ಬದುಕಿದರೆ ರಾಜನಂತೆ ಬದುಕು ಸತ್ತಮೇಲೆ ದೇವರಾಗು: ಕುವೆಂಪು ಅವರನ್ನು ನೆನೆಪು ಮಾಡಿಕೊಂಡ Jaggesh

By Suvarna News  |  First Published Jan 19, 2022, 9:40 PM IST

ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್ ಸಿನಿಮಾ ಚಿತ್ರೀಕರಣದ ಬ್ಯುಸಿ ವೇಳೆಯಲ್ಲೂ ಕುವೆಂಪು ಅವರ ಮನೆ ಕುಪ್ಪಳ್ಳಿಗೆ ಭೇಟಿ ನೀಡಿ, ಕುವೆಂಪು ಅವರ ನೆನಪನ್ನು ಮೆಲುಕು ಹಾಕುವ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 


ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್ (Jaggesh) ಸಿನಿಮಾ ಚಿತ್ರೀಕರಣದ ಬ್ಯುಸಿ ವೇಳೆಯಲ್ಲೂ ಕುವೆಂಪು ಅವರ ಮನೆ ಕುಪ್ಪಳ್ಳಿಗೆ ಭೇಟಿ ನೀಡಿ, ಕುವೆಂಪು (Kuvempu) ಅವರ ನೆನಪನ್ನು ಮೆಲುಕು ಹಾಕುವ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಜಗ್ಗೇಶ್ ಅವರು 'ರಾಘವೇಂದ್ರ ಸ್ಟೋರ್ಸ್' (Raghavendra Stores) ಚಿತ್ರೀಕರಣದ ನಿಮಿತ್ತ ಶಿವಮೊಗ್ಗಕ್ಕೆ ತೆರಳಿದ್ದಾರೆ. ಚಿತ್ರೀಕರಣದಲ್ಲಿ 2 ಗಂಟೆ ವಿರಾಮ ಸಿಕ್ಕಿತು. ಸಮಯ ವ್ಯರ್ಥ ಮಾಡಲು ಮನಸ್ಸು ಬರಲಿಲ್ಲ. 14 ಕಿಮೀ ದೂರದಲ್ಲಿ ನನ್ನ ನೆಚ್ಚಿನ ಕವಿ ಕುವೆಂಪು ಅವರ ಮನೆ ನೆನಪಾಯಿತು ಹೋಗಿಬಿಟ್ಟೆ. 

ಅವರ ಮನೆಯ ಆವರಣಕ್ಕೆ ಕಾಲಿಟ್ಟಾಗ ನನಗರಿಯದೆ ರೋಮಾಂಚನ ಆಯಿತು. ಕುವೆಂಪು ಅವರ ಮನೆ ಒಂದು ಮೂಲೆಯು ಬಿಡದಂತೆ ತಾಳ್ಮೆಯಿಂದ ಸುತ್ತು ಹಾಕಿದೆ ಎಂದು ಬರೆದುಕೊಂಡು ಕುವೆಂಪು ಅವರ ಮನೆಯ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ (Instagram) ಹಂಚಿಕೊಂಡಿದ್ದಾರೆ. ಅವರ ಬಾಲ್ಯದಿಂದ ಕೊನೆಯವರೆಗೂ ಬಳಸಿದ ವಸ್ತುಗಳು, ಅವರ ಮಗ ಪೂರ್ಣಚಂದ್ರ ತೇಜಸ್ವಿ ಅವರು ಕೂಡಿಟ್ಟ ತನ್ನ ತಂದೆಯ ಅಮೂಲ್ಯ ಚಿತ್ರ ಭಂಡಾರ, ಕುವೆಂಪು ಅವರ ತಾತ, ತಂದೆ-ತಾಯಿ ಬಂಧುಗಳು ಬಳಸಿದ ಪುರಾತನ ವಸ್ತುಗಳನ್ನೆಲ್ಲಾ ನೋಡಿದೆ. ಅವರ ಪ್ರಥಮ ಬರವಣಿಗೆ ಅವರ ಗುರುಗಳಿಗೆ ಅರ್ಪಣೆಯ ನುಡಿಮುತ್ತು. 

Tap to resize

Latest Videos

ಪ್ರಸವಕ್ಕೆ ಕಾಯುತ್ತಿದೆ, ಗಂಡು ಮಗು 'ತೋತಾಪುರಿ' ಹುಟ್ಟುತ್ತಾನೆ: Jaggesh

ಅದರಲ್ಲಿ ತಿದ್ದಿ ಬರೆದ ಪದಪುಂಜ ನನ್ನನ್ನು ಅವರ ಕಾಲಕ್ಕೆ ಕರೆದೊಯ್ಯಿತು. ಅವರು ಹುಟ್ಟಿದ ವರ್ಷ 1904 ಎಂದಾಗ ಅಯ್ಯೋ ಸಾಯಿಬಾಬಾ ಬದುಕಿದ್ದರೆ ಆಗ ಎಂದು ಮನಚಿಂತಿಸಿತು ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಕುವೆಂಪು ತಂದೆಯ ಜೊತೆ ಕುಳಿತ ಬಾಲಕನ ಚಿತ್ರ ಹಾಗೂ ಅವರ ತಂದೆಯ ಮುಖ ಲಕ್ಷಣ ಒಬ್ಬ ಪಾಳೆಗಾರನಂತೆ ಭಾಸವಾಯಿತು. ಅವರ ತಾಯಿ ಬಳಸಿದ ಅಡುಗೆ ಸಾಮಗ್ರಿಗಳನ್ನು ನೋಡಿ ನನ್ನ ಅಜ್ಜಿ ಮನೆ ನೆನಪಾಯಿತು. ಅವರದ್ದು ಎಂತಹ ಅದ್ಭುತ ವಂಶ. ಇಂಥ ಪರಿಸರದಲ್ಲಿ ಅವರು ಹುಟ್ಟಿದ ಮನೆ ಇರುವುದನ್ನು ನೋಡಿ ಸಂತೋಷವಾಯಿತು. 

ಕುವೆಂಪು ಅವರ ಎರಡನೆಯ ಮಗನ ಹೆಂಡತಿ ನೋಡಿ ನನ್ನ ಸೊಸೆ ನೆನಪಾದಳು. ಜಾತಿಗಳ ಲೆಕ್ಕ ತಪ್ಪದೆ ಹೆಜ್ಜೆ ಹಾಕುವ ಆ ಕಾಲದಲ್ಲಿ ಕವಿಗಳಿಗೆ ಎಂತಹ ವಿಶಾಲ ಹೃದಯವಿತ್ತು. ವಿದೇಶಿ ಹೆಣ್ಣನ್ನು ಮನೆ ಸೊಸೆಯಾಗಿ ತುಂಬಿಸಿಕೊಂಡು ವಿಶೇಷ ವ್ಯಕ್ತಿಯಾಗಿ ಕುವೆಂಪುರವರು ಹೃದಯದಲ್ಲಿ ಉಳಿದು ಬಿಟ್ಟರು. ನಾನು ನಮ್ಮ ತಂದೆಯನ್ನು ಅಣ್ಣ ಎಂದು ಕರೆಯುತ್ತಿದ್ದೆ. ಕುವೆಂಪು ಅವರ ಮಗನು ಅವರನ್ನು ಅಣ್ಣ ಎಂದು ಕರೆಯುತ್ತಿದ್ದರು ಎಂದಾಗ ನನ್ನ ಮನ ನನ್ನ ಅಪ್ಪನ ಕಡೆ ವಾಲಿತು. ಇದರಿಂದ ಭಾವುಕನಾಗಿ ಬಿಟ್ಟೆ. ಕುವೆಂಪು ಅವರು ತಮ್ಮ ಪತ್ನಿಯನ್ನು ಎಷ್ಟು ಪ್ರೀತಿಸುತ್ತಿದ್ದರು ಎನ್ನಲು ಅವರ ಮಾತು ತಿಳಿಸುತ್ತದೆ. 



ನನ್ನ ಧರ್ಮ ಪತ್ನಿ ಇದ್ದಿದ್ದರೆ ನಾನು ಶತವರ್ಷ ಬದುಕುತ್ತಿದ್ದೆ ಎಂದು ಹೇಳಿದ್ದು, ಎಂಥ ಅರ್ಥಪೂರ್ಣ ದಾಂಪತ್ಯ ಅವರದ್ದು ಅಲ್ಲವೆ ಎಂದರು. ನನಗೆ ಅವರ ನೋಡುವ ಅವಕಾಶ ಸಿಗಲಿಲ್ಲ. ಆದರೆ ಅವರ ಬಿಳಿಮುಡಿ ಕತ್ತರಿಸಿ ಶೇಖರಿಸಿ ಇಟ್ಟದ್ದು, ನೋಡಿ ಅವರನ್ನೇ ನೋಡಿದಷ್ಟು ಆನಂದವಾಯಿತು. ಅವರ ಮನೆಯ ಮುಂದೆ ಕೂತು ಫೋಟೋ ತೆಗೆಸಿಕೊಳ್ಳಲು ಕೂತಾಗ ಮನಸಲ್ಲಿ ಅವರೊಟ್ಟಿಗೆ ನನ್ನ ಹಿಂದಿನ ಜನ್ಮದಲ್ಲಿ ಕೂತಂತೆ ಭ್ರಮಿಸಿದೆ. ರಾಮಕೃಷ್ಣ ಪರಮಹಂಸರ ಶಿಷ್ಯರಲ್ಲಿ ದೀಕ್ಷೆ ಪಡೆದ ವಿಷಯವಂತು ನನ್ನ ಮನಸ್ಸಿಗೆ ಹೇಳಲಾಗದ ಆನಂದವಾಯಿತು. ಕಾರಣ ಆಧ್ಯಾತ್ಮಿಕ ಮಾರ್ಗದಲ್ಲಿ ಸಣ್ಣ ಹೆಜ್ಜೆ ಹಾಕುತ್ತಿರುವುದರಿಂದ ಆ ನಡೆಯ ಆನಂದವಾಗಿದೆ. 

RIP: 'ಕಾಮಿಡಿ ಕಿಲಾಡಿಗಳು' ಸ್ಕ್ರಿಪ್ಟ್‌ ರೈಟರ್ ಹರ್ಷ ನಿಧನ, ಜಗ್ಗೇಶ್ ಭಾವುಕ!

ಒಟ್ಟಾರೆ ರಾಜ ಮಹಾರಾಜರು ಆಶೀರ್ವಾದ, ದೇಶ ವಿದೇಶದಲ್ಲಿ ಓದುಗ ಅಭಿಮಾನಿಗಳು, ಸತ್ತ ಮೇಲು ಸಾವಿರ ವರ್ಷ ನೆನಪಲ್ಲಿ ಉಳಿಯುವ ಸಾಧನೆ, ಪ್ರಶಸ್ತಿ ಪುರಸ್ಕಾರಕ್ಕೆ ಇವರಿಂದ ಗೌರವ ಬಂದದ್ದೇನು ಅನ್ನಿಸುವಷ್ಟು ಪ್ರಶಸ್ತಿಗಳು ಇವರಿಗೆ ಸಂದಿವೆ. ಇದಕ್ಕೆ ಅಲ್ಲವೆ ಹೇಳೋದು ಬದುಕಿದರೆ ರಾಜನಂತೆ ಬದುಕು ಸತ್ತಮೇಲೆ ದೇವರಾಗು ಎಂದು ಹೇಳುತ್ತಾ ಕುವೆಂಪು ಅವರನ್ನು ನೆನೆಪು ಮಾಡಿಕೊಂಡಿದ್ದಾರೆ. ಕುವೆಂಪು ಬದುಕೆ ಅದ್ಭುತ ಅನುಕರಣೀಯ ಅಮೋಘವಾಗಿದೆ. ಇಂದು ನನ್ನ ಸಮಯ ಸಾರ್ಥಕ ಅನ್ನಿಸಿತು. ಅಕ್ಷರ ಟಂಕಿಸುವಾಗ ತಪ್ಪಿದ್ದರೆ ಕ್ಷಮೆಯಿರಲಿ. ಚಿತ್ರೀಕರಣದ ಬಿಡುವಲ್ಲಿ ಅಕ್ಷರ ಕುಟ್ಟಿದ್ದು, ಸಮಯ ಸಿಕ್ಕರೆ ರಸ ಋಷಿ ಮನೆಗೆ ನೀವು ಹೋಗಿ ಬನ್ನಿ ಎಂದು ಪೋಸ್ಟ್ ಮಾಡಿದ್ದಾರೆ. ಇದೀಗ ಅಭಿಮಾನಿಗಳು ಜಗ್ಗೇಶ್ ಅವರ ಈ ಪೋಸ್ಟ್‌ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
 

click me!