ಶಿವಣ್ಣ ಮಾತಿಗೆ ಕೂತರೆ ಹಳೆಯದು, ಹೊಸದು ಮತ್ತು ಭವಿಷ್ಯದ ಕನಸು ಎಲ್ಲವೂ ಬಂದು ಹೋಗುತ್ತವೆ. ‘ಕಬ್ಜ’ ಚಿತ್ರದ ವೆಬ್‌ಸೈಟ್ ಅನಾವರಣ ಕಾರ್ಯಕ್ರಮದಲ್ಲಿ ಮಾತಿಗೆ ಸಿಕ್ಕಾಗ ಹಲವು ಆಸಕ್ತಿ ವಿಷಯಗಳನ್ನು ಹಂಚಿಕೊಂಡರು. ಈ ಪೈಕಿ ತಾವು ನಿರ್ದೇಶಕನಾಗಬೇಕು ಎನ್ನುವ ಕನಸು ಹುಟ್ಟಿಕೊಂಡಿದ್ದು ಹೇಗೆ ಎನ್ನುವುದನ್ನೂ ತೆರೆದಿಟ್ಟಿದ್ದಾರೆ. ಓವರ್ ಟು ಸೆಂಚುರಿ ಸ್ಟಾರ್....
- ಆರ್. ಕೇಶವಮೂರ್ತಿ
ನಿರ್ದೇಶಕನಾಗುವ ಕನಸಿಗೆ ಉಪ್ಪಿ ಸ್ಫೂರ್ತಿ
ನಟನಾಗಿ ಚಿತ್ರರಂಗಕ್ಕೆ ಬಂದ ಎಷ್ಟೋ ವರ್ಷಗಳ ನಂತರ ನಾನು ಸಿನಿಮಾ ನಿರ್ದೇಶನ ಮಾಡುತ್ತೇನೆ ಎನ್ನುವ ಸುದ್ದಿ ಆಯಿತು. ಇದು ಆಗಾಗ ಆಗುತ್ತಿರುತ್ತದೆ. ಇದು ನಿಜ ಕೂಡ. ಒಂದು ದಿನ ಸಿನಿಮಾ ನಿರ್ದೇಶನ ಮಾಡುತ್ತೇನೆಂಬ ನಂಬಿಕೆ ಮತ್ತು ಭರವಸೆ ಇದೆ. ಆದರೆ, ಒಬ್ಬ ನಟನಲ್ಲಿ ನಿರ್ದೇಶಕನಾಗಬೇಕು ಎನ್ನುವ ಕನಸಿನ ಹುಟ್ಟಿಗೆ ಕಾರಣ ಮತ್ತು ಸ್ಫೂರ್ತಿ ಉಪೇಂದ್ರ. ನನ್ನ ಮತ್ತು ಅವರ ಕಾಂಬಿನೇಷನ್‌ನಲ್ಲಿ ‘ಓಂ’ ಚಿತ್ರ ಮಾಡುವಾಗ ಉಪ್ಪಿ ಅವರ ನಿರ್ದೇಶನದ ರೀತಿ ನೋಡಿ, ನಾನೂ ಸಿನಿಮಾ ನಿರ್ದೇಶನ ಮಾಡಬೇಕು ಎನ್ನುವ ಕನಸು ಹುಟ್ಟಿಕೊಂಡಿತು. ಅವರ ಉತ್ಸಾಹ, ಹೊಸ ಹೊಸ ಐಡಿಯಾಗಳು, ‘ಓಂ’ ಚಿತ್ರವನ್ನು ಅಪ್ಪಾಜಿ ಹಾಗೂ ವರದಪ್ಪಣ್ಣ ಅವರಿಗೆ ರೀಡಿಂಗ್ ಕೊಟ್ಟರೀತಿ ನೋಡಿಯೇ ಉಪೇಂದ್ರ ಅವರ ಒಳಗಿನ ನಿರ್ದೇಶಕನಿಗೆ ನಾನು ಫಿದಾ ಆಗಿದ್ದೆ. ಆಗಲೇ ನನ್ನಲ್ಲೂ ನಿರ್ದೇಶಕನಾಗುವ ಕನಸು ಮತ್ತು ಆಸೆ ಹುಟ್ಟಿಕೊಂಡಿತು.
25 ವರ್ಷಗಳ ಹಿಂದೆ ಪ್ಯಾನ್ ಇಂಡಿಯಾ ಚಿತ್ರ
‘ಓಂ’ ಚಿತ್ರದ ರಿಮೇಕ್ ರೈಟ್ಸ್ ಬೇರೆ ಭಾಷೆಗಳಿಗೂ ಮಾರಾಟ ಆಯ್ತು ಎಂಬುದು ಎಲ್ಲರಿಗೂ ಗೊತ್ತು. ಹಾಗೆ ಹತ್ತಾರು ಬಾರಿ ಮರು ಬಿಡುಗಡೆಯಾದಾಗಲೂ ಹೌಸ್‌ಫುಲ್ ಪ್ರದರ್ಶನ ಕಂಡ ಹೆಗ್ಗಳಿಕೆ ಈ ಚಿತ್ರದ್ದು. ಹಿಂದಿಗೆ ಈ ಚಿತ್ರದ ರೀಮೇಕ್ ರೈಟ್ಸ್ ಮಾರಾಟ ಆದ ಮೇಲೆ ಹಿಂದಿನಲ್ಲಿ ನಾನೇ ನಾಯಕನಾಗುವಂತೆ ಅಫರ್ ಕೊಟ್ಟರು. ಆದರೆ, ಆದಾಗಲೇ ನಾವು ರೀಮೇಕ್ ರೈಟ್ಸ್ ಮಾರಾಟ ಮಾಡಿ, ಹಣ ಕೂಡ ತೆಗೆದುಕೊಂಡಿದ್ವಿ. ಹೀಗಾಗಿ ಮಾತು ಕೊಟ್ಟಕಾರಣಕ್ಕೆ ನಾನು ಆಗ ಓಂ ಚಿತ್ರದ ಮೂಲಕ ಹಿಂದಿಗೆ ಹೋಗಲಿಲ್ಲ. ಅಲ್ಲದೆ ನಮ್ಮಿಬ್ಬರ ಕಾಂಬಿನೇಷನ್‌ನಲ್ಲಿ ಮಾಡುವಂತೆ ಅಫರ್ ಕೊಟ್ಟಿದ್ದರು. ಹೀಗೆ 25 ವರ್ಷಗಳ ಹಿಂದೆ ‘ಓಂ’ ಎನ್ನುವ ಚಿತ್ರ ಎಲ್ಲ ಭಾಷೆಗಳಲ್ಲೂ ಸದ್ದು ಮಾಡುವ ಮೂಲಕ ಆಗಲೇ ಪ್ಯಾನ್ ಇಂಡಿಯಾ ರುಚಿ ಮತ್ತು ಅದರ ಕ್ರೇಜು ಕನ್ನಡ ಚಿತ್ರರಂಗಕ್ಕೆ ದಕ್ಕಿತ್ತು.
ಗಾಂಜಾ ಘಾಟು: ನಟ ಶಿವರಾಜ್‌ಕುಮಾರ್ ಹೇಳೋದಿಷ್ಟು?
ಕಬ್ಜಗೂ ಪ್ಯಾನ್ ಇಂಡಿಯಾ ಪಟ್ಟಾಭಿಷೇಕ ಆಗಲಿ
ಈಗ ಆರ್ ಚಂದ್ರು ಹಾಗೂ ಉಪೇಂದ್ರ ಕಾಂಬಿನೇಷನ್‌ನಲ್ಲಿ ಕಬ್ಜ ಸಿನಿಮಾ ಬರುತ್ತಿದೆ. ಏಳು ಭಾಷೆಗಳಲ್ಲಿ ಈ ಚಿತ್ರ ಸೆಟ್ಟೇರಿದೆ. ಚಿತ್ರದ ಕೆಲ ದೃಶ್ಯಗಳನ್ನು ನೋಡಿದ್ದೇನೆ. ಸೂಪರ್ ಆಗಿ ಬಂದಿದೆ. ಉಪೇಂದ್ರ ಹೊಸದಾಗಿ ಕಾಣುತ್ತಾರೆ. ಕನ್ನಡ ಚಿತ್ರರಂಗ ಮತ್ತೊಂದು ಮೈಲುಗಲ್ಲು ಆಗುವ ಸಿನಿಮಾ ಇದು. ಉಪೇಂದ್ರ ನಿರ್ದೇಶಕರಾಗಿ 25 ವರ್ಷಗಳ ಹಿಂದೆಯೇ ಪ್ಯಾನ್ ಇಂಡಿಯಾ ಸಿನಿಮಾ ಕೊಟ್ಟಿದ್ದಾರೆ. ಈಗ ಅವರು ನಟರಾಗಿರುವ ‘ಕಬ್ಜ’ ಚಿತ್ರಕ್ಕೂ ಅದೇ ರೀತಿ ಪ್ಯಾನ್ ಇಂಡಿಯಾ ಪಟ್ಟಾಭಿಷೇಕ ಆಗಲಿ.
ಉಪ್ಪಿ ಇಂಡಿಯನ್ ಡೈರೆಕ್ಟರ್
ನನ್ನ ಪ್ರಕಾರ ಉಪೇಂದ್ರ ಇಂಡಿಯಾ ತಿರುಗಿ ನೋಡೋ ಡೈರೆಕ್ಟರ್. ಆಗಿನ ಕಾಲಕ್ಕೆ ರಿವರ್ಸ್ ಸ್ಕ್ರೀನ್ ಪ್ಲೇನಲ್ಲಿ ಸಿನಿಮಾ ಮಾಡಿ ತೋರಿಸಿದ ಬುದ್ಧಿವಂತ. ಇವರ ಸಿನಿಮಾ ಅಂದರೆ ಅಲ್ಲಿ ಏನೋ ವಿಶೇಷ ಇರುತ್ತದೆ. ಅದು ಒಂದು ಭಾಷೆ, ಒಂದು ರಾಜ್ಯಕ್ಕೆ ಸೀಮಿತವಾಗಿರಲ್ಲ. ಯಾರಿಗೆ ಬೇಕಾದರೂ ಕನೆಕ್ಟ್ ಮಾಡಿಕೊಳ್ಳಬಹುದಾದ ಕತೆಗಳನ್ನೇ ಹೇಳುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ‘ಓಂ’ ಚಿತ್ರದಲ್ಲಿ ಅವರು ನನ್ನ ನೆಗೆಟಿವ್ ಮುಖವನ್ನು ಮೊದಲು ಪರಿಚಯಿಸಿದ್ದು, ಒಬ್ಬ ಹೀರೋನನ್ನು ಹೀಗೂ ತೆರೆ ಮೇಲೆ ತರಬಹುದು ಎನ್ನುವ ಐಡಿಯಾ ಹುಟ್ಟು ಹಾಕಿದ ನಿರ್ದೇಶಕ. ಹೀಗಾಗಿ ಉಪೇಂದ್ರ ಅವರು ಇಂಡಿಯಾ ಲೆವೆಲ್ ಡೈರೆಕ್ಟರ್.
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕ್ರಿಕೆಟ್ ಟೀಂ ಹೇಗಿದೆ ನೋಡಿ!
ಹೋದ ಜನ್ಮದಲ್ಲಿ ನಾವಿಬ್ಬರು ಲವರ್ಸ್
ಯಾವುದೇ ಕಾರ್ಯಕ್ರಮಕ್ಕೆ ಕರೆದಾಗ ಹಿಂದೆ ಮುಂದೆ ನೋಡದೆ ಹೋಗುತ್ತೇವೆ ಎಂದರೆ ಒಂದೋ ಕರೆದವರು ನಮ್ಮ ಸ್ನೇಹಿತರು ಆಗಿತ್ತಾರೆ, ಇಲ್ಲವೇ ಗಲ್‌ರ್‍ಫ್ರೆಂಡ್ ಆಗಿರುತ್ತಾರೆ. ನನ್ನ ಮಟ್ಟಿಗೆ ಉಪೇಂದ್ರ ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಇಲ್ಲ ಎನ್ನಲು ಆಗಲ್ಲ. ಸೀದಾ ಬರುತ್ತೇನೆ. ಬಹುಶಃ ನಾವಿಬ್ಬರು ಹೋದ ಜನ್ಮದಲ್ಲಿ ಲವರ್ಸ್ ಆಗಿರಬೇಕು. ಅದಕ್ಕೆ ಈ ಜನ್ಮದಲ್ಲಿ ಅದೇ ನಂಟು, ಅದೇ ನಂಬಿಕೆ, ಅದೇ ಅಭಿಮಾನ, ಪ್ರೀತಿ ಮುಂದುವರಿದಿದೆ.
ವರ್ಲ್ಡ್ ತಿರುಗಿ ನೋಡೋ ಚಿತ್ರ ಮಾಡೋಣ
ಉಪೇಂದ್ರ ಹಾಗೂ ನನ್ನ ನಡುವಿನ ಈ ಆತ್ಮೀಯ ನಂಟು ಮುಂದೆಯೂ ಹೀಗೆ ಇರುತ್ತದೆ. ನಾನಂತೂ ಉಪೇಂದ್ರ ಅವರ ಜತೆಗೆ ಮತ್ತೊಂದು ಸಿನಿಮಾ ಮಾಡಲಿಕ್ಕೆ ರೆಡಿ ಇದ್ದೇನೆ. ಉಪೇಂದ್ರ ಅವರು ಯಾವಾಗ ಬಂದು ಕತೆ ಹೇಳಿದರೂ ನಾನು ನಟನೆಗೆ ಸೈ. ಉಪೇಂದ್ರ ಅವರೇ ಬನ್ನಿ ಈ ಬಾರಿ ಜತೆಯಾಗಿ ವಲ್‌ರ್‍್ಡ ತಿರುಗಿ ನೋಡುವಂತಹ ಸಿನಿಮಾ ಮಾಡೋಣ. ಈಗಾಗಲೇ ನಾವಿಬ್ಬರೂ ಇಂಡಿಯಾ ನೋಡುವಂತಹ ಚಿತ್ರ ಕೊಟ್ಟಿದ್ದೇವೆ. ಮತ್ತೆ ಜೊತೆಯಾಗಿ ಸಿನಿಮಾ ಮಾಡಿದರೆ ಇಡೀ ಜಗತ್ತು ನಮ್ಮ ಕಡೆ ನೋಡಬೇಕು. ಖಂಡಿತ ನಿಮಗೆ ಅಂಥ ಶಕ್ತಿ ಮತ್ತು ಪ್ರತಿಭೆ ಇದೆ. ನೀವು ಕತೆ ರೆಡಿ ಅಂದಾಗ ನಾನು ಕ್ಯಾಮೆರಾ ಮುಂದೆ ನಿಲ್ಲುತ್ತೇನೆ.