ತೋತಾಪುರಿ ಸಿನಿಮಾ ಪ್ಯಾನ್ ಇಂಡಿಯಾವೋ, ಅಲ್ಲವೋ? ನೆಟ್ಟಿಗರು ಕೇಳ್ತಿದ್ದಾರೆ

By Suvarna NewsFirst Published Nov 11, 2021, 9:04 PM IST
Highlights

ದೇವ್ರಾಣೆಗೂ ನಮ್ದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ನಮ್ದು ಬರೀ ಸಿನಿಮಾ' ಎಂದು ಹೇಳಿರುವ ತೋತಾಪುರಿ ಚಿತ್ರತಂಡ, ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಟೈಟಲ್ ರಿವೀಲ್ ಮಾಡಿದೆ.

'ನೀರ್‌ದೋಸೆ' (Neer Dose) ಚಿತ್ರದ ಮೂಲಕ ಯಶಸ್ಸು ಕಂಡ ನಿರ್ದೇಶಕ ವಿಜಯ್​ ಪ್ರಸಾದ್ (Vijay Prasad) ಹಾಗೂ ನವರಸ ನಾಯಕ ಜಗ್ಗೇಶ್ (Jaggesh) 'ತೋತಾಪುರಿ' (Totapuri) ಚಿತ್ರದ ಮೂಲಕ ಮತ್ತೆ ಸಿನಿರಸಿಕರನ್ನು ರಂಜಿಸಲು ಬರುತ್ತಿದ್ದಾರೆ. ಟೈಟಲ್ (Title) ಮೂಲಕವೇ ಕುತೂಹಲ ಹುಟ್ಟಿಸಿರುವ ಈ ಚಿತ್ರ ಎರಡು ಪಾರ್ಟ್‌ಗಳಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಜಗ್ಗೇಶ್  ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ನಾವು ನಿಮ್ಮ ಮುಂದೆ ಬರ್ತಿದ್ದೇವೆ ಎಂದು ಚಿತ್ರದ ನಾಯಕ ಪೋಸ್ಟರ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹೌದು! 'ದೇವ್ರಾಣೆಗೂ ನಮ್ದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ನಮ್ದು ಬರೀ ಸಿನಿಮಾ' ಎಂದು ಹೇಳಿರುವ 'ತೋತಾಪುರಿ' ಚಿತ್ರತಂಡ, ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಟೈಟಲ್ ರಿವೀಲ್ ಮಾಡಿರುವ ಪೋಸ್ಟರನ್ನು ಚಿತ್ರದ ನಾಯಕ ಜಗ್ಗೇಶ್ ತಮ್ಮ ಇನ್‌ಸ್ಟಾಗ್ರಾಮ್‌ (Instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಜಗ್ಗೇಶ್ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಗರಂ ಆಗಿ ಮಾತನಾಡಿದ್ದರು.  ಪ್ಯಾನ್‌ ಇಂಡಿಯಾ ಎಂಬುದು ಕನ್ನಡಿಗರಿಗೆ ಕೆಲಸ ಕೊಡುವುದಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ಟ್ವಿಟ್ಟರ್‌ನಲ್ಲಿ (Twitter) ಪೋಸ್ಟ್‌ ಕೂಡಾ ಹಂಚಿಕೊಂಡಿದ್ದರು.

ಬಿಡುಗಡೆಗೂ ಮುನ್ನವೇ ತೋತಾಪುರಿ ಹೊಸ ದಾಖಲೆ!

'ರಾಯರನಂಬಿ ಬದುಕುವ ನಾನು ಹೃದಯದಿಂದ ಮುಂದಿನ ಪೀಳಿಗೆ ಉದ್ಧಾರಕ್ಕೆ ಸತ್ಯ ನುಡಿದೆ! ಅರಿವಾಗದ ಬಹುತೇಕರು ನೆಗೆಟಿವ್‌ ತೆಗೆದುಕೊಂಡು, ಉತ್ತಮ ಮಾಹಿತಿ ಅಣಕ ಚರ್ಚೆಗೆ ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಂಡರು. ಮುಂದೈತೆ ಕನ್ನಡಿಗರೆ ಊರಬ್ಬ. ಆಗ ಅಯ್ಯೋ ಜಗ್ಗೇಶ ಅಂದೇ ಹೇಳಿದ, ನಾವು ಅಣಕಿಸಿದೆವೆ ಎಂದು ಪಶ್ಚಾತಾಪ ಪಡುತ್ತೀರ! ಅನುಭವಿಸಿ ಕನ್ನಡಕ್ಕೆ ಚಟ್ಟ ತಯಾರು! ಎಂದು ಜಗ್ಗೇಶ್ ಟ್ವೀಟ್ (Tweet) ಮಾಡಿದ್ದರು. ಆದರೆ ಇದೀಗ ಎಲ್ಲಾ ಭಾಷೆಗಳಲ್ಲೂ 'ತೋತಾಪುರಿ' ಸಿನಿಮಾದ ಹೆಸರನ್ನು ಹಾಕಿ ನಮ್ಮದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ ಎಂದಿರುವುದು ಸಿನಿರಸಿಕರ ಕುತೂಹಲಕ್ಕೆ ಕಾರಣವಾಗಿದೆ. 



'ಸುರೇಶ್ ಆರ್ಟ್ಸ್‌' ಬ್ಯಾನರ್‌ನ ಕೆ.ಎ. ಸುರೇಶ್ (K.A.Sueresh) ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಜಗ್ಗೇಶ್ ನಟನೆಯ 'ಎದ್ದೇಳು ಮಂಜುನಾಥ' (Eddelu Manjunatha), 'ನೀರ್‌ ದೋಸೆ' (Neer Dose) ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದ ಅನೂಪ್ ಸೀಳಿನ್ (Anoop Seelin) 'ತೋತಾಪುರಿ'ಗೂ ಸಂಗೀತ ನಿರ್ದೇಶನ ಮಾಡಿದ್ದು, ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ನಿರಂಜನ್ ಬಾಬು ಕ್ಯಾಮರಾ ಕೈ ಚಳಕ, ಸುರೇಶ್ ಅರಸ್ ಸಂಕಲನ ಈ ಚಿತ್ರಕ್ಕಿದ್ದು, ಮೈಸೂರು, ಶ್ರೀರಂಗಪಟ್ಟಣ, ಮಡಿಕೇರಿ, ಕೇರಳ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.  'ತೋತಾಪುರಿ' ಚಿತ್ರವು ಈಗಾಗಲೇ ಬಿಡುಗಡೆಗೆ ಸಜ್ಜಾಗಿದ್ದು, ಬಿಗ್ ಬಜೆಟ್ ಸಿನಿಮಾ ಎನ್ನಲಾಗಿದೆ.

ಜಗ್ಗೇಶ್ 'ತೋತಾಪುರಿ' ಫಸ್ಟ್ ಲುಕ್!

'ತೋತಾಪುರಿ'  ಭಾಗ-1 ಮತ್ತು ಭಾಗ-2ರಲ್ಲಿ ಜಗ್ಗೇಶ್ ಕಾಣಿಸಿಕೊಂಡಿದ್ದು ಇದೇ ಮೊದಲು. ಚಿತ್ರದಲ್ಲಿ ಜಗ್ಗೇಶ್ ಸೇರಿದಂತೆ 80ಕ್ಕೂ ಅಧಿಕ ಕಲಾವಿದರು ನಟಿಸಿದ್ದಾರೆ. ಅದಿತಿ ಪ್ರಭುದೇವ, ಡಾಲಿ ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮಾದತ್ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಾಯಕಿ ಅದಿತಿ ಪ್ರಭುದೇವ (Aditi Prabhudeva) ಮುಸ್ಲಿಂ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸುಮನ್ ರಂಗನಾಥ್ (Suman Ranganath) ಕ್ರಿಶ್ಚಿಯನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ದತ್ತಣ್ಣ (Dattanna) ಅವರು ಜಗ್ಗೇಶ್ ಅವರ ಮಾವನ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಒಟ್ಟಾರೆಯಾಗಿ 'ನೀರ್‌ದೋಸೆ' ಚಿತ್ರತಂಡ ಈ ಚಿತ್ರದ ತಾರಾಬಳಗದಲ್ಲಿದೆ.
 

click me!