
ನ್ಯಾಷನಲ್ ಅವಾರ್ಡ್ ವಿಜೇತ ನಿರ್ದೇಶಕ ಮನೋಜ್ ಕುಮಾರ್ ಅವರ ಎರಡನೇ ನಿರ್ದೇಶನದ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಕೇವಲ ಬಾಯಿಮಾತಿನ ಪ್ರಚಾರದಿಂದಲೇ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುತ್ತಿರುವ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಅಚ್ಚರಿಯ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿದೆ. ಕೇವಲ 3.5 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ‘ಪ್ರೇಮದ ಊರಲಿ’ ಈಗ ವರ್ಷದ ಅತ್ಯಂತ ಲಾಭದಾಯಕ ಕನ್ನಡ ಸಿನಿಮಾಗಳ ಪೈಕಿ ಒಂದಾಗಿ ಗುರುತಿಸಿಕೊಂಡಿದೆ ಎಂದು ಟ್ರೇಡ್ ಮೂಲಗಳು ತಿಳಿಸಿವೆ.
9 ದಿನದಲ್ಲೇ 10 ಕೋಟಿ ರೂ. ಗಡಿ!
ಬಿಡುಗಡೆಯಾದ ಕೇವಲ ಒಂಬತ್ತು ದಿನಗಳಲ್ಲೇ ‘ಪ್ರೇಮದ ಊರಲಿ’ ಸಿನಿಮಾ 10 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಗಡಿ ದಾಟಿದೆ ಎನ್ನಲಾಗಿದೆ. ಅಕ್ಟೋಬರ್ 4ರ 10ನೇ ದಿನದ ಕಲೆಕ್ಷನ್‌ಗಳನ್ನು ಸೇರಿಸಿದರೆ ಚಿತ್ರದ ಒಟ್ಟು ಗಳಿಕೆ 13 ಕೋಟಿ ರೂಪಾಯಿ ದಾಟುವ ನಿರೀಕ್ಷೆಯಿದೆ. ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಸಿನಿಮಾಗೆ ಇದೇ ವೇಗ ಮುಂದುವರಿದರೆ ಮುಂದಿನ ಎರಡು ವಾರಗಳಲ್ಲಿ ಸುಮಾರು 30 ಕೋಟಿ ರೂಪಾಯಿ ಗಳಿಸುವ ಸಾಧ್ಯತೆ ಇದೆ ಎಂದು ಟ್ರೇಡ್ ವಲಯ ಅಂದಾಜಿಸಿದೆ.
ಅಪ್ಪ-ಮಗನ ಕಥೆಗೆ ಪ್ರೇಕ್ಷಕರ ಮನಸೋತಿದ್ದಾರೆ
ಗ್ರಾಮೀಣ ಸೊಗಡಿನೊಂದಿಗೆ ಮೂಡಿಬಂದಿರುವ ಅಪ್ಪ-ಮಗನ ಭಾವನಾತ್ಮಕ ಬಾಂಧವ್ಯದ ಕಥೆ ‘ಪ್ರೇಮದ ಊರಲಿ’ಯ ಪ್ರಮುಖ ಆಕರ್ಷಣೆಯಾಗಿದೆ. ರಂಗಾಯಣ ರಘು ಅವರ ಮನಮುಟ್ಟುವ ಅಭಿನಯದ ಜೊತೆಗೆ ಶ್ರೀರಾಮ್, ರಮಿಕಾ ಶಿವು ಮತ್ತು ತಪಸ್ವಿನಿ ಪೂಣಚ್ಚ ಅವರ ಅಭಿನಯಕ್ಕೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕರ್ನಾಟಕದಲ್ಲಿ ಸಿನಿಮಾಗೆ ಸಿಕ್ಕಿರುವ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಇದೀಗ ಇತರ ರಾಜ್ಯಗಳಲ್ಲೂ ಚಿತ್ರದ ಬಗ್ಗೆ ಬೇಡಿಕೆ ಹೆಚ್ಚಾಗಿದೆ. ಆಂಧ್ರಪ್ರದೇಶದಲ್ಲಿ ಕನ್ನಡ ಅವತರಣಿಕೆ ಈಗಾಗಲೇ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಇದೀಗ ಸಿನಿಮಾವನ್ನು ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲೂ ಡಬ್ ಮಾಡಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.
ಬೇರೆ ಭಾಷೆಗಳಲ್ಲೂ ‘ಪ್ರೇಮದ ಊರಲಿ’ಗೆ ಬೇಡಿಕೆ
ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಮನೋಜ್ ಕುಮಾರ್ ಸಿನಿಮಾ ಕುರಿತು ಮಾತನಾಡಿದ್ದು, ಬೇರೆ ಭಾಷೆಗಳಲ್ಲೂ ಚಿತ್ರವನ್ನು ಬಿಡುಗಡೆ ಮಾಡುವಂತೆ ಸಾಕಷ್ಟು ಬೇಡಿಕೆ ಬರುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ತಮಿಳು ಮತ್ತು ಮಲಯಾಳಂ ಅವತರಣಿಕೆಗಳ ವಿತರಣೆಗೆ ಪ್ರಮುಖ ಡಿಸ್ಟ್ರಿಬ್ಯೂಷನ್ ಸಂಸ್ಥೆಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಹಿಂದಿ ಆವೃತ್ತಿಯ ಬಿಡುಗಡೆಗಾಗಿ ಅನಿಲ್ ಥಡಾನಿ ಅವರೊಂದಿಗೂ ಚರ್ಚೆ ನಡೆಯುತ್ತಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಕರ್ನಾಟಕದಿಂದ ದೇಶ-ವಿದೇಶಕ್ಕೆ ಸಿನಿಮಾ!
‘ಪ್ರೇಮದ ಊರಲಿ’ ಸಿನಿಮಾದ ಥಿಯೇಟ್ರಿಕಲ್ ವ್ಯಾಪ್ತಿಯನ್ನು ವಿಸ್ತರಿಸಲು ಪ್ರಮುಖ ವಿತರಣಾ ಸಂಸ್ಥೆಗಳು ಕೂಡ ಕೈಜೋಡಿಸಿವೆ. ಕರ್ನಾಟಕದಲ್ಲಿ ಸಿನಿಮಾದ ವಿತರಣೆಯನ್ನು ಜಯಣ್ಣ ಕಂಬೈನ್ಸ್ ಮುನ್ನಡೆಸುತ್ತಿದ್ದು, ದೇಶದ ಉಳಿದ ಭಾಗಗಳು ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ KRG Studios ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದೆ. ಹೀಗಾಗಿ ಕರ್ನಾಟಕದಲ್ಲಿ ಆರಂಭವಾದ ಈ ಸಣ್ಣ ಬಜೆಟ್ ಸಿನಿಮಾದ ಗೆಲುವು ಇದೀಗ ದೇಶದ ಇತರ ಭಾಗಗಳು ಹಾಗೂ ವಿದೇಶಗಳಿಗೂ ವಿಸ್ತರಿಸುವ ಹಂತ ತಲುಪಿದೆ.
‘ಒಳ್ಳೆಯ ಸಿನಿಮಾ ಬಂದರೆ ಪ್ರೇಕ್ಷಕರು ಕೈಬಿಡಲ್ಲ’
‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿಗೆ ಕಾಂತಾರ ಖ್ಯಾತಿಯ ನಟ-ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾಗೆ ಪ್ರೇಕ್ಷಕರು ನೀಡುತ್ತಿರುವ ಬೆಂಬಲವನ್ನು ಶ್ಲಾಘಿಸಿರುವ ಅವರು, ಒಳ್ಳೆಯ ಸಿನಿಮಾ ಬಂದಾಗ ಕನ್ನಡಿಗರು ಅದನ್ನು ಎಂದಿಗೂ ಕೈಬಿಡುವುದಿಲ್ಲ ಎಂದು ಹೇಳಿದ್ದಾರೆ.
ನಮ್ಮ ಜನರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ನಿಜವಾದ ಒಳ್ಳೆಯ ಸಿನಿಮಾ ಬಂದಾಗ ಪ್ರೇಕ್ಷಕರು ಅದನ್ನು ಎಂದಿಗೂ ಕೈಬಿಡುವುದಿಲ್ಲ. ಅದನ್ನು ಗೆಲ್ಲಿಸುವವರೆಗೂ ಬೆಂಬಲಿಸುತ್ತಾರೆ. ‘ಪ್ರೇಮದ ಊರಲಿ’ ಇದಕ್ಕೆ ಅತ್ಯುತ್ತಮ ಉದಾಹರಣೆ. ಬಹಳ ಸಮಯದ ನಂತರ ಕನ್ನಡ ಸಿನಿಮಾವೊಂದಕ್ಕೆ ಇಷ್ಟೊಂದು ಪ್ರೀತಿ ಮತ್ತು ಬೆಂಬಲ ಸಿಗುತ್ತಿರುವುದನ್ನು ನೋಡಿ ನನಗೆ ಅಪಾರ ಹೆಮ್ಮೆಯಾಗಿದೆ. ಕರ್ನಾಟಕದ ಜನರಿಗೆ ಹೃತ್ಪೂರ್ವಕ ಧನ್ಯವಾದಗಳು. ಇಡೀ ಚಿತ್ರತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ರಿಷಬ್ ಶೆಟ್ಟಿ ಅವರ ಈ ಮಾತುಗಳು ‘ಪ್ರೇಮದ ಊರಲಿ’ ಚಿತ್ರತಂಡದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿವೆ.
ಇನ್ನು ‘ಪ್ರೇಮದ ಊರಲಿ’ ಸಿನಿಮಾಗೆ ಸುನಾದ್ ಗೌತಮ್ ಸಂಗೀತ ಸಂಯೋಜಿಸಿದ್ದು, ರಾಜ್‌ಕಾಂತ್ ಎಸ್‌ಕೆ ಛಾಯಾಗ್ರಾಹಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಸಣ್ಣ ಬಜೆಟ್‌ನಲ್ಲಿ ಆರಂಭವಾಗಿ, ಯಾವುದೇ ದೊಡ್ಡ ಸ್ಟಾರ್ ಹೈಪ್ ಇಲ್ಲದೆ ಕೇವಲ ಕಂಟೆಂಟ್ ಮತ್ತು ಪ್ರೇಕ್ಷಕರ ಬಾಯಿಮಾತಿನ ಪ್ರಚಾರದ ಮೂಲಕ ಭರ್ಜರಿ ಗೆಲುವು ಸಾಧಿಸಿರುವ ‘ಪ್ರೇಮದ ಊರಲಿ’, ಕನ್ನಡ ಚಿತ್ರರಂಗದಲ್ಲಿ ಈ ವರ್ಷದ ಅಚ್ಚರಿಯ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿ ಗುರುತಿಸಿಕೊಳ್ಳುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.