಅಖಾಡಕ್ಕಿಳಿಯುತ್ತಿದ್ದಾರೆ. ಮೊದಲ ಭಾಗದಲ್ಲಿ ಕೇಸ್‌ವೊಂದನ್ನು ತಮ್ಮದೇ ಶೈಲಿಯಲ್ಲಿ ಬೆನ್ನಟ್ಟಿದ್ದ ಮಹೇಶ್ ದಾಸ್, ಈ ಬಾರಿ ಇನ್ನಷ್ಟು ಕಗ್ಗಂಟಾದ ತನಿಖೆಯೊಂದನ್ನು ಭೇದಿಸಲು ಸಜ್ಜಾಗಿದ್ದಾರೆ.
‘ಘೋಸ್ಟ್’ ಕಥೆಗೆ ಲಿಂಕ್.. ಶಿವಣ್ಣ ಪಾತ್ರದ ಮೇಲೆ ಹೆಚ್ಚಿದ ಕುತೂಹಲ
‘ಬೀರ್‌ಬಲ್ ಕೇಸ್ 2’ ಕೇವಲ ಸೀಕ್ವೆಲ್ ಆಗಿ ಉಳಿಯುವುದಿಲ್ಲ ಎಂಬ ಸೂಚನೆ ಚಿತ್ರತಂಡದಿಂದಲೇ ಸಿಕ್ಕಿದೆ. ಚಿತ್ರದ ಕಥೆಯನ್ನು ಶ್ರೀನಿ ಸಿನಿಮ್ಯಾಟಿಕ್ ಯೂನಿವರ್ಸ್‌ಗೆ ಜೋಡಿಸಲಾಗಿದ್ದು, ಶ್ರೀನಿ ನಿರ್ದೇಶನದ ‘ಘೋಸ್ಟ್’ ಸಿನಿಮಾದ ಕಥೆಯೊಂದಿಗಿನ ಲಿಂಕ್ ಈ ಚಿತ್ರದಲ್ಲಿರಲಿದೆ. ಇದರ ನಡುವೆ ಶಿವರಾಜ್‌ಕುಮಾರ್ ಅವರ ಎಂಟ್ರಿ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಚಿತ್ರದಲ್ಲಿ ಶಿವಣ್ಣ ‘ಘೋಸ್ಟ್’ ಆಗಿ ಕಾಣಿಸಿಕೊಂಡಿದ್ದಾರೆ. ಶ್ರೀನಿ ಈ ಸಿನಿಮಾವನ್ನು ಸದ್ದಿಲ್ಲದೆ ಚಿತ್ರೀಕರಣ ಮಾಡಿಕೊಂಡಿದ್ದು, ಇದೀಗ ಸಿನಿಮಾ ಬಿಡುಗಡೆ ಸನಿಹದಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ಕುರಿತು ಶ್ರೀನಿ, ‘ಮೊದಲ ಭಾಗದಿಂದ ಮುಂದುವರಿಂದ ಕತೆ ಇದೆ. ಹೊಸತೊಂದು ಕೇಸ್ ಇದೆ. ಘೋಸ್ಟ್ ಚಿತ್ರದ ಘೋಸ್ಟ್ ಆಗಿಯೇ ಶಿವಣ್ಣ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಅ.23ರಂದು ಸಿನಿಮಾ ಬಿಡುಗಡೆಯಾಗಲಿದೆ’ ಎಂದಿದ್ದಾರೆ.
ವಿಶೇಷವಾಗಿ ನಟಿ ಖುಷ್ಬೂ ಹಾಗೂ ಡೈಸಿ ಬೋಪಣ್ಣ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಕಮಹೇಶ್ ದಾಸ್ ಅವರ ತನಿಖೆಯ ಜತೆ ಶಿವಣ್ಣನ ಪಾತ್ರ ಹೇಗೆ ಕನೆಕ್ಟ್ ಆಗಲಿದೆ ಎಂಬ ಪ್ರಶ್ನೆ ಇದೀಗ ಅಭಿಮಾನಿಗಳಲ್ಲಿ ಮೂಡಿದೆ.
ಖುಷ್ಬೂ, ಡೈಸಿ ಬೋಪಣ್ಣ ಕಮ್‌ಬ್ಯಾಕ್..
ಚಿತ್ರದ ತಾರಾಗಣದಲ್ಲೂ ಸಾಕಷ್ಟು ವಿಶೇಷತೆಗಳಿವೆ. ದಕ್ಷಿಣ ಭಾರತದ ಹಿರಿಯ ನಟಿ ಖುಷ್ಬೂ ಸುಂದರ್ ಹಾಗೂ ನಟಿ ಡೈಸಿ ಬೋಪಣ್ಣ ಈ ಸಿನಿಮಾದ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಇವರ ಜೊತೆಗೆ ಯುವ ನಟಿ ಯೋಗಲಕ್ಷ್ಮಿ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ನಟ ಸಂಪತ್ ರಾಜ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ತನಿಖೆ, ಸಸ್ಪೆನ್ಸ್ ಹಾಗೂ ಟ್ವಿಸ್ಟ್‌ಗಳ ಜತೆಗೆ ದೊಡ್ಡ ತಾರಾಬಳಗವೂ ‘ಬೀರ್‌ಬಲ್ ಕೇಸ್ 2’ರ ನಿರೀಕ್ಷೆಯನ್ನು ಹೆಚ್ಚಿಸಿದೆ.
ಬೃಹತ್ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ, ನಿರ್ಮಾಪಕ ವೆಂಕಟ್ ಕೆ. ನಾರಾಯಣ ಅವರ ನೇತೃತ್ವದಲ್ಲಿ ಈ ಸಿನಿಮಾವನ್ನು ನಿರ್ಮಿಸುತ್ತಿದೆ. ‘ಟಾಕ್ಸಿಕ್’ ಬಳಿಕ ಸಂಸ್ಥೆಯಿಂದ ಘೋಷಣೆಯಾಗಿರುವ ಈ ಕನ್ನಡ ಸಿನಿಮಾ ಸಹಜವಾಗಿಯೇ ಸಿನಿಪ್ರೇಕ್ಷಕರ ಗಮನ ಸೆಳೆದಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದು, ಮಹೇನ್ ಸಿಂಹ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.
ಇನ್ನು ಮೊದಲ ಭಾಗದ ಯಶಸ್ಸಿನ ಬಳಿಕ ಎರಡನೇ ಕೇಸ್‌ನೊಂದಿಗೆ ಮಹೇಶ್ ದಾಸ್ ಯಾವ ರೀತಿಯ ತನಿಖೆ ನಡೆಸಲಿದ್ದಾರೆ? ‘ಘೋಸ್ಟ್’ ಕಥೆಯ ಲಿಂಕ್ ಏನು? ಎಲ್ಲಕ್ಕಿಂತ ಮುಖ್ಯವಾಗಿ ಶಿವಣ್ಣನ ವಿಶೇಷ ಪಾತ್ರ ಹೇಗಿರಲಿದೆ? ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಸಿನಿಮಾ ತೆರೆಗೆ ಬರುವವರೆಗೆ ಕಾಯಲೇಬೇಕು. ಸದ್ಯಕ್ಕೆ ‘ಬೀರ್‌ಬಲ್ ಕೇಸ್ 2’ ಘೋಷಣೆಯೇ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಕುತೂಹಲಕ್ಕೆ ಕಾರಣವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.