ಸಿನಿಮಾಗಳ ಈಗಿನ ಸ್ಥಿತಿಗೆ ನಟ ಜಗ್ಗೇಶ್ ಅವರು ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಭಾವುಕರಾಗಿ ಕಣ್ಣೀರಾದರು. ನಟ ಹೇಳಿದ್ದೇನು?
ಇಂದು ಒಂದೇ ದಿನಕ್ಕೆ ಹತ್ತು ಹಲವು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಲಗ್ಗೆ ಇಡುತ್ತಿವೆ. ಆದರೆ ಸಿನಿಮಾ ಎಂದರೆ ಹಿಂದಿನ ಹಾಗಲ್ಲ. ಸೋಷಿಯಲ್ ಮೀಡಿಯಾಗಳು, ಓಟಿಟಿ ಸೇರಿದಂತೆ ಇತರ ವೇದಿಕೆಗಳು ಸಾಕಷ್ಟು ಜನಪ್ರಿಯ ಆಗಿರುವ ಈ ಯುಗದಲ್ಲಿ ಹಿಂದಿನಂತೆ ಸಿನಿಮಾದ ಮೇಲೆ ಆಸಕ್ತಿ ತೋರುವ ಜನರು ಇಲ್ಲ. ಕೋಟಿ ಕೋಟಿ ಬಂಡವಾಳ ಸುರಿದು ಸಿನಿಮಾ ಮಾಡಿ ಕೈಸುಟ್ಟುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕಥೆ ಒಳ್ಳೆಯದಿದ್ದರೂ, ಚಿತ್ರಮಂದಿರಗಳಿಗೆ ಜನರೇ ಹೋಗುತ್ತಿಲ್ಲ ಎನ್ನುವ ನೋವು ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಜಗತ್ತನ್ನು ಕಂಗೆಡಿಸಿಬಿಟ್ಟಿದೆ. ಎಷ್ಟೋ ಮಂದಿ ಸಿನಿಮಾ ಮಂದಿ ಸಾಲದ ಶೂಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ, ಕೆಲವರು ಪ್ರಾಣ ಕಳೆದುಕೊಂಡಿರುವ ಘಟನೆಗಳೂ ನಡೆದಿವೆ. ಇಂದಿನ ಸಿನಿಮಾಕ್ಕೆ ಈ ಸ್ಥಿತಿ ಯಾಕೆ ಬಂತು ಎಂಬುದನ್ನು ಕೇಳುತ್ತಲೇ ಹಿರಿಯ ನಟ ಜಗ್ಗೇಶ್ ಅವರು ಕಣ್ಣೀರಾಗಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕಾಮಿಡಿ ಕಿಲಾಡಿಗಳು ಷೋನಲ್ಲಿ ಅವರು, ಇದೇ ವಿಷಯವನ್ನು ಹೇಳುತ್ತಲೇ ಭಾವುಕರಾಗಿದ್ದಾರೆ. ಮೂರ್ನಾಲ್ಕು ವರ್ಷಗಳಿಂದ ಸಿನಿಮಾ ಚಿತ್ರರಂಗದಲ್ಲಿ ಡಿಸಾಸ್ಟರ್ ಆಗ್ತಿದೆ. ಎಲ್ಲರೂ ಒಳ್ಳೆಯ ಸಿನಿಮಾಗಳನ್ನೇ ತೆಗೆಯುತ್ತಿದ್ದಾರೆ. ಕೆಟ್ಟ ಸಿನಿಮಾ ಯಾರೂ ಮಾಡ್ತಿಲ್ಲ. ಪೇಪರ್, ಟಿವಿಗಳಲ್ಲಿ ಜಾಹೀರಾತುನೂ ಕೊಡ್ತಾ ಇದ್ದಾರೆ. ಎಲ್ಲಾ ಮಾಡಿದ್ರೂ ಚಿತ್ರ ಬಿಡುಗಡೆಯಾದಾಗ ಜನವೇ ಇರೋದಿಲ್ಲ. ಯಾಕೆ ಹೀಗಾಗ್ತಾ ಇದೆ ಅಂತನೇ ಗೊತ್ತಾಗ್ತಾ ಇಲ್ಲ. ಹಾಗಂತ ಕನ್ನಡ ಚಿತ್ರಕ್ಕೆ ಮಾತ್ರ ಹೀಗೆ ಅಂತ ಅಲ್ಲ. ಏನಾಗ್ತಾ ಇದೆ ಇಂಡಸ್ಟ್ರಿಗೆ ನಾನು ಹೇಗೆ ಸಿನಿಮಾ ಮಾಡೋದು ಎಂದೇ ತಿಳಿಯುತ್ತಿಲ್ಲ ಎಂದು ಭಾವುಕರಾಗಿ ಕಣ್ಣೀರಾದರು. ಯಾಕೆ ಜನ ಬರ್ತಿಲ್ಲಾ ಎನ್ನುವುದೇ ಗೊತ್ತಾಗ್ತಾ ಇಲ್ಲ. ಅಕ್ಷಯ್ ಕುಮಾರ್ ಅವರು ಕೋಟ್ಯಂತರ ರೂಪಾಯಿ ಹಾಕಿ ಸಿನಿಮಾ ತೆಗೆದರು. ಅವರ ಚಿತ್ರಗಳೂ ಡಿಸಾಸ್ಟರ್ ಆಗಿದೆ. ಸಂಪೂರ್ಣ ಭಾರತದ ಸಿನಿಮಾ ವಾಷ್ ಔಟ್ ಆಗಿದೆ ಎಂದು ನೋವಿನಿಂದ ಜಗ್ಗೇಶ್ ನುಡಿದರು.
ವಿಷ್ಣುವರ್ಧನ್ ಬಾಬಾ ರೀತಿ ಬಟ್ಟೆ ಕಟ್ಟಿಕೊಳ್ತಿದ್ಯಾಕೆ? ಅವರ ಒಡನಾಟ ಹೇಗಿತ್ತು? ಅನು ಪ್ರಭಾಕರ್ ಮನದಾಳದ ಮಾತು...
ಈಗಿನ ಸಿನಿಮಾ ಸ್ಥಿತಿ ಕುರಿತು ಮಾತನಾಡಿದ ಅವರು, ಈಗಿನ ಸಿನಿಮಾ ಅಂದ್ರೆ ಇನ್ನೂರು ಕೋಟಿ ರೂಪಾಯಿ ಹಾಕಿ ಸಿನಿಮಾ ಮಾಡಿದ್ರೆ ಮಾತ್ರ ಅದು ಸಿನಿಮಾ. ಒಳ್ಳೆಯ ಕಥೆ ಹಾಕಿ ಚಿಕ್ಕ ಬಜೆಟ್ನಲ್ಲಿ ಸಿನಿಮಾ ಮಾಡಿದ್ರೆ ಅದು ಸಿನಿಮಾ ಅನ್ನಿಸ್ತಾ ಇಲ್ಲ. ನನ್ನ ಅಣ್ಣ-ತಮ್ಮಂದಿರು, ನನ್ನ ಒಡಹುಟ್ಟಿದವರು, ಎಲ್ಲರೂ ಪಿಚ್ಚರ್ ರಿಲೀಸ್ ಆದಾಗ, ಇದೊಂದು ದರಿದ್ರ ಸಿನಿಮಾ, ಕಿತ್ತೋಗಿರೋ ಸಿನಿಮಾ, ಇದು ನೋಡೋದು ವೇಸ್ಟ್ ಅಂತೆಲ್ಲಾ ಹೇಳ್ತಾರೆ. ಹೀಗೆ ಇನ್ನೊಬ್ಬರ ಲೈಫ್ ಹಾಳು ಮಾಡ್ತಾರೆ ಎನ್ನುತ್ತಲೇ ಕೆಲವರು ಹೀಗೆ ಮಾಡುವ ಬಗ್ಗೆ ಸೂಚ್ಯವಾಗಿ ತಿಳಿಸಿದ್ದಾರೆ ಜಗ್ಗೇಶ್. ಎಲ್ಲರಿಗೂ ಒಳ್ಳೆಯದಾಗಲಿ, ಯಾರಿಗೂ ಕೆಟ್ಟದ್ದನ್ನು ಬಯಸುವುದು ಬೇಡ. ನೀವು ಬಯ್ದು ದುಡ್ಡು ಮಾಡುತ್ತೀರಿ ಎಂತಾದರೆ ಅದಕ್ಕೆ ಕಾರಣ ಸಿನಿಮಾ. ನಿಮಗೆ ಬೇಜಾರಾಗಿ ನನಗೆ ಸಮಯವೇ ಹೋಗ್ತಾ ಇಲ್ಲ ಎಂದುಕೊಂಡು ಯಾವುದೋ ಯೂಟ್ಯೂಬ್ನಲ್ಲಿ ನೋಡ್ತೀರಿ. ಅದೂ ನನ್ನ ಸಿನಿಮಾ. ನಾನು ತುಂಬಾ ಭಾವುಕನಾದೆ. ಏಕೆಂದರೆ ನನ್ನ ಅಣು, ರೇಣು, ನನ್ನ ಬದುಕು, ನನ್ನ ಕನಸು, ನನ್ನ ಬಟ್ಟೆ, ನನ್ನ ಊಟ ಎಲ್ಲವೂ ನನಗೆ ಸಿನಿಮಾನೇ ಕೊಟ್ಟಿರುವುದು. ಇದೇ ಕಾರಣಕ್ಕೆ ನಾನು ಸಿನಿಮಾವನ್ನು ತಾಯಿ ಥರ ಪ್ರೀತಿಸುತ್ತೇನೆ ಎಂದರು.
ಇದಕ್ಕೆ ನೆಟ್ಟಿಗರು ಕೂಡ ತಮ್ಮದೇ ಆದ ಕಾರಣಗಳನ್ನು ಕೊಟ್ಟಿದ್ದಾರೆ. ಕಥೆ ಚೆನ್ನಾಗಿರಲ್ಲ,ಗೊತ್ತೇ ಇರದ ಹೊಸ ಹೊಸ ಹೀರೋ ಹೀರೋಯಿನ್ಗಳು ಬರುತ್ತಾರೆ. ಅವರ ಪೈಕಿ ಹಲವರಿಗೆ ಆ್ಯಕ್ಟಿಂಗ್ ಬರಲ್ಲ, ಭಾಷೆ ಸರಿ ಬರಲ್ಲ. ನೋಡೋಕೂ ಚೆನ್ನಾಗಿರಲ್ಲ ಎಂದು ಓರ್ವ ಹೇಳಿದ್ದರೆ, ಈಗಿನ ಸಿನಿಮಾಗಳು ಜನರಿಗೆ ಯಾವ ಸಂದೇಶ ಕೊಡುತ್ತಿದೆ ಹೇಳಿ ಎಂದು ಮತ್ತೆ ಮತ್ತೊಬ್ಬರು ಕಮೆಂಟ್ನಲ್ಲಿ ತಿಳಿಸಿದ್ದಾರೆ. ಕಾಂತಾರದಂಥ ಕಡಿಮೆ ಬಜೆಟ್ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೋಗಿದೆಯಲ್ವಾ? ಒಳ್ಳೆಯ, ವಿಭಿನ್ನ ಚಿತ್ರ ಕೊಟ್ಟರೆ ಜನರು ಖಂಡಿತವಾಗಿಯೂ ಅದನ್ನು ನೋಡುತ್ತಾರೆ ಎಂದು ಕಮೆಂಟಿಗರೊಬ್ಬರು ಬರೆದಿದ್ದಾರೆ. ಇನ್ನು ಹಲವರು ಜಗ್ಗೇಶ್ ಹೇಳುತ್ತಿರುವ ಮಾತು ನೂರಕ್ಕೆ ನೂರು ನಿಜ. ಆ ನೋವು ಯಾರಿಗೂ ಬೇಡ ಎಂದಿದ್ದಾರೆ.
ತಿಂಗಳಿಗೆ 300 ರೂ. ಪಡೀತಿದ್ದ ಪ್ರಕಾಶ್ ರಾಜ್ಗೆ ವಿಲನ್ ತಂದ ಅದೃಷ್ಟ! ಮದ್ವೆ ವಿಷ್ಯ ಕೆದಕೋದಾ ನೆಟ್ಟಿಗರು?