ನಿರ್ಮಾಪಕರು ಸ್ಟಾರ್‌ಗಳ ಹಿಂದೆ ಹೋಗುವುದು ಬಿಡಬೇಕು; ರವಿಚಂದ್ರನ್‌ ಹೇಳಿದ 6 ನೇರ ಮಾತುಗಳು

By Kannadaprabha NewsFirst Published Dec 11, 2020, 9:19 AM IST
Highlights

ನಿರ್ಮಾಪಕ ಸಂಘದ ನೂತನ ಕಟ್ಟಡ ಶಂಕುಸ್ಥಾಪನೆ ವೇದಿಕೆಯಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಉದ್ಯಮದ ಒಳಿತಿಗಾಗಿ ಹೇಳಿದ ಸಿಡಿಗುಂಡಿನಂತಹ ಮಾತುಗಳು.

- ಚಿತ್ರರಂಗದಲ್ಲಿ ನಿರ್ಮಾಪಕನಿಗೆ ಒಂದು ಸ್ಥಾನವೇ ಇಲ್ಲ. ಸಿನಿಮಾ ಎಂಬುದು ಈಗ ನಿರ್ಮಾಪಕನದ್ದಾಗಿ ಉಳಿದುಕೊಂಡಿಲ್ಲ. ಯಾರೋ ಬರ್ತಾರೆ, ಹಣ ಹಾಕ್ತಾರೆ ಸಿನಿಮಾ ಆಗುತ್ತದೆ ಎನ್ನುವಂತಿದೆ ನಿರ್ಮಾಪಕನ ಜಾಗ. ಹಾಗಾಗಿ ಮೊದಲು ನಿರ್ಮಾಪಕ ಸ್ಟಾರ್‌ ನಟರ ಹಿಂದೆ ಹೋಗುವುದನ್ನು ಬಿಡಬೇಕು. ಸಿನಿಮಾ ಎಂಬುದು ನಿರ್ಮಾಪಕನ ಕೈ ಹಿಡಿಯುವ ದೋಣಿ. ಅದು ನಿರ್ಮಾಪಕನದ್ದೇ ಆಸ್ತಿ ಮತ್ತು ಕನಸು.

- ಸಿನಿಮಾ ಎಂಬುದು ನಿರ್ದೇಶಕ, ಸ್ಟಾರ್‌ಗಳಿದ್ದರೆ ಮಾತ್ರ ಆಗುತ್ತದೆಂಬ ಭಾವನೆಯಿಂದ ದೂರ ಬರಬೇಕು. ಇದು ನನ್ನ ನಿರ್ಮಾಣದ ಸಿನಿಮಾ, ನನ್ನ ಚಿತ್ರಕ್ಕೆ ನೀನು ಹೀರೋ, ನೀನು ನಿರ್ದೇಶಕ ಎನ್ನುವ ಸ್ವಾಭಿಮಾನದ ಭಾವನೆ ಬೆಳೆಸಿಕೊಳ್ಳಬೇಕು.

- ನಮ್ಮ ತಂದೆಯ ಕಾಲದಲ್ಲಿ ಹೀಗೆ ಇರಲಿಲ್ಲ. ಸಿನಿಮಾ ಎಂದರೆ ನಿರ್ಮಾಪಕನ ಕನಸು. ಸಿನಿಮಾಗಳನ್ನು ಇಂಥ ನಿರ್ಮಾಪಕನದ್ದು, ಇಂತ ನಿರ್ಮಾಣದ ಸಂಸ್ಥೆಯದ್ದು ಎಂದು ಗುರುತಿಸುತ್ತಿದ್ದರು. ಈಶ್ವರಿ ಸಂಸ್ಥೆ ಸಿನಿಮಾ ಎನ್ನುವ ಕಾರಣಕ್ಕೆ ಕೆಲಸ ಮಾಡಲು ಬರುತ್ತಿದ್ದರು. ಆಗ ಹೀರೋ, ಸ್ಟಾರ್‌ ಎನ್ನುವ ಫೇಸ್‌ ವಾಲ್ಯೂ ಹಿಂದೆ ಯಾರೂ ಹೋಗುತ್ತಿರಲ್ಲ. ಫೇಸ್‌ ವ್ಯಾಲ್ಯೂಗಿಂತ ಫೈನಾನ್ಸ್‌ ಮುಖ್ಯ ಆಗಿತ್ತು. ನಿರ್ಮಾಪಕನೇ ಪಿಲ್ಲರ್‌ ಆಗಿದ್ದ. ನಿರ್ಮಾಪಕ ಇದ್ದರೆ ಸಿನಿಮಾ, ನಿರ್ಮಾಪಕ ಇದ್ದರೆ ಮಾತ್ರ ನಟರು, ತಂತ್ರಜ್ಞರು, ಚಿತ್ರರಂಗ ಎನ್ನುವ ಭಾವನೆ ಈಗ ಯಾಕೆ ಇಲ್ಲ.

ಮೊದಲು ಪ್ರೊಡ್ಯೂಸರ್‌ ನಂತರ ಸ್ಟಾರ್ಸ್; ನಟ ರವಿಚಂದ್ರನ್ ಖಡಕ್ ಮಾತು 

- ಏನೇ ಸಮಸ್ಯೆಗಳು ಎದುರಾದರೆ ಮೊದಲು ಅದಕ್ಕೆ ಗುರಿಯಾಗುವುದು ನಿರ್ಮಾಪಕ. ಈಗ ಕೊರೋನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿದ್ದು ಯಾರು? ಇಂಥ ಸಮಸ್ಯೆಗಳು ಆಗಾಗ ಬರುತ್ತಲೇ ಇರುತ್ತವೆ. ಏನೇ ಸಮಸ್ಯೆ ಎದುರಾದರೂ ಮತ್ತೆ ಮತ್ತೆ ಸಿನಿಮಾ ಮಾಡುವುದು ನಿರ್ಮಾಪಕ ಮಾತ್ರ. ಹೀಗಾಗಿ ನಿರ್ಮಾಪಕರು ಸ್ವಾಭಿಮಾನಿಗಳಾಗಬೇಕು. ಆ ಮೂಲಕ ತಮ್ಮ ನಿರ್ಮಾಪಕ ಸ್ಥಾನವನ್ನು ಗಟ್ಟಿಗೊಳಿಸುತ್ತ, ‘ನಿರ್ಮಾಪಕ’ ಎನ್ನುವ ಸ್ಥಾನಕ್ಕೆ ಮಹತ್ವ ನೀಡಬೇಕು.

- ಒಂದು ಚಿತ್ರಕ್ಕೆ ಕತೆ ಮುಖ್ಯ. ಆ ಕತೆ ಸಿನಿಮಾ ಆಗಿ ತೆರೆ ಮೇಲೆ ಮೂಡಲು ನಿರ್ಮಾಪಕ ಬೇಕು. ಇವೆರಡು ಇದ್ದರೆ ಸಿನಿಮಾ ಆಗುತ್ತದೆ. ಅಲ್ಲಿಗೆ ಸಿನಿಮಾವೊಂದರ ನಿರ್ಣಾಯಕರು ಕತೆ ಮತ್ತು ನಿರ್ಮಾಪಕ ಮಾತ್ರ.

ಮೀಸೆ ಹೊತ್ತ ಕ್ರೇಜಿಸ್ಟಾರ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು 

- ದಂಡ ಹಾಕುತ್ತಾರೆ ಎನ್ನುವ ಕಾರಣಕ್ಕೆ ಮಾಸ್ಕ್‌ ಹಾಕುತ್ತಿದ್ದಾರೆ. ಯಾರಿಗೂ ಕೊರೋನಾ ಭಯ ಇಲ್ಲ. ಹೀಗಾಗಿ ಈ ಸಂದರ್ಭದಲ್ಲಿ ದೊಡ್ಡ ಸಿನಿಮಾಗಳು ಚಿತ್ರಮಂದಿರಗಳಿಗೆ ಬರಬೇಕಿದೆ. ಶೇ.50 ಭಾಗ ಮಾತ್ರ ಸೀಟು ಭರ್ತಿ ಕಾರಣಕ್ಕೆ ದೊಡ್ಡ ಚಿತ್ರಗಳು ಬರುತ್ತಿಲ್ಲ. ಶೇ.50 ಭಾಗ ಸೀಟು ಭರ್ತಿಯಿಂದ ದೊಡ್ಡ ಸಿನಿಮಾಗಳಿಗೆ ಯಾವ ಕಾರಣಕ್ಕೂ ಲಾಸ್‌ ಆಗಲ್ಲ. ಜನರನ್ನು ಮತ್ತೆ ಚಿತ್ರಮಂದಿರಗಳತ್ತ ಸೆಳೆಯಲು ದೊಡ್ಡ ಸಿನಿಮಾಗಳ ಬಿಡುಗಡೆ ಅಗತ್ಯವಿದೆ.

click me!