ಪರಿಸರ ಉಳಿಸುವ ತಲೆದಂಡ: ಏ.1ಕ್ಕೆ ಸಂಚಾರಿ ವಿಜಯ್‌ ಕೊನೆಯ ಚಿತ್ರ ತೆರೆಗೆ

By Kannadaprabha News  |  First Published Mar 28, 2022, 3:15 AM IST

ಸಂಚಾರಿ ವಿಜಯ್‌ ಅಭಿನಯದ ‘ತಲೆದಂಡ’ ಚಿತ್ರ ಇದೇ ಏ.1ಕ್ಕೆ ತೆರೆಗೆ ಬರುತ್ತಿದೆ. ಇದು ಅವರ ನಟನೆಯ ಕೊನೆಯ ಸಿನಿಮಾ. ಚಿತ್ರದ ಬಿಡುಗಡೆಯ ಹಿನ್ನೆಲೆಯಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಹಾಜರಾಯಿತು. 


ಸಂಚಾರಿ ವಿಜಯ್‌ (Sanchari Vijay) ಅಭಿನಯದ ‘ತಲೆದಂಡ’ (Taledanda) ಚಿತ್ರ ಇದೇ ಏ.1ಕ್ಕೆ ತೆರೆಗೆ ಬರುತ್ತಿದೆ. ಇದು ಅವರ ನಟನೆಯ ಕೊನೆಯ ಸಿನಿಮಾ. ಚಿತ್ರದ ಬಿಡುಗಡೆಯ ಹಿನ್ನೆಲೆಯಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಹಾಜರಾಯಿತು. ಚಿತ್ರದ ನಾಯಕಿಯಾಗಿ ಚೈತ್ರಾ ಆಚಾರ್‌ (Chaitra Achar), ತಾಯಿ ಪಾತ್ರದಲ್ಲಿ ಮಂಗಳ, ಮುಖ್ಯ ಪಾತ್ರಧಾರಿಗಳಾಗಿ ಬಿ ಸುರೇಶ್‌, ರಮೇಶ್‌ ಪಂಡಿತ್‌, ಮಂಡ್ಯ ರಮೇಶ್‌ ಮುಂತಾದವರು ನಟಿಸಿರುವ ಈ ಚಿತ್ರವನ್ನು ಹೇಮಮಾಲಿನಿ ಕೃಪಾಕರ್‌ (Hemamalini Krupakar) ನಿರ್ಮಿಸಿದ್ದಾರೆ. ಅಶೋಕ್‌ ಕಶ್ಯಪ್‌ ಕ್ಯಾಮೆರಾ, ಹರಿಕಾವ್ಯ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಪ್ರವೀಣ್‌ ಕೃಪಾಕರ್‌ (Praveen Krupakar) ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಮೈಸೂರು ವಿವಿಯಲ್ಲಿ ಪ್ರಾಧ್ಯಾಪಕರಾಗಿರುವ ಪ್ರವೀಣ್‌ ಕೃಪಾಕರ್‌ ಅವರು ಒಂದು ಒಳ್ಳೆಯ ಸಿನಿಮಾ ಮಾಡುವ ಆಸೆಯೊಂದಿಗೆ ‘ತಲೆದಂಡ’ ಕತೆಯನ್ನು ತೆರೆ ಮೇಲೆ ತಂದಿದ್ದಾರಂತೆ. ‘ಸಂಚಾರಿ ವಿಜಯ್‌ ಅವರನ್ನು ನಾವು ಇಷ್ಟುಬೇಗ ಕಳೆದುಕೊಳ್ಳುತ್ತೇವೆ ಅಂದುಕೊಂಡಿರಲಿಲ್ಲ. ಒಬ್ಬ ಒಳ್ಳೆಯ ನಟ ನಮ್ಮಿಂದ ದೂರ ಆಗಿರುವ ದುಃಖ ಇದೆ. ಅವರು ನಟಿಸಿರುವ ಈ ಚಿತ್ರಕ್ಕೆ ನಾನು ನಿರ್ದೇಶಕರಾಗಿರುವುದು ನನ್ನ ಅದೃಷ್ಟ. ನಾನು ಒಂದು ಚಿತ್ರ ನಿರ್ದೇಶಿಸಬೇಕು ಎನ್ನುವ ಆಸೆಗೆ ನನ್ನ ಪತ್ನಿ ಹೇಮಾಲಿನಿ ಅವರು ಬಂಡವಾಳ ಹಾಕುವ ಮೂಲಕ ನನ್ನ ಕನಸ ಈಡೇರಿಸಿದ್ದಾರೆ. 

Tap to resize

Latest Videos

ಅಗಲಿದ ಗೆಳೆಯನಿಗೆ ಭಾವುಕ ಪತ್ರ ಬರೆದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ!

ಕೊರೋನ ಕಷ್ಟಗಳ ನಡುವೆ ನಮ್ಮ ಚಿತ್ರಕ್ಕೆ ಶೂಟಿಂಗ್‌ ಮುಗಿದಿತ್ತು. ಕಾಡು, ಪರಿಸರ ಹಾಗೂ ಮರಗಳನ್ನು ಉಳಿಸುವ ಈ ಕತೆಯಲ್ಲಿ ಸಂಚಾರಿ ವಿಜಯ್‌ ಅವರು ಅರೆ ಬುದ್ದಿಮಾಂದ್ಯನ ಪಾತ್ರದಲ್ಲಿ ನಟಿಸಿದ್ದಾರೆ. ಹುಬ್ಬಲ್ಲಿನ ಹುಡುಗನಾಗಿ ಎಲ್ಲರ ಗಮನ ಸೆಳೆಯುತ್ತಾರೆ. ಈ ಚಿತ್ರದಲ್ಲಿನ ಅವರ ನಟನೆ ಅವರ ಪ್ರತಿಭೆಗೆ ಸಾಕ್ಷಿ’ ಎಂದರು ಪ್ರವೀಣ್‌ ಕೃಪಾಕರ್‌. ನಾಯಕಿ ಚೈತ್ರಾ ಆಚಾರ್‌ ಅವರು ಚಿತ್ರದ ಟ್ರೇಲರ್‌ ನೋಡಕ್ಕೆ ಆಗಿಲ್ಲವಂತೆ. ಟ್ರೇಲರ್‌ ನೋಡಿದರೆ ಸಂಚಾರಿ ವಿಜಯ್‌ ಕಾಣುತ್ತಾರೆ. ಅವರನ್ನು ನೋಡುವಾಗ ಅವರು ಇಲ್ಲ ಎನ್ನುವ ನೋವಿನ ಸಂಗತಿ ಗೊತ್ತಾಗಿ ದುಃಖ ಆಗುತ್ತದೆ. ಹೀಗಾಗಿ ಟ್ರೇಲರ್‌ ನೋಡಲು ಆಗುತ್ತಿಲ್ಲವಂತೆ. 

ವಿಜಿ ಇಲ್ಲದ ನೋವಲ್ಲಿ ಪುಕ್ಸಟ್ಟೆಲೈಫು ಬಿಡುಗಡೆ; ನಿರ್ದೇಶಕ ಅರವಿಂದ ಕುಪ್ಳೀಕರ್‌ ಸಂದರ್ಶನ

ಆದರೆ, ಒಬ್ಬ ಒಳ್ಳೆಯ ನಟನ ಜತೆಗೆ ನಟಿಸಿದ ಹೆಮ್ಮೆ ಚೈತ್ರಾ ಅವರಿಗೆ ಇದೆಯಂತೆ. ಅವರು ಇಲ್ಲಿ ಸಾಕಿ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಅಧುನಿಕ ಯುಗದಲ್ಲೂ ಪರಿಸರದ ಅರಿವು ಮೂಡಿಸುತ್ತಲೇ ನಾವು ಹೇಗೆ ಪರಿಸರವನ್ನು ನಾಶ ಮಾಡುತ್ತಿದ್ದೇವೆ ಎನ್ನುವ ಕತೆಯನ್ನು ಹೇಳಿರುವುದು ಚಿತ್ರದ ಹೆಚ್ಚುಗಾರಿಕೆಯಂತೆ. ರಂಗಾಯಣ ರಘು ಪತ್ನಿ ಮಂಗಳ, ರಮೇಶ್‌ ಪಂಡಿತ್‌, ಮಂಡ್ಯ ರಮೇಶ್‌, ಬಿ ಎಸ್‌ ಕೆಂಪರಾಜು ಅವರು ಚಿತ್ರದ ಕುರಿತು ಮಾತನಾಡಿದರು. ಈಗಾಗಲೇ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಹತ್ತಾರು ಪ್ರಶಸ್ತಿಗಳಿಗೆ ಪಾತ್ರವಾಗಿರುವ ತಲೆದಂಡ ಏ.1ರಂದು ಚಿತ್ರಮಂದಿರಗಳಿಗೆ ಬರುತ್ತಿದೆ. ಈ ಚಿತ್ರ ನೋಡುವ ಮೂಲಕ ಸಂಚಾರಿ ವಿಜಯ್‌ ಅವರಿಗೆ ಗೌರವ ಸಲ್ಲಿಸಿ ಎಂಬುದು ಚಿತ್ರತಂಡದ ಮನವಿ.

click me!