
Rocking Star Yash Toxic Trailer Release: ಕನ್ನಡದ ರಾಕಿಂಗ್ ಸ್ಟಾರ್ ನಟ ಯಶ್ ನಟನೆಯ ಟಾಕ್ಸಿಕ್ ಟ್ರೇಲರ್ ಬಿಡುಗಡೆ!
ಕನ್ನಡದ ರಾಕಿಂಗ್ ಸ್ಟಾರ್ ನಟ ಯಶ್ (Yash) ನಟನೆಯ ರಾಮಾಯಣ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಅವರದೇ ಮತ್ತೊಂದು ಸಿನಿಮಾ 'ಟಾಕ್ಸಿಕ್' ಟ್ರೇಲರ್ ಅಧಿಕೃತ ಬಿಡುಗಡೆ ನಾಳೆ (8-8-2026) ನಡೆಯಲಿದೆ. ಯಶ್ ಹಾಗೂ ಚಿತ್ರತಂಡ 'ಟಾಕ್ಸಿಕ್' ಚಿತ್ರದ ಟ್ರೇಲರ್ ಬಿಡುಗಡೆಯನ್ನು ಕನ್ಫರ್ಮ್ ಮಾಡಿದೆ. ಇಡೀ ಜಗತ್ತು ಖುಷಿಯಲ್ಲಿ ತೇಲಾಡುತ್ತಿದೆ. ಸಿಕ್ಕ ಮಾಹಿತಿ ಪ್ರಕಾರ, ಸಾಯಂಕಾಲ 6 ಗಂಟೆ 2 ನಿಮಿಷಕ್ಕೆ ಟ್ರೇಲರ್ ಬಿಡುಗಡೆ ಆಗಲಿದೆ.
ಎಲ್ಲಕ್ಕಿಂತ ಅಚ್ಚರಿ ಸಂಗತಿ ಎಂದರೆ, ಕನ್ನಡದ ನಟ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟ್ರೇಲರ್ ಯಶ್ ತಾಯ್ನೆಲದಲ್ಲೇ ಅಂದರೆ ಕನ್ನಡನಾಡಿನ ಬೆಂಗಳೂರಿನಲ್ಲೇ ಬಿಡುಗಡೆಯಾಗಲಿದೆ. ನಾಳೆ ಸಾಯಂಕಾಲ ಬೆಂಗಳೂರಿನ ಹೃದಯಭಾಗ ಮೆಜೆಸ್ಟಿಕ್ ಸಮೀಪದ ಎಎಂಬಿ ಮಾಲ್‌ನಲ್ಲಿ (AMB) ಟಾಕ್ಸಿಕ್‌ನ ಈ ಈವೆಂಟ್ ನಡೆಯಲಿದೆ. ಅಲ್ಲಿ ಮೊದಲು ಕಪಾಲಿ ಎಂಬ ಬೃಹತ್ ಸಿಂಗಲ್ ಸ್ಕ್ರೀನ್ ಥಿಯೇಟರ್ ಇತ್ತು. ಈಗ ಅಲ್ಲಿ ಮಾಲ್ ತಲೆ ಎತ್ತಿದ್ದು, ಹಳೆಯ ನೆನಪಷ್ಟೇ ಉಳಿದಿದೆ.
ಕಳೆದ ತಿಂಗಳು ಟಾಕ್ಸಿಕ್ ಟ್ರೇಲರ್ ಘೋಷಣೆ ಹೊತ್ತ ಯಶ್ ಪೋಸ್ಟರ್ ಬ್ಲಾಕ್ & ವೈಟ್‌ನಲ್ಲಿ ರಿಲೀಸ್ ಆಗಿತ್ತು. ಕೈನಲ್ಲಿ ಗನ್ ಹಿಡಿದು ನಿಂತಿರೋ ಯಶ್ ನೋಡಿ ಇಡೀ ಜಗತ್ತು 'ರಾಕಿ ಬಾಯ್ ಗತ್ತು ನೋಡಿ' ಅಂತ ಮಾತನ್ನಾಡಿಕೊಳ್ಳುತ್ತಿದೆ. ಯಶ್ ಲುಕ್ ಹಾಗೂ ಗನ್ ಮ್ಯಾನ್ ಅಟಿಟ್ಯೂಡ್ ಅವರ ಫ್ಯಾನ್ಸ್‌ಗಳಿಗೆ ಸಖತ್ ಮೋಡಿ ಮಾಡಿದೆ. ಆ ಪೋಸ್ಟರ್ ಆಗಸ್ಟ್ 8ನ್ನೇ ಕಾಯುವಂತೆ ಮಾಡಿತ್ತು. ಈ ಕಾಯುವಿಕೆಗೆ ನಾಳೆಯೇ ಉತ್ತರ ಸಿಗಲಿದೆ.
2026ರ ಮತ್ತೊಂದು ಬಿಗ್ ಸಿನಿಮಾಗಾಗಿ ಜಗತ್ತಿನಾದ್ಯಂತ ಸಿನಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಕೆಜಿಎಫ್ (KGF) ಬಳಿಕ ರಾಕಿಂಗ್ ಸ್ಟಾರ್ ಯಶ್ ತೆರೆ ಮೇಲೆ ನೋಡಲು ಕನ್ನಡಿಗರು ಮಾತ್ರವಲ್ಲ ದೇಶ, ಜಗತ್ತಿನ ಸಿನಿಮಾ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಟಾಕ್ಸಿಕ್ ಸಿನಿಮಾ ನಿರ್ಮಾಣ ನಿರಂತರವಾಗಿ ನಡೆಯುತ್ತಿದೆ. ಇದೀಗ ಬಿಡುಗಡೆಗೆ ಸಜ್ಜಾಗುತ್ತಿದೆ.
ಯಶ್ ನಟನೆ, ಗೀತು ಮೋಹನದಾಸ್ ನಿರ್ದೇಶನಕ ಟಾಕ್ಸಿಕ್ ಸಿನಿಮಾ ಆಗಸ್ಟ್ 26ಕ್ಕೆ ಬಿಡುಗಡೆಯಾಗುತ್ತಿದೆ. ವಿಶೇಷ ಅಂದರೆ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಚಿತ್ರೀಕರಣಗೊಂಡಿರುವ ಟಾಕ್ಸಿಕ್ ಸಿನಿಮಾ ತಮಿಳು, ತೆಲುಗು, ಹಿಂದಿ, ಮಲೆಯಾಳಂ ಸೇರಿದಂತೆ ಕೆಲವು ವಿದೇಶಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.
ನಯನತಾರಾ, ಕಿಯಾರ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ ಸೇರಿದಂತೆ ಅತೀ ದೊಡ್ಡ ನಟಿಯರ ಬಳಗ ಈ ಟಾಕ್ಸಿಕ್ ಚಿತ್ರದಲ್ಲಿದೆ. ಈಗಾಗಲೇ ಯಶ್-ಕಿಯಾರಾ ಅಡ್ವಾಣಿಯ 'ತಬಾಹಿ' ಹಾಡು ಹಾಗೂ ಯಶ್-ತಾರಾ ಸುತಾರಿಯಾ 'ಮನಮೋಹಕ' ಹಾಡು ಜಗತ್ತಿನಾದ್ಯಂತ ಭಾರಿ ಮೆಚ್ಚುಗೆ ಗಳಿಸಿದೆ. ನಾಳೆ ಟ್ರೇಲರ್ ಬಿಡುಗಡೆ ಬಳಿಕ ಮತ್ತೊಂದು ಹಾಡು ಬಿಡುಗಡೆ ಆದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ನಟ ಯಶ್ ತಮ್ಮ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಟ್ರೇಲರ್ ಕುರಿತು ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಭರ್ಜರಿ ಪ್ರತಿಕ್ರಿಯೆ ನೀಡಿದ್ದರು. ಯಶ್ ಸಿನಿಮಾಗಾಗಿ ಕಾಯುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದ್ದರುರೆ. ಭಾರತ ಮಾತ್ರವಲ್ಲ, ವಿಶ್ವ ಸಿನಿಮಾಪ್ರೇಮಿಗಳಲ್ಲಿ ಮಿಂಚಿನ ಸಂಚಾರ ಶುರುವಾಗಿತ್ತು. ಎಲ್ಲಕ್ಕೂ ಉತ್ತರ ನಾಳೆ ಸಿಗಲಿದೆ.
ಹೌದು, ರಾಮಾಯಣ ಹಾಗೂ ಟಾಕ್ಸಿಕ್ ಮೂಲಕ ಕನ್ನಡದ ನಟ ಜಾಗತಿಕವಾಗಿ ಹೊಸ ಅಧ್ಯಾಯ ಬರೆಯಲಿದ್ದಾರೆ ಎಂಬ ಮಾತು ಎಲ್ಲಾ ಕಡೆ ಕೇಳಿಬರುತ್ತಿದೆ. ಹಾಲಿವುಡ್ ಸ್ಟಂಟ್ ನಿರ್ದೇಶಕ ಜೆಜೆ ಪೆರಿ ಹಾಗೂ ತಮಿಳಿನ ಅನ್ಬರಿವ್ ಟಾಕ್ಸಿಕ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಾಜೀವ್ ರವಿ ಸಿನಿಮಾಟೋಗ್ರಫಿ ಮಾಡಿದ್ದಾರೆ. ಸಂಗೀತ ನಿರ್ದೇಶಕ ರವಿ ಬಸ್ರೂರ್ ಟಾಕ್ಸಿಕ್ ಸಿನಿಮಾಗೆ ಮಾಸ್ಟರ್ ಪೀಸ್ ಮ್ಯೂಸಿಕ್ ನೀಡಿದ್ದಾರೆ. ಜೊತೆಗೆ ವಿಶಾಲ್ ಮಿಶ್ರಾ, ತನ್ಶಿಕ್ ಬಗ್ಚಿ ಹಾಡುಗಳಿಗೆ ಕೆಲಸ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.