
Yash Toxic: 'ಲೇಡೀಸ್ ಅಂಡ್ ಲೇಡೀಸ್' ಟೀಸರ್‌ನಲ್ಲಿ ಅಬ್ಬರಿಸಿದ ಪಂಚಕನ್ಯೆಯರು!
ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್ (Yash) ಅವರ ಮುಂದಿನ ಸಿನಿಮಾ ‘ಟಾಕ್ಸಿಕ್’ ಬಗ್ಗೆ ಇಡೀ ಭಾರತೀಯ ಚಿತ್ರರಂಗವೇ ಕಣ್ಣರಳಿಸಿ ಕಾಯುತ್ತಿದೆ. ‘ಕೆಜಿಎಫ್’ ನಂತರ ತೆರೆಗೆ ಬರಲಿರುವ ಯಶ್ ಅವರ ಮುಂದಿನ ಮುಂದಿನ ಸಿನಿಮಾ 'ಟಾಕ್ಸಿಕ್' (Toxic) ಈಗ ಟೀಸರ್ ಮೂಲಕ ಪ್ರಪಂಚದಾದ್ಯಂತೆ ಕಿಚ್ಚು ಹಚ್ಚಿದೆ. ಇಂದು, ಅಂದರೆ 01 ಜುಲೈ 2026ರಂದು ಬಿಡುಗಡೆಯಾದ ‘ಲೇಡೀಸ್ ಅಂಡ್ ಲೇಡೀಸ್’ (Ladies & Ladies) ಎಂಬ ವಿಶೇಷ ಟೀಸರ್ ಈಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ಸಿನಿಮಾದಲ್ಲಿ ಬರೀ ಯಶ್ ಮಾತ್ರವಲ್ಲ, ಅವರ ಜೊತೆ ಐವರು ಬಲಿಷ್ಠ ನಟಿಯರು ಕೂಡ ಅಖಾಡಕ್ಕೆ ಇಳಿದಿದ್ದಾರೆ ಎಂಬುದು ಬಿಡುಗಡೆ ಆಗಿರುವ ಟೀಸರ್ ಮೂಲಕ ಸಾಬೀತಾಗಿದೆ.
ಗೀತು ಮೋಹನ್ ದಾಸ್ ನಿರ್ದೇಶನದ ಈ ಆ್ಯಕ್ಷನ್ ಡ್ರಾಮಾದಲ್ಲಿ ಬರೋಬ್ಬರಿ ಐವರು ಸ್ಟಾರ್ ನಟಿಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ದಕ್ಷಿಣದ ಲೇಡಿ ಸೂಪರ್ ಸ್ಟಾರ್ ನಯನತಾರಾ, ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾನಿ, ಗ್ಲಾಮರಸ್ ತಾರಾ ಸುತಾರಿಯಾ, ಪ್ರತಿಭಾವಂತ ನಟಿ ಹುಮಾ ಖುರೇಶಿ ಹಾಗೂ ಕನ್ನಡದ ಹೆಮ್ಮೆಯ ರುಕ್ಮಿಣಿ ವಸಂತ್ ಈ ಚಿತ್ರದ ಪವರ್‌ಹೌಸ್‌ಗಳು. ಈ ಐವರೂ ನಟಿಯರನ್ನು ಒಂದೇ ಫ್ರೇಮ್‌ನಲ್ಲಿ ಅಥವಾ ಒಂದೇ ಟೀಸರ್‌ನಲ್ಲಿ ನೋಡುವುದೇ ಅಭಿಮಾನಿಗಳಿಗೆ ಒಂದು ದೊಡ್ಡ ಹಬ್ಬದಂತಿದೆ.
ಟೀಸರ್‌ನ ಹೈಲೈಟ್ಸ್:
ಈ ಟೀಸರ್ ಕೇವಲ ಒಂದು ಇಂಟ್ರೊಡಕ್ಷನ್ ವಿಡಿಯೋ ಆಗಿರದೆ, ಒಂದು ಸ್ಟೈಲಿಶ್ ಆ್ಯಕ್ಷನ್ ಪ್ಯಾಕೇಜ್‌ನಂತಿದೆ. ಟೀಸರ್‌ನ ಆರಂಭದಲ್ಲಿ ಬರುವ ವಿಚಿತ್ರ ಎಚ್ಚರಿಕೆ (Disclaimer) ಎಲ್ಲರ ಗಮನ ಸೆಳೆಯುತ್ತಿದೆ. "ಮಕ್ಕಳನ್ನು ದೂರವಿಡಿ, ಪೋಷಕರು ಜಾಗರೂಕರಾಗಿರಿ, ಅಜ್ಜಿ-ಅಜ್ಜಿಯರು ನಿಮ್ಮ ಸ್ವಂತ ರಿಸ್ಕ್ ಮೇಲೆ ನೋಡಿ" ಎಂದು ಹೇಳುವ ಮೂಲಕ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಮತ್ತು ಡಾರ್ಕ್ ಶೇಡ್ ಇರುವುದನ್ನು ಚಿತ್ರತಂಡ ಪರೋಕ್ಷವಾಗಿ ತಿಳಿಸಿದೆ. ಟೀಸರ್‌ನಲ್ಲಿ ಯಶ್ ಮತ್ತು ಕಿಯಾರಾ ನಡುವಿನ ಕೆಮಿಸ್ಟ್ರಿ ಕಿಚ್ಚು ಹಚ್ಚುವಂತಿದ್ದರೆ, ನಾಯಕಿಯರ ರಗಡ್ ಲುಕ್ ಮೈನಡುಗಿಸುವಂತಿದೆ.
ಟೀಸರ್‌ನಲ್ಲಿ ಪ್ರತಿಯೊಬ್ಬ ನಟಿಯ ಪಾತ್ರಕ್ಕೂ ತನ್ನದೇ ಆದ ತೂಕವಿದೆ ಎನ್ನಬಹುದು. ನಯನತಾರಾ ‘ಗಂಗಾ’ ಪಾತ್ರದಲ್ಲಿ ಬೈಕ್ ಸವಾರಿ ಮಾಡುತ್ತಾ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಕಿಯಾರಾ ಅಡ್ವಾನಿ ‘ನಾದಿಯಾ’ ಎಂಬ ಹೆಸರಿನಲ್ಲಿ ಸರ್ಕಸ್ ಕಲಾವಿದೆಯಾಗಿ ಗ್ಲಾಮರಸ್ ಆಗಿ ಮಿಂಚಿದ್ದಾರೆ. ಇನ್ನು ‘ಕಾಂತಾರ’ ಸುಂದರಿ ರುಕ್ಮಿಣಿ ವಸಂತ್ ಇಲ್ಲಿ ‘ಮೆಲಿಸ್ಸಾ’ ಎಂಬ ಪಾತ್ರದಲ್ಲಿ ಕೈಯಲ್ಲಿ ಗನ್ ಹಿಡಿದು ವಿಶ್ವರೂಪ ಪ್ರದರ್ಶಿಸಿದ್ದಾರೆ. ಹುಮಾ ಖುರೇಶಿ ‘ಎಲಿಜಬೆತ್’ ಪಾತ್ರದಲ್ಲಿ ಮತ್ತು ತಾರಾ ಸುತಾರಿಯಾ ‘ರೆಬೆಕಾ’ ಎಂಬ ಲೇಡಿ ಬಾಸ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ.
ರಾಕಿ ಭಾಯ್ ಅಸಲಿ ಖದರ್:
ಟೀಸರ್‌ನ ಕೊನೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಎಂಟ್ರಿ ಮತ್ತು ಅವರು ಹೊಡೆಯುವ ಡೈಲಾಗ್ ಈಗ ಎಲ್ಲೆಡೆ ವೈರಲ್ ಆಗಿದೆ. ಮಹಿಳಾ ಫೈಟರ್‌ಗಳ ಮುಂದೆ ನಿಂತು "ಲೇಡೀಸ್ ಅಂಡ್ ಲೇಡೀಸ್... ಒಬ್ಬೊಬ್ಬರಾಗಿ ಬರ್ತೀರೋ ಅಥವಾ ಎಲ್ಲರೂ ಒಟ್ಟಿಗೆ ಬರ್ತೀರೋ?" ಎಂದು ಕೇಳುವ ಯಶ್ ಶೈಲಿ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿದೆ. ಚಿತ್ರದಲ್ಲಿ ಯಶ್ ತಂದೆ ಮತ್ತು ಮಗನಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ಸಾಧ್ಯತೆಗಳಿದ್ದು, ಇದು ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಒಟ್ಟಾರೆಯಾಗಿ, ‘ಟಾಕ್ಸಿಕ್’ ಚಿತ್ರವು ಕೇವಲ ಗನ್ ಮತ್ತು ಗ್ಯಾಂಗ್‌ಸ್ಟರ್ ಕಥೆಯಲ್ಲ, ಬದಲಿಗೆ ಮಹಿಳಾ ಶಕ್ತಿಯನ್ನು ಹೊಸ ಆಯಾಮದಲ್ಲಿ ತೋರಿಸುವ ಸಿನಿಮಾವಾಗಲಿದೆಯೇ ಎಂಬ ಸಂಶಯ ಈ ಟೀಸರ್‌ನಿಂದ ಸೃಷ್ಟಿಯಾಗಿದೆ. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಈ ಚಿತ್ರವು 26 ಆಗಸ್ಟ್ 2026 ರಂದು ತೆರೆಗೆ ಬರಲಿದೆ. ಅಲ್ಲಿಯವರೆಗೂ ಯಶ್ ಅಭಿಮಾನಿಗಳು ಈ ‘ಟಾಕ್ಸಿಕ್’ ಜ್ವರ ಬರಿಸಿಕೊಂಡು ನರಳುವುದಂತೂ ಖಚಿತ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.