
ಯು ಆ್ಯಂಡ್ ಐ. ಈ ಟೈಟಲ್ ನಿಜವೇ ಎಂದು ಕೇಳಿದರೆ ಉಪೇಂದ್ರ ಏನೂ ಹೇಳುವುದಿಲ್ಲ. ನಿಜವೋ ಸುಳ್ಳೋ ಅಂತ ಹೇಳಬಾರದು, ಗೊತ್ತಾಗಬೇಕು ಅನ್ನುವುದು ಅವರ ಉತ್ತರ. ಅದು ಗೊತ್ತಾಗುವುದು ಯಾವಾಗ? ಅವರ ಹುಟ್ಟುಹಬ್ಬದ ದಿನ, ಅಂದರೆ ಸೆಪ್ಟೆಂಬರ್ 18ರಂದು. ಚಿತ್ರ ಸೆಟ್ಟೇರುವುದು ಯಾವಾಗ? ಅದಕ್ಕೆ ಅವರ ಬಳಿ ಉತ್ತರವಿದೆಯೋ ಗೊತ್ತಿಲ್ಲ. ಆದರೆ ಎಲ್ಲರನ್ನೂ ಮತ್ತೊಂದು ಸಲ ದಾರಿತಪ್ಪಿಸುವಂತೆ, ಎರಡೇ ದಿನಗಳ ಮೊದಲು ಉಪೇಂದ್ರ ಹೇಳಿದ್ದರು: ಮಾಡಿಟ್ಟ ಚಿತ್ರಗಳೇ ಬಿಡುಗಡೆ ಆಗುತ್ತಿಲ್ಲ. ಇಂಥ ಹೊತ್ತಲ್ಲಿ ಹೊಸ ಸಿನಿಮಾ ನಿರ್ದೇಶನ ಮಾಡಬೇಕೇ? ಇದು ಅಂತರಂಗದ ಮಾತೋ ಎಲ್ಲರನ್ನೂ ಅಚ್ಚರಿಗೆ ದೂಡಲೆಂದೇ ಲೆಕ್ಕಾಚಾರ ಹಾಕಿ ಆಡಿದ ಮಾತೋ ಯಾರಿಗೂ ಗೊತ್ತಿಲ್ಲ.
ಉಪೇಂದ್ರ ಮೊದಲಿನಿಂದಲೂ ತಮ್ಮ ಸಿನಿಮಾಗಳಿಗೆ ಒಂದಕ್ಷರದ, ಅಕ್ಷರವೇ ಇಲ್ಲದ, ಚಿನ್ಹೆಯ, ಅರ್ಥವಾಗದ ಲಿಪಿಯ ಶೀರ್ಷಿಕೆಗಳನ್ನು ಕೊಡುತ್ತಲೇ ಬಂದವರು. ಬುದ್ಧಿವಂತರಿಗೆ ಮಾತ್ರ ಎಂದು ಹೇಳಿಕೊಂಡು ಅವರು ನಿರ್ದೇಶಿಸಿದ ಎ ತೆರೆಕಂಡು 23 ವರ್ಷಗಳ ನಂತರವೂ ಅದನ್ನು ಚಿತ್ರರಸಿಕರು ಮರೆತಿಲ್ಲ. ಒಂದು ಚಿತ್ರ ಒಬ್ಬ ನಟ ಮತ್ತು ನಿರ್ದೇಶಕನನ್ನು ಎರಡು ದಶಕಗಳ ಕಾಲ ಕೈ ಹಿಡಿದು ನಡೆಸುವುದೇ ಅಚ್ಚರಿ. ಯಾಕೆಂದರೆ ಉಪೇಂದ್ರ ನಿರ್ದೇಶನದ ಎ ಸಿನಿಮಾ ನೋಡಿ ಮೆಚ್ಚಿದವರಿಗೆ ಈಗ ನಡುವಯಸ್ಸು ಸಮೀಪಿಸಿರುತ್ತದೆ. ಅವರ ಪೈಕಿ ಮುಕ್ಕಾಲುಪಾಲು ಮಂದಿ ಬದುಕಿನ ಜಂಜಾಟದಲ್ಲಿ ಸಿಲುಕಿ, ಸಿನಿಮಾ ನೋಡುವುದನ್ನು ಬಿಟ್ಟಿದ್ದರೂ ಬಿಟ್ಟಿರಬಹುದು. ಒಂದು ವೇಳೆ ಸಿನಿಮಾ ನೋಡುತ್ತಿದ್ದರೂ, ಮೊದಲ ದಿನವೇ ಶರಟು ಹರಿದುಕೊಂಡು, ಕ್ಯೂ ನಿಂತು ನೋಡುವ ಕಟ್ಟಾಭಿಮಾನಿಗಳಂತೂ ಆಗಿರಲು ಸಾಧ್ಯವಿಲ್ಲ.
ಆದರೆ, ಉಪೇಂದ್ರ ಸಿನಿಮಾಗಳಿಗೆ ಈಗಲೂ ಅದೇ ಕ್ರೇಜ್ ಇದೆ. ಅಂದರೆ ಈ ಇಪ್ಪತ್ತು ವರ್ಷಗಳಲ್ಲಿ ಉಪೇಂದ್ರ ಹೊಸ ಪ್ರೇಕ್ಷಕರನ್ನು ಗಳಿಸಿಕೊಂಡಿದ್ದಾರೆ. ಒಬ್ಬ ನಟ ಮತ್ತು ನಿರ್ದೇಶಕ ಕಾಲಾಂತರದಲ್ಲಿ ಪ್ರೇಕ್ಷಕರನ್ನು ಕಳೆದುಕೊಳ್ಳುವ, ಗಳಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಬೇರೆ ಬೇರೆ ಕಾರಣಗಳಿಗೆ ಪ್ರೇಕ್ಷಕರು ಬಂದು-ಹೋಗುತ್ತಿರುತ್ತಾರೆ. ಉಪೇಂದ್ರ ಕುರಿತ ಪ್ರೇಕ್ಷಕನಿಗೆ ಇರುವ ಗ್ಯಾರಂಟಿ ಎಂದರೆ ಉಪ್ಪಿ ಫಿಲಾಸಫಿ.
ಅಯ್ಯಂಗಾರ್ ಸಮುದಾಯಕ್ಕೆ ಸೇರಿದ ತೆಂಕಲೈ ಪಂಗಡದ ನಾಮದಂತೆ ಥಟ್ಟನೆ ಕಾಣಿಸುವ ಟೈಟಲ್ಲನ್ನು ಇದೀಗ ಉಪೇಂದ್ರ ತಮ್ಮ ಹೊಸ ಚಿತ್ರಕ್ಕೆ ಇಟ್ಟಿದ್ದಾರೆ. ಬೇರೆ ಯಾರಿಟ್ಟಿದ್ದರೂ ಅದು ವಿವಾದವಾಗುತ್ತಿತ್ತು. ಆದರೆ ಉಪೇಂದ್ರ ಪ್ರೇಕ್ಷಕರು ಅದನ್ನು ಯು ಮತ್ತು ಐ ಎಂದೇ ಗುರುತಿಸಿ ಮೆಚ್ಚಿಕೊಂಡಿದ್ದಾರೆ. ಅದು ಉಪೇಂದ್ರ ಮೂಡಿಸಿದ ಛಾಪು.
ಆದರೂ ಉಪೇಂದ್ರ ನಿರ್ದೇಶನದ ಚಿತ್ರದ ಕಾಯುವ ಒಂದು ಬಳಗವೇ ಇದೆ.
ಹುಟ್ಟುಹಬ್ಬಕ್ಕೆ ಊರಲ್ಲಿರಲ್ಲ: ಉಪೇಂದ್ರ
ಸೆ.18ರಂದು ತಮ್ಮ ಜನ್ಮದಿನವನ್ನು ಆಚರಿಸದೇ ಇರಲು ಉಪೇಂದ್ರ ನಿರ್ಧರಿಸಿದ್ದಾರೆ. ಕೊರೋನಾ ಕಾರಣಕ್ಕೆ ಬೆಂಗಳೂರಲ್ಲೇ ಇರುವುದಿಲ್ಲ ಎಂದಿರುವ ಅವರು ಅಭಿಮಾನಿಗಳ ಜತೆ ಜನ್ಮದಿನ ಆಚರಣೆಯನ್ನು ತಳ್ಳಿಹಾಕಿದ್ದಾರೆ. ಇದರೊಂದಿಗೆ ಸದ್ಯಕ್ಕೆ ನಿರ್ದೇಶನ ಕೂಡ ಮಾಡುವುದಿಲ್ಲ. ಶೂಟಿಂಗ್ ಆಗಿರುವ ಸಿನಿಮಾಗಳೇ ಬಿಡುಗಡೆ ಕಾಣದೆ ಒದ್ದಾಡುತ್ತಿವೆ. ಸಮಸ್ಯೆ ಬಗೆಹರಿದ ನಂತರ ನಿರ್ದೇಶನ. ಕೆಲವು ದಿನಗಳಲ್ಲಿ ಕಬ್ಜಾ ಚಿತ್ರೀಕರಣಕ್ಕೆ ಸುದೀಪ್ ಮತ್ತು ತಾನು ಹೈದರಾಬಾದಲ್ಲಿ ಜತೆಯಾಗುವ ಮಾಹಿತಿಯನ್ನು ಉಪೇಂದ್ರ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.