ಬೆಂಗಳೂರು(ಮಾ.26): ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Sudeep) ಚಿತ್ರರಂಗದಲ್ಲಿ ಅನೇಕರ ಜೊತೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ. ಎಲ್ಲಾ ಸ್ನೇಹಿತರನ್ನು ಅಷ್ಟೇ ಆಪ್ತವಾಗಿ ನೋಡಿಕೊಳ್ಳುತ್ತಾರೆ. ಸ್ನೇಹಿತರಿಗಾಗಿ ಸುದೀಪ್ ಏನು ಬೇಕಾದರು ಮಾಡಲು ಸಿದ್ಧರಿರುತ್ತಾರೆ. ಇದೀಗ ಸುದೀಪ್ ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್(Jani Master) ಅವರಿಗೆ ಕಾರು ಗಿಫ್ಟ್ ಕೊಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕಿಚ್ಚ ಸದ್ಯ ವಿಕ್ರಾಂತ್ ರೋಣ(Vikrant Rona) ಸಿನಿಮಾ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದ ಜಾನಿ ಮಾಸ್ಟರ್ ಅವರಿಗೆ ಸುದೀಪ್ ಮಹೇಂದ್ರ ಥಾರ್(Mahindra Thar) ಉಡುಗೊರೆಯಾಗಿ ನೀಡಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್. ಕನ್ನಡ, ತಮಿಳು ಮತ್ತು ತೆಲುಗಿನ ಸ್ಟಾರ್ ನಟರಿಗೆ ನೃತ್ಯ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿರುವ ಕೊರಿಯೋಗ್ರಫರ್ ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಅವರಿಗೂ ನೃತ್ಯ ಮಾಡಿಸಿ ಕಿಚ್ಚನ ಕೈಯಿಂದ ಭೇಷ್ ಎನಿಸಿಕೊಂಡಿದ್ದಾರೆ. ಅಷ್ಟೆಯಲ್ಲದೆ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ. ಅಂದಹಾಗೆ ವಿಕ್ರಾಂತ್ ರೋಣ ಸಿನಿಮಾದಲ್ಲಿ ಗಡಂಗ್ ರಕ್ಕಮ್ಮ ಎನ್ನುವ ಹಾಡಿದೆ. ಈ ಹಾಡಿನ ಕೊರಿಯೋಗ್ರಫಿ ಮಾಡಿದ್ದು ಜಾನಿ ಮಾಸ್ಟರ್. ಈ ಹಾಡಿನ ಕೊರಿಯೋಗ್ರಫಿ ಇಷ್ಟವಾಗಿ ಸುದೀಪ್, ಜಾನಿ ಮಾಸ್ಟರ್ ಅವರಿಗೆ ಮಹೇಂದ್ರ ಥಾರ್ ಗಿಫ್ಟ್ ನೀಡಿದ್ದಾರೆ.
ಈ ಬಗ್ಗೆ ಸುದೀಪ್ ಆಪ್ತ, ನಿರ್ಮಾಪಕ ಜಾಕ್ ಮಂಜು ಮಾಹಿತಿ ನೀಡಿದ್ದಾರೆ. ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರದಲ್ಲಿ ಗಡಂಗ್ ರಕ್ಕಮ್ಮ ಹಾಡಿದೆ. ಇದರಲ್ಲಿ ಸುದೀಪ್ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಕಾಣಿಸಿಕೊಂಡಿದ್ದಾರೆ. ಈ ಡಾನ್ಸ್ ಗೆ ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಸುದೀಪ್ ಅವರಿಗೆ ಜಾನಿ ಅವರ ಕೊರೆಯೋಗ್ರಫಿ ತುಂಬಾ ಇಷ್ಟವಾಗಿತ್ತು. ಈ ಹಾಡಿನ ಶೂಟಿಂಗ್ ವೇಳೆ ಮಹೇಂದ್ರ ಥಾರ್ ತುಂಬಾ ಇಷ್ಟ ಅಂತ ಹೇಳಿದ್ದರು. ಹಾಗಾಗಿ ಸುದೀಪ್ ಅವರು ಮಹೇಂದ್ರ ಥಾರ್ ಉಡುಗೊರೆ ನೀಡಿದ್ದಾರೆ.
Kichcha Sudeep: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ ಅಭಿನಯ ಚಕ್ರವರ್ತಿ
ಕಿಚ್ಚನ ಉಡುಗೊರೆ ಕಂಡು ಜಾನಿ ಮಾಸ್ಟರ್ ಫುಲ್ ಖುಷ್ ಆಗಿದ್ದಾರೆ. ಈ ಬಗ್ಗೆ ಜಾನಿ ಮಾಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಥಾರ್ ಮತ್ತು ಸುದೀಪ್ ಜೊತೆ ನಿಂತು ಕ್ಯಾಮರಾಗೆ ಪೋಸ್ ನೀಡಿರುವ ಫೋಟೋ ಶೇರ್ ಮಾಡಿ ಕಿಚ್ಚನಿಗೆ ಧನ್ಯವಾದ ತಿಳಿಸಿದ್ದಾರೆ. 'ಉಡುಗೊರೆಗಾಗಿ ಧನ್ಯವಾದಗಳು ಕಿಚ್ಚ ಸುದೀಪ್ ಮತ್ತು ಕುಟುಂಬಕ್ಕೆ. ನೀವು ನನ್ನನ್ನು ನಡೆಸಿಕೊಂಡ ಮತ್ತು ನೋಡಿಕೊಂಡ ರೀತಿ ನನಗೆ ತುಂಬಾ ಖುಷಿಯಾಯಿತು. ನನ್ನ ಜೀವನದಲ್ಲಿ ನೀವು ಸಿಕ್ಕಿದ್ದು ತುಂಬಾ ಸಂತೋಷ, ನಿಮ್ಮನ್ನು ತುಂಬಾ ಇಷ್ಟಪಡುತ್ತೇನೆ ಸರ್' ಎಂದು ಬರೆದುಕೊಂಡಿದ್ದಾರೆ.
ಈ ಮೊದಲು ಜಾನಿ ಮಾಸ್ಟರ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ನಟಸಾರ್ವಭೌಮ, ರಾಜಕುಮಾರ ಮತ್ತು ಯುವರತ್ನ ಸಿನಿಮಾದ ಸೂಪರ್ ಹಿಟ್ ಹಾಡುಗಳಿಗೆ ಕೊರಿಯೋಗ್ರಫಿ ಮಾಡಿದ್ದರು. ಕನ್ನಡ ಸಿನಿಮಾರಂಗದ ಜೊತೆ ಜಾನಿ ಮಾಸ್ಟರ್ ಉತ್ತಮ ಸಂಬಂಧ ಹೊಂದಿದ್ದಾರೆ. ದಕ್ಷಿಣ ಭಾರತದ ಅನೇಕ ಹಾಡುಗಳಿಗೆ ಅದ್ಭುತವಾಗಿ ನೃತ್ಯ ನಿರ್ದೇಶನ ಮಾಡುವ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದಿರುವ ಜಾನಿ ಮಾಸ್ಟರ್ ಇದೀಗ ಸುದೀಪ್ ಅವರ ಮನ ಗೆದ್ದಿದ್ದಾರೆ.
ದಕ್ಷಿಣ ಭಾರತದ ನಟರೊಬ್ಬರು ಇಂಗ್ಲಿಷ್‌ನಲ್ಲಿ ಡಬ್ ಮಾಡಿರೋದು ಇದೇ ಮೊದಲು: Anup Bhandari
ಇನ್ನು ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಹೇಳುವುದಾದರೆ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲವಿದೆ. ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿದ್ದಾರೆ. ಸುದೀಪ್ ಜೊತೆ ನೀತಾ ಅಶೋಕ್, ನಿರೂಪ್ ಭಂಡಾರಿ, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಅನೇಕರು ನಟಿಸಿದ್ದಾರೆ. ದೊಡ್ಡ ಮಟ್ಟದಲ್ಲಿ ತಯಾರಾಗಿರುವ ಸಿನಿಮಾವನ್ನು ಪ್ಯಾನ್ ಇಂಡಿಯಾ ಬಿಡುಗಡೆ ಮಾಡಲು ಸಿನಿಮಾತಂಡ ಸಜ್ಜಾಗಿದೆ. ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ವಿಕ್ರಾಂತ್ ರೋಣನ ದರ್ಶನ ಆಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ. ಸದ್ಯ ಸಿನಿಮಾತಂಡ ಹೊಸ ದಿನಾಂಕ ಘೋಷಣೆ ಮಾಡುವುದಾಗಿ ಹೇಳಿದೆ. ಯಾವಾಗ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.