
ಕೆಲವು ನಟರು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಕೆಲವೇ ಕೆಲವರು ಸಿನಿಮಾ ಮುಗಿದ ಮೇಲೂ ನಮ್ಮೊಳಗೆ ಉಳಿದುಕೊಳ್ಳುತ್ತಾರೆ. ಅನಂತ್ ನಾಗ್ ಎರಡನೆಯ ಸಾಲಿಗೆ ಸೇರಿದವರು. ಅವರ ಅಭಿನಯವನ್ನು ನೆನಪಿಸಿಕೊಳ್ಳುವಾಗ ನಮಗೆ ಯಾವುದೋ ಒಂದು ಪಾತ್ರ ನೆನಪಾಗುವುದಿಲ್ಲ; ನಮ್ಮ ಜೀವನದ ಹಲವು ಹಂತಗಳು ನೆನಪಾಗುತ್ತವೆ. ಪ್ರೇಮಿಸಿದ ಯುವಕ, ಸೋತ ಗಂಡ, ಅಸಹಾಯಕ ತಂದೆ, ಹಠದ ರಾಜಕಾರಣಿ, ಶ್ರೀಸಾಮಾನ್ಯ ಗೃಹಸ್ಥ, ಮಧ್ಯಮವರ್ಗದ ಬಡಪಾಯಿ, ತುಂಟ ತರಲೆ, ಒಳಗೊಳಗೇ ತೊಳಲಾಡುವ ಮನುಷ್ಯ- ಹೀಗೆ ನಮ್ಮ ಸುತ್ತಲಿನ ಮನುಷ್ಯರನ್ನೇ ಅವರು ತೆರೆಯ ಮೇಲೆ ನಮಗೆ ತೋರಿಸುತ್ತಾ ಬಂದಿದ್ದಾರೆ.
ಐದು ದಶಕಗಳಿಗೂ ಹೆಚ್ಚು ಕಾಲದ ಅವರ ಈ ಪಯಣವೇ ಅವರನ್ನು ಈಗ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯ ಬಾಗಿಲಿನ ಎದುರು ತಂದು ನಿಲ್ಲಿಸಿದೆ. 2023ರಲ್ಲಿ ಅವರು ಚಿತ್ರರಂಗದಲ್ಲಿ ಐವತ್ತು ವರ್ಷಗಳನ್ನು ಪೂರೈಸಿದ್ದರು. ಐವತ್ತು ವರ್ಷಗಳ ಕಾಲ ಕನ್ನಡಿಗರ ಕಣ್ಮಣಿಯಾಗಿ ಮೆರೆದವರು. ಅನಂತ್ ನಾಗ್ ಅವರ ಕಥೆ ರಂಗಭೂಮಿಯಿಂದ ಆರಂಭವಾಗುತ್ತದೆ. ಹದಿನೆಂಟರ ಹರೆಯದಲ್ಲಿ ರಜೆ ದಿನಗಳ ಪಾರ್ಟ್ ಟೈಮ್ ಕೆಲಸವಾಗಿ ಸಿಕ್ಕ ಅವಕಾಶವೊಂದು ಅವರನ್ನು ನಾಟಕದ ಕಡೆಗೆ ಕರೆದುಕೊಂಡು ಹೋಯಿತು.
ಮೌನದಿಂದಲೂ ಅಭಿನಯ
ನಾಟಕದ ಪಾತ್ರಗಳು ಅವರೊಳಗಿನ ನಟನಿಗೆ ಬಾಗಿಲು ತೆರೆದವು. ನಂತರದ ಐದು ವರ್ಷಗಳಲ್ಲಿ ಐವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸಿದರು. ನಟನಿಗೆ ರಂಗಭೂಮಿ ಕೊಡುವ ಒಂದು ದೊಡ್ಡ ಪಾಠವೆಂದರೆ, ಮಾತಿನಿಂತ, ಮುಖಭಾವದಿಂದ ಮಾತ್ರವಲ್ಲ, ಮೌನದಿಂದಲೂ ಅಭಿನಯಿಸಬಹುದು ಎನ್ನುವುದು. ಅನಂತ್ ನಾಗ್ ಅವರ ನಂತರದ ಸಿನಿಮಾಗಳನ್ನು ನೋಡಿದಾಗ ಈ ರಂಗಭೂಮಿಯ ತರಬೇತಿ ಎಷ್ಟು ಗಾಢವಾಗಿ ಅವರೊಳಗೆ ನೆಲೆಸಿದೆ ಎನ್ನುವುದು ಅರ್ಥವಾಗುತ್ತದೆ.
ಕನ್ನಡ ಸಿನಿಮಾಕ್ಕೆ ಬಂದಾಗಲೂ ಅವರು ಸಿದ್ಧವಾಗಿ ಬಂದ ನಟರಲ್ಲ. ವೈ.ಎನ್. ಕೃಷ್ಣಮೂರ್ತಿ, ಗಿರೀಶ್ ಕಾರ್ನಾಡ್ ಮತ್ತು ಜಿ.ವಿ. ಅಯ್ಯರ್ ಅವರ ಪ್ರೋತ್ಸಾಹದಿಂದ ಸಂಕಲ್ಪ ಚಿತ್ರದ ಮೂಲಕ ನಾಯಕನಾಗಿ ಪರಿಚಯವಾದರು. ನಂತರ ಶ್ಯಾಮ್ ಬೆನಗಲ್ ಅವರ ಅಂಕುರ್ ಮೂಲಕ ಹಿಂದಿ ಚಿತ್ರರಂಗಕ್ಕೂ ಹೋದರು. ಅಲ್ಲಿಂದ ಮುಂದೆ ಭಾಷೆಗಳ ಗಡಿ ಅವರಿಗೆ ಅಡ್ಡಿಯಾಗಲಿಲ್ಲ. ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು, ಮರಾಠಿ -ಹಲವು ಭಾಷೆಗಳ ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಮಾಲ್ಗುಡಿ ಡೇಸ್ ಕೂಡ ಅವರ ಅಭಿನಯ ಪಯಣದ ಒಂದು ಮುಖ್ಯ ಗುರುತು.
ಅನಂತ್ ನಾಗ್ ಅವರನ್ನು ಇಷ್ಟು ವರ್ಷಗಳ ಕಾಲ ಪ್ರೇಕ್ಷಕರಿಗೆ ಹತ್ತಿರವಾಗಿಟ್ಟಿದ್ದು ಅವರ ಅಭಿನಯದ ಸಹಜತೆ. ನಡುಗಿಸುವ ಸಂಭಾಷಣೆ ಇಲ್ಲದೆ, ಕಣ್ಣಿನ ಒಂದು ನೋಟದಿಂದಲೇ ಒಂದು ಪಾತ್ರದ ಅಂತರಾಳದ ಮಾತನ್ನು ಧ್ವನಿಸಬಲ್ಲ ನಟ ಅವರು. ನಾಯಕನಾಗಿದ್ದಾಗಲೂ ಹೀರೋಯಿಸಮ್ ತೋರಿಸಲಿಲ್ಲ; ಪೋಷಕ ಪಾತ್ರಕ್ಕೆ ಬಂದಾಗಲೂ ತನ್ನ ಘನತೆಯನ್ನು ಕುಗ್ಗಿಸಿಕೊಳ್ಳಲಿಲ್ಲ. ಪಾತ್ರ ದೊಡ್ಡದೋ ಚಿಕ್ಕದೋ ಎನ್ನುವುದಕ್ಕಿಂತ ಅದು ಮನುಷ್ಯನೋ ಇಲ್ಲವೋ ಎನ್ನುವುದೇ ಅವರಿಗೆ ಮುಖ್ಯವಾಗಿದ್ದಂತೆ ಕಾಣುತ್ತದೆ. ಅದಕ್ಕಾಗಿಯೇ ಹಲವು ತಲೆಮಾರುಗಳು ಅವರನ್ನು ತಮ್ಮದೇ ನಟನಂತೆ ಸ್ವೀಕರಿಸಿವೆ.
ಐದು ಕರ್ನಾಟಕ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿಗಳು, ಐದು ಫಿಲ್ಮ್‌ಫೇರ್ ಪ್ರಶಸ್ತಿಗಳು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಅವರ ದಾರಿಯಲ್ಲಿ ಬಂದಿವೆ. 2025ರಲ್ಲಿ ಅವರಿಗೆ ಪದ್ಮಭೂಷಣವೂ ದೊರೆಯಿತು. ಆದರೆ ಪ್ರಶಸ್ತಿಗಳ ಪಟ್ಟಿಯನ್ನು ಓದುವುದರಿಂದ ಅನಂತ್ ನಾಗ್ ಅವರ ಪಯಣದ ಪೂರ್ಣ ಅರ್ಥ ಸಿಗುವುದಿಲ್ಲ. ಒಂದು ನಟನಿಗೆ ಸಿಗಬಹುದಾದ ದೊಡ್ಡ ಪ್ರಶಸ್ತಿ ಬಹುಶಃ ಜನರ ನೆನಪು, ಪ್ರೀತಿ. ಅನಂತ್ ನಾಗ್ ಅವರಿಗೆ ಅದು ಬಹಳ ಹಿಂದೆಯೇ ಸಿಕ್ಕಿದೆ.
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದೆ; ಚಿತ್ರರಂಗದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅತ್ಯುತ್ತಮ ಕೊಡುಗೆ ನೀಡಿದವರನ್ನು ಈ ಪ್ರಶಸ್ತಿ ಗುರುತಿಸುತ್ತದೆ. ಅನಂತ್ ನಾಗ್ ಅವರ ದಾರಿಯನ್ನು ನೋಡಿದಾಗ, ಈ ಗೌರವದ ಅರ್ಥ ಕೇವಲ ಒಬ್ಬ ನಟನಿಗೆ ದೊರೆಯುವ ಪ್ರಶಸ್ತಿ ಎನ್ನುವುದಕ್ಕಿಂತ ಮಹತ್ವದ್ದಾಗಿ ಕಾಣುತ್ತದೆ.
ಇದು ಕನ್ನಡದ ಒಬ್ಬ ನಟ ತನ್ನ ಸಹಜ ಅಭಿನಯದಿಂದ ಭಾಷೆಯ ಗಡಿಗಳನ್ನು ದಾಟಿ, ಹಲವು ತಲೆಮಾರುಗಳ ನೆನಪಿನಲ್ಲಿ ಉಳಿದುಕೊಂಡ ಕಥೆಯ ಕುರುಹಾಗಿ ಉಳಿದುಕೊಂಡ ಗುರುತು. ಅವರು ಇನ್ನೂ ಅಭಿನಯಿಸಬೇಕಾದ ಪಾತ್ರಗಳು ಮುಂದೆ ಬರಬಹುದು. ಆದರೆ ಹಿಂದಿರುಗಿ ನೋಡಿದರೆ, ಅನಂತ್ ನಾಗ್ ನಡೆದು ಬಂದ ದಾರಿ ಈಗಾಗಲೇ ಕನ್ನಡ ಸಿನಿಮಾದ ಸುವರ್ಣ ಅಧ್ಯಾಯದಂತೆ ಕಾಣುತ್ತದೆ. ಮೊನ್ನೆ ಮೊನ್ನೆ ತಾನೇ ತನ್ನ 78ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅನಂತ್ ನಾಗ್ ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ದಾದಾಸಾಹೇಬ್ ಫಾಲ್ಕೆ ಸಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.