
ಜಟ್ಟ ಗಿರಿರಾಜ್ ನಿರ್ದೇಶನದ ‘ಕಲ್ಯಾಣಿ’ ಚಿತ್ರದ ಟ್ರೇಲರ್ ಅನ್ನು ನಟ ಡಾರ್ಲಿಂಗ್ ಕೃಷ್ಣ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಕುಮಾರಸ್ವಾಮಿ ಆರ್ ಈ ಚಿತ್ರದ ನಿರ್ಮಾಪಕರು. ರಂಗಭೂಮಿ ಪ್ರತಿಭೆ ಸಾಮ್ರಾಟ್ ಶೆಟ್ಟಿ ನಾಯಕ, ಸಿಮ್ರಾನ್ ಕೌರ್ ನಾಯಕಿ. ರಾಹುಲ್ ಜೇಟ್ಲಿ, ಶಮಂತ್ ರಾವ್, ಪಿ. ಡಿ. ಸತೀಶ್ ಚಂದ್ರ, ಯಮುನಾ ಶ್ರೀನಿಧಿ, ವಿಜಯ್ ಚೆಂಡೂರು, ಶೈಲೇಂದ್ರ, ರಂಗು ಸಮರ್ಪಣ್ ಮುಂತಾದವರು ಚಿತ್ರದ ಮುಖ್ಯ ಪಾತ್ರಧಾರಿಗಳು.
ಉತ್ತರ ಭಾರತದ ಹುಡುಗಿ, ದಕ್ಷಿಣ ಭಾರತದ ಹುಡುಗ
ಜಟ್ಟ ಗಿರಿರಾಜ್, ‘ನವಿರಾದ ಒಲವಿನ ಕತೆ ಮುನ್ನಲೆಯಾಗಿಟ್ಟುಕೊಂಡು ಮಾಡಿರುವ ಸಿನಿಮಾ. ನಂಬಿಕೆ, ಸ್ನೇಹ, ಐಡೆಂಟಿಟಿಯ ವಿಷಯಗಳ ಜೊತೆಗೆ ಸಂಸ್ಕೃತಿಗಳ ಮುಖಾಮುಖಿ ಈ ಸಿನಿಮಾದಲ್ಲಾಗುತ್ತದೆ. ಉತ್ತರ ಭಾರತದ ಹುಡುಗಿ ದಕ್ಷಿಣ ಭಾರತದ ಹುಡುಗನ ಎರಡು ಪಾತ್ರಗಳನ್ನು ಪ್ರಧಾನವಾಗಿ ಇಟ್ಟುಕೊಂಡು ಎರಡು ಸಂಸ್ಕೃತಿಗಳ ಅನಾವರಣ ಮಾಡುವ ಪ್ರಯತ್ನ ಮಾಡಿದ್ದೇವೆ. ನಾನು ಇಲ್ಲಿಯವರೆಗೆ ಮಾಡಿರುವ ಸಿನಿಮಾಗಳಿಗಿಂತ ಸಂಪೂರ್ಣ ವಿಭಿನ್ನವಾದ ಚಿತ್ರವಿದು’ ಎಂದರು.
ಡಾರ್ಲಿಂಗ್ ಕೃಷ್ಣ, ‘ಚಿತ್ರದ ಟ್ರೇಲರ್ ನೋಡಿದವರಿಗೆ ಸಿನಿಮಾದ ಕತೆ, ಶೈಲಿ ಎಲ್ಲದರ ಬಗ್ಗೆಯೂ ಮಾಹಿತಿ ಸಿಗುತ್ತದೆ. ಆದರೆ ‘ಕಲ್ಯಾಣಿ’ ಸಿನಿಮಾ ಟ್ರೇಲರ್ ನೋಡಿದಾಗ ಸಿನಿಮಾದ ಕತೆ, ಶೈಲಿ ಈ ಯಾವುದರ ಬಗ್ಗೆಯೂ ಗೊತ್ತಾಗುವುದಿಲ್ಲ. ಅಷ್ಟು ನಾಜೂಕಾಗಿ ನಿರ್ದೇಶಕರು ಟ್ರೇಲರ್ ಕಟ್ ಮಾಡಿದ್ದಾರೆ. ಕನ್ನಡಕ್ಕೆ ಇದು ವಿಭಿನ್ನ ಸಿನಿಮಾವಾಗುತ್ತದೆ’ ಎಂದರು. ಬಿ. ಜೆ. ಭರತ್ ಸಂಗೀತ, ಪ್ರಶಾಂತ ಸಾಗರ ಛಾಯಾಗ್ರಹಣ ಇದೆ. ಡಿಸೆಂಬರ್‌ನಲ್ಲಿ ಚಿತ್ರ ತೆರೆಗೆ ಬರಲಿದೆ.
ಅಂದಹಾಗೆ, ಕಲ್ಯಾಣಿ ಚಿತ್ರಕ್ಕೆ ಲೇಖಕ ಬಸವ ರೆಡ್ಡಿ ಕಥೆ ಬರೆದಿದ್ದು, ಗಿರಿರಾಜ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸುಮಾರು ಮೂರು ದಶಕಗಳಿಂದ ಕಾರ್ಯಕಾರಿ ನಿರ್ಮಾಪಕರಾಗಿ 45ಕ್ಕೂ ಹೆಚ್ಚು ಸಿನಿಮಾಗಳಿಗೆ ಕೆಲಸ ಮಾಡಿದ ಅನುಭವವಿರುವ ಕುಮಾರಸ್ವಾಮಿ ಆರ್ ಅವರು ಆರ್.ಕೆ.ಸಿನೆಮಾಸ್ ಬ್ಯಾನರಿನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಬಿ.ಜೆ.ಭರತ್ ಸಂಗೀತ ಸಂಯೋಜಿಸುತ್ತಿದ್ದಾರೆ. ಪ್ರಶಾಂತ ಸಾಗರ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ ಕಾರ್ಯವಿದೆ. ಭಟ್ಕಳ, ಬೆಂಗಳೂರು ಸುತ್ತಮುತ್ತ ಚಿತ್ರದ ಬಹುತೇಕ ಚಿತ್ರೀಕರಣ ಮಾಡಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.